Homeಮುಖಪುಟಸಾತಾನ್ ಕುಳಂ ಲಾಕಪ್ ಸಾವಿನಿಂದ ಕಲಿಯಬೇಕಾಗಿರುವ ಪಾಠಗಳು

ಸಾತಾನ್ ಕುಳಂ ಲಾಕಪ್ ಸಾವಿನಿಂದ ಕಲಿಯಬೇಕಾಗಿರುವ ಪಾಠಗಳು

ಜಯ್‌ರಾಜ್-ಬೆನ್ನಿಕ್ಸ್ ಪ್ರಕರಣ ಬೆಳಕಿಗೆ ಬಂದ ನಂತರ, ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ "ವ್ಯಕ್ತಿಗತ ಸಂಬಂಧ ಕೌಶಲ"ದ ಕೊರತೆಗಾಗಿ ತಿರುಚ್ಚಿ ವಲಯದ 80 ಪೊಲೀಸ್ ಅಧಿಕಾರಿಗಳನ್ನು ಸಕ್ರಿಯ ಸೇವೆಯಿಂದ ತೆಗೆದುಹಾಕಲಾಗಿದೆ.

- Advertisement -
- Advertisement -

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಾನ್ ಕುಳಂ ನಲ್ಲಿ ಸಂಭವಿಸಿದ ತಂದೆ-ಮಗನ ಲಾಕಪ್ ಸಾವು ಭಾರತದ ಸ್ವಂತ ಜಾರ್ಜ್ ಫ್ಲಾಯ್ಡ್ ಕರಾಳ ಘಟನೆಯಂತೆ ಕಾಣುತ್ತಿದೆ. ಆದರೆ ಇದು ಅದಕ್ಕಿಂತಲೂ ಭೀಕರವಾಗಿದೆ.

ಮೊದಲಿಗೆ ಈ ಘಟನೆಯ ಕೆಲವು ವಾಸ್ತವಾಂಶಗಳನ್ನು ನೋಡೋಣ. 18 ಜೂನ್, 2020ರಂದು ಪೊಲೀಸರು ಲಾಕ್‌ಡೌನ್ ಸಮಯದ ಉಲ್ಲಂಘನೆಗೆ ಸಂಬಂಧಿಸಿದಂತೆ ಬೆನಿಕ್ಸ್ ಅವರನ್ನು ಗದರಿಸಿದರು. ಆಗ ವಾಗ್ವಾದ ನಡೆಯಿತು. ಜೂನ್ 19ರಂದು ಪೊಲೀಸರು ಅವರ ತಂದೆ ಜಯ್‌ರಾಜ್ ಅವರನ್ನು ವಶಕ್ಕೆ ತೆಗೆದುಕೊಂಡರು. ಮಗ ತನ್ನ ತಂದೆಯನ್ನು ಕಾಣಲು ಪೊಲೀಸ್ ಠಾಣೆಗೆ ಹೋದರು. ತನ್ನ ತಂದೆಯನ್ನು ಕೆಟ್ಟದಾಗಿ ನಡೆಸಿಕೊಂಡಿರುವುದನ್ನು ಅವರು ಆಕ್ಷೇಪಿಸಿದರು. ಅವರನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡರು. ಜೂನ್ 19ರ ಇಡೀ ರಾತ್ರಿ ಠಾಣೆಯ ಇನ್‌ಸ್ಪೆಕ್ಟರ್‌ನ ನೇರ ಉಸ್ತುವಾರಿ ಮತ್ತು ನೆರವಿನೊಂದಿಗೆ ತಂದೆ-ಮಗನಿಗೆ ಪೈಶಾಚಿಕ ಹಿಂಸೆ ನೀಡಲಾಯಿತು. ಒಂದು “ಪೊಲೀಸರ ಮಿತ್ರರು” ಎಂಬ ಸಂಘಟನೆ ಈ ಚಿತ್ರಹಿಂಸಾ ತಂಡದ ಭಾಗವಾಗಿತ್ತು ಎಂದು ಹೇಳಲಾಗಿದೆ. ಈ ಸಂಘಟನೆಯ ಕುರಿತು ಹೆಚ್ಚಿನದನ್ನು ಮುಂದಕ್ಕೆ ನೋಡೋಣ. ಬೆನಿಕ್ಸ್‌ ನ ಗುದದ್ವಾರದಿಂದ ರಕ್ತ ಬರುತ್ತಿರುವುದನ್ನು ನೋಡಿ ಕುಟುಂಬಸ್ಥರು ಬದಲಿ ಬಟ್ಟೆಗಳನ್ನು ಒದಗಿಸಿದ್ದರು.

ಮೂಲ ಪ್ರಥಮ ತನಿಖಾ ವರದಿಯ ಪ್ರಕಾರ ತಂದೆ-ಮಗ ಪ್ರತಿಭಟನೆ ನಡೆಸಿ ನೆಲದಲ್ಲಿ ಹೊರಳಾಡಿದುದರಿಂದ ಗಾಯಗಳಾಗಿವೆ ಎಂದಿತ್ತು. ಅವರ ಮೇಲೆ ಐಪಿಸಿ ವಿಧಿಗಳಾದ 188, 269, 294 (ಬಿ), 353 ಮತ್ತು 506 (ii) ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಜೂನ್ 20ರಂದು ಇಬ್ಬರನ್ನೂ ಸತ್ತಾನಕುಳಂ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿನ ವೈದ್ಯರ ಮೇಲೆ ಒತ್ತಡ ಹಾಕಿ ‘ಮೆಡಿಕಲ್ ಫಿಟ್ನೆಸ್’ ಪ್ರಮಾಣ ಪತ್ರ ನೀಡುವಂತೆ ಮಾಡಲಾಗಿತ್ತು. ಅವರನ್ನು ಸತ್ತಾನಕುಳಂನಲ್ಲಿರುವ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪಿ. ಸರವಣನ್ ಎಂಬವರ ಮನೆಯಲ್ಲಿ “ಹಾಜರುಪಡಿಸಲಾಗಿತ್ತು”. ಸರಿಯಾದ ನಿಯಮವಾಳಿಗಳನ್ನು ಅನುಸರಿಸದೆ, “ಆರೋಪಿ”ಗಳನ್ನು ಪರಿಶೀಲಿಸಿದೆಯೇ, “ಆರೋಪಿ”ಗಳ ಜೊತೆ ಮಾತನಾಡದೆಯೇ ಈ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಸರವಣನ್ ನ್ಯಾಯಾಂಗ ಕಸ್ಟಡಿ ವಿಧಿಸಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ಮಾತನಾಡದಂತೆ ಪೊಲೀಸರು ತಂದೆ-ಮಗನನ್ನೇ ಬೆದರಿಸಿರುವುದು ಸ್ಪಷ್ಟ.

ಶ್ರೀವೈಕುಂಠಂನಲ್ಲಿ ಮತ್ತು ತಿರುಚೆಂಡೂರಿನಿಂದ 40 ಕಿ.ಮೀ. ದೂರದಲ್ಲಿ ಸಬ್‌ಜೈಲುಗಳು ಇದ್ದರೂ ಜಯ್‌ರಾಜ್ ಮತ್ತು ಬೆನಿಕ್ಸ್‌ರನ್ನು ಸತಾನಕುಳಂನಿಂದ 100 ಕಿ.ಮೀ. ದೂರದಲ್ಲಿರುವ ಕೋವಿಲ್‌ಪಟ್ಟಿ ಸಬ್‌ಜೈಲಿಗೆ ಕೊಂಡೊಯ್ಯಲಾಯಗಿತ್ತು. ಅವರ ದೇಹದಲ್ಲಿರುವ ರಕ್ತಗಾಯಗಳನ್ನು, ನಿತಂಬ ಸ್ನಾಯುಗಳ ಊತವನ್ನು ದಾಖಲಿಸಿದ ಬಳಿಕ ಕೋವಿಲ್‌ಪಟ್ಟಿ ಸಬ್‌ಜೈಲ್ ಅವರಿಬ್ಬರನ್ನು ಸೇರಿಸಿಕೊಂಡಿತು.

ಜೂನ್ 22ರಂದು ಬೆನಿಕ್ಸ್ ಎದೆನೋವೆಂದು ಹೇಳುತ್ತಾ ಪ್ರಜ್ಞೆ ತಪ್ಪಿಬಿದ್ದರು. ಅವರನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಜೂನ್ 23ರಂದು ಮೃತಪಟ್ಟರು. ಜೂನ್ 24ರಂದು ಅದೇ ಆಸ್ಪತ್ರೆಯಲ್ಲಿ ತಂದೆ ಜಯ್‌ರಾಜ್ ಮೃತಪಟ್ಟರು.

ಮುಂದಕ್ಕೆ ಹೋಗುವ ಮುನ್ನ ಕಾನೂನು ಪ್ರಕ್ರಿಯೆಯ ಅನುಸರಿಸುವುದರಲಿ ಆಗಿರುವ ಒಂದೆರಡು ಉಲ್ಲಂಘನೆಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸೋಣ.

ಮದ್ರಾಸ್ ಹೈಕೋರ್ಟಿನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಚಂದ್ರು ಅವರ ಪ್ರಕಾರ “ಡಿ.ಕೆ. ಬಸು ವರ್ಸಸ್ ಪಶ್ಚಿಮ ಬಂಗಾಳ ಸರಕಾರ” ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಾರ್ಗದರ್ಶಿ ಸೂತ್ರಗಳಲ್ಲಿ ಆರೋಪಿಗಳು ನ್ಯಾಯಾಧೀಶರ ಮುಂದೆ ಪೊಲೀಸ್ ಚಿತ್ರಹಿಂಸೆಯ ಬಗ್ಗೆ ಬಾಯಿ ತೆರೆಯುವ ಧೈರ್ಯ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಆದುದರಿಂದ ಮ್ಯಾಜಿಸ್ಟ್ರೇಟರು ಆರೋಪಿಯ ಆರೋಗ್ಯ ಪರಿಸ್ಥಿತಿಯನ್ನು ಪರೀಕ್ಷಿಸಬೇಕು.  ಸಂಬಂಧಿಕರಿಗೆ ಬಂಧನದ ಬಗ್ಗೆ ಮಾಹಿತಿ ನೀಡಲಾಗಿದೆಯೇ ಮತ್ತು ಆರೋಪಿಯ ಪರ ವಾದಿಸಲು ವಕೀಲರು ಇದ್ದಾರೆಯೇ ಎಂದು ಪರಿಶೀಲಿಸಿ ಖಾತರಿಪಡಿಸಬೇಕು. ಅದೇ ಪ್ರಕರಣದ ಚರಿತ್ರಾರ್ಹ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಎರಡು ಹಕ್ಕುಗಳನ್ನು ಎತ್ತಿತೋರಿಸುತ್ತದೆ. ಅವುಗಳೆಂದರೆ, ಜೀವದ ಹಕ್ಕು ಮತ್ತು ತಿಳಿಯುವ ಹಕ್ಕು. ಕಾನೂನಿನ ಪ್ರಕಾರ ಬಂಧಿತ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಆರೋಪಿಗೆ ಹಿಂದೆ ಯಾವುದೇ ಗಾಯಗಳಿದ್ದವೆ ಎಂಬುದನ್ನು ದಾಖಲಿಸಬೇಕು. ಇದರಿಂದ ಹೊಸ ಗಾಯಗಳು ಕಸ್ಟಡಿಯಲ್ಲಿ ನಡೆದ ಹಿಂಸೆಗೆ ಸಾಕ್ಷ್ಯ ಒದಗಿಸುತ್ತವೆ.

ವ್ಯಾಪಕವಾದ ಸಾರ್ವಜನಿಕ ಆಕ್ರೋಶದ ಪರಿಣಾಮ ಮದ್ರಾಸ್ ಹೈಕೋರ್ಟ್ ಸ್ವಯಂಪ್ರೇರಿತ (suo-motu) ಪರಿಗಣನೆಗೆ ತೆಗೆದುಕೊಂಡು ಈ ಪ್ರಕರಣದ ಬಗ್ಗೆ ಸ್ವತಃ ನಿಗಾ ವಹಿಸಿತು. ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕು. ಈ ಪ್ರಕರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ವ್ಯಾಪಾರಿ ಸಮುದಾಯವು ತಮಿಳುನಾಡಿನಲ್ಲಿ ಪ್ರಬಲವಾಗಿದೆ. ಜಾತಿಯ ಪರಿಗಣನೆಯಲ್ಲಿ ಇದನ್ನು ನಾಡಾರ್ ಸಮುದಾಯ ಎಂದು ಗುರುತಿಸಲಾಗುತ್ತದೆ.

ಮರಣೋತ್ತರ ಪರೀಕ್ಷೆಯ ವರದಿ, ಹೈಕೋರ್ಟ್ ನೇಮಿಸಿದ ಕೋವಿಲ್‌ಪಟ್ಟಿ ಮ್ಯಾಜಿಸ್ಟ್ರೇಟ್ ಭಾತತೀದಾಸನ್ ಅವರ ವರದಿ, ಕಾನ್ಸ್ಟೇಬಲ್ ರೇವತಿಯವರ ಸಾಕ್ಷ್ಯ ಇತ್ಯಾದಿಗಳು ಈ ಜೋಡಿ ಕೊಲೆ ಪ್ರಕರಣವನ್ನು ಐಪಿಸಿ ವಿಧಿ 176 (1) (ಎ)ಯಿಂದ ವಿಧಿ 302ಗೆ ಬದಲಿಸಲು ನೆರವಾಯಿತು. ಐವರು ಪೊಲೀಸರನ್ನು ಬಂಧಿಸಲಾಗಿದ್ದು, ಅವರು ಸದ್ಯಕ್ಕೆ ಕಂಬಿ ಎಣಿಸುತ್ತಿದ್ದಾರೆ.

ಹೈಕೋರ್ಟಿನ ಸ್ವಯಂ ದೂರಿನ (528/2020) ಸಾರಾಂಶ ಇಂತಿದೆ: ಜಿಲ್ಲಾ ಪೊಲೀಸ್ ಆಡಳಿತವು ಹೈಕೋರ್ಟ್ ನಿರ್ದೇಶಿತ ಮ್ಯಾಜಿಸ್ಟ್ರೇಟ್ ಭಾರತೀದಾಸನ್ ಅವರು ತನಿಖೆಯನ್ನು ಮುನ್ನಡೆಸದಂತೆ ಎಲ್ಲಾ ರೀತಿಯ ತಡೆಗಳನ್ನು ಒಡ್ಡಿದೆ. ಹೆಚ್ಚುವರಿ ಎಸ್ಪಿ (ಪೊಲೀಸ್ ಸೂಪರಿಂಟೆಂಡೆಂಟ್) ಡಿ. ಕುಮಾರ್ ಮತ್ತು ಡಿವೈಎಸ್ಪಿ (ಉಪ ಪೊಲೀಸ್ ಸೂಪರಿಂಟೆಂಡೆಂಟ್)  ಸಿ. ಪ್ರತಾಪನ್ ಅವರು ಸಾತಾನ್ ಕುಳಂ ಪೊಲೀಸ್ ಠಾಣೆಯಲ್ಲಿ ಉಪಸ್ಥಿತರಿದ್ದರು. ಅವರ ಉಪಸ್ಥಿತಿಯಲ್ಲಿಯೇ ಉಳಿದ ಪೊಲೀಸರು ಮ್ಯಾಜಿಸ್ಟ್ರೇಟರ ವಿಚಾರಣೆಯ ವಿಡಿಯೋ ತೆಗೆಯುತ್ತಿದ್ದರು. ಅವರಲ್ಲಿ ಒಬ್ಬನಾದ ಮಹಾಜನ್ ಎಂಬಾತ ಮ್ಯಾಜಿಸ್ಟ್ರೇಟರಿಗೆ “ನೀವೇನು ಮಾಡಲು ಸಾಧ್ಯವಿಲ್ಲ” ಎಂಬ ಉದ್ಧಟ ಮತ್ತು ದಂಗುಬಡಿಸುವ ಹೇಳಿಕೆ ನೀಡಿದ್ದ. ಮ್ಯಾಜಿಸ್ಟ್ರೇಟರ ಈ ಕುರಿತ ವರದಿಯನ್ನು ಆಧರಿಸಿಯೇ ಹೈಕೋರ್ಟ್ 1971ರ ಕ್ರಿಮಿನಲ್ ನ್ಯಾಯನಿಂದನೆ ಕಾಯಿದೆ ಅನ್ವಯ ಎಎಸ್ಪಿ, ಡಿವೈಎಸ್ಪಿ, ಮತ್ತು ಮ್ಯಾಜಿಸ್ಟ್ರೇಟರ ಜೊತೆ ದುರ್ವರ್ತನೆ ತೋರಿದ ಕಾನ್ಸ್ಟೇಬಲ್ ವಿರುದ್ಧ ಸ್ವಯಂ ದೂರು ದಾಖಲಿಸಿತು.

ಇಂತಹ ಆಘಾತಕಾರಿ ಮತ್ತು ಕರಾಳವಾದ ಘಟನೆಗಳು ಹಲವು ಪ್ರಶ್ನೆಗಳನ್ನು ಎತ್ತಿವೆ. ತೂತುಕುಡಿ ಜಿಲ್ಲೆಯಲ್ಲಿ ಪೊಲೀಸರ ಬರ್ಬರತೆ ಮತ್ತು ದಬ್ಬಾಳಿಕೆಯ ವರ್ತನೆಯ ಇತಿಹಾಸ ಏನು? ಈ “ಪೋಲೀಸರ ಮಿತ್ರರ” ಯಾರು? ಅವರ ರಾಜಕೀಯ ಸಂಬಂಧಗಳು ಏನು? ನಮಗೆ ಮುಂದಿನ ಹಾದಿ ಏನು?

ಭಾರತದಲ್ಲಿ ಪ್ರತೀದಿನ ಐದು ಕಸ್ಟಡಿ ಸಾವುಗಳು ಸಂಭವಿಸುತ್ತವೆ ಎಂಬುದು ನಮಗೆ ಗೊತ್ತು. ದಕ್ಷಿಣದ ರಾಜ್ಯಗಳಲ್ಲಿ ತಮಿಳುನಾಡೇ ಮೊದಲ ಸ್ಥಾನದಲ್ಲಿದೆ. ನಾವು ಭಾರತದ, ತಮಿಳುನಾಡಿನ ಕಸ್ಟಡಿ ಸಾವುಗಳನ್ನು ಪರಿಶೀಲಿಸುವಾಗಲೇ ತೂತುಕುಡಿ ಜಿಲ್ಲೆಯಲ್ಲಿ ವಿಶೇಷವಾದುದು ಏನಾದರು ಇದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ, ಹೌದು ರಾಜಕೀಯ ಬೆಂಬಲವೇ ಇಲ್ಲಿನ ಪೊಲೀಸರಿಗೆ ಬಲ ನೀಡಿರುವುದು. ಇಲ್ಲಿನ ಕೆಲವು ಪೊಲೀಸರ ಸಂಪರ್ಕವು ಮಂತ್ರಿಗಳ ತನಕ ಇದೆ. ಮೇ 22, 2018ರಂದು ನಡೆದ ಸ್ಟರ್ಲೈಟ್ ಕಾಪರ್ ಕಾರ್ಖಾನೆಯ ವಿರುದ್ಧ ಪ್ರತಿಭಟನೆಯ ವೇಳೆಯಲ್ಲಿ ಪೊಲೀಸರು ಅಡಗಿ ಗುಂಡು ಹಾರಿಸಿ, 17 ವರ್ಷಗಳ ವಿದ್ಯಾರ್ಥಿ ಸೇರಿದಂತೆ 13 ಮಂದಿಯನ್ನು ಕೊಂದು ಹಲವರನ್ನು ಗಾಯಗೊಳಿದ ಕುಖ್ಯಾತಿ ತೂತುಕುಡಿ ಪೊಲೀಸರಿಗೆ ಇದೆ. ಬೇಕಂತಲೇ ಪ್ರತಿಭಟನಕಾರರ ಹಣೆಗೇ ಪೊಲೀಸರು ಗುಂಡು ಹಾರಿಸಿದರು ಎಂಬ ವರದಿಗಳು ಇವೆ. ಲಾಠಿಚಾರ್ಜಿನಲ್ಲಿ ಗಾಯಗೊಂಡ ಇನ್ನೊಬ್ಬ ವ್ಯಕ್ತಿ ಐದು ತಿಂಗಳ ಕಾಲ ಕೊಮಾದಲ್ಲಿದ್ದು, ಅಕ್ಟೋಬರ್ 2018ರಲ್ಲಿ ಮೃತಪಟ್ಟ ಎಂದರೆ ಪೊಲೀಸರ ಪೈಷಾಚಿಕತೆಯನ್ನು ನಾವು ಗಮನಿಸಬಹುದು. ಅಲ್ಲಿಗೇ ಒಟ್ಟು ಮೃತಪಟ್ಟವರ ಸಂಖ್ಯೆ 14.

ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾದ ಎಫ್‌ಐಆರ್‌ಗಳ ಪ್ರಕಾರ ಗುಂಡು ಹಾರಿಸುವ ಆದೇಶವನ್ನು ಉಪ ತಹಶೀಲ್ದಾರ್ ಶ್ರೇಣಿಯ ಅಧಿಕಾರಿಗಳು ನೀಡಿದ್ದರು. ಆದರೆ, ಇಂತಹಾ ಆದೇಶ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇರುವುದು ಎಂಬುದನ್ನು ಜನರು ಎತ್ತಿ ತೋರಿಸಿದ್ದರು.

ಪ್ರತಿಭಟನಕಾರರ ಮೇಲೆ ಪೊಲೀಸರು ಮೇಲ್ನೋಟಕ್ಕೇ ಎದ್ದು ಕಾಣುವಷ್ಟು ಅತಿರೇಕದ ಮತ್ತು ಯಾವುದೇ ತಾಳಮೇಳವಿಲ್ಲದಷ್ಟು ಬಲ ಪ್ರಯೋಗ ಮಾಡಿರುವುದನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಖಂಡಿಸಿದ್ದರು. ಈ ಕಾರ್ಖಾನೆಯನ್ನು ಯುಕೆ ಮೂಲದ ವೇದಾಂತ ರಿಸೋರ್ಸಸ್‌ನ ಉಪ ಸಂಸ್ಥೆಯಾಗಿರುವ ವೇದಾಂತ ಲಿಮಿಟೆಡ್‌ಗೆ ಸೇರಿದ ಸ್ಟರ್ಲೈಟ್ ಕಾಪರ್ ಎಂಬ ಸಂಸ್ಥೆಯು ನಡೆಸುತ್ತಿದೆ.

ಆದುದರಿಂದ ನಾವು ರಾಜಕೀಯ ಬೆಂಬಲಕ್ಕೆ ಹೊರತಾಗಿ, ತೂತುಕುಡಿ ಜಿಲ್ಲೆಯಲ್ಲಿ ಅಮಾನುಷ ಪೊಲೀಸ್ ಪಡೆಯನ್ನು ಪೋಷಿಸುವುದರಲ್ಲಿ ಸ್ಟರ್ಲೈಟ್ ಕಂಪನಿಯ ಪಾತ್ರದ ಕುರಿತು ಕೂಡಾ ತನಿಖೆ ನಡೆಸಬೇಕಾಗುತ್ತದೆ. ನ್ಯಾಯಾಂಗ ಮ್ಯಾಜಿಸ್ಟ್ರೇಟರ ಮುಂದೆ ಪೊಲೀಸರ ವರ್ತನೆಯು ಇಂತಹಾ ಪ್ರಶ್ನೆಗಳಿಗೆ ಬಲ ನೀಡುತ್ತದೆ.

ಇನ್ನೊಂದು ಆಯಾಮವೆಂದರೆ, ಛತ್ತೀಸ್‌ಗಢದ ಸಲ್ವಜುಡಂ ರೀತಿಯಲ್ಲಿರುವ “ಪೊಲೀಸರ ಮಿತ್ರರು” ಸಂಘಟನೆಯ ಪಾತ್ರ. ಅಧಿಕೃತವಾಗಿ ಇದು ಪೊಲೀಸ್ ಮತ್ತು ಜನರ ನಡುವಿನ ಸಂಪರ್ಕವನ್ನು ಬೆಳೆಸುವ ಸ್ವಯಂಸೇವಕರ ಸಂಘಟನೆ. ಅವರು ಪೊಲೀಸರಂತೆ ಸಮವಸ್ತ್ರ ಧರಿಸುವಂತಿಲ್ಲ. ಅವರು ಲಾಠಿಯನ್ನು ಹಿಡಿಯುವಂತಿಲ್ಲ. ಅವರು ಪೊಲೀಸರ ಯಾವುದೇ ರೀತಿಯ ಕ್ರಿಮಿನಲ್ ತನಿಖೆಯಲ್ಲಿ ಭಾಗವಹಿಸುವಂತಿಲ್ಲ. ಅವರು ಯಾವುದೇ ಪೊಲೀಸ್ ದಾಖಲೆಗಳನ್ನು ಪರಿಶೀಲಿಸುವಂತಿಲ್ಲ. ಆದರೆ, ವಾಸ್ತವದಲ್ಲಿ ಅವರು ಲಾಠಿಗಳನ್ನು ಹಿಡಿದುಕೊಂಡು ಪೊಲೀಸರಂತೆಯೇ ವರ್ತಿಸುತ್ತಾರೆ.

ಜಯ್‌ರಾಜ್ ಮತ್ತು ಬೆನ್ನಿಕ್ಸ್‌ಗೆ ಅಮಾನುಷ ಚಿತ್ರಹಿಂಸೆ ನೀಡಿದಾಗ ನಾಲ್ವರು “ಪೊಲೀಸರ ಮಿತ್ರರು” ಭಾಗಿಯಾಗಿದ್ದುದು ಸ್ಪಷ್ಟ. ತಮಿಳುನಾಡಿನ ಉದ್ದಗಲಕ್ಕೂ 6,000ದಷ್ಟು “ಪೊಲೀಸರ ಮಿತ್ರರು” ಇರುವುದು ಬೆಳಕಿಗೆ ಬಂದಿದೆ. ಈ ಸ್ವಯಂಸೇವಕರು ಆರೆಸ್ಸೆಸ್‌ನ ಅಂಗ ಸಂಸ್ಥೆಯಾಗಿರುವ ಸೇವಾ ಭಾರತಿಗೆ ಸೇರಿದವರಾಗಿದ್ದಾರೆ. ಪೊಲೀಸ್ ಪಡೆಯಲ್ಲಿ ಆರ್ ಎಸ್ ಎಸ್ ಭಾಗವಾಗಿರುವ ಸೇವಾ ಭಾರತಿಯು ನುಸುಳಿಕೊಂಡಿರುವ ಕಳವಳಕಾರಿ ಸಾಧ್ಯತೆಯು ಭಾರತೀಯ ಸಂವಿಧಾನದ ಜಾತ್ಯಾತೀತ ಸಂರಚನೆಗೆ ವ್ಯತಿರಿಕ್ತವಾಗಿದೆ. ಈ ಕುರಿತು ಆಳವಾದ ತನಿಖೆ ನಡೆಸಿ ಸರಿಪಡಿಸುವ ಅಗತ್ಯವಿದೆ.

ಇಲ್ಲಿಂದ ನಾವು ಮುಂದೆಲ್ಲಿ ಹೋಗೋಣ? ಕೇವಲ ಈ ಕಸ್ಟಡಿ ಸಾವುಗಳಿಗೆ ಕಾರಣವಾದ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದರೆ ಸಾಲದು. ಇಡೀ ವ್ಯವಸ್ಥೆಯನ್ನು ಸರಿಪಡಿಸಬೇಕಾಗುತ್ತದೆ.

ವಿಶ್ವಸಂಸ್ಥೆಯ ಚಿತ್ರಹಿಂಸೆ ವಿರೋಧಿ ಒಪ್ಪಂದಕ್ಕೆ 1997ರಲ್ಲಿ ಭಾರತವು ಸಹಿ ಹಾಕಿದ್ದರೂ, ಈ ತನಕ ಅದನ್ನು ಅಧಿಕೃತವಾಗಿ ಒಪ್ಪಿಕೊಂಡು ದೃಢೀಕರಿಸದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದು. ಚಿತ್ರಹಿಂಸೆಯನ್ನು ಒಂದು ಪಿಡುಗು ಮತ್ತು ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಎಂದು ಪರಿಗಣಿಸಬೇಕು. ಕ್ರೌರ್ಯ ಮತ್ತು ಚಿತ್ರಹಿಂಸೆ ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುತ್ತದೆ. ವಿಶ್ವಸಂಸ್ಥೆಯ ಚಿತ್ರಹಿಂಸಾ ವಿರೋಧಿ ಒಪ್ಪಂದ (UNCAT)ದ ವ್ಯಾಖ್ಯಾನವು ನಮ್ಮ ಸಂವಿಧಾನದ ಸಂವಿಧಾನದ 21ನೇ ವಿಧಿಯ ವ್ಯಾಖ್ಯಾನಕ್ಕೆ ಹೊಂದಿಕೊಳ್ಳುತ್ತದೆ. ಅದು ವಿಶ್ವದಾದ್ಯಂತ ಕ್ರೂರ, ಅಮಾನವೀಯ ಮತ್ತು ಮಾನವ ಘನತೆಗೆ ಘಾಸಿ ಮಾಡುವ ನಡವಳಿಕೆ ಅಥವಾ ಶಿಕ್ಷೆಯನ್ನು ತಡೆಯುವ ಗುರಿಯನ್ನು ಹೊಂದಿದೆ.

ಸಂಸತ್ತು ಹಿಂದೆ “ಸರ್ಕಾರಿ ನೌಕರರು ನೀಡುವ ಚಿತ್ರಹಿಂಸೆಗೆ ಶಿಕ್ಷೆ ವಿಧಿಸುವ” ಅಥವಾ “ಯಾವುದೇ ವ್ಯಕ್ತಿಯು ಸರ್ಕಾರಿ ನೌಕರನ ಒಪ್ಪಿಗೆ ಅಥವಾ ಪ್ರೇರಣೆಯಿಂದ ಚಿತ್ರಹಿಂಸೆ ನೀಡಿದಲ್ಲಿ ಶಿಕ್ಷೆ ವಿಧಿಸುವ” ಅವಕಾಶವಿರುವ  ಚಿತ್ರಹಿಂಸೆ ತಡೆ ಮಸೂದೆ (2017)ಯನ್ನು ಪರಿಗಣಿಸಿತ್ತು.

ಈ ಕರಡು ಮಸೂದೆಯ ಪ್ರಕಾರ ತಪ್ಪಿತಸ್ಥರಿಗೆ ಮೂರು ವರ್ಷಗಳಿಗೆ ಕಡಿಮೆ ಇಲ್ಲದಂತೆ, ಹತ್ತು ವರ್ಷಗಳ ತನಕ ಕಾರಾಗೃಹವಾಸ ಮತ್ತು ದಂಡದ ಅವಕಾಶವನ್ನು ಪ್ರಸ್ತಾಪಿಸಲಾಗಿತ್ತು. ಆದರೆ, 2019 ರಲ್ಲಿ 16 ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಈ ಮಸೂದೆಯೂ ನೆನೆಗುದಿಗೆ ಬಿತ್ತು.

ಸಾತಾನ್ ಕುಳಂ ನ ಜಯ್‌ರಾಜ್-ಬೆನ್ನಿಕ್ಸ್ ಪ್ರಕರಣ ಬೆಳಕಿಗೆ ಬಂದ ನಂತರ, ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ “ವ್ಯಕ್ತಿಗತ ಸಂಬಂಧ ಕೌಶಲ”ದ ಕೊರತೆಗಾಗಿ ತಿರುಚ್ಚಿ ವಲಯದ 80 ಪೊಲೀಸ್ ಅಧಿಕಾರಿಗಳನ್ನು ಸಕ್ರಿಯ ಸೇವೆಯಿಂದ ತೆಗೆದುಹಾಕಲಾಗಿದೆ.

“ತಿರುಚ್ಚಿ ವಲಯದಲ್ಲಿ ತಮ್ಮ ನಡವಳಿಕೆಯನ್ನು ಸುಧಾರಿಸುವ ಮತ್ತು ವ್ಯಕ್ತಿಗತ ಸಂಬಂಧ ಕೌಶಲಗಳನ್ನು ಉತ್ತಮಪಡಿಸಿಕೊಳ್ಳುವ ಅಗತ್ಯವಿರುವ 80 ಪೊಲೀಸ್ ಸಿಬ್ಬಂದಿಗಳನ್ನು  ತೆಗೆದುಹಾಕುತ್ತಿದ್ದೇವೆ. ಅವರ ಸೇವಾ ಹಿನ್ನೆಲೆಯನ್ನು ಪರಿಗಣಿಸಿ, ಸಾರ್ವಜನಿಕರ ನೇರ ಸಂಪರ್ಕ ಅಗತ್ಯವಿರುವ ಕರ್ತವ್ಯದಿಂದ ತೆಗೆದುಹಾಕುತ್ತಿದ್ದೇವೆ” ಎಂದು ತಿರುಚ್ಚಿ ವಲಯದ ಐಜಿಪಿ ವಿ. ಬಾಲಕೃಷ್ಣನ್ ತಮ್ಮ ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.  ಅವರು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಸಿಬಿಟಿ (ಕಾಗ್ನಿಟಿವ್ ಬಿಹೇವಿಯರಲ್ ತೆರಪಿ) ತರಬೇತಿಯನ್ನು ಮುಗಿಸಿದ ಬಳಿಕ, “ಸಾರ್ವಜನಿಕರೊಂದಿಗೆ ವ್ಯವಹರಿಸಿರುವ ಅವರ ನಡವಳಿಕೆ” ಉತ್ತಮಗೊಂಡಮೇಲೆ ಹಂತಹಂತವಾಗಿ ಅವರನ್ನು ಸಾಮಾನ್ಯ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

ದಿ ಹಿಂದೂ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಜುಲೈ 3ರಂದು ಪ್ರಕಟವಾದ ಲೇಖನದಲ್ಲಿ ದಿಲ್ಲಿ ಮತ್ತು ಮದ್ರಾಸ್ ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಾಧೀಶರಾದ ಅಜಿತ್ ಪ್ರಕಾಶ್ ಜಾ ಅವರು, ಭಾರತದ ಅಟಾರ್ನಿ ಜನರಲ್ ಅವರು 2017ರಲ್ಲಿ ಜಿನೇವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ, ಗಾಂಧಿ ಮತ್ತು ಬುದ್ಧನನ್ನು ಉಲ್ಲೇಖಿಸಿರುವುದನ್ನು ನೆನಪಿಸಿಕೊಂಡಿದ್ದಾರೆ. “ಭಾರತವು ಶಾಂತಿ, ಅಹಿಂಸೆ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುವುದರಲ್ಲಿ ನಂಬಿಕೆ ಹೊಂದಿದೆ. ಚಿತ್ರಹಿಂಸೆಯ ಪರಿಕಲ್ಪನೆಯೇ ನಮ್ಮ ಸಂಸ್ಕೃತಿಗೆ ಹೊರತಾದುದಾಗಿದೆ. ಅದಕ್ಕೆ ನಮ್ಮ ದೇಶದ ಆಡಳಿತದಲ್ಲಿ ಸ್ಥಾನವಿಲ್ಲ” ಎಂದು ಅಟಾರ್ನಿ ಜನರಲ್ ಅವರು ಹೇಳಿದ್ದು, ಇದು ಆಷಾಢಭೂತಿತನಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ನ್ಯಾ. ಜಾ ಬರೆದಿದ್ದಾರೆ.

ಪಿ. ಮಣಿ, ಕರ್ನಾಟಕದ ಸಾಮಾಜಿಕ ಕಾರ್ಯಕರ್ತರು.

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...