Homeನ್ಯಾಯ ಪಥಡಿಜೆ ಹಳ್ಳಿ, ಶೃಂಗೇರಿ: ವೃತ್ತಿನಿಷ್ಠೆಯಿಲ್ಲದ ಮಾಧ್ಯಮಗಳು ಯಾವ ಹುನ್ನಾರದಲ್ಲಿ ಭಾಗಿಯಾಗುತ್ತಿವೆ?

ಡಿಜೆ ಹಳ್ಳಿ, ಶೃಂಗೇರಿ: ವೃತ್ತಿನಿಷ್ಠೆಯಿಲ್ಲದ ಮಾಧ್ಯಮಗಳು ಯಾವ ಹುನ್ನಾರದಲ್ಲಿ ಭಾಗಿಯಾಗುತ್ತಿವೆ?

ಬೇರೊಂದು ಮುಖ್ಯವಾಹಿನಿಯನ್ನು ಜನರು ಕಟ್ಟಿಕೊಳ್ಳುವ ಅಗತ್ಯ ತುರ್ತಾಗಿರುವುದನ್ನು ಈ ಎಲ್ಲಾ ಬೆಳವಣಿಗೆಗಳು ಮತ್ತೆ ಮತ್ತೆ ಎತ್ತಿ ತೋರಿಸುತ್ತಿವೆ.

- Advertisement -
- Advertisement -

ಹಿಂದಿ ಮೂಲದ ಜಿಸ್ ಕಿ ಲಾಠಿ ಉಸ್ ಕಿ ಭೈಂಸ್ (ಯಾರ ಹತ್ತಿರ ಲಾಠಿ ಇದೆಯೋ ಅವನದ್ದೇ ಎಮ್ಮೆ) ಎಂಬ ಈ ಗಾದೆಯನ್ನು ಡಿ.ಜೆ.ಹಳ್ಳಿಯ ಕೆಲವು ಮುಸ್ಲಿಮರು ತಪ್ಪಾಗಿ ಅರ್ಥ ಮಾಡಿಕೊಂಡಂತಿದೆ. ಕೆಲವು ಅಂದಾಗ ಬೆರಳೆಣಿಕೆಯ ಎಂಬ ಅರ್ಥವೂ ಬರಬಹುದು. ಆದರೆ ಅವರು ಹಲವು ನೂರರ ಸಂಖ್ಯೆಯಲ್ಲಿದ್ದರು. ಅವರುಗಳು ಸೇರಿಕೊಂಡು ದೊಡ್ಡ ತಪ್ಪೆಸಗಿದರು.

ಬೆಂಗಳೂರು ಗಲಭೆಯ ಪ್ರಮುಖ ಆರೋಪಿ ನವೀನ್‌ಗೆ ನ್ಯಾಯಾಂಗ ಬಂಧನ
Courtesy: the economic times

ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಪೊಲೀಸ್ ಠಾಣೆಯ ಕುರಿತು ಇದ್ದ ಸಿಟ್ಟು, ದೇಶದಲ್ಲಿ ಮುಸ್ಲಿಮರನ್ನು ಮೂಲೆಗೆ ತಳ್ಳಲಾಗುತ್ತಿರುವುದರ ಕುರಿತು ಇದ್ದ ಆಕ್ರೋಶ, ದೇವರಿಗಿಂತ ಮಿಗಿಲಾಗಿ ತಾವು ಭಾವಿಸುವ ಪ್ರವಾದಿಯವರ ಕುರಿತು ಸಹಿಸಿಕೊಳ್ಳಲಸಾಧ್ಯವಾದ ಕೋಪ, ಬಾಬ್ರಿ ಮಸೀದಿ ಒಡೆದ ಜಾಗದಲ್ಲಿ ಕೇವಲ ಒಂದು ವಾರದ ಕೆಳಗಷ್ಟೇ ನಡೆದಿದ್ದ ಮಂದಿರದ ಶಿಲಾನ್ಯಾಸ ಹುಟ್ಟಿಸಿದ್ದ ಅಸಹಾಯಕತೆ – ಇವೆಲ್ಲವೂ ನಡೆದ ಘಟನೆಯನ್ನು ಅರ್ಥ ಮಾಡಿಕೊಳ್ಳಲು ವಿಶ್ಲೇಷಣಕಾರರು ಮುಂದಿಡಬಹುದಾದ ಪಟ್ಟಿಯೇ ಹೊರತು, ಅಲ್ಲಿ ನಡೆದ ಆಸ್ತಿಪಾಸ್ತಿ ನಷ್ಟ ಮಾಡಿದ ಗಲಭೆ ಮತ್ತು ಪುಂಡಾಟಿಕೆಗೆ ಸಮರ್ಥನೆ ಒದಗಿಸುವುದಿಲ್ಲ.

ಇದನ್ನೂ ಓದಿ: ಬೆಂಗಳೂರು ಗಲಭೆಗೆ ಕಾರಣನಾಗಿದ್ದ ಆರೋಪಿ ನವೀನ್‌ನ ಮೊಬೈಲ್ ಪತ್ತೆ!

ಕೈಯ್ಯಲ್ಲಿ ಕಲ್ಲು ಹಿಡಿದು ಪೊಲೀಸ್ ಠಾಣೆಗೆ ತೂರುವುದು, ಕಂಡವರ ಆಸ್ತಿಗೆ ಬೆಂಕಿ ಹಚ್ಚುವುದರ ಮೂಲಕ ಪ್ರವಾದಿಯವರ ಘನತೆಯನ್ನು ಎತ್ತಿ ಹಿಡಿಯಬಹುದು ಎಂದು ಯಾರಾದರೂ ಭಾವಿಸಿದ್ದರೆ ಅವರು ತಮ್ಮ ಆರಾಧ್ಯ ದೈವವನ್ನು ಕೆಳಮಟ್ಟಕ್ಕೆ ಇಳಿಸುತ್ತಿದ್ದಾರೆಂದೇ ಅರ್ಥ. ಮಸೀದಿಯೊಂದನ್ನು ಕೆಡವಿ ಅಲ್ಲಿ ರಾಮಮಂದಿರ ಕಟ್ಟುವುದರ ಮೂಲಕ ತಮ್ಮ ದೇವರನ್ನು ರಕ್ಷಿಸಿಕೊಳ್ಳಲು ಹೊರಟವರಷ್ಟೇ ಮೂರ್ಖತನದ ಕೆಲಸ ಅದು.

ಅಂತಿಮವಾಗಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ, ಫೇಸ್‌ಬುಕ್‌ನಲ್ಲಿ ಪ್ರವಾದಿಯವರನ್ನು ನಿಂದಿಸಿ ಪೋಸ್ಟ್ ಹಾಕಿದ ನವೀನ್‌ನ ಮನೆ, ಪೊಲೀಸ್ ಠಾಣೆಯ ಬೇಸ್‌ಮೆಂಟ್‌ನಲ್ಲಿದ್ದ ಬೈಕ್‌ಗಳು ಹಾಗೂ ಪೊಲೀಸ್ ವಾಹನಗಳನ್ನು ಹೊರತುಪಡಿಸಿದರೆ, ಈ ಗುಂಪು ನಷ್ಟವುಂಟು ಮಾಡಿದ್ದು ಬಹುತೇಕ ಮುಸ್ಲಿಮರ ಆಸ್ತಿಪಾಸ್ತಿಗೆ. ನಾಲ್ವರು ಮುಸ್ಲಿಂ ಯುವಕರು ಪ್ರಾಣವನ್ನು ಕಳೆದುಕೊಂಡಿದ್ದಂತೂ ಯಾರೂ ಹಿಂತಿರುಗಿಸಲು ಸಾಧ್ಯವಿಲ್ಲದ ನಷ್ಟ.

ಸಿಎಎ-ಎನ್​ಆರ್​ಸಿ ವಿರೋಧಿ ಪ್ರತಿಭಟನೆ.

ಕೇವಲ ಕೆಲವೇ ತಿಂಗಳ ಕೆಳಗೆ ಅದೇ ಪೊಲೀಸ್ ಠಾಣೆಯ ವ್ಯಾಪ್ತಿಯ ಬಿಲಾಲ್‌ಬಾಗ್‌ನಲ್ಲಿ ನೂರಾರು ಮಹಿಳೆಯರು ತಿಂಗಳುಗಟ್ಟಲೆ ‘ಬೆಂಗಳೂರಿನ ಶಾಹಿನ್‌ಬಾಗ್’ ಹೋರಾಟ ನಡೆಸಿದ್ದರು. ಅತ್ಯಂತ ಶಾಂತಿಯುತವಾಗಿ ನಡೆಸಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಿಎಎ, ಎನ್‌ಆರ್‌ಸಿ ವಿರುದ್ಧ ನಡೆದ ಐತಿಹಾಸಿಕ ಆಂದೋಲನದ ಭಾಗವಾಗಿ ದೇಶಾದ್ಯಂತ ನಡೆದ ಚಳವಳಿಯ ಭಾಗ ಶಾಹಿನ್‌ಬಾಗ್‌ಗಳು. ಆ ಚಳವಳಿಯ ಅಂಗವಾಗಿ ಹಮ್ಮಿಕೊಳ್ಳಲಾದ ಮೆರವಣಿಗೆಗಳು, ಸಮಾವೇಶಗಳನ್ನು ಅಹಿಂಸಾತ್ಮಕ ಜನಾಂದೋಲನ ಹೇಗಿರಬೇಕೆಂಬುದರ ಕುರಿತು ಉದಾಹರಣೆ ನೀಡಲು ಮುಂದಿನ ನೂರು ವರ್ಷಗಳ ಕಾಲ ಬಳಸಬಹುದು. ಹತ್ತಾರು ಸಾವಿರ ಜನರು ಮೆರವಣಿಗೆ ಹೊರಟಿದ್ದಾಗ ಎದುರಿಗೊಬ್ಬ ಬಂದು ಬಂದೂಕು ಹಿಡಿದು ಗುಂಡು ಹಾರಿಸಿದರೂ ಪ್ರಚೋದನೆಗೊಳಗಾಗದ ಪ್ರಬುದ್ಧತೆಯನ್ನು ಆ ಚಳವಳಿಯು ತೋರಿತ್ತು.

ಇದನ್ನೂ ಓದಿ: ಹಿಂದೂ ವಿರೋಧಿ ಪೋಸ್ಟ್‌ಗೆ ಉತ್ತರವಾಗಿ ಪಿ. ನವೀನ್ ಪ್ರವಾದಿ ನಿಂದನೆ ಪೋಸ್ಟ್ ಹಾಕಿದ್ದನೆ?

ಹಾಗೆಲ್ಲಾ ನಡೆದರೂ ಮತ್ತೆ ಮತ್ತೆ ಮುಸ್ಲಿಮರನ್ನು ಬಲಿಪಶುಗಳನ್ನಾಗಿಸುವ ಅಧಿಕಾರಸ್ಥರು ಮತ್ತು ಸುಳ್ಳುಗಳನ್ನು ಬಿತ್ತುವ ಮಾಧ್ಯಮಗಳ ನಡವಳಿಕೆಯು ಸಹನೆಯ ಕಟ್ಟೆಯನ್ನು ಒಡೆಯುವಂತೆ ಮಾಡಿರಬಹುದು; ಮುಸ್ಲಿಮರಿಗೆ, ಅದರಲ್ಲೂ ಆ ಭಾಗದಲ್ಲಿ ಗಣನೀಯ ಸಂಖ್ಯೆಯಲ್ಲೇ ಇರುವ ಕೆಲವು ಪಂಗಡಗಳಿಗೆ ಪ್ರಾಣಪ್ರಿಯರಾದ ಪ್ರವಾದಿಯವರನ್ನು ನಿಂದಿಸಿದ್ದವರನ್ನು ಪೊಲೀಸರು ಬಂಧಿಸದೇ ಉಪೇಕ್ಷೆ ಮಾಡಿದ್ದು ಹಾಗೆ ಮಾಡಿಸಿದೆ ಎಂಬುದು ಸಹಾ ವಿಶ್ಲೇಷಣೆಯ ಭಾಗವಾಗಬಹುದೇ ಹೊರತು, ಅದನ್ನು ಮುಂದಿಟ್ಟು ನಡೆದ ಘಟನೆಯನ್ನು ಸಮರ್ಥನೆ ಮಾಡಲು ಹೊರಡುವುದು ಮೂರ್ಖತನವಾಗುತ್ತದೆ.

ಆದರೆ ಇಲ್ಲಿ ಎದ್ದು ಕಾಣುತ್ತಿರುವ ಇನ್ನೊಂದು ವಿಪರ್ಯಾಸದ ಸಂಗತಿಯಿದೆ. ಈ ಗಲಭೆಯನ್ನು ಸರಿ ಎಂದು ಹೇಳಿದ ಒಬ್ಬ ಮುಸ್ಲಿಂ ನಾಯಕರೂ ಇಲ್ಲ. ವಾಸ್ತವದಲ್ಲಿ ಆ ಗಲಭೆ ನಡೆಯುತ್ತಿರುವಾಗಲೇ, ಪೊಲೀಸ್ ಠಾಣೆಗೆ ರಕ್ಷಣೆ ಕೊಟ್ಟಿದ್ದು ಮುಸ್ಲಿಂ ಮುಖಂಡರು. ಬೆಂಗಳೂರಿನಲ್ಲಿ ಸದ್ಯಕ್ಕೆ ಮುಸ್ಲಿಂ ಸಮುದಾಯಕ್ಕೆ ನಾಯಕತ್ವ ಕೊಡುತ್ತಿರುವ ಇಬ್ಬರು ರಾಜಕೀಯ ನಾಯಕರು ಸರಿರಾತ್ರಿಯಲ್ಲೂ ಗಲಭೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ‘ಪತ್ರಿಕೆ’ಗೆ ಖಚಿತವಾಗಿ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಯಾವ ಸಂಘಟನೆಯ ತಲೆಗೆ ಈ ಗಲಭೆಯನ್ನು ಕಟ್ಟಲು ಇಂದು ಹುನ್ನಾರ ನಡೆದಿದೆಯೋ, ಆ ಸಂಘಟನೆಯ ಪ್ರಮುಖ ಆರೋಪಿತ ವ್ಯಕ್ತಿಯೂ ಗಲಭೆ ನಿಯಂತ್ರಿಸುವ ಪ್ರಯತ್ನದ ಮುಂಚೂಣಿಯಲ್ಲಿದ್ದರು! ಎಲ್ಲರೂ ಸಹ ಗಲಭೆಯನ್ನು ಖಂಡಿಸಿದರು. ಮುಸ್ಲಿಂ ಓಲೈಕೆ ಮಾಡುತ್ತಾರೆ ಎಂಬ ಆರೋಪವನ್ನು ಹೊತ್ತಿರುವ ಪಕ್ಷಗಳ ನಾಯಕರೂ ತೀವ್ರವಾದ ರೀತಿಯಲ್ಲಿಯೇ ಖಂಡಿಸಿದರು.

 

ಹೀಗಿದ್ದೂ ಈ ರಾಜ್ಯದ ಮಾಧ್ಯಮಗಳು ಮತ್ತು ಬಿಜೆಪಿ ಪಕ್ಷವು ಈ ಗಲಭೆಯನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಮತ್ತು ಎಸ್‌ಡಿಪಿಐ ತಲೆಗೆ ಕಟ್ಟಿದವು. ಎಸ್‌ಡಿಪಿಐ ಪಾತ್ರದ ಕುರಿತಾಗಿಯೂ, ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಕುಟುಂಬಕ್ಕೆ ಸೇರಿದ ಮನೆಯ ಮೇಲಿನ ದಾಳಿ ಯಾರು ನಡೆಸಿದರು ಎಂಬುದರ ಕುರಿತಾಗಿಯೂ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರೆಂದು ಸಾಬೀತಾದವರಿಗೆ ಐಪಿಸಿಯಲ್ಲಿ ಆ ತಪ್ಪಿಗೆ ಕಠಿಣವಾದ ಶಿಕ್ಷೆ ಏನಿದೆಯೋ ಅದನ್ನು ನೀಡಬೇಕು. ಆದರೆ, ಸುಮಾರು 150ಕ್ಕೂ ಹೆಚ್ಚು (ಇದು 300 ಸಹ ಇರುವ ಸಾಧ್ಯತೆ ಇದೆ) ಬಂಧಿತರಲ್ಲಿ ಇದುವರೆಗೆ 15 ಜನರೂ ಎಸ್‌ಡಿಪಿಐನವರಿಲ್ಲ ಎಂಬುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆ ಮೇಲೆ ಹಸಿರು ಬಾವುಟ; ಕೋಮು ಗಲಭೆ ಸೃಷ್ಟಿಸಲು ಸಂಚು?

ಇವರಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳು ಅಂದು ಪೊಲೀಸ್ ಠಾಣೆಯ ಕಾಂಪೌಂಡಿನೊಳಗೆ ಗಲಭೆ ತಡೆಯಲು ಪ್ರಯತ್ನಿಸುತ್ತಿದ್ದುದಕ್ಕೆ ವಿಡಿಯೋ ಸಾಕ್ಷಿಗಳಿವೆ. ಅದನ್ನೂ ದಾಟಿ ಎಸ್‌ಡಿಪಿಐನವರಾಗಲೀ ಅಥವಾ ಇನ್ಯಾರೇ ಆಗಲಿ, ಸಂಚು ರೂಪಿಸಿದ್ದರೆ ಗಲಭೆಗೆ ಪ್ರಚೋದನೆ ಕೊಟ್ಟಿದ್ದರೆ ಗಲಭೆಯಲ್ಲಿ ನೇರವಾಗಿ ಭಾಗಿಯಾಗಿದ್ದರೆ ತನಿಖೆಯ ಮೂಲಕ ಅದು ಬಯಲಾಗಬೇಕು. ಜನರಿಗೆ ಸತ್ಯ ಗೊತ್ತಾಗಬೇಕು.

ಆ ಕುರಿತು ನಂಬಲರ್ಹವಾದ ಒಂದೇ ಒಂದು ತನಿಖಾ ವರದಿ ‘ಮುಖ್ಯವಾಹಿನಿ’ ಮಾಧ್ಯಮಗಳಲ್ಲಿ ಬರಲಿಲ್ಲ. ಬದಲಿಗೆ ಪೊಲೀಸ್ ಕಾರ್ಯಾಚರಣೆಯ ಕುರಿತು ಪೂರ್ಣ ಪುಟದ ಸುದ್ದಿಗಳು ಪತ್ರಿಕೆಗಳಲ್ಲಿ ಬಂದರೆ, ಟಿವಿಗಳಲ್ಲಿ ಅಸಂಬದ್ಧ ಶೀರ್ಷಿಕೆಗಳೊಂದಿಗೆ ಅವನ್ನೂ ಮೀರಿದ ಅಸಂಬದ್ಧ ಸ್ಟೋರಿಗಳು ಬಿತ್ತರವಾಗುತ್ತಿವೆ. ಅದಕ್ಕೆ ಪೂರಕವಾಗಿ ಬಿಜೆಪಿ ನಾಯಕರುಗಳೂ ಹಲುಬುತ್ತಿದ್ದಾರೆ. ಯಾರೊಬ್ಬರೂ ಚರ್ಚಿಸದೇ ಇರುವ ಸಂಗತಿ ಏನೆಂದರೆ, ಈ ನವೀನ್ ಅಂತಹ ಪೋಸ್ಟ್ ಏಕೆ ಹಾಕಿದ? ಆತ ಹಾಕಿರುವುದು ಡಿಸೈನಿಂಗ್ ಬಲ್ಲವರೊಬ್ಬರು ಡಿಸೈನ್ ಮಾಡಿ ಕಳಿಸಿರುವ ಪೋಸ್ಟರ್. ಅದನ್ನು ಆತನೇ ಮಾಡಿರುವ ಸಾಧ್ಯತೆ ಇಲ್ಲ. ಹಾಗಾದರೆ ಯಾವ ವಾಟ್ಸಾಪ್ ಗುಂಪಿನಲ್ಲಿ ಆತನಿಗೆ ಅದು ಸಿಕ್ಕಿತು?

ಬೆಂಗಳೂರು ಗಲಭೆಗೆ ಕಾರಣನಾಗಿದ್ದ ಆರೋಪಿ ನವೀನ್ ನ ಮೊಬೈಲ್ ಪತ್ತೆ!
courtesy: OpIndia

ವಿವಿಧ ಕಟ್ಟುಕತೆಗಳನ್ನು ಮುಂದಿಡುತ್ತಿರುವ ಅದೇ ಮಾಧ್ಯಮದ ಮಂದಿಗೆ, ನವೀನ್ ಯಾವ ವಾಟ್ಸಾಪ್ ಗುಂಪುಗಳಲ್ಲಿದ್ದ ಎಂಬ ಮಾಹಿತಿಯೂ ಗೊತ್ತಿದೆ. ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹಲವು ಪತ್ರಕರ್ತರ ಮುಂದೆ ಅದನ್ನು ಹೇಳಿದ್ದಾರೆ. ಆ ವಾಟ್ಸಾಪ್ ಗುಂಪುಗಳಲ್ಲಿ ಬರುವ ಪೋಸ್ಟ್/ಪೋಸ್ಟರ್‌ಗಳನ್ನು ನವೀನ್ ಯಥಾವತ್ತಾಗಿ ಫೇಸ್‌ಬುಕ್ಕಿನಲ್ಲಿ ಹಾಕುತ್ತಿರುವ ಸಂಗತಿಯನ್ನೂ ತಿಳಿಸಿದ್ದಾರೆ. ಆದರೆ ಅದನ್ನು ಪ್ರಮುಖ ಸುದ್ದಿ ಎಂದು ಯಾವ ಪತ್ರಕರ್ತರಿಗೂ ಅನಿಸಿಲ್ಲ.

ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?

ಅಖಂಡ ಶ್ರೀನಿವಾಸಮೂರ್ತಿಯವರ ಕುಟುಂಬದ ಮನೆಗೆ ಬೆಂಕಿ ಹಾಕಿರುವುದರ ಹಿಂದೆ ಏನೋ ಹುನ್ನಾರವಿದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ನವೀನ್ ಮನೆ ಕಡೆಗೂ ಒಂದಷ್ಟು ಜನ ಹೋಗಿರುವುದರ ಹಿಂದಿನ ಕಾರಣಗಳನ್ನು ಊಹಿಸಬಹುದು. ಆದರೆ, ಕಳೆದ 10 ವರ್ಷಗಳಿಂದ ನವೀನ್ ಕುಟುಂಬಕ್ಕೂ ಅಖಂಡ ಕುಟುಂಬಕ್ಕೂ ಸಂಬಂಧವಿಲ್ಲ ಎನ್ನುವುದು ಸ್ಥಳೀಯರಿಗಂತೂ ತಿಳಿದೇ ಇದೆ. ಹೀಗಿದ್ದೂ ಅಖಂಡ ಶ್ರೀನಿವಾಸಮೂರ್ತಿಯವರ ಕುಟುಂಬದ ಮನೆಗೆ ಹೋಗಿ ಬೆಂಕಿ ಹಚ್ಚಿದ್ದರ ಹಿಂದೆ ಹುನ್ನಾರ ಏನಿದೆ ಎಂಬುದು ಇದುವರೆಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ ತಿಳಿದುಬಂದಿಲ್ಲ. ಆದರೆ ಯಾವುದರ ಮಾಹಿತಿ ಲಭ್ಯವಿಲ್ಲವೋ, ಅದರ ಸುತ್ತ ಮಾಧ್ಯಮಗಳಿಗೆ ಕುತೂಹಲವಿದ್ದಂತೆ ಕಾಣುವುದಿಲ್ಲ. ಯಾವುದು ಈಗಾಗಲೇ ಸ್ಪಷ್ಟವಾಗಿದೆಯೋ ಅಲ್ಲಿ ಅಸ್ಪಷ್ಟತೆಯನ್ನು ಸೃಷ್ಟಿಸುವ, ಗೊಂದಲ – ಸುಳ್ಳುಗಳನ್ನು ಸೃಷ್ಟಿಸುವ ಕೆಲಸ ನಿರಂತರವಾಗಿ ನಡೆದಿದೆ.

ಡಿ.ಜೆ.ಹಳ್ಳಿಯಲ್ಲಿ ನಡೆದ ಘಟನೆಗಳ ಪೈಕಿ ಮೇಲಿನೆರಡು ಸಂಗತಿಗಳ ಕುರಿತು ಚರ್ಚೆಯಾಗುತ್ತಿಲ್ಲವೆಂಬುದಷ್ಟೇ ಅಲ್ಲ, ಇದೇ ಅವಧಿಯಲ್ಲಿ ನಡೆದ ಇನ್ನೊಂದು ಗಂಭೀರ ವಿದ್ಯಮಾನವು ಮುನ್ನೆಲೆಗೆ ಬರದೇ ಹಾಗೇ ಹಿಂದೆ ಸರಿಯುತ್ತಿದೆ. ಅದು ಶೃಂಗೇರಿಯಲ್ಲಿ ನಡೆದದ್ದು. ಶೃಂಗೇರಿಯ ವೀರಪ್ಪಗೌಡ ವೃತ್ತದಲ್ಲಿನ ಶಂಕರಾಚಾರ್ಯ ಪ್ರತಿಮೆಗೆ ಎಸ್‌ಡಿಪಿಐ ಬಾವುಟ ಹಾಕಲಾಗಿದೆ ಎಂದು ಬಿಜೆಪಿ ಪರಿವಾರದ ಜನರು ಮಾಜಿ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಅವರ ಒತ್ತಡದ ನಂತರ ಮೂವರು ಮುಸ್ಲಿಂ ಯುವಕರನ್ನು ವಶಕ್ಕೆ ಪಡೆಯಲಾಯಿತು. ಮರುದಿನ ಶೃಂಗೇರಿಯ ಮಸೀದಿಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ ಮಸೀದಿ ಕಮಿಟಿಯವರಿಗೆ ಅಲ್ಲಿಂದ ಮಧ್ಯರಾತ್ರಿಯಲ್ಲಿ ಮಿಲಿಂದ್ ಅಲಿಯಾಸ್ ಮನೋಹರ್ ಎಂಬಾತ ಈದ್‌ಗೆ ಸಂಬಂಧಿಸಿದ ಬ್ಯಾನರ್‌ಅನ್ನು ಎತ್ತೊಯ್ಯುತ್ತಿರುವುದನ್ನು ನೋಡಿ ಪೊಲೀಸರಿಗೆ ತಿಳಿಸಿದರು.

ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆ ಮೇಲೆ ಹಸಿರು ಬಾವುಟ; ಕೋಮು ಗಲಭೆ ಸೃಷ್ಟಿಸಲು ಸಂಚು?

 

ಹಿಂದಿನ ದಿನ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದ ಈ ಮನೋಹರ್‌ನನ್ನು ಸ್ಥಳೀಯ ವಿಶ್ವಹಿಂದೂ ಪರಿಷತ್‌ನ ಅಪ್ಪುಶೆಟ್ಟಿ ಬಿಡಿಸಿಕೊಂಡು ಬಂದಿದ್ದರೆನ್ನುವ ಸುದ್ದಿಯು ಓಡಾಡಿತು. ಆದರೆ ಪತ್ರಿಕಾಗೋಷ್ಠಿ ಮಾಡಿದ ಚಿಕ್ಕಮಗಳೂರು ಜಿಲ್ಲಾ ಎಸ್‌ಪಿಯವರು ಎಲ್ಲರಿಗೂ ಕ್ಲೀನ್ ಚಿಟ್ ಅದೇ ದಿನ ಕೊಟ್ಟುಬಿಟ್ಟರು. ಕುಡಿದ ಮತ್ತಿನಲ್ಲಿ ಮಸೀದಿಯಿಂದ ಚಳಿ ತಡೆಯಲಾರದೇ ಬ್ಯಾನರ್ ತೆಗೆದುಕೊಂಡು ಹೋಗಿದ್ದ ಮನೋಹರ್, ನಂತರ ಬ್ಯಾನರ್ ದೇವರಿಗೆ ಸಂಬಂಧಿಸಿದ್ದೆಂದು ಅರಿತು, ಇನ್ನೊಂದು ದೇವರ ಮೇಲೆ ಹೊದಿಸಿದ್ದನೆಂದು (ಅಷ್ಟು ಕುಡಿದಾಗ ಆ ವ್ಯಕ್ತಿಯ ಮನಸ್ಸಿನಲ್ಲಿ ನಡೆದ ಈ ಎಲ್ಲಾ ಸಂಗತಿಗಳನ್ನು, ಕುಡಿದಿದ್ದು ಇಳಿದ ನಂತರವೂ ನೆನಪಿನಲ್ಲಿಟ್ಟುಕೊಂಡು ಪೊಲೀಸರಿಗೆ ಹೇಳಿದ್ದ!) ಎಸ್‌ಪಿ ಪತ್ರಿಕಾಗೋಷ್ಠಿಯಲ್ಲಿ ಧೈರ್ಯವಾಗಿ ಹೇಳಿದರು.

ಇದನ್ನೂ ಓದಿ: ಡಿ.ಜೆ ಹಳ್ಳಿಯಲ್ಲಿ ಗಲಭೆಯಾಗುತ್ತಿದ್ದಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು?

ಬೀದಿಯಲ್ಲಿ ನಿಂತು ಮುಸ್ಲಿಮರ ಮೇಲೆ, ಎಸ್‌ಡಿಪಿಐ ಮೇಲೆ ಗಂಭೀರ ಆರೋಪವನ್ನು ಸಾರ್ವಜನಿಕವಾಗಿ ಮಾಡಿ ಪೊಲೀಸರಿಗೆ ತಾಕೀತು ಮಾಡಿದ್ದ ಜೀವರಾಜ್ ತಪ್ಪು ಮಾಡಿದರಲ್ಲವೇ ಎಂಬ ಪ್ರಶ್ನೆಯನ್ನು ಒಂದು ಬಾರಿಯೂ ಬಹುತೇಕ ಮಾಧ್ಯಮಗಳು ಕೇಳಲಿಲ್ಲ. ಉಳಿದವರಿಗೆ ಅದು ದಿನವಿಡೀ ತೋರಿಸಬೇಕಾಗಿದ್ದ ಸಂಗತಿ ಎನಿಸಲಿಲ್ಲ. ಜೀವರಾಜ್, ಬಿಜೆಪಿ ವಕ್ತಾರರು, ಬಿಜೆಪಿ ನಾಯಕರುಗಳನ್ನು ನಿಲ್ಲಿಸಿ ಪ್ರಶ್ನೆ ಕೇಳಬೇಕು ಎನಿಸಲಿಲ್ಲ. ಸದರಿ ಮನೋಹರ್ ಭಜರಂಗದಳ, ವಿಎಚ್‌ಪಿಯ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಎಂದು ಹೇಳಲಾಗುತ್ತಿದೆ, ಹೌದೇ ಎಂದು ಕೇಳಲಿಲ್ಲ. ಕನಿಷ್ಠ ಪಕ್ಷ ವಿರೋಧ ಪಕ್ಷಗಳ ವಕ್ತಾರರ ಬಳಿಯಾದರೂ ಒಂದು ಪ್ರತಿಕ್ರಿಯೆ ತೆಗೆದುಕೊಳ್ಳಲಿಲ್ಲ. ಒಂದು ವೇಳೆ ಮುಸ್ಲಿಂ ಹುಡುಗನೊಬ್ಬ ಕುಡಿದು, ಕುಡಿದ ಮತ್ತಿನಲ್ಲಿ ಇಂತಹ ಕೆಲಸ ಮಾಡಿದ್ದರೆ? ಆತ ಅಲ್‌ಖೈದಾ, ಐಸಿಸ್, ಅಲ್‌ಹಿಂದ್, ಅಲ್ ಪಾಕಿಸ್ತಾನ್ ಎಲ್ಲವೂ ಆಗಿರುತ್ತಿದ್ದ.

 

ಬಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಪರಶುರಾಮ ವಾಘ್ಮೋರೆ ಮತ್ತು ಸಂಗಡಿಗರು, ಮುಸ್ಲಿಮರೇ ಅದನ್ನು ಮಾಡಿದ್ದಾರೆಂದು ಪ್ರತಿಭಟನೆ ಮಾಡಿದ್ದರು. ನಂತರ ಅವರೇ ಸಿಕ್ಕಾಕಿಕೊಂಡರು; ಬಿಡುಗಡೆಯಾದರು. (ಅಲ್ಲಿಂದ ಹಲವು ವರ್ಷಗಳ ನಂತರ ಅದೇ ಪರಶುರಾಮ ವಾಘ್ಮೋರೆ ಗೌರಿಲಂಕೇಶರ ಮೇಲೆ ಗುಂಡು ಹಾರಿಸಿ ಕೊಂದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾನೆ). ಸಿಂಧಗಿ ಘಟನೆಯ ಸಂದರ್ಭದಲ್ಲಿ ಆತ ಶ್ರೀರಾಮಸೇನೆಯ ಕಾರ್ಯಕರ್ತ ಎಂದು ಪೊಲೀಸರು ಹೇಳಿದ್ದರೆ, ‘ಅಲ್ಲ ಆರೆಸ್ಸೆಸ್ ಕಾರ್ಯಕರ್ತ’ ಎಂದು ಶ್ರೀರಾಮಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದರು.

ಅದೇ ಪ್ರಮೋದ್ ಮುತಾಲಿಕ್ ಮೈಸೂರಿನ ಕ್ಯಾತಮಾರನಹಳ್ಳಿಯ ಸಣ್ಣ ದೇವಸ್ಥಾನವೊಂದರಲ್ಲಿ ಭಾಷಣ ಮಾಡಿ ಮಸೀದಿಗೆ ಹಂದಿ ತಲೆ ಹಾಕಿ ಎಂದು ಪ್ರಚೋದಿಸಿದ್ದರೆಂದು ಪೊಲೀಸ್ ಠಾಣೆಯಲ್ಲೂ ದಾಖಲಾಗಿತ್ತು. ಅಲ್ಲಿಂದ ಕೆಲವು ದಿನಗಳ ನಂತರ ಅದರಿಂದ ಪ್ರಚೋದನೆಗೊಳಗಾದ ಯುವಕನೊಬ್ಬ ಮಸೀದಿಗೆ ಹಂದಿ ತಲೆಯನ್ನೂ ಹಾಕಿದ. ಕೋಮುಗಲಭೆಯೂ ಆಯಿತು. ಮುತಾಲಿಕ್‌ರ ಮೇಲೆ ಕೇಸೇನೋ ಬಿತ್ತು. ಆದರೆ ಶ್ರೀರಾಮಸೇನೆಯನ್ನು ನಿಷೇಧ ಮಾಡಿ ಎಂದು ಯಾರೂ ಕೂಗು ಹಾಕುತ್ತಿಲ್ಲ.

ಇದನ್ನೂ ಓದಿ: ಹಿಂಸೆಗಿಳಿದವರು ಮಾಡಿದ್ದು ಕೂಡಾ ಪ್ರವಾದಿ ನಿಂದನೆಯೇ ಎಂದ ಮುಸ್ಲಿಂ ಧಾರ್ಮಿಕ ಮುಖಂಡರು

ಮೈಸೂರಿನ ಈ ಗಲಭೆಯ ಸಂದರ್ಭದಲ್ಲೂ ಪಿಎಫ್‌ಐ ಮೇಲೆ ಗೂಬೆ ಕೂರಿಸಲಾಯಿತು. ಸಿಂಧಗಿಯ ಘಟನೆಯನ್ನು ಉಲ್ಲೇಖಿಸಿ ಯಾವ ಮಾಧ್ಯಮವೂ ಮತ್ತೆ ಮತ್ತೆ ನೆನಪಿಸುವ ಕೆಲಸ ಮಾಡುತ್ತಿಲ್ಲ. ಪರಶುರಾಮ ವಾಘ್ಮೋರೆ ಶ್ರೀರಾಮಸೇನೆಯವನಾ, ಆರೆಸ್ಸೆಸ್ಸಾ ಎಂದು ಗೌರಿ ಲಂಕೇಶರ ಹತ್ಯೆ ನಡೆದ ನಂತರ ಈ ಯಾವ ಮಾಧ್ಯಮವೂ ಚರ್ಚೆಗಾಗಿಯಾದರೂ ಚರ್ಚೆ ಮಾಡಿದ್ದು ಕಾಣಲಿಲ್ಲ. ಉಡುಪಿಯಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಧಾರ್ಮಿಕ ಬಾವುಟವೊಂದನ್ನು ಹಿಡಿದಿದ್ದನ್ನು, ಪಾಕಿಸ್ತಾನದ ಬಾವುಟ ಹಿಡಿದಿದ್ದರು ಎಂದು ಆ ಭಾಗದ ಹೆಚ್ಚು ಪ್ರಸಾರದ ಪತ್ರಿಕೆ ಉದಯವಾಣಿಯಲ್ಲಿ ಮುಖಪುಟದಲ್ಲಿ ವರದಿ ಮಾಡಿತ್ತು.

ಇಂತಹ ಇನ್ನೂ ಹಲವಾರು ಘಟನೆಗಳ ಉದಾಹರಣೆಗಳನ್ನು ನೀಡುತ್ತಾ ಸಾಗಬಹುದು. ಇವೆಲ್ಲವೂ ಏನು ತೋರಿಸುತ್ತದೆ? ಯಾರ ಹತ್ತಿರ ಲಾಠಿ ಇದೆಯೋ ಅವನದ್ದೇ ಎಮ್ಮೆ. ಈ ಘಟನೆಗಳು ಅದೆಷ್ಟು ಬಾರಿ ನಡೆದರೂ, ಇನ್ನೊಮ್ಮೆ ಪಾಕಿಸ್ತಾನದ ಧ್ವಜ ಎಂದು ಬಿಜೆಪಿ ಐಟಿ ಸೆಲ್ಲುಗಳಿಂದ ಪೋಸ್ಟರ್ ಹೊರಟರೆ ಇರಬಹುದೆಂದು ನಂಬಲಾಗುತ್ತದೆ.

ಇಲ್ಲಿ ಲಾಠಿಯೆನ್ನುವುದು ಅಧಿಕಾರ, ಸಂಖ್ಯೆ (ನಮ್ಮದೇ ಹೆಚ್ಚಿನ ಸಂಖ್ಯೆ ಎಂಬ ಭಾವನೆ ಮೂಡುವಂತೆ ಮಾಡುವುದು), ನಿಮ್ಮ ಪರವಾಗಿ ತುತ್ತೂರಿ ಊದುವ ಮಾಧ್ಯಮಗಳು, ಹಣ ಎಂದರ್ಥ. ನೀವು ಹೆಸರಿಸಬಹುದಾದ ಪ್ರತಿಯೊಬ್ಬ ಮುಸ್ಲಿಂ ಸಂಘಟನೆ ಅಥವಾ ನಾಯಕರೆಲ್ಲರೂ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯನ್ನು ಖಂಡಿಸಿದ್ದಾರಾದರೂ, ಅಲ್ಲಿ ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಲಾಗುತ್ತದೆ. ಅದೇ ಸಂದರ್ಭದಲ್ಲಿ ಈ ಗಲಭೆ ನಡೆಯಲು (ಗಲಭೆಗೆ ಅದು ಸಮರ್ಥನೆಯಲ್ಲವಾದರೂ) ಕಾರಣವಾದ ಫೇಸ್‌ಬುಕ್ ಪೋಸ್ಟ್ಅನ್ನು ಒಬ್ಬೇಒಬ್ಬ ಬಿಜೆಪಿ/ಆರೆಸ್ಸೆಸ್ ಸಂಘಟನೆಯ ಮುಖಂಡನೂ ಖಂಡಿಸುವುದಿಲ್ಲ. ಅಷ್ಟೇ ಅಲ್ಲ ಮರುದಿನ ಶೃಂಗೇರಿಯಲ್ಲಿ ಕಲ್ಪಿತ ಸಂಗತಿಯೊಂದರ ವಿರುದ್ಧ ಪ್ರತಿಭಟನೆ ಮಾಡುವ ಬಿಜೆಪಿಯ ಮಾಜಿ ಸಚಿವ, ಆ ನವೀನ್ ಹಾಕಿರುವ ಪೋಸ್ಟ್‌‌ನಲ್ಲಿ ತಪ್ಪಿಲ್ಲ ಎಂದು ಹೇಳುತ್ತಾರೆ.

ಅಂದರೆ ವೃತ್ತಿನಿಷ್ಠೆಯಿಲ್ಲದ ಮಾಧ್ಯಮಗಳ ನಡುವೆ ನಾವು ಬದುಕುತ್ತಿದ್ದೇವೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿಯೇ ಕ್ರೈಮ್ ರಿಪೋರ್ಟರ್‌ಗಳು ಪೊಲೀಸರು ಹೇಳುವ, ಹೇಳದಿರುವ ಸಂಗತಿಗಳನ್ನೆಲ್ಲಾ ಸೇರಿಸಿ ವರದಿ ಮಾಡುತ್ತಿದ್ದಾರೆ. ಪತ್ರಿಕಾ ಕಚೇರಿಯಲ್ಲಿಯೇ ಕುಳಿತು ಸುಳ್ಳುಗಳನ್ನು ಹೆಣೆಯುತ್ತಿದ್ದಾರೆ. ಈಗ ಅಧಿಕಾರ ಹಿಡಿದಿರುವ, ಇಂತಹ ಗಲಭೆಗಳಲ್ಲಿ ಸಾಕಷ್ಟು ನುರಿತಿರುವ ಪಕ್ಷವು ಇನ್ನೂ ದೊಡ್ಡ ಹುನ್ನಾರಕ್ಕೆ ತಯಾರಿ ನಡೆಸಿದ್ದು, ಈ ಪತ್ರಿಕಾ ವರದಿಗಳು ಅದಕ್ಕೆ ಪೂರಕವಾಗಿ ಒದಗಿ ಬರುತ್ತಿವೆ. ಅಂದರೆ ವೃತ್ತಿನಿಷ್ಠೆಯ ಪ್ರಶ್ನೆಯೇ ಅಸಂಗತ. ಅಂದರೆ ಇದು ದೇಶದ ಜನರ ವಿರುದ್ಧವಾಗಿ ನಡೆಯುವ ಹುನ್ನಾರಗಳಲ್ಲಿ ‘ಮುಖ್ಯವಾಹಿನಿ’ ಮಾಧ್ಯಮಗಳು ಪ್ರಜ್ಞಾಪೂರ್ವಕವಾಗಿ ಭಾಗಿಯಾಗುತ್ತಿರುವುದು.

ಬೇರೊಂದು ಮುಖ್ಯವಾಹಿನಿಯನ್ನು ಜನರು ಕಟ್ಟಿಕೊಳ್ಳುವ ಅಗತ್ಯ ತುರ್ತಾಗಿರುವುದನ್ನು ಈ ಎಲ್ಲಾ ಬೆಳವಣಿಗೆಗಳು ಮತ್ತೆ ಮತ್ತೆ ಎತ್ತಿ ತೋರಿಸುತ್ತಿವೆ.

ಸಂಪಾದಕ


ಓದಿ: ರಣಕೇಕೆಯ ಮಾಧ್ಯಮಗಳ ನಡುವೆ ನಮ್ಮ ಕರ್ತವ್ಯ; ನ್ಯಾಯಪಥ ಸಂಪಾದಕೀಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...