Homeಮುಖಪುಟಅಘೋಷಿತ ತುರ್ತು ಪರಿಸ್ಥಿತಿ: ಕರಾಳ ಕಾಯಿದೆಗಳು ಮತ್ತು ರಾಜಕೀಯ ಕೈದಿಗಳು

ಅಘೋಷಿತ ತುರ್ತು ಪರಿಸ್ಥಿತಿ: ಕರಾಳ ಕಾಯಿದೆಗಳು ಮತ್ತು ರಾಜಕೀಯ ಕೈದಿಗಳು

ಗೌರಿ ಲಂಕೇಶ್ - ನ್ಯಾಯಪಥ ಪತ್ರಿಕೆಯ ವಿಶೇಷ ಸಂಚಿಕೆಗಾಗಿ ದೇಶದ ಹಲವಾರು ತಜ್ಞರು ವಿಶೇಷ ಲೇಖನಗಳನ್ನು ಬರೆದಿದ್ದಾರೆ. ಅಧ್ಯಯನ ಮತ್ತು ಒಳನೋಟಗಳಿಂದ ಕೂಡಿದ ಈ ಲೇಖನಗಳನ್ನು ತಪ್ಪದೇ ಪೂರ್ಣ ಓದುವುದು ನಮ್ಮ ತಿಳಿವನ್ನು ಹೆಚ್ಚಿಸುತ್ತದೆ.

- Advertisement -
- Advertisement -

ಸರ್ವಾಧಿಕಾರಿ ಆಡಳಿತದ ಪ್ರಮುಖ ಲಕ್ಷಣಗಳಲ್ಲಿ ಒಂದೆಂದರೆ, ದೊಡ್ಡ ಸಂಖ್ಯೆಯ ರಾಜಕೀಯ ಕೈದಿಗಳು. ಅವರು ಒಂದೋ ಅಧಿಕಾರದಲ್ಲಿರುವ ಸರಕಾರವನ್ನು ವಿರೋಧಿಸಿದ ಅಥವಾ ಟೀಕಿಸಿದ ಕಾರಣಕ್ಕಾಗಿ ಇಲ್ಲವೇ, ಕೇವಲ ಅವರ ರಾಜಕೀಯ ನಂಬಿಕೆಗಳನ್ನು ಪ್ರತಿಪಾದಿಸಿದ್ದಕ್ಕಾಗಿ ಬಂಧನಕ್ಕೆ ಒಳಗಾದವರು.

ತುರ್ತುಪರಿಸ್ಥಿತಿಯ (1975-77) ಸಂದರ್ಭದಲ್ಲಿ 1,10,000 ಜನರನ್ನು ‘ಮಿಸಾ’ ಅಂದರೆ, ಆಂತರಿಕ ಭದ್ರತಾ ನಿರ್ವಹಣಾ ಕಾಯಿದೆ (ಮೇಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆಕ್ಟ್) ಮತ್ತು ಭಾರತೀಯ ಆಂತರಿಕ ಭದ್ರತೆಯ ರಕ್ಷಣಾ ನಿಯಮಗಳ (ಡಿಫೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ರೂಲ್ಸ್ ಆಫ್ ಇಂಡಿಯಾ) ಅನ್ವಯ ಬಂಧಿಸಲಾಗಿತ್ತು ಎಂದು ಅಂದಾಜಿಸಲಾಗಿದೆ. ಆಗಿನ ಇಂದಿರಾ ಗಾಂಧಿ ಸರಕಾರಕ್ಕೆ ವಿರೋಧವಾಗಿದ್ದ ನಿಷೇಧಿತ ಸಂಘಟನೆಗಳ ಸದಸ್ಯರಾಗಿದ್ದರು ಎಂಬ ಕೇವಲ ಕಾರಣಕ್ಕಷ್ಟೇ ಅವರಲ್ಲಿ ಹೆಚ್ಚಿನವರನ್ನು ಬಂಧಿಸಲಾಗಿತ್ತು. (ಪ್ರಕಾಶ್ 2018, ಪುಟ 176).

PC: The Indian Express

ಸರಕಾರವನ್ನು ಬಲಪಡಿಸುವುದಕ್ಕೆ ‘ವಿಶೇಷ’ ಕಾಯಿದೆಗಳ ಬಳಕೆ ನಿರ್ಣಾಯಕವಾಗಿತ್ತು. ಈ ಕಾನೂನುಗಳು ಸಾಮಾನ್ಯ ಕಾನೂನು ಪ್ರಕ್ರಿಯೆ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ, 1973 (ಸಿಆರ್‌ಪಿಸಿ- ಕ್ರಿಮಿನಲ್ ಪ್ರೊಸೀಜರ್ ಕೋಡ್) ರಲ್ಲಿ ಆರೋಪಿತ ವ್ಯಕ್ತಿಗೆ ಕೊಡಮಾಡಲಾಗಿರುವ ಮೂಲಭೂತ ಹಕ್ಕುಗಳಿಗೆ ‘ಹೊರತಾಗಿವೆ’.

ಇದನ್ನೂ ಓದಿ: ಸಿಬಿಐ ದಾಳಿಗಳು ಮತ್ತು ವಕೀಲರು, ಪತ್ರಕರ್ತರ ಕಾನೂನುಬಾಹಿರ ಬಂಧನಗಳು: ಕರಾಳ ದಿನಗಳ ಮುನ್ಸೂಚನೆ

ಉದಾಹರಣೆಗೆ ‘ಮಿಸಾ’ (ಎಂಐಎಸ್‌ಎ) ವು ಭಾರತೀಯ ಕಾನೂನು ಅನುಷ್ಟಾನ ಸಂಸ್ಥೆಗಳಿಗೆ ಯಾವುದೇ ಅಡೆತಡೆ ಇಲ್ಲದೇ, ಅನಿರ್ಧಿಷ್ಟಾವಧಿ ತನಕ ವ್ಯಕ್ತಿಗಳನ್ನು ಹಿಡಿದಿಟ್ಟುಕೊಳ್ಳುವ, ಯಾವುದೇ ವಾರಂಟ್ ಇಲ್ಲದೇ ತಪಾಸಣೆ ನಡೆಸುವ ಮತ್ತು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ನೀಡಿತ್ತಲ್ಲದೇ, ಅತ್ಯಂತ ಮುಖ್ಯವಾಗಿ, ಬಂಧಿತರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು “ಸಹಜ ನ್ಯಾಯ”ದ ಪರಿಕಲ್ಪನೆಯನ್ನೇ ಅನ್ವಯಿಸದಂತೆ ನಿಷೇಧಿಸಿತ್ತು. ವಿದೇಶೀಯರು ಸೇರಿದಂತೆ ಯಾರೂ ಸಹಜ ನ್ಯಾಯ ಅಥವಾ ಸಾಮಾನ್ಯ ನ್ಯಾಯದ ಆಧಾರದಲ್ಲಿ ಬಂಧನವನ್ನು ಪ್ರಶ್ನಿಸುವಂತಿಲ್ಲ ಮತ್ತು ಬಂಧನದ ಕಾರಣವನ್ನು ಸರಕಾರದ ಗುಪ್ತ ವಿಷಯಗಳು ಮತ್ತು ಆ ಕಾರಣಗಳನ್ನು ಯಾರಿಗೂ, ಸ್ವತಃ ಬಂಧಿತನಿಗೆ ಕೂಡಾ ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ಎಂದು ವ್ಯಾಖ್ಯಾನಿಸಲಾಗಿತ್ತು. (1)

ಪ್ರಸ್ತುತ ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ, 1967 (ಯುಎಪಿಎ), ರಾಷ್ಟ್ರೀಯ ಭದ್ರತಾ ಕಾಯಿದೆ, 1980 (ಎನ್‌ಎಸ್‌ಎ) ಮತ್ತು ಸಾರ್ವಜನಿಕ ಸುರಕ್ಷಾ ಕಾಯಿದೆ 1978 (ಜಮ್ಮು ಮತ್ತು ಕಾಶ್ಮೀರಕ್ಕೆ ಸೀಮಿತ) (ಪಿಎಸ್‌ಎ)ಯಂತಹ ವಿಶೇಷ ಭದ್ರತಾ/ ಭಯೋತ್ಪಾದಕ ಕಾಯಿದೆಗಳ ಯದ್ವಾತದ್ವಾ ಬಳಕೆಯ ಅಭ್ಯಾಸವು ತುರ್ತುಪರಿಸ್ಥಿತಿಗೆ ದಂಗುಬಡಿಸುವಷ್ಟು ಸಾಮ್ಯತೆ ಹೊಂದಿದೆ. ಇವೆಲ್ಲವೂ ಕಾಂಗ್ರೆಸ್ ಸರಕಾರ ತಂದ ಕಾಯಿದೆಗಳಾಗಿದ್ದು, ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ವಿರೋಧಿಗಳ ಮೇಲೆ ಈ ಕಾಯಿದೆಗಳನ್ನು ಅತ್ಯಂತ ಕ್ರೂರವಾಗಿ ಪ್ರಯೋಗಿಸುತ್ತಿವೆ.

ಅಪರಾಧದ ಮರುವ್ಯಾಖ್ಯಾನ; ಪ್ರಭುತ್ವ, ಪ್ರತಿರೋಧ ಮತ್ತು ಪ್ರಜಾಪ್ರಭುತ್ವ
PC: Arre

ರಾಜಕೀಯ ಕೈದಿಗಳ ಏಕಾಏಕಿ ಹೆಚ್ಚಳ ಮೂರು ಅಲೆಗಳಲ್ಲಿ ಬಂತು. ಮೊದಲನೆಯದು ಭೀಮಾ ಕೋರೆಗಾಂವ್ ಬಂಧನಗಳು; ಎರಡನೆಯದು ಸಂವಿಧಾನದ ವಿಧಿ 370 ರ ರದ್ದತಿ ನಂತರ ಎಲ್ಲಾ ಕಾಶ್ಮೀರಿ ರಾಜಕೀಯ ನಾಯಕರ ಪ್ರತಿಬಂಧಕ ಬಂಧನ; ಕೊನೆಯದಾಗಿ, ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಯ ವಿರೋಧಿಗಳ ಬಂಧನ. ಈ ಮೂರೂ ಅಲೆಗಳಿಗೆ ಸಂಬಂಧಿಸಿ ಸಾಮೂಹಿಕ ಕಿರುಕುಳ ಮುಂದುವರಿದಿದೆ.

ಭೀಮಾ ಕೋರೆಗಾಂವ್ ಬಂಧನಗಳು (2018)

ಭೀಮಾ ಕೋರೆಗಾಂವ್ ಕದನದಲ್ಲಿ ವಿಜಯದ 200 ನೇ ವರ್ಷಾಚರಣೆಯ ಸಂದರ್ಭದಲ್ಲಿ ಜನವರಿ 2018 ರಲ್ಲಿ ಹಲವಾರು ದಲಿತರು ಸೇರಿದ್ದಾಗ ಅವರ ಮೇಲೆ ಹಿಂಸಾತ್ಮಕ ದಾಳಿ ನಡೆದು ಒಬ್ಬ ವ್ಯಕ್ತಿಯ ಸಾವು ಸಂಭವಿಸಿತು. ಮಹಾರಾಷ್ಟ್ರ ಪೊಲೀಸರು ಈ ಹಿಂಸಾಚಾರದ ಕುರಿತು ತನಿಖೆ ನಡೆಸುವ ಬದಲು ಡಿಸೆಂಬರ್, 2017 ರಲ್ಲಿ ಮಾನವ ಹಕ್ಕು ಹೋರಾಟಗಾರರು ಮತ್ತು ಕಾರ್ಯಕರ್ತರು ಆಯೋಜಿಸಿದ್ದ “ಎಲ್ಗಾರ್ ಪರಿಷದ್” ಸಮಾವೇಶದ ಮೇಲೆ ಗಮನವನ್ನು ತಿರುಗಿಸಲು ಈ ಘಟನೆಯನ್ನು ಬಳಸಿಕೊಂಡರು.

ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

ಮಾನವ ಹಕ್ಕು ಕಾರ್ಯಕರ್ತರಾದ ಸುರೇಂದ್ರ ಗಾಂಡ್ಲಿಂಗ್, ಮಹೇಶ್ ರಾವುತ್, ಸುಧೀರ್ ಧಾವ್ಳೆ, ಪ್ರೊಫೆಸರ್ ಶೋಮಾ ಸೇನ್, ರೋಣ ವಿಲ್ಸನ್ ಅವರನ್ನು “ಹಿಂಸೆಯ ಪ್ರಚೋದನೆಗಾಗಿ” ಸುಮ್ಮನೇ ಸಿಕ್ಕಿಸಿಹಾಕಿ ಬಂಧಿಸಲಾಯಿತು. ಅದಾದ ತಕ್ಷಣವೇ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್, ವರವರ ರಾವ್, ಅರುಣ್ ಫೆರೇರಾ ಮತ್ತು ವರ್ನನ್ ಗೊನ್ಸಾಲ್ವೀಸ್ ಅವರನ್ನು ಆಗಸ್ಟ್ 2018ರಲ್ಲಿ ಬಂಧಿಸಲಾಯಿತು. ಎಪ್ರಿಲ್ 2020 ರಲ್ಲಿ ಗೌತಮ್ ನೌಲಾಖ ಮತ್ತು ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಲಾಯಿತು. ನಂತರ ಪ್ರೊಫೆಸರ್ ಹನಿ ಬಾಬು ಅವರನ್ನು ಬಂಧಿಸಲಾಯಿತು. 2019 ರಿಂದ 2020 ರ ತನಕ ಹಲವಾರು ಬಾರಿ, ಕೊರೊನಾ ಪಿಡುಗಿನ ಬಳಿಕವೂ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲಾಯಿತು.

ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಕೃತ್ಯಗಳ ವ್ಯಾಖ್ಯಾನದಲ್ಲಿ “ಏಕತೆ, ಅಖಂಡತೆ, ಭದ್ರತೆ, ಭಾರತದ ಸಾರ್ವಭೌಮತೆಗೆ ಬೆದರಿಕೆ ಒಡ್ಡುವ ಸಾಧ್ಯತೆ ಇರುವ ಉದ್ದೇಶ ಅಥವಾ ಭಯೋತ್ಪಾದಕ ದಾಳಿಯ ಸಾಧ್ಯತೆ… ಇನ್ಯಾವುದೇ ಇತರ ವಿಧಾನದಿಂದ” ಇತ್ಯಾದಿಯಾಗಿ ಅಸ್ಪಷ್ಟವಾದ ಪದಪುಂಜಗಳಿವೆ. ಈ ಅಸ್ಪಷ್ಟತೆಯು ಯಾವ ಅಂಹಿಂಸಾತ್ಮಕ ರಾಜಕೀಯ ಕೃತ್ಯಗಳು “ಭಯೋತ್ಪಾದಕ ಕೃತ್ಯ”ಗಳಾಗುತ್ತವೆ ಎಂದು ವಿವೇಚಿಸುವ ಅಧಿಕಾರವನ್ನು ತನಿಖಾಧಿಕಾರಿಗಳಿಗೆ ಕೊಡುತ್ತದೆ. ಅದು ಯಾವ ಯಾವ ರಾಜಕೀಯ ಕೃತ್ಯವನ್ನು ಗಲಭೆ ನಡೆಸುವುದು (ದೊಂಬಿ) ಇತ್ಯಾದಿಯಾಗಿ ಐಪಿಸಿಯ ಯಾವ ವಿಧಿಯ ಅಡಿಯಲ್ಲಿ ಸೇರಿಸಬೇಕು ಎಂಬ ವಿವೇಚನಾಧಿಕಾರವನ್ನೂ ಅವರಿಗೆ ನೀಡುತ್ತದೆ.

ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸುವುದಕ್ಕೆ ಕೆಲವು ವಿಷಯಗಳನ್ನು ಗಮನಿಸಬೇಕು. ಹಿಂಸಾತ್ಮಕ ಭಾಷೆ ಬಳಸಿದ ಮಿಲಿಂದ್ ಏಕ್‌ಬುತೆಯ ಸಂಘಟನೆಯ ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳೂ ಸೇರಿದಂತೆ ಏಕ್‌ಬೂತೆ ಮತ್ತು ಸಂಭಾಜಿ ಭಿಡೆ ಎಂಬ ಬಲಪಂಥೀಯರು- ಭೀಮಾ ಕೋರೆಗಾಂವ್‌ನಲ್ಲಿ ಹಿಂಸೆಯನ್ನು ಪ್ರಚೋದಿಸಲು ಸಂಚು ನಡೆಸಿದ ಅನೇಕ ವರದಿಗಳಿವೆ. ಆದರೂ, ಆವರ ವಿರುದ್ಧ ಎಫ್‌ಐಆರ್‌ನಲ್ಲಿ ಯುಎಪಿಎಯನ್ನು ಹೇರಲಾಗಿಲ್ಲ. (2)

ಇದನ್ನೂ ಓದಿ: ಜೈಲು ಕಾಣಿಸುವ ಇನ್ನೊಂದು ಸತ್ಯ : ಡಾ.ರಹಮತ್ ತರೀಕೆರೆ

ಅದೇ ಹೊತ್ತಿಗೆ, ಭೀಮಾ ಕೋರೆಗಾಂವ್ ಸಮಾರಂಭದ ಭಾಷಣದಲ್ಲಿ ಉಲ್ಲೇಖಿಸಲಾದ ಪ್ರಖ್ಯಾತ ನಾಟಕಕಾರ ಬರ್ಟೋಲ್ಡ್ ಬ್ರೆಕ್ಟ್ನ ಕವನವೊಂದರ ಅನುವಾದ ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಲು ಪೊಲೀಸರಿಗೆ ಕಾರಣವಾಯಿತು. (3)

ಭಾರತೀಯ ಸಂವಿಧಾನದ ವಿಧಿ 370ರ ರದ್ದತಿ ಬಳಿಕದ ರಾಜಕೀಯ ಕೈದಿಗಳು

ಕೇಂದ್ರ ಸರಕಾರವು ಸಂವಿಧಾನದ ವಿಧಿ 370 ನ್ನು ಕಿತ್ತು ಹಾಕಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸಹಿತ 500ಕ್ಕೂ ಹೆಚ್ಚು ಪ್ರಮುಖ ರಾಜಕೀಯ ಕಾರ್ಯಕರ್ತರು ಮತ್ತು ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಆ ನಂತರದಲ್ಲಿ ಪ್ರತಿಭಟನೆಗಳು ಸ್ಫೋಟಗೊಂಡಾಗ, ನಾಗರಿಕ ಸಮಾಜದ ಪ್ರಮುಖರು, ವಕೀಲರು, ಉದ್ಯಮಿಗಳು ಮತ್ತು ಸಾಮಾಜಿಕ ಕಾರ್ಯಕರ್ತರೂ ಸೇರಿದಂತೆ 5,000ಕ್ಕೂ ಹೆಚ್ಚು ಮಂದಿಯನ್ನು ಎರಡು ವರ್ಷಗಳ ಕಾಲ ಯಾವುದೇ ವಿಚಾರಣೆ ಇಲ್ಲದೇ ಸೆರೆಯಲ್ಲಿಡುವುದಕ್ಕೆ ಅವಕಾಶ ನೀಡುವ ರಾಷ್ಟ್ರೀಯ ಭದ್ರತಾ ಕಾಯಿದೆಯ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಂಕಿಅಂಶಗಳು ತಿಳಿಸುತ್ತವೆ. (4)

ಸಿಎಎ ವಿರೋಧಿ ಆಂದೋಲನದ ರಾಜಕೀಯ ಕೈದಿಗಳು

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) 2019 ನ್ನು ಸಂಸತ್ತಿನಲ್ಲಿ ಮಂಡಿಸಿ, ಅಂಗೀಕಾರ ಪಡೆದ ವಾರದಲ್ಲಿ ಎರಡು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾದ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಉತ್ತರ ಪ್ರದೇಶದ ಆಲಿಗಢ್‌ನಲ್ಲಿರುವ ಆಲಿಘಢ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿಎಎ ವಿರೋಧದಲ್ಲಿ ಪ್ರತಿಭಟನೆಗಳನ್ನು ಸಂಘಟಿಸಿದರು. ಪ್ರತಿಭಟನೆ ನಡೆಸುವ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸಿದ್ದಕ್ಕಾಗಿ ಅವರು ಕ್ರೂರವಾದ ಪೊಲೀಸ್ ದಮನವನ್ನು ಎದುರಿಸಿದರು.

ಉಮರ್ ಖಾಲಿದ್

ಡಿಸೆಂಬರ್ ಮತ್ತು ಜನವರಿಯಲ್ಲಿ ಪ್ರತಿಭಟನೆಗಳು ಕಾವೇರುತ್ತಿದ್ದಂತೆ, ದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ದಿಲ್ಲಿಯ ಮುಸ್ಲಿಂ ಮಹಿಳೆಯರು ಘೋಷಿಸಿದ ಅನಿರ್ದಿಷ್ಟಾವಧಿ ಧರಣಿಯು ಅಂತಾರಾಷ್ಟ್ರೀಯ ಪ್ರಚಾರವನ್ನು ಪಡೆಯಿತು. ಅದೇ ರೀತಿಯಲ್ಲಿ ಅಸ್ಸಾಮಿನಲ್ಲಿ ಈ ಕಾನೂನು ವಿರೋಧಿಸಿ ಭಾರೀ ಪ್ರತಿಭಟನೆಗಳು ನಡೆದವು. ಈ ಪ್ರತಿಭಟನೆಗಳ ವ್ಯಾಪಕತೆಯು ಪ್ರಭುತ್ವವನ್ನು ಕಂಗೆಡಿಸಿತ್ತು. ಆದುದರಿಂದ ಅದು ಈ ಚಳವಳಿಯನ್ನು ಬಲಪ್ರಯೋಗದ ಮೂಲಕ ದಮನಿಸಲು ನಿರ್ಧರಿಸಿತು. ಸಿಎಎ- ಎನ್‌ಪಿಆರ್- ಎನ್‌ಆರ್‌ಸಿ ವಿರೋಧಿ ಚಳವಳಿಯಲ್ಲಿ ದೇಶಾದ್ಯಂತ ಸಾಮಾನ್ಯ ಮತ್ತು ವಿಶೇಷ ಕಾಯಿದೆಗಳೆರಡರ ಅಡಿಯಲ್ಲಿ ಸಾವಿರಾರು ಬಂಧನಗಳು ನಡೆದವು.

ಇದನ್ನೂ ಓದಿ: ಅಪರಾಧದ ಮರುವ್ಯಾಖ್ಯಾನ; ಪ್ರಭುತ್ವ, ಪ್ರತಿರೋಧ ಮತ್ತು ಪ್ರಜಾಪ್ರಭುತ್ವ

ದಿಲ್ಲಿ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿಯು ಶಾಹೀನ್ ಬಾಗ್ ಪ್ರತಿಭಟನೆಯನ್ನು ಒಂದು ಚುನಾವಣಾ ವಿಷಯವನ್ನಾಗಿ ಮಾಡಿ, “ಭಯೋತ್ಪಾದಕರು” ಮತ್ತು “ರಾಷ್ಟ್ರ ವಿರೋಧಿಗಳು” ಇತ್ಯಾದಿ ಪದಪ್ರಯೋಗಗಳನ್ನು ಮಾಡಿತು. ಫೆಬ್ರವರಿ 2020 ರಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಬಹಿರಂಗವಾಗಿಯೇ ಪ್ರತಿಭಟನಕಾರರಿಗೆ ಬೆದರಿಕೆ ಹಾಕಿದ. ಅದರ ನಂತರ ಈಶಾನ್ಯ ದಿಲ್ಲಿಯಲ್ಲಿ ಮುಸ್ಲಿಮರ ವಿರುದ್ಧ ಯೋಜಿತವಾದ ಹತ್ಯಾಕಾಂಡ ನಡೆಯಿತು. ಇಂದಿನವರೆಗೂ ಆತನ ಮೇಲೆ ಒಂದೇ ಒಂದು ಎಫ್‌ಐಆರ್ ದಾಖಲಾಗಿಲ್ಲ.

ಕಪಿಲ್ ಮಿಶ್ರ

ಹೀಗಿದ್ದರೂ, ದಿಲ್ಲಿ ಪೊಲೀಸರು ಮತ್ತು ಪ್ರಭುತ್ವ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಮಾನವ ಹಕ್ಕು ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳ ವಿರುದ್ಧ ಈ ಅವಕಾಶವನ್ನು ಬಳಸಿಕೊಂಡಿತು. ಜಾಮಿಯಾ ಮತ್ತು ಜೆಎನ್‌ಯು ವಿದ್ಯಾರ್ಥಿಗಳಾದ ಸಫೂರಾ ಝರ್ಗರ್, ದೇವಾಂಗನಾ ಕಾಲಿತಾ, ನತಾಶಾ ನರ್ವಾಲ್, ಮೀನಾ ಹೈದರ್ ಮುಂತಾದವರ ಮೇಲೆ- ಅವರಿಗೆ ಜಾಮೀನು ಸಿಗದಂತೆ ಮಾಡಲು- ಯುಎಪಿಎಯನ್ನು ಹೇರಲಾಯಿತು. ಸಫೂರಾ ಝರ್ಗರ್ ಅವರ ಜಾಮೀನು ಅರ್ಜಿಗಳನ್ನು- ಅವರಿಗೆ ಕೊನೆಗೂ ಗರ್ಭಿಣಿ ಎಂಬ “ಮಾನವೀಯ ನೆಲೆ”ಯಲ್ಲಿ ಜಾಮೀನು ನೀಡುವ ಮೊದಲು- ಹಲವು ಬಾರಿ ತಿರಸ್ಕರಿಸಲಾಗಿತ್ತು. ಆದರೆ, ಸಿಎಎಗೆ ವಿರೋಧ ವ್ಯಕ್ತಪಡಿಸಿದವರ ಮೇಲೆ ದಾಳಿಗಳು ಇನ್ನೂ ಮುಂದುವರಿದಿವೆ ಮತ್ತು ಈಗ ಕೂಡಾ ಆಗಾಗ ಬಂಧನಗಳು ನಡೆಯುತ್ತಿವೆ.

ಕರಾಳ ವಿಶೇಷ ಕಾಯಿದೆಗಳ ಸಮಸ್ಯೆಗಳು

ನಿರಪರಾಧಿತ್ವದ ಪೂರ್ವಗ್ರಹಿಕೆ (ವಿಚಾರಣೆ ಇಲ್ಲದೆ ಯಾರನ್ನೂ ಅಪರಾಧಿ ಎಂದು ಪರಿಗಣಿಸಲಾಗದು), ಸ್ವಯಂ ಆರೋಪದ ವಿರುದ್ಧ ಹಕ್ಕು (ತನ್ನ ವಿರುದ್ಧ ತಾನೇ ಸಾಕ್ಷಿಯಾಗದಿರುವ ಹಕ್ಕು), ವಿಸ್ತರಿತ ಪೊಲೀಸ್ ಕಸ್ಟಡಿ ವಿರುದ್ಧ ಹಕ್ಕು, ತನಿಖಾ ದಳ ನಿಗದಿತ ಸಮಯದೊಳಗೆ ಆರೋಪ ಪಟ್ಟಿ ಸಲ್ಲಿಸಲು ವಿಫಲವಾದರೆ ಜಾಮೀನು ಪಡೆಯುವ ಹಕ್ಕು ಇತ್ಯಾದಿಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಬುನಾದಿ ತತ್ವಗಳಾಗಿವೆ. ಆರೋಪಿಗಳಿಗೆ ಈ ವಿಧದ ರಕ್ಷಣೆ ನೀಡಿರುವುದರ ಹಿಂದಿನ ಕಾರಣವೆಂದರೆ, ಆರೋಪಿತ ವ್ಯಕ್ತಿಗಳ ವಿರುದ್ಧ ಪ್ರಭುತ್ವವು ತನ್ನ ತನಿಖಾ ಸಂಸ್ಥೆಗಳ ಮೂಲಕ ಅಗಾಧವಾದ ಅಧಿಕಾರವನ್ನು ಹೊಂದಿರುತ್ತದೆ. ನಮ್ಮ ತನಿಖಾ ಸಂಸ್ಥೆಗಳಿಗೆ ನಿಂದನೆ, ಚಿತ್ರಹಿಂಸೆ, ದಬ್ಬಾಳಿಕೆಗಳ ದೊಡ್ಡ ಇತಿಹಾಸವೇ ಇದೆ.

ಇದನ್ನೂ ಓದಿ: ಮಾನವಹಕ್ಕುಗಳ ಹೋರಾಟಗಾರ ರೋಣ ವಿಲ್ಸನ್

ಸಾಮಾನ್ಯ ಕಾನೂನುಗಳು (5) ತನಿಖಾ ಸಂಸ್ಥೆಗಳಿಗೆ ಸ್ವಲ್ಪ ಮಟ್ಟಿನ ಉತ್ತರದಾಯಿತ್ವ ವಿಧಿಸಿದ್ದರೆ, ವಿಶೇಷ ಕಾಯಿದೆಗಳು ಎಲ್ಲವನ್ನು ಒಂದೇ ಏಟಿಗೆ ಕಿತ್ತುಕೊಳ್ಳುತ್ತವೆ. ಐಪಿಸಿಯು ಭಯೋತ್ಪಾದನೆಯ ಆರೋಪಿಗಳನ್ನು ವಿಚಾರಣೆ ನಡೆಸಿ, ಕಾನೂನಿನಲ್ಲಿರುವ ಗರಿಷ್ಟ ಶಿಕ್ಷೆಯನ್ನು ವಿಧಿಸುವ ಅವಕಾಶಗಳನ್ನು ಹೊಂದಿದ್ದು, ಯುಎಪಿಎ ಮತ್ತು ಎನ್‌ಎಸ್‌ಎ ಹೊಸದಾಗಿ ಅದಕ್ಕೆ ಏನನ್ನೂ ಸೇರಿಸುವುದಿಲ್ಲ ಎನ್ನುವ ಕ್ರಿಮಿನಲ್ ಕಾನೂನು ಪ್ರಾಧ್ಯಾಪಕ ಕುಣಾಲ್ ಅಂಬಸ್ಥ , ಆದರೆ ಆರೋಪದ ಕುರಿತ ಪೊಲೀಸ್ ಪ್ರಾಥಮಿಕ ತನಿಖೆಯನ್ನು ಆಧರಿಸಿ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ನಿರಾಕರಣೆ, ದೀರ್ಘಕಾಲದ ವಿಚಾರಣಾಪೂರ್ವ ಕಸ್ಟಡಿಗೆ ಅವಕಾಶ ನೀಡುವ ಪ್ರಕ್ರಿಯಾತ್ಮಕ ಬದಲಾವಣೆಗಳನ್ನು ಮಾತ್ರ ಈ ವಿಶೇಷ ಕಾಯಿದೆಗಳು ಹೊಂದಿವೆ ಎಂದು ವಾದಿಸುತ್ತಾರೆ (6).

ಸುರೇಂದ್ರ ಗಾಡ್ಲಿಂಗ್

ಉದಾಹರಣೆಗೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ವಕೀಲ ಸುರೇಂದ್ರ ಗಾಡ್ಲಿಂಗ್ ಅವರೀಗ ಯುಎಪಿಎ ಅಡಿಯಲ್ಲಿ 750 ದಿನಗಳಿಗಿಂತಲೂ ಹೆಚ್ಚಿನ ಕಾಲ ವಿಚಾರಣಾಪೂರ್ವ ಕಸ್ಟಡಿಯಲ್ಲಿದ್ದಾರೆ. ಯುಎಪಿಎ ಅಡಿಯಲ್ಲಿ ಆರೋಪಿತನಾದ ಒಬ್ಬ ವ್ಯಕ್ತಿಯನ್ನು ಆತನ ಮೇಲೆ ಆರೋಪದ ಕುರಿತು ಯಾವುದೇ ವಿವರ ಹಂಚಿಕೊಳ್ಳದೆ ಅಥವಾ ಅಂತಹ ಕಸ್ಟಡಿಯನ್ನು ಸಮರ್ಥಿಸುವ ಯಾವುದೇ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸದೆ ಆರು ತಿಂಗಳುಗಳ ಕಾಲ ಕಸ್ಟಡಿಯಲ್ಲಿ ಇಟ್ಟುಕೊಳ್ಳಬಹುದು.

ಇದನ್ನು ಎತ್ತಿ ತೋರಿಸುವ ಕುಣಾಲ್ ಅಂಬಸ್ಥ, ಇನ್ನಷ್ಟು ಮುಂದುವರಿದು, ಈ ಕಾನೂನುಗಳನ್ನು ಪ್ರಭುತ್ವ ದುರುಪಯೋಗಪಡಿಸುವುದು ಅಲ್ಲ; ಆದು ದುರುಪಯೋಗಪಡಿಸಿಕೊಳ್ಳಲು ಅನುಕೂಲವಾಗುವಂತೆಯೇ ರೂಪಿಸಲಾಗಿದೆ ಎನ್ನುತ್ತಾರೆ. ಈ ವಿಶೇಷ ಕಾಯಿದೆಗಳಲ್ಲಿರುವ ಅಸ್ಪಷ್ಟತೆಯು- ದುರುಪಯೋಗಕ್ಕೆ ಬೇಕಾದಷ್ಟು ಅವಕಾಶಗಳನ್ನು ಒದಗಿಸುತ್ತದೆ. ಈ ಕಾಯಿದೆಗಳು ರಾಜಕೀಯ ಭಿನ್ನಮತವನ್ನು ಬಗ್ಗುಬಡಿಯಲು ಸರಕಾರಗಳಿಗೆ ಅನುಕೂಲಕರ ಅಸ್ತ್ರಗಳಾಗುತ್ತವೆ. ತನಿಖಾ ಸಂಸ್ಥೆಗಳು ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಕ್ಕೆ ಬೆವರಿಳಿಸಬೇಕಾಗಿಯೇ ಇಲ್ಲ. ಅಷ್ಟು ದೀರ್ಘ ಅವಧಿಯ ವಿಚಾರಣಾ ಪೂರ್ವ ಕಸ್ಟಡಿ ಪಡೆಯಬಹುದಾದಾಗ ಯಾಕೆ ಅಷ್ಟೊಂದು ಕಷ್ಟಪಡಬೇಕು?! ರಾಜಕೀಯ ಭಿನ್ನಮತಕ್ಕೆ ಇದರ ಸಂದೇಶ ಸ್ಪಷ್ಟವಾಗಿದೆ.

ಇದನ್ನೂ ಓದಿ: ಗೌತಮ್ ನವಲಖ ಪ್ರಕರಣ: ಹೈಕೋರ್ಟ್ ಎದುರು ಸುಪ್ರೀಂಕೋರ್ಟ್ ಎತ್ತಿಕಟ್ಟುತ್ತಿರುವ ಸರ್ಕಾರ!

ಯುಎಪಿಎ, ರಾಜದ್ರೋಹ, ಎನ್‌ಎಸ್‌ಎ ಮುಂತಾದ ಕರಾಳ ಕಾಯಿದೆಗಳಿಗೆ ಒಂದು ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಇಂತಹಾ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಲು ಸಾಮೂಹಿಕ ಪ್ರಯತ್ನಗಳು ಆಗಬೇಕಾಗಿವೆ. ಈ ಹೋರಾಟವನ್ನು ಮುಂದುವರಿಸಲು ಹಲವಾರು ಅಂತಾರಾಷ್ಟ್ರೀಯ ಸಂಘಟನೆಗಳು ಮತ್ತು ದೇಶದ ತಳಮಟ್ಟದ ಸಂಘಟನೆಗಳು ಚಳವಳಿಗಳನ್ನು ಆಯೋಜಿಸುತ್ತಿವೆ.

– ಐಮನ್ ಖಾನ್ ಮತ್ತು ಮೊಹಮದ್ ಅಫೀಫ್

ಅನುವಾದ: ನಿಖಿಲ್ ಕೋಲ್ಪೆ

ಐಮನ್‌ ಖಾನ್, ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಿಂದ ಮಹಿಳಾ ಅಧ್ಯಯನದಲ್ಲಿ ಎಂ.ಎ ಪದವಿ ಹೊಂದಿರುವ ಐಮನ್ ದಹಲಿಯ ಕ್ವಿಲ್ ಫೌಂಡೇಶನ್ ಜೊತೆಗೆ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೊಹಮದ್ ಅಫೀಫ್, ಆಲ್ರ‍್ನೇಟಿವ್ ಲಾ ಫೋರಮ್ ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಅಫೀಫ್, ಸಾಂವಿಧಾನಿಕ, ಕಾರ್ಮಿಕ ಮತ್ತು ಕೌಟುಂಬಿಕ ಕಾನೂನು ಪರಿಣಿತರು.


ಉಲ್ಲೇಖಗಳು: 

[1] Prakash Gyan, Emergency Chronicles, Penguin Viking 2018, p.175

https://thewire.in/caste/a-reporter-saw-the-bhima-koregaon-violence-coming-now-he-fears-for-his-life

https://www.thehindu.com/opinion/lead/when-brecht-speaks-as-ambedkar/article24998770.ece

https://www.reuters.com/article/us-india-kashmir/india-extends-detention-of-kashmirs-political-leaders-idUSKBN2010OF

5 Indian Penal Code, 1860 and the Code of Criminal Procedure, 1973

https://www.deccanherald.com/opinion/in-perspective/the-other-pandemic-special-criminal-laws-856788.html


ಓದಿ: ಸಾತಾನ್ ಕುಳಂ ಲಾಕಪ್ ಸಾವಿನಿಂದ ಕಲಿಯಬೇಕಾಗಿರುವ ಪಾಠಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...