Homeಅಂಕಣಗಳುಮೀಡಿಯಾ ವೈರಸ್ ಎಂದು ಕರೆಯಬೇಕಾದ ಸಂದರ್ಭ ಬಂದಿದೆಯೇ?

ಮೀಡಿಯಾ ವೈರಸ್ ಎಂದು ಕರೆಯಬೇಕಾದ ಸಂದರ್ಭ ಬಂದಿದೆಯೇ?

- Advertisement -
- Advertisement -

ಬೆಂಗಳೂರಿನ ಟಿವಿ ಚಾನೆಲ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಬಂದ ಕಾರಣಕ್ಕೆ ಹಲವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆಗ ‘ಮೀಡಿಯಾ ವೈರಸ್’ ಎಂದು ಕರೆಯಬೇಡಿ ಎಂದು ನಾವೂ ಮನವಿ ಮಾಡಿಕೊಂಡಿದ್ದೆವು. ಏಕೆಂದರೆ ಅದಕ್ಕೆ ಮುಂಚೆ ಕೊರೊನಾ ವೈರಸ್‍ಅನ್ನು ಅಮೆರಿಕಾದವರು ಚೀನೀ ವೈರಸ್ ಎಂದು ಕರೆದಂತೆ, ಇಲ್ಲಿನ ಮಾಧ್ಯಮಗಳು ತಬ್ಲಿಘಿ ವೈರಸ್ ಎಂದು ಕರೆಯಲಾರಂಭಿಸಿದ್ದರು. ವೈರಸ್‍ಗೂ ಇಲ್ಲದ ಕೊಳಕು ಮನಸ್ಥಿತಿಯನ್ನು ಟಿವಿ ಚಾನೆಲ್‍ಗಳು ತೋರಿದೆವೆಂದು, ಅದೇ ತಪ್ಪನ್ನು ಎಲ್ಲರೂ ಮಾಡಬಾರದೆಂಬುದು ನಮ್ಮ ಕಾಳಜಿಯಾಗಿತ್ತು. ಮೀಡಿಯಾಗಳನ್ನು ಟ್ರೋಲ್ ಮಾಡಲು ಹೋಗಿ, ವೈರಸ್‍ಅನ್ನು ಯಾವುದಾದರೂ ಸಮುದಾಯಕ್ಕೆ ತಳಕು ಹಾಕುವ ಮನೋಭಾವಕ್ಕೆ ಪುಷ್ಟಿ ಕೊಡುವ ಕೆಲಸವನ್ನು ಯಾರೂ ಮಾಡಬಾರದೆಂಬುದು ಅದರ ಹಿಂದಿನ ಉದ್ದೇಶವಾಗಿತ್ತು.

ಆದರೆ ಮೀಡಿಯಾಗೆ ಹತ್ತಿದ್ದ ವೈರಸ್ ಅಷ್ಟು ಬೇಗ ಇಳಿಯಲಿಲ್ಲ. ಅವರು ಬಿಹಾರದ ಕಾರ್ಮಿಕರೊಬ್ಬರಿಗೆ ಸೋಂಕು ಬಂದಿತೆಂಬ ಸುದ್ದಿಯನ್ನು ಹಿಡಿದು ‘ಬಿಹಾರಿ ಬಾಂಬು’ ಎಂದು ಕರೆದರು. ಹಾಗೆಯೇ ಮುಂದುವರೆದು 11ನೇ ಕ್ರಾಸ್ ವೈರಸ್ ಇತ್ಯಾದಿ ಇತ್ಯಾದಿಗಳನ್ನು ಸೃಷ್ಟಿಸುತ್ತಾ, ಇತ್ತೀಚೆಗೆ ಗರ್ಭಿಣಿ ಬಾಂಬ್ ಎಂತಲೂ ಕರೆದರು. ಮುಸ್ಲಿಮರನ್ನು ಗುರಿ ಮಾಡುವ ಅವರ ದುರುದ್ದೇಶದ ಈಡೇರಿಕೆಗಾಗಿ ಕೊರೊನಾ ಸೋಂಕಿನ (ಕ್ರಿಮಿನಲೈಸೇಷನ್) ಅಪರಾಧೀಕರಣವನ್ನು ವ್ಯವಸ್ಥಿತವಾಗಿ ಮಾಡಿದರು. ಈ ಕೆಲಸದಲ್ಲಿ ಅತ್ಯುಗ್ರವಾಗಿ ತೊಡಗಿಕೊಂಡಿದ್ದ ಇನ್ನೊಂದು ಟಿವಿ ಚಾನೆಲ್ ಝೀ ಸಂಸ್ಥೆಗೂ ಕೊರೊನಾ ಬಾಧಿಸಿದೆ. ಕೊರೊನಾ ಸೋಂಕಿತರೆಲ್ಲರೂ ಇಲ್ಲಿಯವರೆಗೂ ಜಿಹಾದಿಗಳಾಗಿದ್ದರೆ, ಈಗ ಇದ್ದಕ್ಕಿದ್ದಂತೆ ಅವರುಗಳು ವಾರಿಯರ್ಸ್‍ಗಳಾಗಿಬಿಟ್ಟಿದ್ದಾರೆ.

ಇದೇ ಹೊತ್ತಿನಲ್ಲಿ ಕರ್ನಾಟಕದ ಒಂದು ಮನುಷ್ಯ ವಿರೋಧಿ ಟಿವಿ ಚಾನೆಲ್ ಮುಸ್ಲಿಮರ ವಿರುದ್ಧ ಇನ್ನೊಂದು ಫೇಕ್‍ನ್ಯೂಸ್ ಕುರಿತು ಚರ್ಚಿಸಲು ಶುರುಮಾಡಿದೆ. ದಾವಣಗೆರೆ ಜಿಲ್ಲೆಯಲ್ಲಿ ರಂಜಾನ್ ಸಂದರ್ಭದಲ್ಲಿ ಹಿಂದೂ ಬಟ್ಟೆ ವ್ಯಾಪಾರಿಗಳಿಂದ ಬಟ್ಟೆ ಖರೀದಿಸಬಾರದೆಂದು ಮುಸ್ಲಿಂ ಹೆಣ್ಣುಮಕ್ಕಳನ್ನು ಕೆಲವು ಮುಸ್ಲಿಮರು ಬಲವಂತಪಡಿಸಿದ್ದಾರೆಂಬುದು ಅವರು ಚರ್ಚಿಸುತ್ತಿರುವ ಸುದ್ದಿ. ಈ ಸುದ್ದಿ ಇಲ್ಲಿ ಪ್ರಸಾರವಾಗುವ ಮುಂಚೆಯೇ ದಾವಣಗೆರೆಯಲ್ಲಿ ಯಾವ ಧಾರ್ಮಿಕ ಮುಖಂಡರು ಈ ರೀತಿ ಕರೆ ಕೊಟ್ಟಿದ್ದಾರೆಂದು ಹೇಳಲಾಗಿತ್ತೋ ಅವರು ಪತ್ರಿಕಾಗೋಷ್ಠಿಯನ್ನೂ ಮಾಡಿದ್ದರು.

ಈ ಸಾರಿಯ ರಂಜಾನ್‍ನ ಸಂದರ್ಭದಲ್ಲಿ ಯಾರೂ ದುಂದುವೆಚ್ಚ ಮಾಡಬಾರದು, ಬದಲಿಗೆ ಹಾಗೇನಾದರೂ ಖರ್ಚು ಮಾಡುವುದಿದ್ದಲ್ಲಿ ಅದನ್ನು ಲಾಕ್‍ಡೌನ್‍ನಿಂದ ಸಂತ್ರಸ್ತರಾದ ಬಡವರಿಗೆ ಕೊಡಬೇಕೆಂದು ರಂಜಾನ್ ಶುರುವಾಗುವ ಮುಂಚೆಯೇ ಆ ಸಮುದಾಯದೊಳಗೆ ಚಾಲ್ತಿಯಲ್ಲಿದ್ದ ಸಂದೇಶ. ಅದನ್ನೇ ಅವರು ಅಲ್ಲಿಯೂ ನೀಡಿದ್ದರು. ರಂಜಾನ್ ಸಂದರ್ಭದಲ್ಲಿ ತಮ್ಮ ವಾರ್ಷಿಕ ಆದಾಯದ ಶೇ.2ರಷ್ಟು ಜಕಾತ್‍ಅನ್ನು ದಾನ ಮಾಡುವುದು ಕಡ್ಡಾಯವಾಗಿದ್ದು ಈ ಸಾರಿ ಅದನ್ನು ಹೆಚ್ಚಿಸುವ ಧರ್ಮದ ಕಾರ್ಯ ಅದಾಗಿತ್ತು. ಇದನ್ನು ಅತಿರೇಕಕ್ಕೆ ಒಯ್ದ ಕೆಲವು ಮುಸ್ಲಿಮರು ಕೆಲವೆಡೆ ಅಂಗಡಿಗಳಿಗೆ ಹೋಗಿದ್ದ ಮುಸ್ಲಿಂ ಹೆಣ್ಣುಮಕ್ಕಳನ್ನು ಬಲವಂತದಿಂದ ತಡೆದದ್ದು ಸುದ್ದಿಯಾಗಿತ್ತಲ್ಲದೇ, ಯಥಾಪ್ರಕಾರ ವಿಡಿಯೋಗಳೂ ಚಾಲನೆಯಲ್ಲಿದ್ದವು. ಇನ್ನೊಬ್ಬರ ಇಷ್ಟಾನಿಷ್ಟಗಳನ್ನು ಸರಿಯಾದ ಕಾರಣಗಳಿಗಾಗಿಯೇ ಬದಲಿಸಬಯಸುವವರೂ ಯಾರನ್ನೂ ಬಲವಂತ ಮಾಡುವ ಹಕ್ಕನ್ನು ಹೊಂದಿರುವುದಿಲ್ಲ; ಅದು ಯಾರನ್ನೋ ತಡೆಯುವ ಮಟ್ಟಕ್ಕೆ ಹೋದರೆ ಅದು ಶಿಕ್ಷಾರ್ಹವೂ ಆಗಬೇಕು.

ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ್ದೆಂದರೆ, ಇವೆಲ್ಲಾ ನಡೆಯೋಕೆ ಮುಂಚೆಯೇ ಮುಸ್ಲಿಂ ವ್ಯಾಪಾರಿಗಳು ಜಾತ್ರೆಗೆ ಬರಬಾರದು ಅಥವಾ ಮುಸ್ಲಿಂ ವ್ಯಾಪಾರಿಗಳಿಂದ ಕೊಳ್ಳಬಾರದು ಎಂಬ ಘೋಷಣೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಹಿರಂಗವಾಗಿ ಚಾಲ್ತಿಗೆ ಬಂದಿತ್ತು. ಅದಕ್ಕೂ ನಾಲು ವರ್ಷಗಳ ಮುಂಚೆಯೇ ಇಂತಹ ಭಾವನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಂತರಿಕವಾಗಿ ಇದ್ದುದು ಖುದ್ದು ನನಗೇ ಅನುಭವಕ್ಕೆ ಬಂದ ಘಟನೆ ನೆನಪಿನಿಂದ ಎಂದೂ ಮಾಸುವುದಿಲ್ಲ. ಆದರೆ ಇದ್ಯಾವುದೂ ಈ ಜೀವವಿರೋಧಿ ಚಾನೆಲ್‍ಗಳಲ್ಲಿ ಸುದ್ದಿ, ಸದ್ದು, ಚರ್ಚೆಗೆ ಕಾರಣವಾಗುವುದಿಲ್ಲ. ಏಕೆಂದರೆ ಅವರ ಅಜೆಂಡಾವೇ ಬೇರೆ. ಜೊತೆಗೆ ಅವರುಗಳು ಈಗ ಮನುಷ್ಯರಾಗಿಯೂ ಉಳಿದಿಲ್ಲ. ಧರ್ಮವಂತರಂತೂ ಅಲ್ಲವೇ ಅಲ್ಲ.

ಇತ್ತ ಮನುಷ್ಯವಿರೋಧಿಗಳಲ್ಲದವರೂ ಚರ್ಚೆಯನ್ನು ‘ಆ ಮುಸ್ಲಿಂ ಹುಡುಗರು ಬಟ್ಟೆ ತೆಗೆದುಕೊಳ್ಳದಂತೆ ಒತ್ತಾಯಿಸುವುದು ಸರಿಯೇ’ ಎಂಬುದರ ಸುತ್ತ ಕೇಂದ್ರೀಕರಿಸುವಂತೆ ಆಗುತ್ತದೆ. ಏಕೆಂದರೆ ಯಾರೋ ಒಬ್ಬರು ‘ಎಲ್ಲಾ ಸರಿ, ನೀವುಗಳು ಆ ಮುಸ್ಲಿಂ ಹುಡುಗರನ್ನೇಕೆ ಸಮರ್ಥಿಸುತ್ತಿದ್ದೀರಿ?’ ಎಂದು ಹೇಳಿರುತ್ತಾರೆ. ‘ಹೌದಲ್ಲವೇ, ನಾವು ಮೊದಲು ಅದನ್ನು ಖಂಡಿಸಬೇಕು ತಾನೇ?’, ‘ಹಿಂದೂ ಅಂಗಡಿಗಳಿಗೆ ಹೋಗಬಾರದೆಂದು ಹೇಳಿಲ್ಲದೇ ಇರಬಹುದು, ಆದರೆ ಹಬ್ಬವನ್ನು ಸರಳವಾಗಿಯೇ ಆಚರಿಸಬೇಕೆಂದು ಬಲವಂತ ಪಡಿಸುವುದು ತಪ್ಪಲ್ಲವೇ?’, ‘ನಾವು ಯಾವ ಮೂಲಭೂತವಾದವನ್ನೂ ಸಮರ್ಥಿಸುವುದಿಲ್ಲ’, ‘ಇವರೂ ಹಾಗೇ ಮಾಡುತ್ತಾರೆ’ ಇತ್ಯಾದಿ ಟ್ರ್ಯಾಪ್‍ಗಳಲ್ಲಿ ಬೀಳಲು ಕೆಲವರು ಉತ್ಸುಕರಾಗಿರುತ್ತಾರೆ. ಏಕೆಂದರೆ ಮನುಷ್ಯವಿರೋಧಿಗಳು ಸೃಷ್ಟಿಸುವ ಅಜೆಂಡಾವನ್ನು ಕೌಂಟರ್ ಮಾಡುವ ಸರಿಯಾದ ದಾರಿಯನ್ನು ಇವರಿನ್ನೂ ಹುಡುಕಿಕೊಂಡಿಲ್ಲ.

ಸತ್ಯ, ಸೌಹಾರ್ದತೆ, ಮನುಷ್ಯ ಪ್ರೀತಿಯ ಪರವಾಗಿರಬೇಕಿದ್ದ ಮಾಧ್ಯಮಗಳು ಮೆದುಳಿಗೆ ಸೋಂಕನ್ನು ಹಬ್ಬಿಸಿಕೊಂಡುಬಿಟ್ಟಿವೆ. ಅದನ್ನು ಮೀಡಿಯಾ ವೈರಸ್ ಎಂದು ಕರೆಯಬೇಕಾದ ಸಂದರ್ಭ ಬಂದುಬಿಟ್ಟಿದೆ. ಸೋಂಕಿನ ತಡೆಗೆ ಮುನ್ನೆಚ್ಚರಿಕೆ ಕ್ರಮಗಳು, ಕೆಲವೊಮ್ಮೆ ಲಾಕ್‍ಡೌನ್ ಮತ್ತು ಚಿಕಿತ್ಸೆಯ ಅಗತ್ಯ ಬೀಳುತ್ತದೆ. ಕರ್ನಾಟಕದ ಜಾಣಜಾಣೆಯರು ಅದಕ್ಕೆ ‘ಸಂಪೂರ್ಣವಾಗಿ ಫೀಲ್ಡಿಗಿಳಿಯಬೇಕು’ ಅಷ್ಟೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...