KRS ಬುಡದಲ್ಲಿ ಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿ ರೈತಸಂಘ, ದಲಿತ ಸಂಘರ್ಷ ಸಮಿತಿ, ಸ್ವರಾಜ್ ಇಂಡಿಯಾ ಪಕ್ಷ ಹಾಗೂ ಜನಾಂದೋಲನಗಳ ಮಹಾಮೈತ್ರಿ ಸಂಘಟನೆಗಳು ಹೋರಾಟಕ್ಕಿಳಿದಿವೆ. ಇಂದು ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಪ್ಪು ಬಾವುಟ ತೋರಿಸಲು ರೈತರು ಸಜ್ಜಾಗಿದ್ದಾರೆ.
ಬುಧವಾರ ನಡೆದ ಜಂಟಿ ಸುದ್ಧಿಗೋಷ್ಟಿಯಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ, ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ಮಾಡುತ್ತಿರುವುದನ್ನು ವಿರೋಧಿಸಿ, ಮತ್ತು ಕೆಆರ್‌ಎಸ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಶಾಶ್ವತ ನಿಷೇಧಕ್ಕೆ ಮತ್ತು ನಾಲ್ವಡಿಯವರ ಏಕ ಪ್ರತಿಮೆಗೆ ಒತ್ತಾಯಿಸಿ ಸಿಎಂಗೆ ಕಪ್ಪ ಬಾವುಟ ಪ್ರದರ್ಶಿಸಲಾಗುವುದು ಎಂದು ಹೇಳಿದ್ದರು.
ಇಂದು ಮಧ್ಯಾಹ್ನದ ವೇಳೆಗೆ ಸಿಎಂ ಕೆಆರ್‌ಎಸ್‌ಗೆ ಆಗಮಿಸಲಿದ್ದು ಬಾಗಿನ ಅರ್ಪಿಸಲಿದ್ದಾರೆ. ಹಾಗಾಗಿ ಈಗಾಗಲೇ ಸ್ಥಳಕ್ಕೆ ಆಗಮಿಸುತ್ತಿರುವ ನೂರಾರು ಪ್ರತಿಭಟನಾಕಾರರನ್ನು ಜಿಲ್ಲಾ ಪೋಲೀಸರು ತಡೆದಿದ್ದಾರೆ. ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮತ್ತು ರವೀಂದ್ರ ಅವರನ್ನು ಈಗಾಗಲೆ ಬಂಧಿಸಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ನಾನುಗೌರಿ.ಕಾಂಗೆ ತಿಳಿಸಿದರು. ನಮ್ಮನ್ನೂ ಬಂಧಿಸುವುದಾಗಿ ಪೋಲೀಸರು ಹೇಳಿದ್ದಾರೆ. ಆದರೂ ನಾವು ಕಛೇರಿಯ ಬಳಿಯೇ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಹೋರಾಟಗಾರರನ್ನು ಸಹ ಕೆಆರ್‌ಎಸ್‌ಗೆ ಹೋಗುವಾಗ ಹೊಸೂರ್ ಗೇಟ್ ಬಳಿ ಬಂಧಿಸಲಾಗಿದೆ. ಕೆಆರ್‌ಎಸ್‌ಗೆ ಪ್ರತಿಭಟನೆಗೆ ಬರುತ್ತಿದ್ದವರನ್ನು ದಾರಿ ಮಧ್ಯೆಯೆ ತಡೆದು ಬಂಧಿಸಿದ್ದಾರೆ ಎಂದ ರೈತ ಸಂಘದ ಅಧ್ಯಕ್ಷರು ಹೇಳಿದ್ದಾರೆ.
2018 ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ, ‘KRS ಜಲಾಶಯದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೆ, ರಾಜ್ಯ ಮಟ್ಟದಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ಯಡಿಯೂರಪ್ಪನವರು ಎಚ್ಚರಿಕೆ ನೀಡಿದ್ದರು. ಆದರೆ ಈಗ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ವರ್ಷ ಕಳೆದರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಹಾಗಾಗಿಯೇ ಈ ಪ್ರತಿಭಟನೆ ಎಂದು ಕೆಂಪೂಗೌಡರು ಹೇಳಿದರು.
ಗಣಿಗಾರಿಕೆಯಿಂದ ಸುತ್ತಮುತ್ತಲಿನ ಕೃಷಿ ಪರಿಸರಕ್ಕೆ, ಅರಣ್ಯ ಪ್ರದೇಶಕ್ಕೆ ಮತ್ತು ಜಲಾಶಯಕ್ಕೆ ಹೆಚ್ಚಿನ ತೊಂದರೆಯಾಗಲಿದೆ. ಇಲ್ಲಿನ ಗಣಿಗಾರಿಕೆಯ ನಿಷೇಧದ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದ್ದರೂ, ಸರ್ಕಾರ ಈ ಕೆಲಸಕ್ಕೆ ಕೈ ಹಾಕುತ್ತಿಲ್ಲ ಎಂದು ಹಲವು ಹೋರಾಟಗಾರರು ಅಸಮಧಾನ ವ್ಯಕ್ತಪಡಿಸಿದರು.
ದಕ್ಷಿಣ ಕರ್ನಾಟಕದ ಪ್ರಮುಖ ಜಿಲ್ಲೆಗಳ ಜನರಿಗೆ ನೀರುಣಿಸುತ್ತಾ, ರೈತದ ಬದುಕನ್ನು ಮುನ್ನಡೆಸುತ್ತಿರುವ KRS ಜಲಾಶಯಕ್ಕೇ ಅಪಾಯವೊದಗಿದೆ. ಕೆಆರ್‌ಎಸ್‍ನಿಂದ 10.5ಕಿ.ಮೀ ದೂರದಲ್ಲಿರುವ ನೂರಾರು ಎಕರೆಯಿರುವ ಬೇಬಿಬೆಟ್ಟದ ಕಾವಲಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಸ್ಫೋಟದಿಂದ ಹೊರಟ ಕಂಪನಗಳು 2018ರ ಸೆಪ್ಟೆಂಬರ್ 25ರಂದು ಕೆಆರ್‌ಎಸ್ ಬುಡದಲ್ಲಿರುವ ಭೂಕಂಪ ಮಾಪನ ಯಂತ್ರದಲ್ಲಿ ದಾಖಲಾಗಿದೆ.
ಕೆಆರ್‌ಎಸ್ ನಿರ್ಮಾಣವಾಗಿ ಇನ್ನೂ ಒಂದು ಶತಮಾನವೂ ಕಳೆದಿಲ್ಲ ಆದರೀಗ ಅದು ಶಿಥಿಲೀಕರಣದ ಸುಳಿಗೆ ಸಿಲುಕುತ್ತಿದೆ. ಜಲಾಶಯ ನಿಂತಿರುವುದೇ ಸುತ್ತ-ಮುತ್ತಲ ಬೆಟ್ಟಗಳ ಆಧಾರದಿಂದ. ಅದೇ ಬೆಟ್ಟಗಳ ಸರಣಿಯ ಇನ್ನೊಂದು ಕಡೆ ಗುಡ್ಡ ಕರಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ.
ಈ ಕಂಪನ ಭೂಕಂಪವಲ್ಲ, ಹಾಗಾಗಿ ಅಂತಹ ತೊಂದರೆಯಿಲ್ಲ ಎಂಬ ವರದಿಯನ್ನು ನೈಸರ್ಗಿಕ ವಿಕೋಪ ಸಂಸ್ಥೆಯು ನೀಡಿ ಹಲವು ಎಚ್ಚರಿಕೆಯ ಮಾತುಗಳನ್ನು ಹೇಳಿದೆ. ಕೆಆರ್‌ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ಮೆಗಾಬ್ಲಾಸ್ಟ್‌ಗೆ ಅನುಮತಿ ಇಲ್ಲದಿದ್ದರೂ ಬೇಬಿ ಬೆಟ್ಟದಲ್ಲಿ ಸಿಡಿಸಿದ ಮೆಗಾಬ್ಲಾಸ್ಟ್‌ನಿಂದಾಗಿ ಈ ಕಂಪನ ಉಂಟಾಗಿದೆ. ಈ ಸದ್ಯ ಅಪಾಯವಾಗಿಲ್ಲ ಎಂಬುದನ್ನು, ಮುಂದೆಯೂ ಅಪಾಯವಾಗುವುದಿಲ್ಲವೆಂದು ವ್ಯಾಖ್ಯಾನಿಸುತ್ತಿರುವ ಗಣಿ ಮಾಲೀಕರು ನಿರಂತರ ಲೂಟಿಗೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವವೆ.
ಈಗಾಗಲೇ ಇಂತಹ ಮೈನಿಂಗ್ ಮಾಫಿಯಾ, ದರೋಡೆ, ಲೂಟಿಗಳಂತಹ ಕಾರಣಗಳಿಂದಾಗಿ ದೇಶದ 36 ಜಲಾಶಯಗಳು ಶಿಥಿಲಗೊಂಡಿವೆ. ಹಾಗಾಗಿ 87 ವರ್ಷ ಹಳೆಯದಾದ ಕೆಆರ್‌ಎಸ್ ಕೂಡ ಈ ಪಟ್ಟಿಗೆ ಸೇರುವ ದಿನಗಳು ದೂರವಿಲ್ಲ.
ಸ್ವತಃ ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಇಲಾಖೆಯೇ KRS ಜಲಾಶಯ ಅಪಾದಲ್ಲಿದೆ ಎಂದು ವರದಿ ಸಲ್ಲಿಸಿದ್ದರೂ ಸಹ ರಾಜ್ಯ ಸರ್ಕಾರ ಗಣಿಗಾರಿಕೆಯ ನಿಷೇಧಕ್ಕೆ ಮುಂದಾಗುತ್ತಿಲ್ಲ. ಜಲಾಶಯಕ್ಕೆ ಏನಾದರೂ ಹಾನಿಯಾದರೆ ಬೆಂಗಳೂರು ಸೇರಿದಂತೆ ಸುಮಾರು 8 ಜಿಲ್ಲೆಗಳಿಗೆ ತೊಂದರೆಯಾಗಲಿದೆ. ವಿರೋಧ ಪಕ್ಷದಲ್ಲಿದ್ದಾಗ ಯಡಿಯೂರಪ್ಪನವರು ಹೇಳಿದ ಮಾತನ್ನು ನೆನಪಿಸುವ ಸಲುವಾಗಿ ಈ ಹೋರಾಟ ಮಾಡುತ್ತಿದ್ದೇವ ಎಂದು ಹೋರಾಟಗಾರರಾದ ಸುರೇಶ್ ಶಂಭುನಹಳ್ಳಿ ಹೇಳಿದರು.
ಇಂದು ಬಂಧನಕ್ಕೆ ಒಳಗಾಗಿರುವ ಮತ್ತೋರ್ವ ಹೋರಾಟಗಾರರಾದ ಅಭಿ ಹನಕೆರೆ ಮಾತನಾಡಿ, KRS ಉಳಿವಿಗಾಗಿ ಪ್ರತಿಭಟಿಸುತ್ತೇವೆ ಎಂದು ತಿಳಿದ ತಕ್ಷಣ ನೆನ್ನೆ ರಾತ್ರಿಯಿಂದಲೇ ಮಂಡ್ಯದಾದ್ಯಂತ ಇರುವ ಬಹುತೇಕ ಎಲ್ಲಾ ನಾಯಕರನ್ನೂ ಬಂಧಿಸಲಾಗಿದೆ. ಇದರ ಮೂಲಕ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುತ್ತಿದೆ. ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಬಾಗಿನ ಬಿಡುವಂತಹ ಕಂದಾಚಾರಗಳನ್ನು ಮಾಡಬೇಕೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೆಆರ್‌ಎಸ್ ಬುಡದಲ್ಲಿ ಗಣಿಗಾರಿಕೆ ಕಂಪನ