(ಇದು ಮೊದಲು ನ್ಯಾಯಪಥ ಜುಲೈ ಸಂಚಿಕೆಯಲ್ಲಿ ಪ್ರಕಟವಾಗಿತ್ತು)
ಉತ್ತರ ಕನ್ನಡವೆಂದರೆ ಸರಕಾರಿ ಯೋಜನೆಗಳ ಪ್ರಯೋಗಶಾಲೆ; ಇಲ್ಲಿಯ ಅಮಾಯಕ ಮಂದಿ ಸರಕಾರಿ ಯೋಜನೆಗಳ ಪ್ರಯೋಗಪಶುಗಳು. ಹಲವು ದಶಕಗಳಿಂದ ಉತ್ತರ ಕನ್ನಡದ ಜನರು ಒಂದಿಲ್ಲೊಂದು ಯೋಜನೆಗಾಗಿ ತಲೆತಲಾಂತರದಿಂದ ಬಾಳಿಬದುಕಿದ ಮನೆ-ಮಾರು, ಜೀವನಾಧಾರ ಕಸುಬು ಕಳೆದುಕೊಂಡು ನಿರಾಶ್ರಿತರಾದ ಹಲವು ದುರಂತ ಕತೆಗಳಿವೆ. ಉತ್ತರ ಕನ್ನಡಕ್ಕೆ ಒಂದರಹಿಂದೊಂದರಂತೆ ಬಂದ ಜಲವಿದ್ಯುತ್ ಯೋಜನೆಗಳು, ಬಂದರು ಯೋಜನೆ, ಅಣು ಸ್ಥಾವರ, ನೌಕಾನೆಲೆ, ರೈಲು ಮಾರ್ಗ, ಹೆದ್ದಾರಿಗಳು ಸಾವಿರಾರು ಕುಟುಂಬಗಳ ನೆಲೆ ತಪ್ಪಿಸಿವೆ. ಈ ಮಂದಿ ಹೊಸ ಬದುಕು ಕಟ್ಟಿಕೊಳ್ಳಲಾಗದೆ ಇವತ್ತಿಗೂ ಸಂಕಟಪಡುತ್ತಿದ್ದಾರೆ. ದೇಶ-ರಾಜ್ಯಕ್ಕಾಗಿ ಮೌನವಾಗಿ ತ್ಯಾಗ ಮಾಡಿದ ಈ ಜಿಲ್ಲೆ ಮಾತ್ರ ಉದ್ಧಾರವಾಗಲಿಲ್ಲ. ಅಕ್ಕಪಕ್ಕದ ಜಿಲ್ಲೆಗಳ ಪ್ರಗತಿಯ ಗತಿ ಗಮನಿಸಿದರೆ ಉತ್ತರ ಕನ್ನಡದ ದೌರ್ಭಾಗ್ಯ ಮತ್ತು ಇಲ್ಲಿಯ ಇಂದಿನ-ಹಿಂದಿನ ಶಾಸಕ-ಸಂಸದ, ಸಚಿವ, ಮುಖ್ಯಮಂತ್ರಿಗಳ ಇಚ್ಛಾಶಕ್ತಿ ಕೊರತೆಯ ದೌರ್ಬಲ್ಯ ಒಟ್ಟೊಟ್ಟಿಗೆ ಕಣ್ಣಿಗೆ ರಾಚುತ್ತದೆ. ಉತ್ತರ ಕನ್ನಡ ಹೆತ್ತ ಮಗನೊಬ್ಬ ಸಿಎಂ ಪೀಠಕ್ಕೂ ಏರಿದ್ದರು; ಆದರೆ ಜಿಲ್ಲೆಗೇನೂ ಪ್ರಯೋಜನ ಆಗಲಿಲ್ಲ!
ಉತ್ತರ ಕನ್ನಡದಲ್ಲಿ ವ್ಯಾಪಿಸಿರುವ 130 ಕಿ.ಮೀ. ಉದ್ದದ ಕಡಲ ತಡಿಗುಂಟ ನಾಲ್ಕೈದು ಖಾಸಗಿ ಒಡೆತನದ ಬೃಹತ್ ವಾಣಿಜ್ಯ ಬಂದರುಗಳನ್ನು ನಿರ್ಮಿಸುವ ಯೋಜನೆಯನ್ನು ಈಗ ರೂಪಿಸಲಾಗಿದೆ. ಕಡಲ ವಿಜ್ಞಾನಿಗಳು-ಪರಿಸರ ತಜ್ಞರ ತರ್ಕದಂತೆ ಈ ಸರಣಿ ಬಂದರು ಪ್ರಾಜೆಕ್ಟ್ ಉತ್ತರ ಕನ್ನಡ ಕರಾವಳಿಯ ಧಾರಣಾ ಸಾಮರ್ಥ್ಯಕ್ಕೆ ಮೀರಿದ ಭಾರ! ಅವೈಜ್ಞಾನಿ, ಅಸಮರ್ಪಕ, ಅವಾಸ್ತವಿಕ ಮತ್ತು ಅನಪೇಕ್ಷಣೀಯ ಯೋಜನೆಗಳು ಇವು. ಸ್ಥಳೀಯ ಮೀನುಗಾರರ ಪ್ರಕಾರ ತಮ್ಮ ಬದುಕನ್ನು ಮೂರಾಬಟ್ಟೆ ಮಾಡುವ ಹೆಮ್ಮಾರಿಗಳು. ಹೀಗಾಗಿ ಕಡಲ ಕಿನಾರೆಯ ಮೀನುಗಾರರು ಬಂದರು ಯೋಜನೆಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಪ್ರತಿಭಟನೆ, ಹೋರಾಟ ಹುರಿಗೊಳಿಸಿಕೊಂಡಿದ್ದಾರೆ. ಆದರೆ ಈ ಕೋಟ್ಯಂತರ ರೂ.ಗಳ ಖಾಸಗಿ ಬಂದರು ನಿರ್ಮಾಣ-ನಿರ್ವಹಣೆಯಲ್ಲಿ ಆಳುವ ವರ್ಗಕ್ಕೆ ಮತ್ತು ಕಾರ್ಪೋರೆಟ್ ವಲಯದ ಉದ್ಯಮಪತಿಗಳಿಗೆ ಲಾಭ ಅಪಾರ. ಹಾಗಾಗಿ ಸಾಗರ ಮಾಲಾ ಯೋಜನೆಯಡಿ ಮೂರ್ನಾಲ್ಕಾದರೂ ಬಂದರು ಕಟ್ಟೆ ಕಟ್ಟುವ ಹಠಕ್ಕೆ ಪ್ರಭುತ್ವ ಬಿದ್ದಿದೆ!!
ಭೂ ಗೋಲ್‌ಮಾಲ್!
ಕಳೆದೊಂದು ದಶಕದಿಂದ ಹೊನ್ನಾವರದ ಶರಾವತಿ ನದಿ ಎಡದಂಡೆಯಲ್ಲಿರುವ ಕಾಸರಕೋಡ-ಟೊಂಕದ ಬಡ ಬೆಸ್ತರಿಗೆ ಬೃಹತ್ ಖಾಸಗಿ ಬಂದರು ಭೂತ ಬೆನ್ನಿಗೆ ಬಿದ್ದು ಕಾಡುತ್ತಲೇ ಇದೆ. 2013ರ ಅಕ್ಟೋಬರ್‌ನಲ್ಲಿ ಕಾಸರಕೋಡ ವಾಣಿಜ್ಯ ಬಂದರು ಯೋಜನೆಯನ್ನು ರಾಜ್ಯ ಸರಕಾರ ಪ್ರಕಟಿಸಿತು. “ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಎಂಬ ಆಂಧ್ರವಾಳ್ಳುಗಳ ಕಂಪನಿ ಅಂದು 625 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಂದರು ಕಟ್ಟೆ ಕಟ್ಟುವ ಗುತ್ತಿಗೆ ಪಡೆದುಕೊಂಡಿತು. ಈಗ ಅದರ ನಿರ್ಮಾಣ ವೆಚ್ಚ ಬರೋಬ್ಬರಿ 702 ಕೋಟಿ ರೂಗಳಿಗೆ ಏರಿಕೆಯಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ)ದ ಸದ್ರಿ ಪ್ರಾಜೆಕ್ಟ್‌ನ ಮೊದಲ ಹಂತದ ಕಾಮಗಾರಿಯ ನೀಲನಕ್ಷೆಯಂತೆ ಹೊನ್ನಾವರದ ಕಾಸರಕೋಡ ಗ್ರಾಮದ ಟೊಂಕ-1, ಟೊಂಕ-2, ಪಾವಿಕುರ್ವೆ, ಮಲ್ಲುಕುರ್ವೆ ಮತ್ತು ಕಾಸರಕೋಡ ಭಾಗದ 44 ಹೆಕ್ಟೇರ್ ಜಾಗದಲ್ಲಿ ಎರಡು ಪ್ರವೇಶಮಾರ್ಗದ 440 ಮೀಟರ್ ಅಗಲ ಮತ್ತು 30 ಮೀಟರ್ ಉದ್ದದ ವಿಶಾಲ ಬಂದರು ನಿರ್ಮಿಸಲಾಗುತ್ತದೆ. 50 ಮೀಟರ್ ಅಗಲ ಮತ್ತು 15 ಮೀಟರ್ ಆಳದ ನ್ಯಾವಿಗೇಷನ್ ಚಾನಲ್‌ನ ಈ ಬಂದರಿನ ’ಉತ್ತರ ಬ್ರೇಕ್‌ವಾಟರ್ 820 ಮೀಟರ್ ಉದ್ದ ಮತ್ತು ’ದಕ್ಷಿಣ ಬ್ರೇಕ್‌ವಾಟರ್ 865 ಮೀಟರ್ ಉದ್ದವಿರುತ್ತದೆ. ಬಂದರಿನಲ್ಲಿ ಬಾರ್ಜ್ ಮತ್ತು ದೊಡ್ಡದೊಡ್ಡ ಹಡಗು ಲೋಡಿಂಗ್ ಹಾಗು ಅನ್‌ಲೋಡಿಂಗ್ ಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತದೆ. ಪ್ರತಿ ವರ್ಷ ಈ ಬಂದರಿನಿಂದ ಕಬ್ಬಿಣ, ಕಲ್ಲಿದ್ದಲು ಸೇರಿದಂತೆ 4.9 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗುತ್ತದೆ. ಯೋಜನೆಯಲ್ಲಿ ಹೊನ್ನಾವರ-ಗೇರುಸೊಪ್ಪ ನಡುವಿನ ಸುಮಾರು 50 ಕಿ.ಮೀ. ಒಳನಾಡು ಜಲಸಾರಿಗೆ ವ್ಯವಸ್ಥೆ ಸುಧಾರಣೆಯ ಪ್ರಸ್ತಾಪವೂ ಇದೆ.
ಶರಾವತಿ ನದಿ ಅರಬ್ಬಿ ಸಮುದ್ರಕ್ಕೆ ಬಂದು ಸೇರುವ ಸಂಗಮ ಸ್ಥಳ ಕಾಸರಕೋಡ-ಟೊಂಕದಲ್ಲಿ ಬಂದರು ನಿರ್ಮಿಸುವ ಗುತ್ತಿಗೆ ಪಡೆದಿದ್ದು ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್(ಎಚ್‌ಪಿಪಿಎಲ್) ಕಂಪನಿಯಾದರೂ ಸರಕಾರ ಯೋಜನೆಗೆಂದು 93 ಎಕರೆ ಪ್ರದೇಶ 30 ವರ್ಷದ ಲೀಸಿಗೆ ಕೊಟ್ಟಿದ್ದು ಮಾತ್ರ ನಾರ್ತ್ ಕೆನರಾ ಸೀ ಪೋರ್ಟ್ ಪ್ರೈವೇಟ್ ಲಿಮಿಟೆಡ್(ಎನ್‌ಸಿಎಸ್‌ಪಿಪಿಎಲ್)-ಜಿವಿಪಿಆರ್‌ಇಎಲ್ ಒಕ್ಕೂಟಕ್ಕೆ. ಒಂದು ಕಂಪನಿಗೆ ಜಾಗ ಮಂಜೂರಿ; ಮತ್ತೊಂದು ಕಂಪನಿಗೆ ಬಂದರು ನಿರ್ಮಾಣ-ನಿರ್ವಹಣೆ ಹೊಣೆ ಕೊಡುವುದು ಹೇಗೆ ಸಾಧ್ಯ? ಈ ಗೊಂದಲದ ಹಿಂದೊಂದು ಗೋಲ್‌ಮಾಲ್ ಕತೆ ಅಡಗಿದೆ. ಎನ್‌ಸಿಎಸ್‌ಪಿಪಿಎಲ್ ಕಂಪನಿಗೆ ಕಬ್ಜಾಕ್ಕೆ ಕೊಡಲಾಗಿರುವ ಜಾಗದಲ್ಲಿ ಐದಾರು ದಶಕದಿಂದ ನೂರಾರು ಮೀನುಗಾರ ಕುಟುಂಬಗಳು ಗುಡಿಸಲು ಕಟ್ಟಿಕೊಂಡಿವೆ; ಮನೆ ಮಗ್ಗುಲಿನ ಸಮುದ್ರದಲ್ಲಿ ಗಂಡಸರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತ, ಮಹಿಳೆಯರು ಕಡಲ ತಡಿಯಲ್ಲಿ ಹಸಿ ಮೀನಿಗೆ ಉಪ್ಪು ಬೆರೆಸಿ ಬಿಸಿಲಿಗೆಹಾಕಿ ಒಣಮೀನು ತಯಾರಿಸುತ್ತ, ಸಂಗ್ರಹಿಸುತ್ತ ಬದುಕು ಕಟ್ಟಿಕೊಂಡಿದ್ದಾರೆ. ಈ ಮೀನುಗಾರರು ಸುಮಾರು ಆರು ದಶಕದ ಹಿಂದೆ ಹತ್ತಿರದ ಮಲ್ಲುಕುರ್ವೆ ಎಂಬ ಮೀನುಗಾರರ ಕೇರಿ ಸಮುದ್ರ ಕೊರೆತಕ್ಕೆ ಕರಗಿ ಕಣ್ಮರೆಯಾದಾಗ ಟೊಂಕಕ್ಕೆ ಬಂದವರು. ಆಗ ನಿರಾಶ್ರಿತರಾದವರಿಗೆ ಇಲ್ಲಿ ಪುನರ್‌ವಸತಿ ಕಲ್ಪಿಸಿ ನಿವೇಶನ ನೀಡಲಾಗಿತ್ತು ಎಂದು ಹಳೆ ತಲೆಮಾರಿನವರು ಹೇಳುತ್ತಾರೆ.
ಎನ್‌ಸಿಎಸ್‌ಪಿಪಿಎಲ್ ಕಂಪನಿಯ ದೊರೆಗಳು ಟೊಂಕ-ಮಲ್ಲುಕುರ್ವೆಗೆ ಬಂದು ನೋಡಿದಾಗ ತಮಗೆ ಮಂಜೂರಾದ ಜಾಗ ಸುಮಾರು 300 ಮೀನುಗಾರರ ಕುಟುಂಬಗಳಿಗೆ ಮನೆ ಕಟ್ಟಲು ಕೊಟ್ಟಿರುವುದು ತಿಳಿದು ದಿಗಿಲುಬೀಳುತ್ತಾರೆ. ಆ ಜಾಗದ ಸರ್ವೆ ನಂಬರ್(9999) ಸಹ ಖೋಟಾ ಆಗಿತ್ತು. ಆದರೆ ಈ ಜಾಗ ಬೃಹತ್ ಬಂದರು ಕಟ್ಟಲು ಪ್ರಶಸ್ತ ಪ್ರದೇಶವಾಗಿ ಎನ್‌ಸಿಎಸ್‌ಪಿಪಿಎಲ್ ಕಂಪನಿಯ ತಂತ್ರಜ್ಞರಿಗೆ ಕಾಣಿಸುತ್ತದೆ. ಆಂಧ್ರ ಕಂಪನಿ ಮಾಲೀಕರು ಹೇಗಾದರೂ-ಏನಾದರೂ ಮಾಡಿ ಮೀನುಗಾರರ ನೆಲೆ ಕಬಳಿಸಲೇಬೇಕೆಂಬ ಹಠಕ್ಕೆ ಬಿದ್ದರು. ಸರಕಾರದ ಆಯಕಟ್ಟಿನ ಇಲಾಖೆಯಲ್ಲಿರುವ ಆಂಧ್ರ ಮೂಲದ ಸ್ವಜನ ಐಎಎಸ್ ಅಧಿಕಾರಿಗಳು ಮತ್ತು ಆಳುವವರ ಸಹಕಾರದಿಂದ ಮೀನುಗಾರ ಕುಟುಂಬಗಳನ್ನು ಎತ್ತಂಗಡಿ ಮಾಡಿಸಿ ಜಾಗ ವಶಪಡಿಸಿಕೊಳ್ಳುವ ಕಾರ್ಯಾಚರಣೆ ಶುರುಹಚ್ಚಿಕೊಂಡರು. ಹಿಂದೆ ಮೀನುಗಾರರಿಗೆ ಹಕ್ಕುಪತ್ರ ಕೊಡಲಾಗಿದ್ದ ಭೂಮಿ ಈಗ ನದಿಯಾಗಿದೆ ಎಂದು ನಕಾಶೆ ಸೃಷ್ಟಿಸಲಾಯಿತು; ಸುತ್ತಲಿನ ಹಲವು ಹಳ್ಳಿಗಳ ಜಲಗಡಿ ಬದಲಿಸಲಾಯಿತು. ಮೀನುಗಾರರ ನೆಲೆಯ ಸರ್ವೆ ನಂಬರ್‌ಅನ್ನೇ ಬದಲಿಸಲಾಯಿತು! ಆ ಜಾಗಕ್ಕೆ ಸರ್ವೆ ನಂಬರ್ 305ಅನ್ನು ನಮೂದಿಸಲಾಯಿತು.
“ಹೊಸ ಜಾಗ” ಹಳೆ ಕಂಪನಿ(ಎನ್‌ಸಿಎಸ್‌ಪಿಪಿಎಲ್)ಗೆ ಮತ್ತೊಮ್ಮೆ ಮಂಜೂರು ಮಾಡುವುದಾದರೂ ಹೇಗೆ? ಆಗ ಹುಟ್ಟಿಕೊಂಡಿದ್ದೇ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್(ಎಚ್‌ಪಿಪಿಎಲ್) ಹೊಸ ಹೆಸರಿನ ಕಂಪನಿ. ಮೀನುಗಾರರ ವಾಸದ ಸರ್ವೆ ನಂಬರ್ 303ರ ಜಾಗಕ್ಕೆ ಸರ್ವೆ ನಂಬರ್ 305 ಎಂದು ನಾಮಕರಣ ಮಾಡಿ ಎಚ್‌ಪಿಪಿಎಲ್ ಕಂಪನಿಗೆ ಕೊಡಲಾಯಿತು! ಈ ಎರಡೂ ಕಂಪನಿಗಳ ಹೆಸರು ಬೇರೆ-ಬೇರೆಯಾದರೂ ಸಿಕಂದರಾಬಾದ್-ಹೈದರಾಬಾದ್ ವಿಳಾಸದ ಒಡೆಯರು, ನಿರ್ದೇಶಕರು, ಶೇರುದಾರರು ಮಾತ್ರ ಬದಲಾಗಿಲ್ಲ. ಅಂದರೆ ಮೀನುಗಾರರ ವಸತಿ ಪ್ರದೇಶ ಸ್ವಾಹಾ ಮಾಡಲೆಂದೇ ರಚಿಸಿದ ಬೋಗಸ್ ಕಂಪನಿಯಿದಷ್ಟೇ! ಇಲ್ಲಿ ಇನ್ನೊಂದು “ಜಾದೂಗಾರಿಕೆ”ಯೂ ಆಗಿದೆ. ಹಿಂದೆ ಸಮುದ್ರ ಪಾಲಾದ ಭೂಮಿ ಈಗ ಮರಳು ದಿಬ್ಬವಾಗಿ ಗೋಚರಿಸುತ್ತಿದೆ. ಕಂದಾಯ ಇಲಾಖೆಯ ಪ್ರಭೃತಿಗಳು ಅದಕ್ಕೀಗ ಹೊಸ ಸರ್ವೆ ನಂಬರ್ ಕೊಟ್ಟಿದ್ದಾರೆ. ವಿಚಿತ್ರವೆಂದರೆ, ಸರಕಾರದ ದಿಶಾ ಆಪ್‌ನಲ್ಲಿ ಕಾಸರಕೋಡ, ಟೊಂಕ ಕಾಣಿಸುತ್ತಿಲ್ಲ; ಶರಾವತಿ ನದಿ-ಅರಬ್ಬಿ ಸಮುದ್ರದ ಅಳಿವೆ(ಸಂಗಮ) ಅಳಿದುಹೋಗಿದೆ!
ಅಧಿಕಾರಿಗಳ “ಕಣ್ಕಟ್ಟು” ಯೋಜನೆಯಿಂದ ಸಂತ್ರಸ್ತರಾಗುವ ಮಂದಿಯಲ್ಲಿ ಅನೇಕ ಅನುಮಾನಗಳನ್ನು ಮೂಡಿಸಿದೆ. ಸರಕಾರವೇ ಬಿಡುಗಡೆ ಮಾಡಿರುವ ನಕಾಶೆಯಲ್ಲಿ ಸರ್ವೆ ನಂಬರ್ 303 ಇರುವ ಭೂ ಪ್ರದೇಶ ಸರ್ವೆ ನಂಬರ್ 305 ಆಗಿದ್ದಾದರೂ ಹೇಗೆ? ಕಾರ್ಪೊರೆಟ್ ವಲಯದ ಹಣವಂತ ಉದ್ಯಮಿಗಳ ಬೆನ್ನಿಗೆ ನಿಂತಿರುವ ಅಧಿಕಾರಿ ಗಣ ಮತ್ತು ಆಳುವ ವರ್ಗಕ್ಕೆ ಮೀನುಗಾರ ಸಮುದಾಯದ ನೋವು-ನಷ್ಟ ಲೆಕ್ಕಕ್ಕೇ ಇಲ್ಲದಾಗಿದೆ. ನೊಟೀಸ್ ಕೂಡ ಕೊಡದೆ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಲಾಗುತ್ತಿದೆ. ಯೋಜನೆಯಿಂದಾಗುವ ತೊಂದರೆ ಮಾತಾಡುವವರನ್ನು ಹೊತ್ತಲ್ಲದ ಹೊತ್ತಲ್ಲಿ ಬಂದು ಹೊತ್ತುಕೊಂಡು ಹೋಗುವ ಪೊಲೀಸರು ಜೈಲಲ್ಲಿಡುತ್ತಿದ್ದಾರೆ. ಹೆಂಗಸರು-ಮಕ್ಕಳೆನ್ನದೆ ಕಠಿಣ ಸೆಕ್ಷನ್‌ನಂತೆ ಕೇಸುಹಾಕಿ ಕಾಡುತ್ತಿದ್ದಾರೆ. ಪೊಲೀಸ್ ಬಲದಿಂದ ಹೆದರಿಸಿ-ಬೆದರಿಸಿ ಪ್ರಳಯಾಂತಕ ಬಂದರು ಯೋಜನೆ ಸಲೀಸು ಮಾಡಿಕೊಳ್ಳುವ ಷಡ್ಯಂತ್ರವಿದೆಂದು ಮೀನುಗಾರರು ಹೇಳುತ್ತಾರೆ.
ಜಲಗಡಿ ತಿದ್ದುಪಡಿ!
ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬಲಾಢ್ಯ ಉದ್ಯಮಿಗಳಿಗೆ ಭೂಸ್ವಾಹಾಕ್ಕೆ ಅನುಕೂಲವಾಗುವಂತೆ ಹೊನ್ನಾವರ ತಾಲೂಕಿನ ಜಲ ಗಡಿ ಬದಲಾಯಿಸಲಾಗಿದೆ. ಪರಿಸರತಜ್ಞರು ಮತ್ತು ಬಂದರು ಯೋಜನೆ ವಿರೋಧಿ ಹೋರಾಟಗಾರರು ಸಂಗ್ರಹಿಸಿದ ದಾಖಲೆ-ಜಲಗಡಿಯ ನಕ್ಷೆಗಳು ಇದನ್ನು ಖಾತ್ರಿ ಮಾಡುವಂತಿದೆ. ನದಿ ಮತ್ತು ಕಡಲು ತೀರದಲ್ಲಿರುವ ಕಾಸರಕೋಡ, ಮಲ್ಲುಕುರ್ವೆ, ಪಾವಿನಕುರ್ವೆ ಮತ್ತು ಕರ್ಕಿ ಗ್ರಾಮಗಳ ಜಲಗಡಿಯನ್ನು ಜಿಲ್ಲಾಡಳಿತದ ನೇರ ನಿಗಾದಲ್ಲಿ ಸರ್ವೆ ಇಲಾಖೆಯ ಅಧಿಕಾರಿಗಳು ಬದಲಾಯಿಸಿದ್ದಾರೆ. ಹೊನ್ನಾವರದವರೇ ಆಗಿರುವ ಕಡಲ ವಿಜ್ಞಾನಿಯೊಬ್ಬರು ಮತ್ತು ಮೀನುಗಾರರು ಈ ಅಕ್ಷಮ್ಯ ಅಪರಾಧದ ಕುರಿತು ಸರ್ವೆ ಆಫ್ ಇಂಡಿಯಾ ಇಲಾಖೆಗೆ ದೂರು ಕೊಟ್ಟಿದ್ದರು. ಆಗ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ಸಂಬಂಧಿಸಿದ ಪ್ರದೇಶದ ದಾಖಲೆ ಕಳಿಸುವಂತೆ ತಾಕೀತು ಮಾಡಿದ್ದರು. ಆದರೆ ಸರ್ವೆ ಇಂಡಿಯಾ ಕೂಡ ಖಡಕ್ ಕ್ರಮವೇನೂ ಜರುಗಿಸಲಿಲ್ಲ ಎಂದು ಹೇಳುವ ಹೋರಾಟಗಾರರು “ಪ್ರಭಾವಗಳ ಪವಾಡ”ವನ್ನು ವಿವರಿಸುತ್ತಾರೆ.
ಕರಾವಳಿ ಗಡಿ ಬದಲಿಸುವುದು ಅನಾಹುತಕಾರಿ; ಗುರುತರ ಪ್ರಮಾದ; ಕೋಸ್ಟಲ್ ಝೋನ್ ಮ್ಯಾನೇಜ್‌ಮೆಂಟ್ ಪ್ಲಾನ್‌ಗೆ ವಿರುದ್ಧ ಎನ್ನುತ್ತಾರೆ ಕಡಲ ಶಾಸ್ತ್ರಜ್ಞರು. ಕರಾವಳಿ ಗಡಿಯನ್ನು ನೇವಲ್ ಹೈಡ್ರಾಲಜಿ ಆಫೀಸರ್ ಮತ್ತು ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಸೇರಿ ನಿರ್ಧರಿಸುತ್ತಾರೆ. ಸ್ಥಳೀಯ ಕಂದಾಯ ಇಲಾಖೆಯ ನಕ್ಷೆ ಬಳಸಿ ಜಲ ಗಡಿ ಗುರುತಿಸಲಾಗುತ್ತದೆ. ಜಲಗಡಿ ಬದಲಿಸುವ ಅಧಿಕಾರವಿರುವುದು ಭಾರತ ಸರಕಾರಕ್ಕೆ ಮಾತ್ರ. ಇದೆಲ್ಲವನ್ನೂ ಧಿಕ್ಕರಿಸಿ ಹೊನ್ನಾವರದ ಲ್ಯಾಂಡ್ ರೆಕಾರ್ಡ್ಸ್ ಆಫೀಸಿನ(ಸರ್ವೆ ಇಲಾಖೆ) ಸಹಾಯಕ ನಿರ್ದೇಶಕ “ಮೇಲಿನವರ” ಆಣತಿಯಂತೆ ಕಾಸರಕೋಡ, ಮಲ್ಲುಕುರ್ವೆ, ಪಾವಿನಕುರ್ವೆ ಮತ್ತು ಕರ್ಕಿ ಗ್ರಾಮಗಳ ಜಲಗಡಿ ತಿದ್ದುಪಡಿ ಮಾಡಿ ಮೋಕಳಿಕ್ ಆಗಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಅಲ್ಲಿಗೆ ಆಂಧ್ರದ ಬಂಡವಾಳಶಾಹಿಗಳು ಮತ್ತು ರಾಜ್ಯದ ಆಧಿಕಾರಿಗಣ ಒಂದು ಅನವಶ್ಯಕ, ಅನಪೇಕ್ಷಿತ, ಜನಪೀಡಕ ಬಂದುರು ನಿರ್ಮಾಣಕ್ಕಾಗಿ ಹಲವು ನೀತಿ-ನಿಯಮ, ಕಾನೂನುಕಟ್ಟಳೆಯನ್ನೆಲ್ಲ ಸಾರಾಸಗಟಾಗಿ ಉಲ್ಲಂಘಿಸಿರುವುದು ಸಾಬೀತಾಗುತ್ತದೆ. ಎಚ್‌ಪಿಪಿಎಲ್‌ಗೆ ಯಾವುದೇ ಬಂದರು ಕಟ್ಟಿದ ಅನುಭವವಿಲ್ಲ; ಕಂಪನಿ ತನಗೆ ಖುಷಿ ಕಂಡಲ್ಲಿ ಬಡಬೆಸ್ತರ ಜಾಗ ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಮಾಡುತ್ತಿದೆ; ಬಂದರು ಕಟ್ಟಲು ಸೂಚಿಸಿದ ಜಾಗವೇ ಬೇರೆ; ಬಂದರು ಕಾಮಗಾರಿಗೆ ಸಿದ್ಧತೆ ಆಗುತ್ತಿರುವ ಸೈಟೇ ಬೇರೆ ಎಂದು ಸ್ಥಳೀಯ ಮೀನುಗಾರ ಮುಖಂಡರು ಹೇಳುತ್ತಾರೆ.
ಅವೈಜ್ಞಾನಿಕ-ಅನಾಹುತಕಾರಿ ಪ್ರಾಜೆಕ್ಟ್!
ಕಾಸರಕೋಡ-ಟೊಂಕ ಕಡಲ ತೀರ ಹಲವು ಸಾವಿರಾರು ಮೀನುಗಾರ ಕುಟುಂಬಗಳಿಗೆ ಅನ್ನದ ಬಟ್ಟಲು; ನಿರ್ಣಾಯಕ ಮೀನುಗಾರಿಕಾ ವಲಯ. ಮೀನುಗಾರ ಕುಟುಂಬಗಳಿಗೆ ತಲತಲಾಂತರದಿಂದ ನೆರಳು-ನೆಮ್ಮದಿ ನೀಡಿದ ಭಾವನಾತ್ಮಕ ತಾಣ. ಸಾಂಪ್ರದಾಯಿಕ ಮೀನುಗಾರಿಕೆಯ ಪ್ರಮುಖ ವಲಯ. ಸೂಕ್ಷ್ಮ ಪರಿಸರ, ಕಡಲಜೀವ ವೈವಿಧ್ಯತೆಯ ಗಮ್ಯ. ಮೀನುಗಾರಿಕೆ ಅನಿವಾರ್ಯ ಮತ್ತು ಪ್ರಾಥಮಿಕ ಆದಾಯ ಮೂಲವಾಗಿರುವ 5-6 ಸಾವಿರ ಕುಟುಂಬಗಳು ಕಾಸರಕೋಡ-ಟೊಂಕದ ಕಡಲು ಮತ್ತು ಮೀನುಗಾರಿಕಾ ಬಂದರು ಅವಲಂಬಿಸಿದ್ದಾರೆ. ಇದರಲ್ಲಿ ಪಾರಂಪರಿಕವಾಗಿ ಕಾಸರಕೋಡ ಕಡಲನ್ನು ನಂಬಿ ನಾಡ ದೋಣಿಗಳಲ್ಲಿ ಮೀನು ಹಿಡಿಯುವ ಕಸುಬಿನ ಒಂದು ಸಾವಿಕ್ಕೂ ಹೆಚ್ಚು ಕುಟುಂಬಗಳಿವೆ; ಐದು ಸಾವಿರದಷ್ಟು ಮೀನುಗಾರರು ಯಾಂತ್ರಿಕ ಮೀನುಗಾರಿಕೆಯಲ್ಲಿ ತೊಡಗಿ ಕೊಂಡಿದ್ದಾರೆ. ಸುಮಾರು 2 ಸಾವಿರ ಮೀನುಗಾರ ಮಹಿಳೆಯರು ಜಾಗತಿಕ ಮಾರುಕಟ್ಟೆಯಿರುವ ಒಣಮೀನು ವ್ಯವಹಾರಮಾಡಿ ಸಂಸಾರ ಪೊರೆಯುತ್ತಿದ್ದಾರೆ.
ಕಾಸರಕೋಡ-ಟೊಂಕದಲ್ಲಿ ಕಾರ್ಪೊರೆಟ್ ಉದ್ಯಮಿಗಳ ದೈತ್ಯ ಬಂದರು ಸ್ಥಾಪನೆಯಾದರೆ ಮುಗ್ಧ ಮೀನುಗಾರರ ಜೀವ ಜಗತ್ತೇ ಧ್ವಂಸ ಆಗುತ್ತದೆ! ಬಡ ಬೆಸ್ತರ ಬದುಕು ಬರ್ಬಾದ್ ಆಗುತ್ತದೆ. ಕಡಲ ಜೀವ ವೈವಿಧ್ಯತೆಯನ್ನು ನುಂಗಿ ನೊಣೆಯುತ್ತದೆ. ನಿಯೋಜಿತ ಬಂದರಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ ನಾಲ್ಕು ಪಥದ ಹೆದ್ದಾರಿ ಈಗಾಗಲೇ ಒಣಮೀನು ಉದ್ಯಮಕ್ಕೆ ಸಂಚಕಾರ ತಂದಿದೆ; ಒಂದಿಷ್ಟು ಒಣ ಮೀನು ತಯಾರಿಕಾ ಕೇಂದ್ರ (ಆವಾರಿ, ಕವನ) ಕೆಡವಿ ಮಾರಾಟಗಾರರನ್ನ ಒಕ್ಕಲೆಬ್ಬಿಸಲಾಗಿದೆ. ರೈಲು ಮಾರ್ಗ ಮತ್ತಿತರ ಮೂಲಸೌಕರ್ಯಕ್ಕಾಗಿ ಹಂತಹಂತವಾಗಿ ಸುಮಾರು 600ರಷ್ಟು ಕುಟುಂಬಗಳನ್ನು ತೆರವುಗೊಳಿಸಲಾಗುತ್ತದೆ. ಮೀನುಗಾರಿಕಾ ವಲಯ ಮತ್ತು ಪರಿಸರ ಸೂಕ್ಷ್ಮ ಕಡಲತೀರಕ್ಕೆ ಹೊಂದಿಕೊಂಡು ನಿರ್ಮಾಣ ಮಾಡಲಾಗುವ 4-5 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು ಮೀರಿ ಮೀನುಗಾರರ ಪರಂಪರಾಗತ ವಸತಿ ನೆಲೆಯ ಮೇಲೆಯೇ ಹಾದುಹೋಗುತ್ತದೆ!
ಮೀನುಗಾರರ ವಾಸಸ್ಥಳದ ಹತ್ತಿರ ತೈಲ, ಪೆಟ್ರೋಲಿಯಮ್ ಉತ್ಪನ್ನ, ಧೂಳುಮಿಶ್ರಿತ ಸರಕು ಸಂಗ್ರಹ ಮತ್ತು ಸಾಗಣೆ, ಆಮದು ಹಾಗು ರಫ್ತು ಮುಂತಾದ ಬಹು ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣವಾದರೆ ಹಲವು ತಲೆಮಾರುಗಳ ಬದುಕು-ಸಂಸ್ಕೃತಿ ನಾಮಾವಶೇಷವಾಗಲಿದೆ. ಪರಿಸರ, ಜೀವ ವೈವಿಧ್ಯತೆ, ಜನರ ಆರೋಗ್ಯ, ಜೀವನೋಪಾಯಕ್ಕೆ ಮಾರಕವಾದ ವಾಣಿಜ್ಯ ಬಂದರು ನಿರ್ಮಾಣ ತೀರ ಅವೈಜ್ಞಾನಿಕವಷ್ಟೇ ಅಲ್ಲ, ಮುಂದಿನ ಪೀಳಿಗೆಗೆ ಗಂಡಾಂತರಕಾರಿ ಎಂದು ಅನೇಕ ತಜ್ಞರು ಎಚ್ಚರಿಸಿದ್ದಾರೆ. ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಅಗತ್ಯ ಪೂರೈಸುತ್ತಿರುವ ಜೀವನದಿ ಶರಾವತಿಯ ಸಂಗಮ ಪ್ರದೇಶದಲ್ಲಿ ರಸ್ತೆ ನಿರ್ಮಾಣದ ನೆಪದಲ್ಲಿ ಕಲ್ಲು-ಮಣ್ಣು ಸುರಿದು ಪರಿಸರ, ವನ್ಯಜೀವಿ ಕಾಯ್ದೆಯೇ ಮುಂತಾದ ನೀತಿ-ನಿಯಮಗಳನ್ನು ಬುದ್ಧಿಪೂರ್ವಕವಾಗಿಯೇ ಹೊನ್ನಾವರ ಪೋರ್ಟ್ ಪ್ರೈವೇಟ್ ಕಂಪನಿಯವರು ಉಲ್ಲಂಘಿಸುತ್ತಿದ್ದಾರೆ.
ಆರಂಭದಲ್ಲಿ ಬಂದರು ನಿರ್ಮಾಣ ಕಂಪನಿಯವರು, ಆಳುವವರು ಮತ್ತವರ ಆಧಿಕಾರಿ ಬಳಗ-ಮೀನುಗಾರರ ಮನೆ, ಮೀನುಗಾರಿಕೆ ಶೆಡ್, ದೋಣಿ, ಬಲೆಯಿಡುವ ಜಾಗದ ತಂಟೆಗೆ ಬರುವುದಿಲ್ಲ; ಮೀನುಗಾರಿಕಾ ಬಂದರಿಗೆ ತೊಂದರೆ ಕೊಡುವುದಿಲ್ಲ ಎಂದು ಮೋಸದ ಮಾತಾಡಿದ್ದರು. ಆದರೆ ಬಂದರಿನ ಯೋಜನಾ ವರದಿ, ನೀಲನಕ್ಷೆ ಮತ್ತು ಬಂದರು ಧಣಿಗಳು ಮತ್ತು ಅಧಿಕಾರಿ, ರಾಜಕಾರಣಿಗಳ ಕಣ್ಣಾಮುಚ್ಚಾಲೆ ಆಟ ಗಮನಿಸಿದರೆ ಈ ದೈತ್ಯ ಬಂದರಿಗೆ ಸಾವಿರಾರು ಎಕರೆ ಪ್ರದೇಶದ ಅವಶ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ. ಈಗ ರಸ್ತೆಗೆಂದು ಅಸಹಾಯಕ ಮೀನುಗಾರರ ವಸತಿಪ್ರದೇಶಕ್ಕೆ ಖಾಕಿಗಳ ಬಲದಲ್ಲಿ ಬುಲ್ಡೋಜರ್ ಹಾಯಿಸಲಾಗುತ್ತಿದೆ. ಕ್ರಮೇಣ ಸುತ್ತಲಿನ ಮಲ್ಲುಕುರ್ವೆ, ಕರ್ಕಿಕೋಡಿ, ಕಮಟೆಹಿತ್ತಲು ಮುಂತಾದ ದಟ್ಟ ಜನವಸತಿ ಪ್ರದೇಶಗಳ ಸ್ವಾಧೀನ ಆಗಬಹುದು; ಟೊಂಕದ ಮೀನುಗಾರಿಕಾ ಧಕ್ಕೆಯನ್ನೂ ವಾಣಿಜ್ಯ ಬಂದರು ಸ್ವಾಹಾ ಮಾಡಬಹುದು ಎಂದು ಬಂದರು ಕಟ್ಟೆಯ ಅಂಗಳದ ಚಟುವಟಿಕೆ ಬಲ್ಲವರು ಮತ್ತು ಪರಿಸರತಜ್ಞರು ಅಭಿಪ್ರಾಯ ಪಡುತ್ತಾರೆ. ಪರಿಸರ, ಜನಜೀವನ, ಮೀನುಗಾರಿಕೆ, ಕಡಲ ಜೀವ ಜಾಲ ಹೀಗೆ ಯಾವ ದೃಷಿಕೋನದಿಂದ ನೋಡಿದರೂ ಕಾಸರಕೋಡನ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಅವಾಸ್ತವಿಕ, ಜನವಿರೋಧಿ, ಪರಿಸರ ವಿರೋಧಿ ಯೋಜನೆ!! ಹಾಗಿದ್ದರೂ ಆಡಳಿತಗಾರರು ಹಠಕ್ಕೆ ಬಿದ್ದವರಂತೆ ಮೀನುಗಾರರನ್ನು ಸತಾಯಿಸುತ್ತಿರುವುದು ದುರಂತವೇ ಸರಿ!!
ಅಪರೂಪದ ಕಡಲಾಮೆಗಳ ಆವಾಸ
ಕಾಸರಕೋಡ ಬೀಚ್ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಕಡಲಾಮೆಗಳು ವಾರ್ಷಿಕ ಗೂಡುಕಟ್ಟುವ, ಮರಿ ಮಾಡುವ ಕಡಲ ದಂಡೆಯಿದು. ಈ ಕಡಲಾಮೆ ಸಂತತಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಅರಣ್ಯ, ಕಡಲ ಜೀವಶಾಸ್ತ್ರ ಇಲಾಖೆಗಳು ವಿಶೇಷ ಕಾಳಜಿ-ನಿಗಾ ವಹಿಸುತ್ತಿವೆ; ಆಲಿವ್ ರಿಡ್ಲಿ ಕಡಲಾಮೆ ಸಂತತಿ ಅಭಿವೃದ್ಧಿಗೆ ಲಕ್ಷಾಂತರ ರೂ. ವ್ಯಯಿಸಲಾಗುತ್ತಿದೆ. ವಿಪರ್ಯಾಸವೆಂದರೆ, ಕಾಸರಕೋಡ ಬೀಚ್‌ನಲ್ಲಿ ನಿರ್ಮಾಣವಾಗುವ ವಾಣಿಜ್ಯ ಬಂದರು ಈ ಕಡಲಾಮೆ ಕುಲಕ್ಕೆ ಅಪಾಯ ತಂದೊಡ್ಡಿದೆ. ಕಡಲ ಜೀವ ವಿಜ್ಞಾನಿಗಳು ಈ ಬಗ್ಗೆ ಕಳವಳ ಪಡುತ್ತಿದ್ದಾರೆ. ಆದರೆ ಆಳುವ ಮಂದಿ ಮತ್ತು ಸರಕಾರದ ಪರಿಸರ ಇಲಾಖೆ, ಕಡಲ ವಿಜ್ಞಾನ ಶಾಸ್ತ್ರ ಇಲಾಖೆಯವರು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಾರ್ಪೊರೇಟ್ ಲಾಬಿ ಕಡಲಾಮೆಯ “ಪೋಷಕ”ರನ್ನು ನಿಭಾಯಿಸುತ್ತಿದೆ ಎಂದು ಕಡಲ ಪರಿಸರವಾದಿಗಳು ಅನುಮಾನಿಸುತ್ತಾರೆ.
ವಿಪರ್ಯಾಸ ನೋಡಿ; ಒಂದೆಡೆ ಕಡಲಾಮೆ ಸಂರಕ್ಷಣೆಗೆ ಸಿಬ್ಬಂದಿ ನೇಮಕ, ಲಕ್ಷಾಂತರ ರೂ. ಅನುದಾನ ವೆಚ್ಚ ಸರಕಾರದಿಂದಾಗುತ್ತಿದೆ; ಮತ್ತೊಂದೆಡೆ ಕಡಲಾಮೆಗಳ ಮಾರಣಹೋಮಕ್ಕೆ ಸಜ್ಜಾಗುತ್ತಿದ್ದರೂ ಕಣ್ಮುಚ್ಚಿಕೊಂಡಿದೆ. ಕಾಸರಕೋಡ ಬೀಚ್‌ಗೆ ಬರುವ ವಾಣಿಜ್ಯ ಬಂದರು ಕಡಲಾಮೆಗಳಿಗೆ ಮೃತ್ಯು ಕೂಪವಾಗಲಿದೆ ಎಂಬುದು ಗೊತ್ತಿದ್ದೂ ಬಂದರಿಗೆ ಅವಕಾಶ ಕೊಡುತ್ತಿದೆ! ಹೊನ್ನಾವರದ ಮೀನುಗಾರ ಮುಂದಾಳುಗಳು ಕಡಲಾಮೆ ಸಂತತಿಗೆ ತೊಂದರೆ ಕೊಡುವುದರಿಂದ ವಾಣಿಜ್ಯ ಬಂದರಿಗೆ ಅವಕಾಶ ಕೊಡಕೂಡದೆಂದು ಹೈಕೋರ್ಟಿಗೆ ಹೋಗಿದ್ದರು. ಆದರೆ ಕಾಸರಕೋಡ ಬೀಚ್‌ನಲ್ಲಿ ಕಡಲಾಮೆಗಳು ಗೂಡು ಕಟ್ಟುವ ದಾಖಲಿತ ಪುರಾವೆಗಳ ಹೊರತಾಗಿಯೂ ಹೈಕೋರ್ಟ್ 2021ರಲ್ಲಿ ಮೀನುಗಾರರ ಅರ್ಜಿಯನ್ನು ವಜಾಗೊಳಿಸಿತು. ಕಡಲಾಮೆಗಳು ಗೂಡು ಕಟ್ಟುವ ಋತುವನ್ನು ಲೆಕ್ಕಹಾಕಲು ವಿಫಲವಾದ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಕೇಂದ್ರ (NCSCM-ನ್ಯಾಷನಲ್ ಸೆಂಟರ್ ಫಾರ್ ಸಸ್ಟೇನಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್)ದ ದೋಷಪೂರಿತ ವರದಿಯೇ ಇದಕ್ಕೆ ಕಾರಣವಾಗಿತ್ತೆನ್ನಲಾಗಿದೆ. ಆಳುವವರು, ಸರಕಾರಿ ಏಜೆನ್ಸಿಗಳು ಕಾರ್ಪೋರೇಟ್ ಹಿತಾಸಕ್ತಿಗಳ ಪರವಹಿಸಿ ಪರಿಸರ ಕಾಳಜಿ, ಜನ ಹಿತ ಕಡೆಗಣಿಸುತ್ತಿರುವುದಕ್ಕಿದು ನಿದರ್ಶನದಂತಿದೆ ಎಂದು ಕಾಸರಕೋಡಿನ ಮೀನುಗಾರ ಮುಖಂಡರು ಬೇಸರಿಸುತ್ತಾರೆ.
ಧಾರಣಾಶಕ್ತಿ ನಾಸ್ತಿ
ಉತ್ತರ ಕನ್ನಡದಲ್ಲೀಗ ಬೃಹತ್ ವಾಣಿಜ್ಯ ಬಂದರುಗಳ ಸುಗ್ಗಿ! ಇದರಿಂದ ಸ್ಥಳೀಯರಿಗೆ ಲಾಭಕ್ಕಿಂತ ಲುಕ್ಸಾನೇ ಜಾಸ್ತಿ ಎಂದು ಪರಿಸರವಾದಿಗಳು ಹೇಳುತ್ತಾರೆ. ಜಿಲ್ಲೆಯ ಪರಿಸರ ಹಾಗು ಜನಸಾಮಾನ್ಯರ ಬೇಕುಬೇಡ ಕಡೆಗಣಿಸಿ ಕರಾವಳಿಯ ಧಾರಣಾ ಸಾಮರ್ಥ್ಯಕ್ಕಿಂತ ಜಾಸ್ತಿ ದೊಡ್ಡ ಬಂದರುಗಳನ್ನು “ಸಾರ್ವಜನಿಕ ಸಹಭಾಗಿತ್ವದ ಧೋರಣೆಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಆಳುವವರು ಹೇಳುತ್ತಾರೆ. ಜನರ ವಸತಿ ನೆಲೆಗಳಿಗೆ ಆತಂಕ ಸೃಷ್ಟಿಸುವ, ಸ್ಥಳೀಯರ ಕಸುಬು ಕಿತ್ತುಕೊಂಡು ನಿರುದ್ಯೋಗಿಗಳಾಗಿಸುವ ಈ ಸರಣಿ ಬಂದರು ಯೋಜನೆಗಳಲ್ಲಿ ಸಾರ್ವಜನಿಕರ “ಸಹಭಾಗಿತ್ವ ಎಲ್ಲಿಯೂ ಕಾಣುತ್ತಿಲ್ಲ; ಬದಲಿಗೆ ಸಾರ್ವಜನಿಕರ ಕಡು ಪ್ರತಿರೋಧ ಜಿಲ್ಲೆಯಲ್ಲಿ ಮಡುಗಟ್ಟಿದೆ. ಜಿಲ್ಲೆಯ ಶಾಸಕರು, ಸಂಸದರು ಮತ್ತು ಮಂತ್ರಿಗಳು ಆತಂಕಿತ ಜನರ ಭಾವನೆಗಳಿಗೆ ವ್ಯತಿರಿಕ್ತವಾಗಿ ಪೊಲೀಸರ ಕೈಗೆ ಲಾಠಿ ಕೊಟ್ಟು, ಗಂಭೀರ ಪ್ರಕರಣ ದಾಖಲಿಸುವ ನಿರ್ದೇಶನ ಕೊಟ್ಟು ಪ್ರತಿಭಟನಾಕಾರರ ಮೇಲೆ ದಾಳಿಗಿಳಿಸುತ್ತಿದ್ದಾರೆ. ಕಾರವಾರದ ಬಂದರನ್ನು ವಿಸ್ತರಿಸುವ ಪ್ರಯತ್ನ ನಡೆದಾಗ ಸ್ಥಳೀಯ ಮೀನುಗಾರ ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದ್ದರು. ಆಗ ಸಂಸದನಾಗಿದ್ದ ಅನಂತ್ ಹೆಗಡೆ ಕೆರಳಿ ಕೆಂಡವಾಗಿದ್ದರು; ಕಾರವಾರ ಬಂದರು ವಿಸ್ತರಿಸಿದ ಹೊರತು ವಿರಮಿಸುವುದಿಲ್ಲ ಎಂದು ಜನರಿಗೆ ರೋಪು ಹಾಕುವ ಶೈಲಿಯಲ್ಲಿ ಕೂಗಾಡಿದ್ದರು!
ಕಾರವಾರ ಮತ್ತು ಬೇಲೆಕೇರಿಯಲ್ಲಿ ಈಗಾಗಲೇ ಎರಡು ಸರ್ವಋತು ವಾಣಿಜ್ಯ ಬಂದರುಗಳಿವೆ. ಈ ಎರಡು ಪ್ರಮುಖ ಬಂದರುಗಳು ಹೊಂದಿರುವ ಆಮದು-ರಫ್ತು ಗುರಿಯ ಶೇ.40ರಷ್ಟೂ ತಲುಪಲಾಗಿಲ್ಲ. ಇದು ಇಷ್ಟು ವರ್ಷ ಕೆನರಾದಿಂದ ಎಂಪಿಯಾದವರ “ಅರ್ಹತೆ”ಗೆ ಸಾಕ್ಷಿಯಂತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕಾರವಾರ ಮತ್ತು ಬೇಲೆಕೇರಿ ಬಂದರಿಗೆ ಮುಂದಿನ 200 ವರ್ಷದವರೆಗಿನ ಅಗತ್ಯ ಪೂರೈಸುವ ಸಾಮರ್ಥ್ಯವಿದೆ. ಈ ಬಂದರುಗಳ ವಹಿವಾಟನ್ನು ಸುಧಾರಿಸುವ ಯೋಚನೆ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲೀ ಇಲ್ಲ. ಏಕೆಂದರೆ ಆಳುವವರಿಗೆ ಹಳೆ ರಿಪೇರಿಗಿಂತ ಹೊಸದು ಕಟ್ಟುವುದು-ಖರೀದಿಸುವುದರಲ್ಲೇ ಲಾಭ ಹೆಚ್ಚು ಎಂಬ ಮಾತು ಕೇಳಿಬರುತ್ತಿದೆ. ಸಾಗರ ಮಾಲಾ ಎಂಬ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಉತ್ತರ ಕನ್ನಡದಲ್ಲಿ ನಾಲ್ಕೈದು ವಾಣಿಜ್ಯ ಬಂದರು ಕಟ್ಟುವ ಯೋಚನೆ ಅಧಿಕಾರಸ್ಥರು ಮತ್ತವರ ಸಲಹೆಗಾರ ಅಧಿಕಾರಿಗಳ ತಲೆಯಲ್ಲಿದೆ. ಹೊನ್ನಾವರದ ಕಾಸರಕೋಡ-ಟೊಂಕ ಮತ್ತು ಅಂಕೋಲಾದ ಕೇಣಿ ಕಡಲ ತೀರದಲ್ಲಿ ಬಂದರು ನಿರ್ಮಿಸುವ ಸರ್ವೆ, ಕಾಮಗಾರಿ ಆರಂಭವಾಗಿದೆ. ಎರಡೂ ಕಡೆ ಮೀನುಗಾರರು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ; ಹೊನ್ನಾವರದ ಮಂಕಿ ಮತ್ತು ಹಳದೀಪುರ-ಪಾವಿನಕುರ್ವೆಯಲ್ಲಿ ಬಂದರು ಸ್ಥಾಪಿಸುವ ನೀಲನಕ್ಷೆ ರೆಡಿಯಾಗುತ್ತಿದೆ ಎನ್ನಲಾಗಿದೆ.
ಕಾರವಾರದ ಬೈತ್‌ಖೋಲ್ ಬಂದರನ್ನು ರವೀಂದ್ರನಾಥ್ ಠಾಗೋರ್ ಬೀಚ್ ತನಕ ವಿಸ್ತರಿಸುವ ಯೋಜನೆ ಸಿದ್ಧವಾಗಿ ಕಾಮಗಾರಿಗೆ ಪ್ರಯತ್ನವೂ ಆಗಿತ್ತು. ಅದಕ್ಕೆ ಜನರ ಪ್ರತಿಭಟನೆ ಮತ್ತು ಕೋರ್ಟ್ ವ್ಯಾಜ್ಯದಿಂದ ಹಿನ್ನಡೆಯಾಯಿತು. ಭಾರತದಲ್ಲೇ ದೊಡ್ಡದಾದ ನೌಕಾನೆಲೆ ಕಾರವಾರದಲ್ಲಿದೆ. ಈ ನೌಕಾನೆಲೆ ಮತ್ತು ವಾಣಿಜ್ಯ ಬಂದರುಗಳ ಭಾರವೇ ಉತ್ತರ ಕನ್ನಡದ ಕರಾವಳಿಗೆ ಹೊರಲಾಗದಷ್ಟಾಗಿದೆ; ಇದರ ಜತೆ ಇನ್ನಷ್ಟು ಬೃಹತ್ ವಾಣಿಜ್ಯ ಬಂದರುಗಳನ್ನು ಹೊತ್ತುಕೊಳ್ಳುವ ಧಾರಣಾಶಕ್ತಿ ಜಿಲ್ಲೆಯ ಕಡಲ ತಡಿಗಿಲ್ಲವೆಂದು ಪರಿಸರತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ. ಹಳೆ ಬಂದರುಗಳ ಕಾರ್ಯಕ್ಷಮತೆ ಹೆಚ್ಚಿಸಿದರೆ ಹೊಸ ಬಂದರುಗಳ ಅಗತ್ಯವೂ ಇರದು. ಆಳುವವರು ವಿವೇಚನೆ ಇಲ್ಲದೆ ಅಗತ್ಯಕ್ಕಿಂತ ಹೆಚ್ಚು ಬಂದರು ಕಟ್ಟುವ ಜನ ವಿರೋಧಿ-ಪರಿಸರ ವಿರೋಧಿ-ಅವೈಜ್ಞಾನಿಕ ಅಭಿವೃದ್ಧಿ ನೀತಿ ಅನುಸರಿಸುತ್ತಿದ್ದಾರೆ. ಅದನ್ನು ಪ್ರಶ್ನಿಸಬೇಕಿದ್ದ ಸ್ಥಳೀಯ ಎಂಪಿ, ಎಮ್ಮೆಲ್ಲೆ, ಮಿನಿಸ್ಟರ್‌ಗಳು ತುಟಿಪಿಟಿಕ್ ಎನ್ನದೆ ಸಹಕರಿಸುತ್ತಿದ್ದಾರೆ. ಇದು ಉತ್ತರ ಕನ್ನಡದ ಲಾಗಾಯ್ತಿನ ದೌರ್ಭಾಗ್ಯ!!
ಜೀವ-ಜೀವನದ ಹೋರಾಟ
ಬಲಾಢ್ಯ ಬಂಡವಾಳಶಾಹಿಗಳ ಖಾಸಗಿ ಬಂದರಿನಿಂದ ಸಂಕಷ್ಟಕ್ಕೀಡಾಗುವ ಕಾಸರಕೋಡ ಸುತ್ತಲಿನ ಐದು ಮಜರೆಗಳ ಮೀನುಗಾರರ ಸಮುದಾಯದಲ್ಲಿ ಹಿಂದು, ಮುಸಲ್ಮಾನ ಮತ್ತು ಕ್ರಿಶ್ಚಿಯನ್ ಧರ್ಮೀಯರಿದ್ದಾರೆ. ಈ ಮೀನುಗಾರಿಕೆ ಕಾಯಕದವರೆಲ್ಲ ಸೇರಿ ಕಳೆದೊಂದು ದಶಕದಿಂದ ಬಂದರು ಗುಮ್ಮ ಓಡಿಸಲು ಜೀವ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ತಿಂಗಳುಗಟ್ಟಲೆ ಪ್ರತಿಭಟನೆ, ರ್‍ಯಾಲಿ, ಸತ್ಯಾಗ್ರಹ, ಎದೆವರೆಗಿನ ಸಮುದ್ರದಲ್ಲಿ ನಿಂತು ನಿರಶನ ನಡೆಸಿದ್ದಾರೆ; ತಮ್ಮ ಮನೆ, ದೋಣಿ-ಬಲೆ ಇಡುವ, ಒಣಮೀನು ಸಿದ್ಧಪಡಿಸುವ ಶೆಡ್ ತರೆವಿಗೆ ಬಂದಾಗ ಬುಲ್ಡೋಜರ್ ಮುಂದೆ ಮಲಗಿ ಕಣ್ಣೀರು ಹಾಕಿದ್ದಾರೆ. ಪ್ರಭುತ್ವದ ಪಾತಕ ಜೋರಾದಾಗ ಮೀನುಗಾರ ತರುಣರು, ಮಹಿಳೆಯರು ಸಾಮೂಹಿಕವಾಗಿ ಕಡಲಿಗೆ ಹಾರಿ ಆತ್ಮಹತೆಗೂ ಮುಂದಾಗಿದ್ದಾರೆ! ಈ ಬಡ ಬೆಸ್ತರ ಅಸ್ತಿತ್ವದ ಹೋರಾಟಕ್ಕೆ ಆಡಳಿತಗಾರರು ಬೆನ್ನುಹಾಕಿ ಕುಳಿತಿದ್ದಾರೆ. ಶಾಸಕರು, ಸಂಸದರು ಮೀನುಗಾರರ ನೋವಿಗೆ ಸ್ಪಂದಿಸುವುದಿರಲಿ, ಹೋರಾಟಗಾರರ ಬಾಯಿ ಮುಚ್ಚಿಸಲು ಪೊಲೀಸರಿಂದ ಲಾಠಿಯಿಂದ ಹೊಡೆಸಿ ರಕ್ತ ಹರಿಸಿದ್ದಾರೆ; ಸುಳ್ಳು ಕೇಸು ಹಾಕಿಸಿ ಕಾಡಿದ್ದಾರೆ; ರೌಡಿ ಶೀಟರ್ ಮಾಡಲು ಹವಣಿಸಿದ್ದಾರೆ. ಅವರ ಮನೆ-ಒಣ ಮೀನು ತಯಾರಿಕಾ ಶೆಡ್ ಮೇಲೆ ಬುಲ್ಡೋಜರ್ ಹಾಯಿಸಿ ಧ್ವಂಸ ಮಾಡಿಸಿದ್ದಾರೆ. ಪೊಲೀಸರು ಮಹಿಳಾ ಮೀನುಗಾರ್ತಿಯರೊಂದಿಗೆ ಕ್ರೂರವಾಗಿ ನಡೆದುಕೊಂಡಿದ್ದಾರೆ.
ಕಾನೂನು ಮಾರ್ಗದ ಮೂಲಕವೂ ಬಂದರು ಯೋಜನೆಯನ್ನು ಹಿಮ್ಮೆಟ್ಟಿಸಲು ಮೀನುಗಾರರ ಸಂಘಟನೆಯವರು ಹೆಣಗಾಡಿದ್ದಾರೆ. ಹೈಕೋರ್ಟ್ ಕಾಮಗಾರಿಗೆ ಮೊದಲು ತಡೆಯಾಜ್ಞೆ ನೀಡಿದ್ದರೂ ಆ ಬಳಿಕ ಪೋರ್ಟ್ ಕಂಪನಿ ಪರವಾಗಿಯೇ ತೀರ್ಪು ಬಂತು; ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಸಿಆರ್‌ಝಡ್(ಕರಾವಳಿ ನಿಯಂತ್ರಣ ಮಲಯ) ಮಾನದಂಡ ಉಲ್ಲಂಘಿಸಿ ಬಂದರು ರಸ್ತೆ ನಿರ್ಮಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಮತ್ತು ಎರಡು ಮೇಲ್ಮನವಿಗಳಿಗೂ ಸೋಲಾಯಿತು. ಬಂದರು ಯೋಜನೆಗೆ ಪರಿಸರ ಇಲಾಖೆ ಕೊಟ್ಟಿದ್ದ ಕಿಯರೆನ್ಸ್(ಇಸಿ) ಹಲವು ಬಾರಿ ವಿಸ್ತರಿಸಲಾಗಿತ್ತು. ಅದು 2023ರಲ್ಲಿ ಕೊನೆಗೊಂಡಿತು. ಪರಿಸರ ಇಲಾಖೆಯ ತಜ್ಞರ ಸಮಿತಿ ಸಾರ್ವಜನಿಕ ವಿಚಾರಣೆ(ಪಬ್ಲಿಕ್ ಹಿಯರಿಂಗ್)ಯಿಂದ ವಿನಾಯಿತಿ ನೀಡುವ ಮೂಲಕ ಮತ್ತೆ ಯೋಜನೆಗೆ ಅನುಮತಿ ಕೊಟ್ಟಿತು. 2006ರ ಪರಿಸರ ಇಲಾಖೆಯ ಅಧಿಸೂಚನೆಯಂತೆ ಸಾರ್ವಜನಿಕ ವಿಚಾರಣೆಯಿಲ್ಲದೆ ಯೋಜನೆಯ ಅನುಮತಿಗೆ ಅವಕಾಶವಿಲ್ಲ. ಅಂಥ ಅಧಿಕಾರ ತಜ್ಞರ ಸಮಿತಿಗೂ ಇಲ್ಲ ಎಂದು ಮೇಲ್ಮವಿದಾರರು ವಾದಿಸಿದ್ದರು.
ಹಸಿರು ನ್ಯಾಯಾಧೀಕರಣ ಈ ತರ್ಕ ಒಪ್ಪಲಿಲ್ಲ. ಕಾರ್ಪೊರೆಟ್ ಲಾಬಿಯೊಂದಿಗೆ ಶಾಮೀಲಾಗಿರುವ ಜನಪ್ರತಿನಿಧಿಗಳು ಹಾಗು ಪರಿಸರ, ಜಿಲ್ಲಾಡಳಿತ, ಸರ್ವೆ ಇಲಾಖೆಯೇ ಮುಂತಾದ ಸರಕಾರಿ ಏಜೆನ್ಸಿಗಳು ವ್ಯವಸ್ಥಿತವಾಗಿ ನ್ಯಾಯಾಲಯಗಳನ್ನು ದಿಕ್ಕು ತಪ್ಪಿಸುತ್ತಿರವುದರಿಂದ ಹಿನ್ನಡೆಯಾಗುತ್ತಿದೆ ಎಂದು ಹೋರಾಟಗಾರರ ಮುಂದಾಳುಗಳು ಅಲವತ್ತುಕೊಳ್ಳುತ್ತಾರೆ. ಹಾಗೆ ನೋಡಿದರೆ ನ್ಯಾಯಾಲಯದ ಹೊರಗೆ ಸ್ಥಳೀಯ ಸಂಸದ-ಶಾಸಕ-ಸಚಿವರು ಮಾನವೀಯತೆಯಿಂದ ಬಗೆಹರಿಸುವ ಪ್ರಕರಣವಿದು. “ನಮ್ಮೂರಿನ ಜನರಿಗೆ ತೊಂದರೆ ಕೊಡುವ ಯೋಜನೆ ಬಲವಂತದಿಂದ ಹೇರಬೇಡಿ” ಎಂದು ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ತೋರಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಮೊದಲೇ ಇದೊಂದು ಅನವಶ್ಯಕ ಯೋಜನೆ. ತಿರಸ್ಕಾರಕ್ಕೆ ಅರ್ಹವಾದುದು. ಯೋಜನೆ ನಿಲ್ಲಿಸಿದರೆ ಸರಕಾರ-ಸಮಷ್ಠಿ ಎರಡಕ್ಕೂ ಹಾನಿಯೇನಿಲ್ಲ.
ಇಂಥ ವಿಷಮ ಸಂದರ್ಭದಲ್ಲಿ ಬೆನ್ನಿಗೆ ಬಿದ್ದು ಕಾಡುತ್ತಿರುವ ಬಂದರು ಭೂತ ಬೆಸ್ತರನ್ನು ಮತ್ತಿಷ್ಟು ಚಿಂತೆಗೀಡುಮಾಡಿಬಿಟ್ಟಿದೆ. ಇಷ್ಟಾಗಿಯೂ ಮೀನುಗಾರ ಸಮುದಾಯ ಹಾಗೂ ಪರಿಸರ, ಜಲಚರಗಳನ್ನು ಬಲಿಕೊಟ್ಟು ಬಂದರು ಯೋಜನೆ ಆಳುವವರು ಮುಂದುವರಿಸುತ್ತಿದ್ದಾರೆ. ಪ್ರಭುತ್ವದ ಏಕಪಕ್ಷೀಯ ನಿರ್ಧಾರದ ವಿರುದ್ಧದ ಮೀನುಗಾರರ ಹೋರಾಟದ ಧ್ವನಿ ದೃಢವಾಗುತ್ತಿದೆ. ಯೋಜನೆ ರದ್ದಾಗುವ ತನಕ ಪ್ರತಿರೋಧ ಇದ್ದೇ ಇರುತ್ತದೆಂದು ಹೋರಾಟಗಾರರು ಹೇಳುತ್ತಾರೆ. ಕಾಸರಕೋಡು ಮೀನುಗಾರರು ನಡೆಸುತ್ತಿರುವುದು ಕೇವಲ ಒಂದು ಬಂದರು ಬೇಡವೆಂಬ ಸಿವಿಲ್ ಕಾಮಗಾರಿ ವಿರುದ್ಧದ ಹೋರಾಟವಲ್ಲ. ಇದು ಕಾರ್ಪೊರೆಟ್ ಅತಿಕ್ರಮಣ, ಪರಿಸರ ನಾಶ ಮತ್ತು ಬೆವರಿನ ವರ್ಗದ ಬದುಕಿನ ಪ್ರಶ್ನೆ!
ಮಂತ್ರಿ ಮಂಕಾಳು ವೈದ್ಯ ಮೋಸ!!
ಹೊನ್ನಾವರ ಪೋರ್ಟ್ ಕಂಪನಿ ಹಿಂದಿನ ಬಿಜೆಪಿ ಸರಕಾರ ಇರುವಾಗಲೇ ಕಾಮಗಾರಿ ಶುರುಮಾಡಿತ್ತು. ಅಂದು ಹೊನ್ನಾವರ-ಭಟ್ಕಳ ಕ್ಷೇತ್ರದ ಶಾಸಕನಾಗಿದ್ದ ಬಿಜೆಪಿಯ ಸುನೀಲ್ ನಾಯ್ಕ್ ಬಹಿರಂಗವಾಗೇ ಬಂದರು ಯೋಜನೆ ಪರವೆಂದು ತೋರಿಸಿಕೊಂಡಿದ್ದರು. ಬಂದರಿನ ವಿರುದ್ಧ ಹೋರಾಟಕ್ಕಿಳಿದಿದ್ದ ಮೀನುಗಾರ ತರುಣರು ಮತ್ತು ಮಹಿಳೆಯರು ಒಕ್ಕಲೆಬ್ಬಿಸುವ ಬಲವಂತದ ಕಾಮಗಾರಿ ಮತ್ತು ಪೊಲೀಸರ ದೌರ್ಜನ್ಯಕ್ಕೆ ವಿರುದ್ಧವಾಗಿ ಸಾಮೂಹಿಕವಾಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದರೂ ಕಣ್ಣೆತ್ತಿಯೂ ಕಾಸರಕೋಡಿನತ್ತ ನಾಯ್ಕ್ ನೋಡಿರಲಿಲ್ಲ. ಕಾರ್ಪೊರೆಟ್ ಉದ್ಯಮಿಗಳ ಬೆನ್ನಿಗೆ ನಿಂತಿದ್ದ ಸುನೀಲ್ ನಾಯ್ಕರ ಶಿಷ್ಯರು ಬಂದರು ಕಂಪನಿಯ ಸಬ್ ಕಂಟ್ರಾಕ್ಟರರೂ ಆಗಿ ಹೋರಾಟಗಾರರಿಗೆ ಧಮಕಿ ಹಾಕಿದ್ದೂ ಇದೆ. ಆಗ ಮಾಜಿ ಶಾಸಕನಾಗಿದ್ದ ಈಗಿನ ಮೀನುಗಾರಿಕೆ ಮತ್ತು ಬಂದರು ಮಂತ್ರಿ ಮಂಕಾಳು ವೈದ್ಯ ಕಾಸರಕೋಡಿನ ಮೀನುಗಾರರ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದರು.
ಹೋರಾಟದ ಮುಂಚೂಣಿಯಲ್ಲಿರುತ್ತಿದ್ದ ಮಂಕಾಳು ವೈದ್ಯ ತಾನು ಶಾಸಕನಾದರೆ ಈ ಬಂದರು ಯೋಜನೆ ರದ್ದು ಮಾಡಿಸುವುದಾಗಿ ಅಂದು ವೀರಾವೇಷದ ಭಾಷಣ, ಹೇಳಿಕೆ ಕೊಡುತ್ತಿದ್ದರು. ಮೀನುಗಾರರು ಮಂಕಾಳು ವೈದ್ಯರ ಮಾತು ನಂಬಿದ್ದರು. ಕಳೆದ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಮಂಕಾಳು ವೈದ್ಯ ಕೆಪಿಸಿಸಿ ಅಧ್ಯಕ್ಷರಾಗಿದ್ದ ಇಂದಿನ ಡಿಸಿಎಂ ಡಿಕೆಶಿಯವರನ್ನು ನಿಯೋಜಿತ ಕಾಸರಕೋಡ ಬಂದರು ಸೈಟಿಗೆ ಕರೆದುಕೊಂಡು ಹೋಗಿದ್ದರು. ಡಿಕೆಶಿ ಕಾಂಗ್ರೆಸ್ ಸರಕಾರ ಬಂದರೆ ಬಂದರು ಯೋಜನೆ ನಿಲ್ಲಿಸುತ್ತೇವೆ ಎಂದು ಮೀನುಗಾರರಿಗೆ ಅಭಯ ನೀಡಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು; ಮಂಕಾಳು ಭರ್ಜರಿ ಅಂತರದಲ್ಲೇ ಗೆದ್ದರು. ಅಷ್ಟೇ ಅಲ್ಲ, ಅಚಾನಕ್ ಮೀನುಗಾರಿಕೆ-ಬಂದರು ಸಚಿವರೂ ಆದರು!
ಮಂತ್ರಿಯಾಗಿದ್ದೇ ತಡ, ಮಂಕಾಳು ವೈದ್ಯರ ವರಸೆ ಬದಲಾಯಿತು. ಮೀನುಗಾರಿಕಾ ಮಂತ್ರಿಯಾಗಿ ಬೆಸ್ತರ ಹಿತ ಕಾಪಾಡುವ ವಿಪುಲ ಅವಕಾಶವಿದ್ದರೂ ನೆರವಿಗೆ ಧಾವಿಸಲಿಲ್ಲ; ಬಂದರು ಮಂತ್ರಿಯಾಗಿ ಜನವಿರೋಧಿ ಬಂದರಿಗೆ ತಡೆಹಾಕುವ ಅಧಿಕಾರವಿದ್ದರೂ ಬಳಸಲಿಲ್ಲ. ಮೀನುಗಾರರ ವಸತಿ ನೆಲೆಯಲ್ಲಿ ಬಂದರು ಕಂಪನಿ ಬಲಾತ್ಕಾರದಿಂದ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಕೈಹಾಕಿದಾಗ ಸುಮ್ಮನುಳಿದರು. ಅಮಾಯಕ ಮಹಿಳೆಯರು, ನಿರಪರಾಧಿಗಳೆನ್ನದೆ ಪೊಲೀಸರು ದೌರ್ಜನ್ಯ ನಡೆಸಿ ಕಠಿಣ ಕೇಸುಹಾಕಿ ಜೈಲಿಗಟ್ಟಿದಾಗ, ರೌಡಿ ಶೀಟರ್ ಮಾಡಿದಾಗ ತಡೆಯುವ ಗೋಜಿಗೆ ಹೋಗಲಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳು ವೈದ್ಯರಿಗೆ ಬಂದರು ಧಣಿಗಳು ಮತ್ತು ಪೊಲೀಸರ ಜಂಟಿ ಕಾರಸ್ಥಾನದ ಅರಿವಿಲ್ಲದಿರಲು ಸಾಧ್ಯವೆ? ಕಾರ್ಪೊರೆಟ್ ಉದ್ಯಮಿಗಳ ಹಿತ ಮಂತ್ರಿ ಮಂಕಾಳು ಬಯಸುತ್ತಿದ್ದಾರೆ; ಸದಾ ದಾನ-ದೇಣಿಗೆ- ಪ್ರಾಯೋಜಕತ್ವದ ಧನಾಧಾರಿತ ರಾಜಕಾರಣ ಮಾಡುವ ಮಂತ್ರಿ ಮಂಕಾಳು ವೈದ್ಯರ “ಹಿತ” ಕಾರ್ಪೊರೆಟ್ ಲಾಬಿ ಕಾಯುತ್ತಿದೆ. “ನೀನನಗಿದ್ದರೆ, ನಾನಿನಗೆ” ಎಂದು ಹೊನ್ನಾವರ-ಭಟ್ಕಳ ಕ್ಷೇತ್ರದ ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಹೊನ್ನಾವರ ಖಾಸಗಿ ಬಂದರು ಸ್ಥಾಪನೆಗಾಗಿ ಮೀನುಗಾರರ ಮೇಲೆ ದಾಳಿ: ಮಾನವ ಹಕ್ಕು ಆಯೋಗಕ್ಕೆ ದೂರು


