ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ ಚುನಾವಣೆಯನ್ನೂ ನಡೆಸಿತು. ಈಗ ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಹಾಗಾಗಿ, ಬಿಹಾರದ ಎಸ್‌ಐಆರ್ ವಿಷಯ ಸದ್ಯಕ್ಕೆ ತಣ್ಣಗಾಗಿದೆ.
ಆದರೆ, ಮತದಾರರ ಪಟ್ಟಿಯಿಂದ ಹೊರ ಹಾಕಲ್ಪಟ್ಟವರು ತಮ್ಮ ಅಮೂಲ್ಯ ಮತಹಕ್ಕು ಕಳೆದುಕೊಂಡಾಗಿದೆ. ಅದು ವಾಪಸ್ ಬರುವ ಸಾಧ್ಯತೆ ಕಾಣುತ್ತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಸುದೀರ್ಘ ವಿಚಾರಣೆ ನಡೆದಿದೆ. ಹಲವು ಮಧ್ಯಂತರ ಆದೇಶಗಳನ್ನೂ ಸರ್ವೋಚ್ಚ ನ್ಯಾಯಾಲಯ ನೀಡಿದೆ. ಎಸ್‌ಐಆರ್ ಪ್ರಕ್ರಿಯೆಯ ಸಾಂವಿಧಾನಿಕತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಅಂತಿಮ ತೀರ್ಪನ್ನು ಇನ್ನೂ ಪ್ರಕಟಿಸಬೇಕಿದೆ.
ಎರಡನೇ ಹಂತದಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಛತ್ತೀಸ್‌ಗಢ, ಗೋವಾ ಸೇರಿದಂತೆ 9 ರಾಜ್ಯಗಳು ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಪುದುಚೇರಿ ಸೇರಿದಂತೆ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಕೈಗೊಳ್ಳಲಾಗಿದೆ.
ಅಸ್ಸಾಂನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆದಿಲ್ಲ, ಬದಲಾಗಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಮಾತ್ರ ನಡೆಸಲಾಗಿದೆ.
ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅತ್ಯಂತ ಕಟ್ಟುನಿಟ್ಟಾದ ಮತ್ತು ಆಳವಾದ ತಪಾಸಣಾ ಪ್ರಕ್ರಿಯೆಯಾಗಿದೆ. ಇದರಲ್ಲಿ ಅಧಿಕಾರಿಗಳೇ (ಬಿಎಲ್‌ಒ – ಬೂತ್ ಮಟ್ಟದ ಅಧಿಕಾರಿ) ಕಡ್ಡಾಯವಾಗಿ ಪ್ರತಿ ಮನೆಗೆ ಭೇಟಿ ನೀಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ದಾಖಲೆಗಳನ್ನು ಸ್ಥಳದಲ್ಲೇ ಪರಿಶೀಲಿಸುತ್ತಾರೆ. ಸತ್ತವರ ಹೆಸರುಗಳನ್ನು ತೆಗೆದುಹಾಕುವುದು, ವಲಸೆ ಹೋದವರನ್ನು ಪತ್ತೆ ಮಾಡುವುದು ಮತ್ತು ನಕಲಿ ಮತದಾರರನ್ನು ಸಂಪೂರ್ಣವಾಗಿ ಪಟ್ಟಿಯಿಂದ ಹೊರಹಾಕುವುದು ಇದರ ಮುಖ್ಯ ಗುರಿ.
ವಿಶೇಷ ಪರಿಷ್ಕರಣೆ (ಎಸ್‌ಆರ್) ಮತದಾರರ ಪಟ್ಟಿಯನ್ನು ಅಪ್‌ಡೇಟ್ ಮಾಡಲು ಅನುಸರಿಸುವ ಸಾಮಾನ್ಯ ಮತ್ತು ನಿಯಮಿತ ಪ್ರಕ್ರಿಯೆಯಾಗಿದೆ. ಇದರಲ್ಲಿ ಚುನಾವಣಾ ನೋಂದಣಿ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸುತ್ತಾರೆ. ಹೊಸದಾಗಿ ಹೆಸರು ಸೇರಿಸಲು ಅಥವಾ ತಿದ್ದುಪಡಿ ಮಾಡಲು ಮತದಾರರೇ ಮುಂದೆ ಬಂದು ಅರ್ಜಿ ಸಲ್ಲಿಸಬೇಕು (ಫಾರ್ಮ್ 6, 7 ಅಥವಾ 8 ರ ಮೂಲಕ). ಇದು ಹೆಚ್ಚಾಗಿ ಆನ್‌ಲೈನ್ ಅಥವಾ ಕಚೇರಿ ಕೇಂದ್ರಿತವಾಗಿರುತ್ತದೆ. ಅಧಿಕಾರಿಗಳು ಪ್ರತಿ ಮನೆಗೆ ಹೋಗುವುದು ಕಡ್ಡಾಯವಲ್ಲ. ವಯಸ್ಸಾದವರು, ವಿಳಾಸ ಬದಲಿಸಿದವರು ಅಥವಾ ಹೆಸರು ಬಿಟ್ಟುಹೋದವರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವುದು ಇದರ ಮುಖ್ಯ ಗುರಿ.
ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಎಸ್ಐಆರ್ ಬಳಿಕ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯ ಅನುಸಾರ ಈಗಾಗಲೇ ಮತದಾನ ನಡೆದಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾದಲ್ಲಿ ಮಾತ್ರ ಏಪ್ರಿಲ್ 23ರಂದು ಮೊದಲ ಹಂತ ಮತ್ತು ಏಪ್ರಿಲ್ 29ರಂದು ಎರಡನೇ ಹಂತದ ಮತದಾನ ನಡೆಯಲಿದೆ.
ಎರಡನೇ ಹಂತದಲ್ಲಿ ಎಸ್‌ಐಆರ್ ನಡೆದಿರುವ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ ಭಾರೀ ದೊಡ್ಡ ಗೊಂದಲದ ವಾತಾವರಣ ಉಂಟಾಗಿದೆ. ಜನರು ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಲು ದಾಖಲೆಗಳನ್ನು ಹಿಡಿದು ಕಚೇರಿಗಳಿಗೆ ಅಲೆದಾಡುವಂತಾಗಿದೆ. ಪಶ್ಚಿಮ ಬಂಗಾಳದ ಎಸ್‌ಐಆರ್ ಸಂಪೂರ್ಣ ಸಂಕೀರ್ಣ ವಿಷಯವಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್ ಕದವೂ ತಟ್ಟಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿ ದೇಶದ ಗಮನ ಸೆಳೆದಿದ್ದಾರೆ.
ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗಿಂತ ಮೊದಲು ಮತದಾರರ ಸಂಖ್ಯೆ 7.66 ಕೋಟಿ ಇತ್ತು. ಎಸ್‌ಐಆರ್‌ನಲ್ಲಿ ಮೃತಪಟ್ಟವರದ್ದು, ಸ್ಥಳಾಂತರಗೊಂಡವರದ್ದು ಮತ್ತು ಒಂದಕ್ಕಿಂತ ಹೆಚ್ಚು ಬಾರಿ ದಾಖಲಾಗಿರುವುದು ಎಂಬ ಕಾರಣಗಳನ್ನು ನೀಡಿ ಬರೋಬ್ಬರಿ 91 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಪರಿಣಾಮ ಪ್ರಸ್ತುತ ಮತದಾರರ ಸಂಖ್ಯೆ 6.75 ಕೋಟಿಗೆ ಇಳಿಕೆಯಾಗಿದೆ.
ಎಸ್‌ಐಆರ್ ಬಳಿಕ ಡಿಸೆಂಬರ್ 16, 2025ರಂದು ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಸುಮಾರು 58 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು.
ಫೆಬ್ರವರಿ 28, 2026ರಂದು ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಿತ್ತು. ಕರಡು ಪಟ್ಟಿಯ ನಂತರ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಈ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ವೇಳೆಗೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ ಸುಮಾರು 7.08 ಕೋಟಿ ಇತ್ತು. ಆದರೆ, ಸುಮಾರು 60 ಲಕ್ಷ ಹೆಸರುಗಳು ಇನ್ನೂ ‘ಪರಿಶೀಲನೆಯಲ್ಲಿ’ (Under Adjudication) ಇದ್ದವು.
ಅಂತಿಮ ಪಟ್ಟಿಯ ನಂತರವೂ ‘ಪರಿಶೀಲನೆಯಲ್ಲಿದ್ದ’ ಹೆಸರುಗಳನ್ನು ಹಂತಹಂತವಾಗಿ ಇತ್ಯರ್ಥಪಡಿಸಿ ಪೂರಕ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದೆ.
ಮಾರ್ಚ್ 20, 2026ರ ಸುಮಾರಿಗೆ ಮೊದಲ ಪೂರಕ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮಾರ್ಚ್ 27-28, 2026ರಂದು ಎರಡನೇ ಪಟ್ಟಿ ಮತ್ತು ಮಾರ್ಚ್ 29, 2026ರಂದು ಮೂರನೇ ಪೂರಕ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಏಪ್ರಿಲ್ 22, 2026ರ ಹೊತ್ತಿಗೆ, ಚುನಾವಣಾ ಆಯೋಗವು ನ್ಯಾಯಮಂಡಳಿಗಳ ನಿರ್ಧಾರದ ಆಧಾರದ ಮೇಲೆ ಹೆಚ್ಚುವರಿ ಪೂರಕ ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಇಸಿಐನೆಟ್ (ECINet) ಪೋರ್ಟಲ್‌ನಲ್ಲಿ ಸುಮಾರು 15ಕ್ಕೂ ಹೆಚ್ಚು ಪೂರಕ ಪಟ್ಟಿಗಳು ಲಭ್ಯವಿವೆ.
ಯೋಧನಿಂದ ನ್ಯಾಯಾಧೀಶರವರೆಗೆ ಮತ ಹಕ್ಕು ಕಳೆದುಕೊಂಡ ಜನರು
ಪಶ್ಚಿಮ ಬಂಗಾಳದ ಎಸ್‌ಐಆರ್‌ನ ಗೊಂದಲ, ಸಂಕೀರ್ಣತೆ, ಆತಂಕ, ಅವ್ಯವಸ್ಥೆ ಯಾವ ರೀತಿ ಇದೆ ಎನ್ನುವುದಕ್ಕೆ, ಅಲ್ಲಿ ಮತ ಹಕ್ಕು ಕಳೆದುಕೊಂಡ ಜನರ ಕೆಲ ಉದಾಹರಣೆಗಳು ಸಾಕ್ಷಿಯಾಗಿದೆ.
ಉದಾ 1 : ವಿಂಗ್ ಕಮಾಂಡರ್ ಶಮೀಮ್ ಅಖ್ತರ್
ಒಮ್ಮೆ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದ್ದ, ಭಾರತೀಯ ವಾಯುಪಡೆಯ (ಐಎಎಫ್) ಪದಕ ವಿಜೇತ ನಿವೃತ್ತ ವಿಂಗ್ ಕಮಾಂಡರ್ ಎಂ.ಡಿ ಶಮೀಮ್ ಅಖ್ತರ್ ಅವರ ಹೆಸರನ್ನು ಯಾವುದೇ ಪೂರ್ವಭಾವಿ ವಿಚಾರಣೆ ಇಲ್ಲದೆ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ.
enewsroom.in ವರದಿಯ ಪ್ರಕಾರ, ಡಿಸೆಂಬರ್ 15, 2006ರಂದು ಭಾರತೀಯ ವಾಯುಪಡೆಗೆ ನಿಯೋಜನೆಗೊಂಡ ಅಖ್ತರ್ ಅವರು, 17 ವರ್ಷಗಳ ಕಾಲ ದೇಶಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ತಾಂಬರಂ ವಾಯುಪಡೆ ನಿಲ್ದಾಣದಲ್ಲಿ ಸುಮಾರು 2,000 ವಾಯುಸೈನಿಕರಿಗೆ ತರಬೇತಿ ನೀಡುವುದರಿಂದ ಹಿಡಿದು, ಚಂಡೀಗಢ ಮತ್ತು ಅಲಹಾಬಾದ್‌ನಲ್ಲಿ ಆಡಳಿತಾತ್ಮಕ ನಾಯಕತ್ವದ ಹುದ್ದೆಗಳವರೆಗೆ ದೇಶದಾದ್ಯಂತ ಪ್ರಮುಖ ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ. ಅವರು ರಾಯಲ್ ಥಾಯ್ ಏರ್ ಫೋರ್ಸ್ ಜೊತೆಗಿನ ‘ಯುವ ಅಧಿಕಾರಿಗಳ ವಿನಿಮಯ ಕಾರ್ಯಕ್ರಮ’ದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ದಕ್ಷಿಣ ವಾಯು ಕಮಾಂಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, 2018ರ ಕೇರಳದ ಭೀಕರ ಪ್ರವಾಹದ ಸಮಯದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಸಂಯೋಜಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಕೌಟುಂಬಿಕ ಕಾರಣಗಳಿಂದಾಗಿ ಜುಲೈ 2022ರಲ್ಲಿ ಸ್ವಯಂ ನಿವೃತ್ತಿ (ವಿಆರ್‌ಎಸ್) ಪಡೆದ ನಂತರ, ಅಖ್ತರ್ ಅವರು ಸಶಸ್ತ್ರ ಪಡೆಗಳಿಗೆ ಸೇರಲು ಬಯಸುವ ಯುವಕರಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಹಿಂದುಳಿದ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅಖ್ತರ್ ಅವರ ಪ್ರಕಾರ, ಎಸ್‌ಐಆರ್ ಸಂದರ್ಭದಲ್ಲಿ ಅವರ ಹೆಸರನ್ನು ‘ಪರಿಶೀಲನೆಯಲ್ಲಿ’ (under adjudication) ಇರಿಸಲಾಗಿತ್ತು. ಆದರೆ, ಅವರನ್ನು ವಿಚಾರಣೆಗೆ ಕರೆಯುವ ಮೊದಲೇ, 2026ರ ಮಾರ್ಚ್ 28 ರಂದು ಬಿಡುಗಡೆಯಾದ ಎರಡನೇ ಪೂರಕ ಪಟ್ಟಿಯಲ್ಲಿ ಅವರ ಹೆಸರನ್ನು ತೆಗೆದುಹಾಕಲಾಗಿತ್ತು.
“ಚುನಾವಣಾ ಆಯೋಗ ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸಿದ್ದು, ಪ್ರತಿ ಹಂತದಲ್ಲೂ ಬಿಎಲ್‌ಒ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ನನ್ನ ಹೆಸರು ಅಂತಿಮ ಪಟ್ಟಿಯಲ್ಲಿದ್ದ ಕಾರಣ, ನಾನು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿರಲಿಲ್ಲ. ಆದರೆ ಮಾರ್ಚ್ 23ರ ಮೊದಲ ಪೂರಕ ಪಟ್ಟಿಯಲ್ಲಿ, ನನ್ನ ಹೆಸರನ್ನು ‘ಪರಿಶೀಲನೆಯಲ್ಲಿದೆ’ ಎಂದು ಗುರುತಿಸಲಾಗಿತ್ತು. ನಾನು ನನ್ನ ಬಿಎಲ್‌ಒ ಮೊಂಡಲ್ ಅವರನ್ನು ಸಂಪರ್ಕಿಸಿದಾಗ, ಅವರು ಪಾಲಿಸಬೇಕಾದ ಯಾವುದೇ ವಿಧಾನದ ಬಗ್ಗೆ ನನಗೆ ತಿಳಿಸಲಿಲ್ಲ ಮತ್ತು ಹೆಸರು ತಾನಾಗಿಯೇ ಮರುಸ್ಥಾಪನೆಯಾಗುತ್ತದೆ ಎಂದು ಭರವಸೆ ನೀಡಿದ್ದರು. ನಂತರ ಮಾರ್ಚ್ 28ರಂದು ಎರಡನೇ ಪಟ್ಟಿಯಲ್ಲಿ ನನ್ನ ಹೆಸರನ್ನು ತೆಗೆದುಹಾಕಿದಾಗ, ವಕೀಲರನ್ನು ನೇಮಿಸಿಕೊಂಡು ಟ್ರಿಬ್ಯೂನಲ್ ಅನ್ನು ಸಂಪರ್ಕಿಸುವಂತೆ ಬಿಎಲ್‌ಒ ಹೇಳಿದರು” ಎಂದು ಅಖ್ತರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವನ್ನು ಇನ್ನಷ್ಟು ಗೊಂದಲಮಯವಾಗಿಸುವ ಅಂಶವೆಂದರೆ, ಅಖ್ತರ್ ಅವರ ಹೆಸರು 2002ರ ಮತದಾರರ ಪಟ್ಟಿಯಲ್ಲಿದೆ. ಅವರ ಕುಟುಂಬ ಸದಸ್ಯರ ಹೆಸರುಗಳು ಪಟ್ಟಿಯಲ್ಲಿ ಮುಂದುವರೆದಿವೆ. ಯಾವುದೇ ಔಪಚಾರಿಕ ವಿಚಾರಣೆ ಅಥವಾ ಸ್ಪಷ್ಟೀಕರಣಕ್ಕೆ ಅವಕಾಶವನ್ನು ಒದಗಿಸಲಾಗಿಲ್ಲ.
ಈ ಪ್ರಕರಣವು ಸಿವಿಲ್ ಸೊಸೈಟಿಯ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಯ ಮುಸ್ಲಿಂ ಗುರುತಿನ ಕಾರಣಕ್ಕಾಗಿಯೇ ಅವರ ಹೆಸರನ್ನು ಕೈಬಿಡಲಾಗಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಜನರ ಹಕ್ಕುಗಳ ಹೋರಾಟಗಾರ ಅಥರ್ ಫಿರ್ದೌಸಿ ಪ್ರತಿಕ್ರಿಯಿಸಿ, “ಉತ್ತಮ ಸೇವಾ ದಾಖಲೆ ಹೊಂದಿರುವ ಒಬ್ಬ ಗೌರವಾನ್ವಿತ ಅಧಿಕಾರಿಗೆ ಕನಿಷ್ಠ ವಿಚಾರಣೆಯ ಅವಕಾಶವನ್ನೂ ನೀಡದಿದ್ದಾಗ, ಇಂತಹ ಪ್ರಶ್ನೆಗಳು ಉದ್ಭವಿಸುವುದು ಸಹಜ” ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಆಲ್ಟ್ ನ್ಯೂಸ್ ಪ್ರಕಟಿಸಿದ “Bengal SIR: The Wall ECI Built Around Electoral Data and How We Broke Through It” ಎಂಬ ವರದಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಗಳನ್ನು ಎತ್ತಿ ತೋರಿಸಿದೆ. ಈ ವರದಿಯು, ಬಿಜೆಪಿ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಕಡಿಮೆ ಇರುವ ಸಮುದಾಯಗಳ ಮತದಾರರನ್ನು ಗುರಿಯಾಗಿಸಿಕೊಂಡು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಅಥವಾ ಅನುಮಾನಸ್ಪದ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಪ್ರತಿಪಾದಿಸಿದೆ.
enewsroom.in ವರದಿಯ ಪ್ರಕಾರ, ವಿವಾದಾತ್ಮಕ ಎಸ್‌ಐಆರ್ ಪ್ರಕ್ರಿಯೆಗೆ ಕೇವಲ ವಿಂಗ್ ಕಮಾಂಡರ್ ಶಮೀಮ್ ಅಖ್ತರ್ ಅವರು ಮಾತ್ರ ಬಲಿಯಾಗಿಲ್ಲ. ಈ ಪಟ್ಟಿಯು ಸಾಕಷ್ಟು ಉದ್ದವಿದೆ.
ಅಕೌಂಟೆಂಟ್ ಜನರಲ್ ವೆಸ್ಟ್ ಬೆಂಗಾಲ್ (ಎಜಿಡಬ್ಲ್ಯೂಬಿ) ಗೆಜೆಟೆಡ್ ಅಧಿಕಾರಿ ರೇಷ್ಮಾ ಶಿರೀನ್ ಇಕ್ಬಾಲ್ ಅವರ ಹೆಸರನ್ನು ಸಹ ಇದೇ ರೀತಿಯಲ್ಲಿ ತೆಗೆದುಹಾಕಲಾಗಿದೆ. ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಶಾಹಿದುಲ್ಲಾ ಮುನ್ಷಿ ಅವರ ಹೆಸರನ್ನೂ ಸಹ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದು, ಈ ಅನುಭವವು ಕೇವಲ ಅವಮಾನಕರ ಮಾತ್ರವಲ್ಲದೆ, ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ಗೊಂದಲ ಉಂಟುಮಾಡಿದೆ ಎಂದು ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ಸಂವಿಧಾನದ ಚಿತ್ರಕಾರ ನಂದಲಾಲ್ ಬೋಸ್ ಅವರ ಮೊಮ್ಮಗ ಮತ್ತು ಮೊಮ್ಮಗಳ ಹೆಸರನ್ನೂ ಸಹ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.
ಉದಾ 2 : ಎಜಿಡಬ್ಲ್ಯೂಬಿ ರೇಷ್ಮಾ ಶಿರೀನ್ ಇಕ್ಬಾಲ್
ರೇಷ್ಮಾ ಶಿರೀನ್ ಇಕ್ಬಾಲ್ ಅವರು ಕೇಂದ್ರ ಸರ್ಕಾರದಲ್ಲಿ ಮೂರು ದಶಕಗಳ ಸುದೀರ್ಘ ವೃತ್ತಿ ಜೀವನವನ್ನು ಹೊಂದಿದ್ದಾರೆ. ಪಶ್ಚಿಮ ಬಂಗಾಳದ ಅಕೌಂಟೆಂಟ್ ಜನರಲ್ (ಎಜಿಡಬ್ಲ್ಯೂಬಿ) ಕಚೇರಿಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿರುವ ಅವರು, ಕಳೆದ 30 ವರ್ಷಗಳಲ್ಲಿ ಮೈಕ್ರೋ ಅಬ್ಸರ್ವರ್, ಪ್ರಿಸೈಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ, ಮಹಿಳಾ ಬೂತ್‌ಗಳ ಮೇಲ್ವಿಚಾರಣೆ ನಡೆಸಿದ್ದಾರೆ ಮತ್ತು ಹಲವಾರು ಸಂದರ್ಭಗಳಲ್ಲಿ ಚುನಾವಣೆಗಳನ್ನು ನಡೆಸಲು ಸಹಾಯ ಮಾಡಿದ್ದಾರೆ. ಅವರು ಮಾನ್ಯವಾದ ಪಾಸ್‌ಪೋರ್ಟ್ ಹೊಂದಿದ್ದಾರೆ ಮತ್ತು ಹಲವು ಬಾರಿ ವಿದೇಶ ಪ್ರವಾಸವನ್ನೂ ಮಾಡಿದ್ದಾರೆ. ಆದರೂ, ಮಾರ್ಚ್ 28ರಂದು ಚುನಾವಣಾ ಆಯೋಗವು ಎರಡನೇ ಪೂರಕ ಪಟ್ಟಿಯನ್ನು ಪ್ರಕಟಿಸಿದಾಗ, ಅವರ ಹೆಸರನ್ನು ತೆಗೆದುಹಾಕಿರುವುದು ಕಂಡುಬಂದಿದೆ ಎಂದು enewsroom.in ವರದಿ ಮಾಡಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಶಿರೀನ್ ಇಕ್ಬಾಲ್ ಅವರ ಪ್ರಕರಣವು ಬಹಳ ಕುತೂಹಲಕಾರಿಯಾಗಿದೆ. ಏಕೆಂದರೆ, ಫೆಬ್ರವರಿ 28ರಂದು ಪಶ್ಚಿಮ ಬಂಗಾಳದ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದಾಗ, ಅದರಲ್ಲಿ ಅವರ ಹೆಸರಿತ್ತು. ಮಾರ್ಚ್ 23ರಂದು ಬಿಡುಗಡೆಯಾದ ಮೊದಲ ಪೂರಕ ಪಟ್ಟಿಯಲ್ಲಿ, ಅವರ ಹೆಸರನ್ನು ‘ಪರಿಶೀಲನೆಯಲ್ಲಿದೆ’ ಎಂದು ತೋರಿಸಲಾಗಿತ್ತು. ಆದರೆ, ಎರಡನೇ ಪೂರಕ ಪಟ್ಟಿಯಲ್ಲಿ ಅವರ ಹೆಸರೇ ಕಾಣೆಯಾಗಿತ್ತು ಎಂದು ವರದಿ ಹೇಳಿದೆ.
“ಯಾವಾಗ ನನ್ನ ಹೆಸರು ‘ಪರಿಶೀಲನೆಯಲ್ಲಿದೆ’ ಎಂಬ ವಿಭಾಗದಲ್ಲಿ ಕಾಣಿಸಿಕೊಂಡಿತೋ, ಆಗ ನನ್ನ ತಂದೆಯ ಹೆಸರಿನಲ್ಲಿ ವ್ಯತ್ಯಾಸವಿದೆ ಎಂದು ನನಗೆ ತಿಳಿಸಲಾಯಿತು. ಆದರೆ ಅದು ನಿಜವಲ್ಲ. ನನ್ನ ತಂದೆ ಜಲೀಲ್ ಅಹ್ಮದ್ ಅವರು ಡಬ್ಲ್ಯೂಬಿಸಿಎಸ್ ಅಧಿಕಾರಿಯಾಗಿದ್ದು, ಅವರ ಹೆಸರು ಎಲ್ಲಾ ದಾಖಲೆಗಳಲ್ಲೂ ಒಂದೇ ರೀತಿಯಲ್ಲಿ ನಮೂದಾಗಿದೆ. ನನಗೆ ಸ್ವಂತ ಫ್ಲಾಟ್ ಇದೆ ಮತ್ತು ನೋಂದಾಯಿತ ಭೂ ದಾಖಲೆ ಪತ್ರವೂ ನನ್ನ ಬಳಿ ಇದೆ” ಎಂದು ರೇಷ್ಮಾ ತಿಳಿಸಿದ್ದಾರೆ. ತಾವು 2001ರಿಂದಲೂ ಪಾಸ್‌ಪೋರ್ಟ್ ಹೊಂದಿದ್ದು, ಅಗತ್ಯವಿರುವ ಬಹುತೇಕ ಎಲ್ಲಾ ದಾಖಲೆಗಳನ್ನು ಹೊಂದಿರುವುದಾಗಿ ಅವರು ವಿವರಿಸಿದ್ದಾರೆ.
“ಇಂದು, ನಾನು ಎಲ್ಲಿಗೆ ಹೋಗಬೇಕು ಅಥವಾ ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿಯುತ್ತಿಲ್ಲ. ನಾನು ಬಿಎಲ್‌ಒ ಅವರನ್ನು ಸಂಪರ್ಕಿಸಿದಾಗ, ಅವರು ತಮಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ, ನಮೂನೆ 6 ಅನ್ನು ಭರ್ತಿ ಮಾಡುವಂತೆ ಸಲಹೆ ನೀಡಿದ್ದಾರೆ. ಆದರೆ, ಹೊಸ ಮತದಾರರಿಗಾಗಿ ಇರುವ ನಮೂನೆ 6 ಅನ್ನು ನಾನೇಕೆ ಭರ್ತಿ ಮಾಡಬೇಕು? ಯಾವುದಾದರೂ ಕಾರಣದಿಂದ ಅದು ಅಂಗೀಕಾರವಾಗದಿದ್ದರೆ, ನನ್ನ ಮತದಾನದ ಹಕ್ಕು ಶಾಶ್ವತವಾಗಿ ಇಲ್ಲದಂತಾಗಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಉದಾ 3 : ಅಜ್ಮಿರಾ ಬೇಗಂ
ರೇಷ್ಮಾ ಅವರಂತೆಯೇ, ಶ್ಯಾಮ್‌ಪುರದ (AC 179) ಮತದಾರ ಶೇಖ್ ರೆಝೌಲ್ ಹಕ್ ಅವರ ಪತ್ನಿ ಅಜ್ಮಿರಾ ಬೇಗಂ ಕೂಡ ಪಾಸ್‌ಪೋರ್ಟ್ ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮತದಾರರ ಪಟ್ಟಿಯಿಂದ 61 ವರ್ಷದವರಾದ ಅಜ್ಮೀರಾ ಅವರ ಹೆಸರನ್ನು ಅಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಅಜ್ಮೀರಾ ಅವರ ಮಗ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ)ಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶೇಖ್ ಅಶಾದ್ ಉಲ್ ರೆಹಮಾನ್, “ನನ್ನ ತಾಯಿ ತಮ್ಮ ಜೀವನದುದ್ದಕ್ಕೂ ವಿವಿಧ ಚುನಾವಣೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಾರಿ ಮತ ಚಲಾಯಿಸಿದ್ದಾರೆ. ನನ್ನ ಕಿರಿಯ ಸಹೋದರ NET-JRF 2025ರಲ್ಲಿ 45ನೇ ರ‍್ಯಾಂಕ್ ಗಳಿಸಿದ್ದಾರೆ ಮತ್ತು ಪುಣೆಯ ಎನ್‌ಸಿಎಲ್‌ನಿಂದ ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ. ಇನ್ನೊಬ್ಬ ಸಹೋದರ ಬಿಟೆಕ್ ಮುಗಿಸಿದ ನಂತರ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ನನ್ನ ತಾಯಿ ನಮಗೋಸ್ಕರ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಬಾಂಗ್ಲಾದೇಶ ರಚನೆಯಾಗುವ ಮೊದಲೇ ಜನಿಸಿರುವ ಅವರು ಬಾಂಗ್ಲಾದೇಶಿ ಎಂಬ ಆರೋಪದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲು ನಾವು ಬಿಡುವುದಿಲ್ಲ. ಅಗತ್ಯವಿದ್ದರೆ, ಅವರಿಗಾಗಿ ಮತ್ತು ಮತದಾನದ ಹಕ್ಕನ್ನು ಕಸಿದುಕೊಂಡಿರುವ ನಿಜವಾದ ಮತದಾರರಿಗಾಗಿ ಬೀದಿಗಿಳಿಯಲು ನಾವು ಹಿಂಜರಿಯುವುದಿಲ್ಲ” ಎಂದಿದ್ದಾರೆ.
ಉದಾ 4 : ಅರಣ್ಯ ಮತ್ತು ರೊದ್ದೂರ್ ಮಿತ್ರ
ಇತ್ತೀಚೆಗೆ ಲಂಡನ್‌ನಲ್ಲಿ ಪ್ರದರ್ಶನ ನೀಡಿದ ಖ್ಯಾತ ಕಲಾವಿದ ಅಭಿಜಿತ್ ಮಿತ್ರ ಕೂಡ ಎಸ್‌ಐಆರ್‌ನಿಂದ ಚಿಂತಾಕ್ರಾಂತರಾಗಿದ್ದಾರೆ. ಅವರ ಇಬ್ಬರು ಪುತ್ರರಾದ ಅರಣ್ಯ ಮತ್ತು ರೊದ್ದೂರ್ ಮಿತ್ರ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ವರದಿಯಾಗಿದೆ.
ಅರಣ್ಯ ಕೋಲ್ಕತ್ತಾದ ಸೇಂಟ್ ಜೇಮ್ಸ್ ಶಾಲೆಯಲ್ಲಿ ಅಧ್ಯಯನ ಮಾಡಿ, ಬಿಟ್ಸ್‌ನಿಂದ ಬಿಟೆಕ್ ಮುಗಿಸಿದರು ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಎಂಟೆಕ್ ಪದವಿ ಪಡೆದರು. 34 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವರು, ಪ್ರಸ್ತುತ ಯುಕೆಯಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರೊದ್ದೂರ್ ಸೇಂಟ್ ಜೇಮ್ಸ್‌ನಲ್ಲಿ ಅಧ್ಯಯನ ಮಾಡಿ, ನಂತರ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ.
“ಫೆಬ್ರವರಿ 28ರ ಅಂತಿಮ ಪಟ್ಟಿಯಲ್ಲಿ, ನನ್ನ ಇಬ್ಬರು ಪುತ್ರರು ಮತ್ತು ನನ್ನ ಹೆಸರಿನ ಮುಂದೆ ‘ಪರಿಶೀಲನೆಯಲ್ಲಿದೆ’ ಎಂದು ಗುರುತಿಸಲಾಗಿತ್ತು. ನನ್ನ ತಂದೆ ಮತ್ತು ನನ್ನ ನಡುವಿನ ವಯಸ್ಸಿನ ವ್ಯತ್ಯಾಸ ಕೇವಲ 15 ವರ್ಷಗಳು ಎಂದು ನನಗೆ ತಿಳಿಸಲಾಯಿತು. ಆದರೆ ದಾಖಲೆಗಳ ಪ್ರಕಾರ, ಆ ವ್ಯತ್ಯಾಸ 42 ವರ್ಷಗಳು. ವಿಚಾರಣೆಯ ಸಂದರ್ಭದಲ್ಲಿ ನಾನು ಈ ವಿಷಯವನ್ನು ಪ್ರಸ್ತಾಪಿಸಿದಾಗ, ಇದು ಎಐ ತಂತ್ರಜ್ಞಾನದ ದೋಷ ಎಂದು ಅಧಿಕಾರಿಗಳು ಒಪ್ಪಿಕೊಂಡರು. ಇತ್ತೀಚಿನ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಯಾಗಿದೆ, ಆದರೆ ನನ್ನ ಇಬ್ಬರು ಪುತ್ರರ ಹೆಸರುಗಳನ್ನು ಮಾತ್ರ ಕೈಬಿಡಲಾಗಿದೆ” ಎಂದು ಅಭಿಜಿತ್ ತಿಳಿಸಿರುವುದಾಗಿ eNewsroom ವರದಿ ಮಾಡಿದೆ.
ತಮ್ಮ ಕುಟುಂಬಕ್ಕೂ ಕೋಲ್ಕತ್ತಾ ನಗರಕ್ಕೂ ಇರುವ ದೀರ್ಘಕಾಲದ ಸಂಬಂಧದ ಬಗ್ಗೆ ಮಾತನಾಡುತ್ತಾ ಅಭಿಜಿತ್ ಮಿತ್ರ ಹೀಗೆ ಹೇಳಿದ್ದಾರೆ. “ಈ ಸ್ಥಳದೊಂದಿಗೆ ನಮಗಿರುವ ನಂಟು ಎಷ್ಟು ಹಳೆಯದು ಎಂಬುದು ನಿಮಗೆ ತಿಳಿದಿದೆಯೇ? ಇದು 400 ವರ್ಷಗಳಿಗಿಂತಲೂ ಹಿಂದಿನದು. ನನ್ನ ಪುತ್ರರು ಕೋಲ್ಕತ್ತಾದಲ್ಲಿ ಓದಿದ್ದು ಮಾತ್ರವಲ್ಲದೆ, ದರ್ಜಿ ಪಾರಾದಲ್ಲಿ ನನ್ನ ಪೂರ್ವಜರ ಹೆಸರಿನಲ್ಲಿ ನೀಲ್ ಮಿತ್ರಾ ಎಂಬ ಬೀದಿಯೇ ಇದೆ. ನಾವು ಅಲ್ಲಿ ಕಳೆದ 350 ವರ್ಷಗಳಿಂದ ದುರ್ಗಾ ಪೂಜೆಯನ್ನು ಆಯೋಜಿಸುತ್ತಿದ್ದೇವೆ.’”
“ವಾಸ್ತವವಾಗಿ ಭಾರತದಲ್ಲಿ, ವಿಶೇಷವಾಗಿ ಬಂಗಾಳದಲ್ಲಿ ಮುಸ್ಲಿಂ ಮತದಾರರನ್ನು ಹೊರಹಾಕಲು ಎಸ್‌ಐಆರ್ ನಡೆಸಲಾಗುತ್ತಿದೆ. ಯುದ್ಧದ ಸಮಯದಲ್ಲಿ ಸಂಭವಿಸುವಂತೆ ಇಲ್ಲಿ ಹಿಂದೂಗಳು ಅಪ್ರಸ್ತುತ ಹಾನಿಗೆ ಒಳಗಾಗುತ್ತಿದ್ದಾರೆ. ಬ್ಯಾನರ್ಜಿಗಳು, ಚಟರ್ಜಿಗಳು ಮತ್ತು ಮಿತ್ರಾಗಳು ಈ ಹಾನಿಯ ಭಾಗವಾಗಿದ್ದಾರೆ” ಎಂದು ಅಭಿಜಿತ್ ಮಿತ್ರ ಹೇಳಿದ್ದಾರೆ. “ಅಷ್ಟೇ ಅಲ್ಲದೆ, ಚುನಾವಣಾ ಆಯೋಗದ ಪ್ರಕಾರ, ನನ್ನ ಇಬ್ಬರು ಪುತ್ರರು ಬಾಂಗ್ಲಾದೇಶಿಗಳು ಅಥವಾ ರೋಹಿಂಗ್ಯಾಗಳು” ಎಂದು ಅವರು ತಿಳಿಸಿದ್ದಾರೆ.
ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಶಾಹಿದುಲ್ಲಾ ಮುನ್ಶಿ
ಪಶ್ಚಿಮ ಬಂಗಾಳ ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೊರ ಹಾಕಲ್ಪಟ್ಟ ಪ್ರಮುಖ ವ್ಯಕ್ತಿಗಳಲ್ಲಿ ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಸಾಹಿದುಲ್ಲಾ ಮುನ್ಶಿ ಕೂಡ ಒಬ್ಬರು.
ಪ್ರಸ್ತುತ ಪಶ್ಚಿಮ ಬಂಗಾಳದ ಔಕಾಫ್ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮುನ್ಶಿ, ಈಗ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಲು ಕಾಯುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.
ಮಾರ್ಚ್ 23ರಂದು ಚುನಾವಣಾ ಆಯೋಗ ಮೊದಲ ಪೂರಕ ಮತದಾರರ ಪಟ್ಟಿಯನ್ನು ಪ್ರಕಟಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ ನ್ಯಾಯಾಂಗ ಅಧಿಕಾರಿಗಳಿಂದ ಪ್ರಕರಣಗಳನ್ನು ತೀರ್ಮಾನಿಸಲ್ಪಟ್ಟ ಮತದಾರರ ಹೆಸರುಗಳು ಈ ಪಟ್ಟಿಯಲ್ಲಿವೆ.
ಮಾಜಿ ನ್ಯಾಯಾಧೀಶರ ಪತ್ನಿ ಸಹಾನಾ ಮತ್ತು ಹಿರಿಯ ಮಗ ಇಫ್ತಿಕಾರ್ ಅವರ ಹೆಸರುಗಳು ಇನ್ನೂ ಪರಿಶೀಲನೆಯಲ್ಲಿವೆ (under adjudication), ಆದರೆ ಅವರ ಕಿರಿಯ ಮಗ ಇಬ್ತಿಹಾಝ್ ಹೊಸ ಮತದಾರರಾಗಿ ಅರ್ಜಿ ಸಲ್ಲಿಸಿದ್ದಾರೆ. “ಇಲ್ಲಿಯವರೆಗೆ, ಕೇವಲ ನನ್ನ ಹೆಸರನ್ನು ಮಾತ್ರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ನನ್ನ ಪತ್ನಿ ಮತ್ತು ಹಿರಿಯ ಮಗನ ಹೆಸರುಗಳು ಇನ್ನೂ ಪರಿಶೀಲನಾ ಪಟ್ಟಿಯಲ್ಲಿವೆ. ಇದು ಅತ್ಯಂತ ಅವಮಾನಕರ ಮತ್ತು ನೋವಿನ ಸಂಗತಿ… ಬಹಳಷ್ಟು ಕಿರುಕುಳ ನೀಡಲಾಗುತ್ತಿದೆ. ದುರದೃಷ್ಟಕರ ಸಂಗತಿಯೆಂದರೆ, ಅವರು ದಾಖಲೆಗಳನ್ನು ಪಡೆದುಕೊಂಡು ಅವುಗಳನ್ನು ಅಪ್‌ಲೋಡ್ ಮಾಡುವುದಾಗಿ ತಿಳಿಸಿದರು, ಆದರೆ ಯಾವುದೇ ರಶೀದಿಯನ್ನು ನೀಡಿಲ್ಲ” ಎಂದು ಮಾಜಿ ನ್ಯಾಯಮೂರ್ತಿ ಮುನ್ಶಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
ಸಂವಿಧಾನದ ಚಿತ್ರಕಾರ ನಂದಲಾಲ್ ಬೋಸ್ ಕುಟುಂಬ
ಭಾರತದ ಸಂವಿಧಾನಕ್ಕೆ ಚಿತ್ರಕಲೆ ಮತ್ತು ವಿನ್ಯಾಸದ ಮೂಲಕ ಜೀವ ತುಂಬಿದ ಖ್ಯಾತ ಕಲಾವಿದ ನಂದಲಾಲ್ ಬೋಸ್ ಅವರ ಕುಟುಂಬಸ್ಥರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಪಶ್ಚಿಮ ಬಂಗಾಳದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ನಂದಲಾಲ್ ಬೋಸ್ ಅವರ ಮೊಮ್ಮಗ, 88 ವರ್ಷದ ಸುಪ್ರಬುದ್ಧ ಸೇನ್ ಮತ್ತು ಅವರ ಪತ್ನಿ (ಮೊಮ್ಮಗಳಂತೆಯೇ ಇರುವ ಮೊಮ್ಮಗನ ಪತ್ನಿ) ದೀಪಾ ಸೇನ್ (82) ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಎಂದು ವರದಿಯಾಗಿದೆ.
ಇವರು ಶಾಂತಿನಿಕೇತನದ ಬೋಲ್ಪುರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮತದಾರರು. 1996 ರಿಂದಲೂ ಇಲ್ಲಿನ ಕಾಯಂ ನಿವಾಸಿಗಳಾಗಿದ್ದಾರೆ.
ಸುಪ್ರಬುದ್ಧ ಸೇನ್ ಅವರು ತಮ್ಮ ಪಾಸ್‌ಪೋರ್ಟ್ ಮತ್ತು 1954ರ ಮೆಟ್ರಿಕ್ಯುಲೇಶನ್ ಪ್ರಮಾಣಪತ್ರದಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದರು. ಆದರೂ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಂವಿಧಾನ ವಿನ್ಯಾಸಗೊಳಿಸಿದ ವ್ಯಕ್ತಿಯ ಕುಟುಂಬಕ್ಕೇ ಮತದಾನದ ಹಕ್ಕು ನಿರಾಕರಿಸಲ್ಪಟ್ಟಿರುವುದು ಆಘಾತಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಪ್ರಕರಣವು ಮೇಲ್ಮನವಿ ನ್ಯಾಯಮಂಡಳಿಗೆ ಹೋಯಿತು. ನ್ಯಾಯಮಂಡಳಿಯು ಚುನಾವಣಾ ಆಯೋಗಕ್ಕೆ ಕೂಡಲೇ ಇವರ ಹೆಸರುಗಳನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆ ಮಾಡುವಂತೆ ಆದೇಶ ನೀಡಿತ್ತು.
ಅಂತಿಮವಾಗಿ ಅಧಿಕಾರಿಗಳು ಇವರ ಹೆಸರುಗಳನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆಗೊಳಿಸಿದ್ದಾರೆ. ಈ ಘಟನೆಯು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ದೋಷಗಳು ಮತ್ತು ಸಾಮಾನ್ಯ ನಾಗರಿಕರು ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿಸಿದೆ.


