Homeನ್ಯಾಯ ಪಥನ್ಯಾಯಾಲಯ ತನ್ನ ಪ್ರಬುದ್ಧತೆಯನ್ನು ಪ್ರದರ್ಶಿಸಿ ತೀರ್ಪನ್ನು ಪುನರ್‌ವಿಮರ್ಶೆ ಮಾಡಬೇಕು

ನ್ಯಾಯಾಲಯ ತನ್ನ ಪ್ರಬುದ್ಧತೆಯನ್ನು ಪ್ರದರ್ಶಿಸಿ ತೀರ್ಪನ್ನು ಪುನರ್‌ವಿಮರ್ಶೆ ಮಾಡಬೇಕು

ಕಾಲ ಇನ್ನೂ ಮಿಂಚಿಲ್ಲ. ನ್ಯಾಯಾಲಯ ತನ್ನ ಪ್ರಬುದ್ಧತೆಯನ್ನು ಪ್ರದರ್ಶಿಸಿ ತೀರ್ಪನ್ನು ಪುನರ್‌ವಿಮರ್ಶೆ ಮಾಡಬೇಕು. ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ತಿದ್ದುಕೊಳ್ಳಬೇಕು.

- Advertisement -
- Advertisement -

1857ರ ಸಿಪಾಯಿದಂಗೆಯ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವು ಕೊನೆಗೊಂಡು ಭಾರತ ದೇಶವು ಇಂಗ್ಲೆಡಿನ ಮಹಾರಾಣಿಯರ ನೇರ ಆಡಳಿತಕ್ಕೆ ಒಳಪಟ್ಟಿತು. 1858ರಲ್ಲಿ ಬ್ರಿಟಿಷ್ ಮಾದರಿಯ ನ್ಯಾಯಾಲಯಗಳ ಸ್ಥಾಪನಾ ಕಾರ್ಯವು ಪ್ರಾರಂಭವಾಯಿತು. ಈ ನ್ಯಾಯಾಲಯಗಳ ಮುಖಾಂತರ ಸಿವಿಲ್ ಮತ್ತು ಕ್ರಿಮಿನಲ್ ವಿಧಾನಾತ್ಮಕ ಕಾನೂನುಗಳನ್ನು ಜಾರಿಗೆ ತರಲಾಯಿತು.

ಬ್ರಿಟಿಷರ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುತ್ತಿದ್ದ ಪತ್ರಿಕೆಗಳ ಮೇಲೆ ದಾಳಿ ಪ್ರಾರಂಭವಾಯಿತು. ಸ್ವಾತಂತ್ಯ್ರ ಹೋರಾಟಗಾರರ ಬಾಯಿ ಮುಚ್ಚಿಸಲು ಸೆಡಿಷನ್, ಕ್ರಿಮಿನಲ್ ನ್ಯಾಯಾಂಗ ನಿಂದನೆ ಮತ್ತು ಕ್ರಿಮಿನಲ್ ಮಾನನಷ್ಟ ಕಾನೂನುಗಳನ್ನು ಜಾರಿಗೆ ತರಲಾಯಿತು. ಈ ಕಾನೂನುಗಳನ್ನು ಬಳಸಿ ಬ್ರಿಟಿಷರು ಅನೇಕ ಸ್ವಾತಂತ್ಯ್ರ ಹೋರಾಟಗಾರರನ್ನು ಬಂಧಿಸಿ ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಕಳುಹಿಸಿದರು.

ಕರ್ನಾಟಕ ಚರ್ಚು ಸ್ಪೋಟ ಅಪರಾಧಿಗಳ ಮಂಧ್ಯಂತರ ಜಾಮೀನು ತಿರಸ್ಕರಿಸಿದ ಸುಪ್ರೀಂಕೋರ್ಟ್

ಸ್ವಾತಂತ್ಯ್ರ ಬಂದ ನಂತರ ನಮ್ಮ ಸರ್ಕಾರಗಳು ಇಂತಹ ಅಮಾನವೀಯ ಬರ್ಬರ ಮತ್ತು ದಮನಕಾರಿ ಕಾನೂನುಗಳನ್ನು ಮುಂದುವರಿಸಿಕೊಂಡು ಬಂದಿದ್ದು ದುರದೃಷ್ಟಕರ. ಗಣರಾಜ್ಯ ಭಾರತದಲ್ಲಿ ಈ ಕಾನೂನು ಸದ್ಬಳಕೆಗಿಂತ ದುರ್ಬಳಕೆಯೆ ಹೆಚ್ಚಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ದಮನಕಾರಿ ಕಾನೂನುಗಳ ಅಗತ್ಯತೆ ಇದೆಯೇ? ಪ್ರಜಾಪ್ರಭುತ್ವದ ಹಿತ ದೃಷ್ಟಿಯಿಂದ ಸೆಡಿಷನ್, ಕ್ರಿಮಿನಲ್ ನ್ಯಾಯಾಂಗ ನಿಂದನೆ ಮತ್ತು ಕ್ರಿಮಿನಲ್ ಮಾನನಷ್ಟ ಕಾನೂನುಗಳನ್ನು ಕಾನೂನು ಪುಸ್ತಕದಿಂದ ತೆಗೆದುಹಾಕಬೇಕಾಗಿದೆ.

ದೀರ್ಘಕಾಲದ ಹೋರಾಟಗಳ ಮೂಲಕ ಜಗತ್ತಿನ ಜನರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಪಡೆದಿದ್ದಾರೆ. ಭಾರತದ ಸ್ವಾತಂತ್ಯ್ರ ಹೋರಾಟ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರ ಹೋರಾಟ ಇವೆರಡು ಜೊತೆ ಜೊತೆಯಲ್ಲಿ ನಡೆದು ಬಂದಿದ್ದು ಗಮನಾರ್ಹ. ದೇಶದ ಜನರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವುದು ಸ್ವಾತಂತ್ಯ್ರಹೋರಾಟದ ಗುರಿಗಳಲ್ಲಿ ಒಂದಾಗಿತ್ತು.

ನಮ್ಮ ಸ್ವಾತಂತ್ಯ್ರ ಚಳವಳಿಯ ಗುರಿಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ ನಮಗೆ ಒಂದು ಸಂವಿಧಾನ ಅವಶ್ಯಕತೆ ಅನಿವಾರ್ಯವಾಯಿತು. ಸಂವಿಧಾನ ರಚನಾಕಾರರಿಗೆ ಅಭಿವ್ಯಕ್ತಿ ಸ್ವಾತಂತ್ಯ್ರ ಪ್ರಜಾತಾಂತ್ರಿಕ ವ್ಯವಸ್ಥೆಯ ತಳಹದಿ ಎಂಬ ಸ್ಪಷ್ಟ ಕಲ್ಪನೆ ಇತ್ತು. ಈ ಅಂಶವನ್ನು ನಮ್ಮ ಸಂವಿಧಾನದ ಅನುಚ್ಛೇದ 19(1) (ಎ)ರಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ: ಅಘೋಷಿತ ತುರ್ತು ಪರಿಸ್ಥಿತಿ: ಕರಾಳ ಕಾಯಿದೆಗಳು ಮತ್ತು ರಾಜಕೀಯ ಕೈದಿಗಳು

ಈ ಹಕ್ಕು ತನ್ನಷ್ಟಕ್ಕೆ ಪೂರ್ಣವಾದದ್ದಲ್ಲ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡಲು ಈ ಹಕ್ಕಿನ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ. ದೇಶದ ಭದ್ರತೆ, ವಿದೇಶಗಳ ಜೊತೆಗಿನ ಬಾಂಧವ್ಯ, ಸುವ್ಯವಸ್ಥೆ ಮತ್ತು ನೈತಿಕತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಬಂಧಗಳನ್ನು ವಿಧಿಸಬಹುದು.

’ವಿಮರ್ಶೆಯ ನಿಂದನೆ’- ಭಾರತದಲ್ಲಿ ನ್ಯಾಯಾಂಗ ನಿಂದನೆಯ ಒಂದು ಅವಲೋಕನ
PC: Outlook India

ಭಾರತದ ಸರ್ವೋಚ್ಚ ನ್ಯಾಯಾಲಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರಕ್ಕೆ ಸಮರ್ಥವಾದ ವ್ಯಾಖ್ಯಾನ ಒದಗಿಸುವ ಮೂಲಕ ಭದ್ರವಾದ ಅಡಿಪಾಯವನ್ನು ಹಾಕಿಕೊಟ್ಟಿದೆ. ಕೆಲವು ಪ್ರಮುಖ ತೀರ್ಪುಗಳೆಂದರೆ:

1) ರಮೇಶ್ ಥಾಪರ್ V/S ಮದ್ರಾಸ್ ಸರ್ಕಾರ- ‘ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರ’ ಎನ್ನುವ ಹಕ್ಕು ಪತ್ರಿಕೆಗಳಿಗೆ ಮತ್ತು ಅವುಗಳ ಪ್ರಸರಣಕ್ಕೂ ಸಲ್ಲುತ್ತದೆ ಎಂದು ವ್ಯಾಖ್ಯಾನಿಸಿದೆ.

2) ಬ್ರಿಜ್ ಭೂಷಣ್ V/S ದೆಹಲಿ ಸರ್ಕಾರ ಪ್ರಕರಣದಲ್ಲಿ ಪತ್ರಿಕೆಯ ಪ್ರಕಾಶನದ ವಿರುದ್ಧ Pre censorship ಹೇರಿದ್ದನ್ನು ತಳ್ಳಿ ಹಾಕಿತು.

3) ಸಕಾಲ್ ಪೇಪರ್ಸ್ V/S ಭಾರತ ಸರ್ಕಾರ ಮೊಕದ್ದಮೆಯಲ್ಲಿ ಸರ್ಕಾರ ಯಾವುದೇ ನ್ಯೂಸ್ ಪೇಪರ್ ಪುಟಗಳ ಸಂಖ್ಯೆಯನ್ನು ನಿಯಂತ್ರಿಸುವುದು ಅಥವಾ ಅದರ ಪ್ರಸಾರವನ್ನು ಅಡ್ಡಿಪಡಿಸುವುದಕ್ಕಾಗಿ ಯಾವುದೇ ಕಾಯ್ದೆ ಮಾಡಿದರೆ ಅದು ಅಸಂವಿಧಾನಿಕ ಎಂದು ತೀರ್ಪು ನೀಡಿತು.

4) ಕೇದಾರನಾಥ ಸಿಂಗ್ V/S ಬಿಹಾರ್ ಸರ್ಕಾರ ಪ್ರಕರಣದಲ್ಲಿ ಸರ್ಕಾರದ ಕ್ರಮಗಳ ಬಗೆಗಿನ ಯಾವುದೇ ಟೀಕೆ, ಟಿಪ್ಪಣಿ ಪ್ರತಿಕ್ರಿಯೆ ಎಷ್ಟೇ ಕಟುವಾದ ಪದಗಳನ್ನು ಹೊಂದಿರಲಿ ಅದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರದ ಮೂಲಭೂತ ಹಕ್ಕಿನ ಪರಿಧಿಯೊಳಗೇ ಬರುತ್ತದೆ ಎಂದು ಸ್ಪಷ್ಟೀಕರಿಸಿತು.

5) ಭಾರತೀಯ ವಿಮಾ ನಿಗಮ V/S ಮನುಭಾಯ್ ಪ್ರಕರಣದಲ್ಲಿ “ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ಯ್ರಯಾವುದೇ ಪ್ರಜಾತಂತ್ರ ಸಂಸ್ಥೆಯ ಜೀವನಾಡಿ ಇದ್ದಂತೆ. ಈ ಹಕ್ಕನ್ನು ಹತ್ತಿಕ್ಕುವ ಬಗ್ಗುಬಡಿಯುವ, ನಿಯಂತ್ರಿಸುವ ಯಾವುದೇ ಪ್ರಯತ್ನ ಪ್ರಜಾತಂತ್ರ ವ್ಯವಸ್ಥೆಗೆ ಸಾವಿನ ಹೊಡೆತವಾಗುತ್ತದೆ ಮತ್ತು ಈ ಧೋರಣೆ ಮುಂದೆ ಸರ್ವಾಧಿಕಾರ ಸರ್ಕಾರ ಬರಲು ದಾರಿಯಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿದೆ.

6) IR ಕೊಯ್ಲೋ V/S ತಮಿಳುನಾಡು ಸರ್ಕಾರ ಪ್ರಕರಣದಲ್ಲಿ ಪತ್ರಿಕಾ ಸ್ವಾತಂತ್ಯ್ರ ಸಂವಿಧಾನದ ಮೂಲಭೂತ ತತ್ವಗಳ ಒಂದು ಭಾಗ ಎನ್ನುವುದನ್ನು ಎತ್ತಿ ಹಿಡಿದಿದೆ.

ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿರುವ ಭಾರತದ ನ್ಯಾಯಾಂಗ ಅದರಲ್ಲೂ ಸರ್ವೋಚ್ಚ ನ್ಯಾಯಾಲಯ ತಪ್ಪುಗಳು ಮಾಡಿಲ್ಲ ಎಂದು ಹೇಳಲಾಗದು. ಉದಾಹರಣೆಗೆ ತಮಿಳುನಾಡು ಸರ್ಕಾರಿ ವೃತ್ತಿಪರ ಶಿಕ್ಷಣದಲ್ಲಿ ಹಿಂದುಳಿದ ಮತ್ತು ದಲಿತರಿಗೆ ನೀಡಿದ್ದ ಮೀಸಲಾತಿಯನ್ನು ಚಂಪಕಂ ದೊರೆರಾಜು ಪ್ರಕರಣದಲ್ಲಿ ರದ್ದುಗೊಳಿಸಿತು.

ಇದನ್ನೂ ಓದಿ: ’ಥೂ… ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ’; ಸಚಿವ ಸುಧಾಕರ್‌ಗೆ ಮಹಿಳಾ ವೈದ್ಯೆ ಛೀಮಾರಿ

ಪಂಜಾಬ್ ರಾಜ್ಯ ಸರ್ಕಾರ ತಂದಿದ್ದ ಭೂಮಿತಿ ಶಾಸನವನ್ನು ಗೊಲಂಕಾನಾಥ್ ಪ್ರಕರಣದಲ್ಲಿ ರದ್ದುಗೊಳಿಸಿತು. ಬ್ಯಾಂಕ್ ರಾಷ್ಟ್ರೀಕರಣವನ್ನು ಕೂಪರ್ ಪ್ರಕರಣದಲ್ಲಿ ರದ್ದುಗೊಳಿಸಿತು. ಎ.ಕೆ ಗೋಪಾಲನ್ ಪ್ರಕರಣದಲ್ಲಿ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯಲಿಲ್ಲ.

ಮಿನರ್ವ ಮಿಲ್ಸ್ ಪ್ರಕರಣದಲ್ಲಿ ಸರ್ಕಾರದ ಸಾಮಾಜಿಕ ಹಾಗೂ ಆರ್ಥಿಕ ನೀತಿಯನ್ನು ಸಂವಿಧಾನದ ಮೂಲತತ್ವಗಳೆಂದು ಘೋಷಿಸಲು ಹಿಂದೆ ಸರಿಯಿತು. ಶಿವಕಾಂತ್ ಶುಕ್ಲ ಪ್ರಕರಣದಲ್ಲಿ ತುರ್ತು ಪರಿಸಿತ್ಥಿಯನ್ನು ಸಮರ್ಥಿಸಿತು.

ಹೀಗೆ ಭಾರತದ ನ್ಯಾಯಾಂಗ ಈ ಹಿಂದೆ ತಪ್ಪು ಮಾಡಿದೆ, ಇಂದು ತಪ್ಪು ಮಾಡುತ್ತಿದೆ ಮುಂದೆಯೂ ಸಹ ತಪ್ಪು ಮಾಡುವುದಿಲ್ಲ ಎಂದು ಹೇಳಲಾಗದು. ಆದರೆ ಭಾರತದ ನ್ಯಾಯಾಂಗ ಮಾಡಿರುವ ತಪ್ಪುಗಳ ಅರಿವಾದಾಗ ತಪ್ಪು ತಿದ್ದುಕೊಂಡು ಮುನ್ನಡೆಯುವ ಪ್ರಬುದ್ಧತೆಯನ್ನು ತೋರಿದೆ.

ಇದಕ್ಕೆ ಸಾಕ್ಷಿಯೆಂದರೆ ಕೇರಳ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಇ.ಎಂ.ಎಸ್. ನಂಬೂದ್ರಿಪಾದ್‌ರವರಿಗೆ ನ್ಯಾಯಾಂಗ ನಿಂದನೆಗೆ ದಂಡ ವಿಧಿಸಿತ್ತು. ಹಲವು ವರ್ಷಗಳ ನಂತರ ಅಂದಿನ ಕೇಂದ್ರ ಸರ್ಕಾರದ ಕಾನೂನು ಸಚಿವರಾದ ದಿವಗಂತ ಶಿವಶಂಕರ್‌ರವರು ಅಂತಹದೆ ಹೇಳಿಕೆಯನ್ನು ನೀಡಿದಾಗ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ತೀರ್ಪು ನೀಡಿತು.

ಈ ಹಿನ್ನೆಲೆಯಲ್ಲಿ ಪ್ರಶಾಂತ್‌ಭೂಷಣ್ ಅವರ ಎರಡು ಟ್ವೀಟ್‌ಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗುತ್ತದೆಯೇ ಎಂಬುದನ್ನು ನೋಡಬೇಕಾಗಿದೆ. ಈ ಟ್ವೀಟ್‌ಗಳು ಈ ರೀತಿ ಇವೆ:

“ಭವಿಷ್ಯದಲ್ಲಿ ಇತಿಹಾಸಕಾರರು ಕಳೆದ ಆರು ವರ್ಷಗಳ ಬಗ್ಗೆ ಬರೆಯುವಾಗ, ಹೇಗೆ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸದೆಯೂ ಪ್ರಜಾತಂತ್ರವನ್ನು ನಾಶ ಮಾಡಲಾಯಿತು ಎಂದು ದಾಖಲಿಸುವಾಗ ಈ ವಿಷಯದಲ್ಲಿ ಸುಪ್ರೀಂಕೋರ್ಟಿನ ಹಿಂದಿನ ನಾಲ್ಕು ಮುಖ್ಯ ನ್ಯಾಯಾಧೀಶರ ಪಾತ್ರವನ್ನು ಗುರಿತಿಸುತ್ತಾರೆ”

ಎರಡನೆಯ ಟ್ವೀಟ್‌ನಲ್ಲಿ ಇಂದಿನ ಮುಖ್ಯ ನ್ಯಾಯಮೂರ್ತಿಯವರು ಒಂದು ದುಬಾರಿ ಮೋಟಾರ್‌ಸೈಕಲ್ ಮೇಲೆ ಕುಳಿತಿರುವ ಚಿತ್ರಕ್ಕೆ ಸಂಬಂಧಿಸಿದ್ದು.

ಇದನ್ನೂ ಓದಿ: ಡಿಜೆ ಹಳ್ಳಿ, ಶೃಂಗೇರಿ: ವೃತ್ತಿನಿಷ್ಠೆಯಿಲ್ಲದ ಮಾಧ್ಯಮಗಳು ಯಾವ ಹುನ್ನಾರದಲ್ಲಿ ಭಾಗಿಯಾಗುತ್ತಿವೆ?-ನ್ಯಾಯಪಥ ಸಂಪಾದಕೀಯ

ಈ ಎರಡು ಟ್ವೀಟ್‌ಗಳನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯ ಪ್ರಶಾಂತ್ ಭೂಷಣ್‌ರವರು ಅಪರಾಧಿಯೆಂದು ತೀರ್ಮಾನಿಸಿದೆ. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಈ ಕೆಳಗಿನ ನಾಲ್ಕು ಪ್ರಮುಖ ಕಾರಣಗಳನ್ನು ನೀಡಿದೆ.

1) ಭಾರತ ದೇಶದ ಘನತೆಗೆ ಧಕ್ಕೆಯಾಗಿದೆ.
2) ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು.
3) ನ್ಯಾಯ ವಿತರಣ ಪ್ರಕ್ರಿಯೆಗೆ ತಡೆ ಉಂಟುಮಾಡಿದೆ.
4) ನ್ಯಾಯಾಂಗದ ಘನತೆಗೆ ಧಕ್ಕೆಯಾಗಿದೆ.

ನ್ಯಾಯಾಲಯವು ನೀಡಿರುವ ಮೊದಲ ಎರಡು ಕಾರಣಗಳು ಅಂದರೆ ದೇಶದ ಘನತೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆತರುವಂತವು ಎಂಬುದು
ಸತ್ಯವಾದರೂ ನ್ಯಾಯಾಂಗನಿಂದನೆಯ ವ್ಯಾಪ್ತಿಗೆ ಬರುವುದಿಲ್ಲ.

ದಿನ ಬೆಳಗಾದರೆ ಈ ದೇಶದಲ್ಲಿ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ದೇಶದ ಐಕ್ಯತೆಗೆ ಮಾರಕವಾದ ಹೇಳಿಕೆಗಳನ್ನು ಮಾತ್ರ ನೀಡುತ್ತಿಲ್ಲ ಕಾರ್ಯರೂಪಕ್ಕೂ ತರುತ್ತಿದ್ದಾರೆ.
ನ್ಯಾಯಾಲಯ ಇಂತಹವರ ವಿರುದ್ಧ ಸ್ವಪ್ರೇರಣೆ ಮೊಕದ್ದಮೆಯನ್ನು ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತ?

ನ್ಯಾಯಾಲಯ ನೀಡಿರುವ ಕೊನೆಯ ಎರಡು ಕಾರಣಗಳಲ್ಲಿ ಯಾವ ರೀತಿ ನ್ಯಾಯ ವಿತರಣೆಗೆ ಅಡ್ಡಿ ಉಂಟಾಗಿದೆ ಎಂಬುದನ್ನು ವಿವರಿಸಿಲ್ಲ. 2015 ರಲ್ಲಿ ಸರ್ವೋಚ್ಚ ನ್ಯಾಯಾಲಯದ ನಾಲ್ಕು ಹಾಲಿ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯನ್ನು ನಡೆಸಿ ಅಂದಿನ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಹೇಳಿಕೆಯನ್ನು ನೀಡಿದರು. ಇವರ ವಿರುದ್ಧ ನ್ಯಾಯಾಲಯ ಯಾಕೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಿಲ್ಲ?

2019 ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮಹಿಳಾ ಸಿಬ್ಬಂದಿ ಅಂದಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅರ್ಜಿಯನ್ನು ನೀಡಿ ವಿಚಾರಣೆ ನಡೆಸಬೇಕೆಂದು ಕೋರಿದರು. ವಿಚಾರಣೆ ನಡೆಸಿ ಆರೋಪದಲ್ಲಿ ಸತ್ಯವಿಲ್ಲವೆಂದು ವರದಿಯನ್ನು ನೀಡಿದ ಸರ್ವೋಚ್ಚ ನ್ಯಾಯಾಲಯ ಅಕೆಯನ್ನು ಕೆಲಸಕ್ಕೆ ತೆಗೆದುಕೊಂಡಿತು. ಅದರೆ ಯಾಕೆ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಲಿಲ್ಲ? ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

ಇದನ್ನೂ ಓದಿ: ’ವಿಮರ್ಶೆಯ ನಿಂದನೆ’- ಭಾರತದಲ್ಲಿ ನ್ಯಾಯಾಂಗ ನಿಂದನೆಯ ಒಂದು ಅವಲೋಕನ

ಕಾಲ ಇನ್ನೂ ಮಿಂಚಿಲ್ಲ. ನ್ಯಾಯಾಲಯ ತನ್ನ ಪ್ರಬುದ್ಧತೆಯನ್ನು ಪ್ರದರ್ಶಿಸಿ ತೀರ್ಪನ್ನು ಪುನರ್‌ವಿಮರ್ಶೆ ಮಾಡಬೇಕು. ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ತಿದ್ದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು. ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಒ ಚಿನ್ನಪ್ಪ ರೆಡ್ಡಿಯವರು 1986ರಲ್ಲಿ ಬಿಜೋ ಎಮಾನ್ಯೂಯಲ್ ಎಂಬ ಪ್ರಕರಣದಲ್ಲಿ ಈ ರೀತಿ ಹೇಳಿದ್ದಾರೆ.

“ನಮ್ಮ ಪರಂಪರೆ ಸಹನೆಯನ್ನು ಬೋಧಿಸುತ್ತದೆ. ನಮ್ಮ ತತ್ವ ಸಹನೆಯನ್ನು ಬೋಧಿಸುತ್ತದೆ. ನಮ್ಮ ಸಂವಿಧಾನವು ಸಹನೆಯನ್ನು ಆಚರಣೆಗೆ ತರಬೇಕೆನ್ನುತ್ತದೆ. ನಾವು ಅದನ್ನು ನಿಸ್ಸಾರಗೊಳಿಸದಿರೋಣ.”

“Our tradition teaches tolerance, Our philosophy preaches tolerance, Our Constitution practices tolerance. Let us not dilute it”

-ಜಸ್ಟೀಸ್ ಹೆಚ್‌. ಎನ್. ನಾಗಮೋಹನ ದಾಸ್

ನ್ಯಾಯಾಲಯ ತನ್ನ ಪ್ರಬುದ್ಧತೆಯನ್ನು ಪ್ರದರ್ಶಿಸಿ  ತೀರ್ಪನ್ನು ಪುನರ್‌ವಿಮರ್ಶೆ ಮಾಡಬೇಕು
ಜಸ್ಟೀಸ್ ಹೆಚ್‌. ಎನ್‌. ನಾಗಮೋಹನ ದಾಸ್‌‌ (PC: Prajavani)

ಲೇಖಕರು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು. ಕರ್ನಾಟಕದಾದ್ಯಂತ ’ಸಂವಿಧಾನ ಓದು’ ಕಾರ್ಯಕ್ರಮಗಳನ್ನು ಮುನ್ನಡೆಸಿದವರು


ಓದಿ: ಸ್ವಾತಂತ್ರ ಬಂತು ಸ್ವಾಯತ್ತತೆ ಹೋಯ್ತು : ಇದು ಕನ್ನಡಿಗರ ಕೂಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...