Homeಮುಖಪುಟ’ವಿಮರ್ಶೆಯ ನಿಂದನೆ’- ಭಾರತದಲ್ಲಿ ನ್ಯಾಯಾಂಗ ನಿಂದನೆಯ ಒಂದು ಅವಲೋಕನ

’ವಿಮರ್ಶೆಯ ನಿಂದನೆ’- ಭಾರತದಲ್ಲಿ ನ್ಯಾಯಾಂಗ ನಿಂದನೆಯ ಒಂದು ಅವಲೋಕನ

ಸಮರ್ಥ ವಕೀಲರೊಬ್ಬರ ಮೇಲೆ, ಅವರ ಗುರುತು ಅಥವಾ ವ್ಯಕ್ತಿತ್ವವನ್ನು ಆಧರಿಸಿ ನಡೆಸಿರುವ ಈ ದಾಳಿಯು, ನ್ಯಾಯಾಂಗವನ್ನು ವಿಮರ್ಶೆಗೆ ಒಳಪಡಿಸುವ ವಕೀಲರಲ್ಲಿ ಭಯ ಮೂಡಿಸುವ ಸಲುವಾಗಿ, ಮುಕ್ತ ವಾಕ್ ಸ್ವಾತಂತ್ಯ್ರದ ಮೇಲೆ ನಡೆಸಿರುವ ನೇರ ದಾಳಿಯಾಗಿದೆ.

- Advertisement -
- Advertisement -

ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು, ಆಗಸ್ಟ್ 14ರ ತನ್ನ ತೀರ್ಪಿನಲ್ಲಿ ಅವರನ್ನು ನ್ಯಾಯಾಂಗ ನಿಂದನೆಯ ಅಪರಾಧಿ ಎಂದು ಘೋಷಿಸಿದೆ.

ಈ ಟ್ವೀಟ್‌ಗಳು ನ್ಯಾಯಾಂಗ ನಿಂದನೆ ಮಾಡುತ್ತಿವೆ ಎಂದು ತೀರ್ಮಾನಿಸಲು ಸುಪ್ರೀಂ ಕೋರ್ಟ್ ಪ್ರಧಾನ ಆಧಾರವಾಗಿ ಪರಿಗಣಿಸಿರುವುದು, ಇವು ನ್ಯಾಯಾಂಗ ಆಡಳಿತ ವ್ಯವಸ್ಥೆಗೆ ಅಗೌರವ ತರುತ್ತಿವೆ ಹಾಗೂ ಭಾರತೀಯ ಸರ್ವೋಚ್ಚ ನ್ಯಾಯಾಲಯದ ಮತ್ತು ಮುಖ್ಯ ನ್ಯಾಯಮೂರ್ತಿಗಳ ಕಛೇರಿಗಳ ಘನತೆಯನ್ನು ಕಡೆಗಣಿಸುತ್ತಿವೆ, ಎಂಬ ಸಂಗತಿಗಳನ್ನು.

ಈ ಹಿಂದೆ ನ್ಯಾಯಾಂಗ ನಿಂದನೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಕೊಟ್ಟಿದ್ದ ತೀರ್ಪುಗಳಿಗೆ ವ್ಯತಿರಿಕ್ತವಾಗಿ, ಈ ತೀರ್ಪು ವಾಕ್ ಸ್ವಾತಂತ್ಯ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರಗಳ ಮೇಲೆ ಪ್ರಹಾರ ನಡೆಸಿದೆ. ಈ ಟ್ವೀಟ್‌ಗಳು ನ್ಯಾಯಾಂಗ ನಿಂದನೆಗಳೆ ಅಥವಾ ಕೇವಲ ನ್ಯಾಯಾಂಗ ವ್ಯವಸ್ಥೆಯನ್ನು ವಿಮರ್ಶೆಗೆ ಒಡ್ಡಿದ ನ್ಯಾಯೋಚಿತ ಟೀಕೆಗಳೆ ಎಂಬ ತೀರ್ಮಾನಕ್ಕೆ ಬರುವಾಗ, ಭೂಷಣ್ ಅವರು ಸಲ್ಲಿಸಿದ 134 ಪುಟಗಳ ಪ್ರಮಾಣೀಕೃತ ಪ್ರತಿಕ್ರಿಯೆನ್ನು ಪರಿಗಣಿಸಿಯೇ ಇಲ್ಲ.

ವಾಕ್ ಸ್ವಾತಂತ್ಯ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರಗಳ ಮೇಲೆ ನಿರ್ಬಂಧ ಹೇರುತ್ತಿರುವ ಈ ಭಯಾನಕ ತೀರ್ಪು, ಭಾರತದಲ್ಲಿ ಚಾಲ್ತಿಯಲ್ಲಿರುವ ನ್ಯಾಯಾಂಗ ನಿಂದನೆ ಕಾನೂನಿನ ಇತಿಹಾಸಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಈ ಪರಿಕಲ್ಪನೆಯು ಇಂಗ್ಲೆಂಡ್‌ನ ನ್ಯಾಯಾಂಗ ನಿಂದನೆ ಕಾಯ್ದೆಯ ಗಾಢ ಪ್ರಭಾವಕ್ಕೆ ಒಳಗಾಗಿರುವಂತದ್ದು.

ಹನ್ನೆರಡನೇ ಶತಮಾನದ ಇಂಗ್ಲೆಂಡ್‌ನಲ್ಲಿ, ವಿವಾದಗಳನ್ನು ಬಗೆಹರಿಸುವ ಸರ್ವೋಚ್ಚ ಅಧಿಕಾರ ಇದ್ದದ್ದು ರಾಜನ ಬಳಿ.(1) ತನ್ನಿಂದ ಎಲ್ಲಾ ವಿವಾದಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದಾದಾಗ, ಆತನೇ ನ್ಯಾಯಾಲಯಗಳನ್ನು ರಚಿಸಿ, ಅವುಗಳಿಗೆ ತನಗಿದ್ದ ಪರಮಾಧಿಕಾರವನ್ನು ನೀಡಿದ. ಆ ಕಾಲದಲ್ಲಿ ರಾಜನಿಗಿದ್ದ ಅಧಿಕಾರವನ್ನು ಪ್ರಶ್ನಿಸುವುದು, ಅವನಿಂದ ರಚಿಸಲ್ಪಟ್ಟ ನ್ಯಾಯಾಲಯಗಳನ್ನಾಗಲಿ ತೇಜೋವಧೆ ಮಾಡುವುದು ನ್ಯಾಯಾಂಗ ನಿಂದನೆ ಎನಿಸಿಕೊಳ್ಳುತ್ತಿತ್ತು.

ಇದನ್ನೂ ಓದಿ: ಸುಪ್ರೀಂಕೋರ್ಟಿನಲ್ಲಿ ಪ್ರಶಾಂತ್ ಭೂಷಣ್ ಅವರ ಐತಿಹಾಸಿಕ ಹೇಳಿಕೆಯ ಪೂರ್ಣಪಾಠ

ಆಧುನಿಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲು ಕಾನೂನುಗಳಡಿಯೇ ಅವಕಾಶವಿದೆ.(2) ಕಾನೂನಿನ ಒಂದು ನಿರ್ಣಾಯಕ ಸಂಗತಿಯೆಂದರೆ, ನ್ಯಾಯಾಂಗ ವ್ಯವಸ್ಥೆಯ ಸ್ವತಂತ್ರತೆ. ಈ ಸ್ವತಂತ್ರತೆಯನ್ನು ಖಾತ್ರಿಪಡಿಸುವ ಸಲುವಾಗಿಯೇ, ತನ್ನ ಸ್ವಯಂ ಘನತೆಯನ್ನು ತಾನೇ ಎತ್ತಿಹಿಡಿಯುವ ಹಾಗೂ ತನ್ನ ಆದೇಶಗಳ ಅನುಷ್ಠಾನಕ್ಕೆ ವಿಧೇಯರನ್ನಾಗಿಸುವ ಅಧಿಕಾರ ನ್ಯಾಯಾಲಯಗಳಿಗೆ ಇರಲೇಬೇಕು.

ಭಾರತ ಸಂವಿಧಾನದ 129 ನೇ ಪರಿಚ್ಛೇಧ ಮತ್ತು ನ್ಯಾಯಾಂಗ ನಿಂದನೆ ಕಾಯ್ದೆ 1971, ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚತೆ ಮತ್ತು ಜನರಲ್ಲಿ ನ್ಯಾಯಾಂದೆಡೆಗಿನ ನಂಬಿಕೆಯನ್ನು ಸಂರಕ್ಷಿಸುವ ಮೂಲೋದ್ದೇಶವನ್ನು ಹೊಂದಿವೆ. ವಿಪರ್ಯಾಸವೇನೆಂದರೆ, ಭಾರತದ ನ್ಯಾಯಾಂಗ ನಿಂದನೆ ಕಾನೂನಿಗೆ ಯಾವ ಇಂಗ್ಲೆಂಡ್‌ನ ಕಾಯ್ದೆ ಅಡಿಪಾಯವಾಗಿತ್ತೊ, ಆ ಕಾಯ್ದೆಯನ್ನು ಇಂಗ್ಲೆಂಡ್ 2013 ರಲ್ಲಿ ಕಾರ್ಯಸಾಧುವಲ್ಲದ ಪುರಾತನ ಕಟ್ಟಳೆ ಎಂದು ಪರಿಗಣಿಸಿ ರದ್ದು ಮಾಡಿದೆ. ಆದಾಗ್ಯೂ, ಈ ಕಾಯ್ದೆ ಭಾರತದಲ್ಲಿ ಮಾತ್ರ ಯಾಕೆ ವ್ಯಾಪಕವಾಗಿ ಬಳಕೆಯಲ್ಲಿದೆ ಅನ್ನೋದು ದೀರ್ಘಕಾಲಿಕ ಪ್ರಶ್ನೆಯಾಗಿಯೇ ಉಳಿದಿದೆ.

ಭಾರತ ಮಾತ್ರ ನ್ಯಾಯಾಂಗದ ತೇಜೋವಧೆಯನ್ನು `ಕ್ರಿಮಿನಲ್ ನಿಂದನೆ’ ಎಂತಲೇ ಮುಂದುವರೆಸಿದೆೆ. ಯಾವ್ಯಾವ ಟೀಕೆ/ಕ್ರಿಯೆ ಮತ್ತು ಯಾವ ಮಟ್ಟದ ಟೀಕೆಯು `ನ್ಯಾಯಾಂಗ ಅಧಿಕಾರದ ತೇಜೋವಧೆ’ಯಾಗಿ ಪರಿಗಣಿಸಲಾಗುತ್ತದೆ ಎಂದು ನಿರ್ಧರಿಸಲು ನಿರ್ದಿಷ್ಟ ಮಾನದಂಡಗಳೇ ಇಲ್ಲ. ಈ ಮಾನದಂಡಗಳ ಅನುಪಸ್ಥಿತಿಯಿಂದಾಗಿ ಅಗತ್ಯಕ್ಕೆ ತಕ್ಕಂತೆ ನ್ಯಾಯಾಂಗ ನಿಂದನೆಯನ್ನು ವ್ಯಾಖ್ಯಾನಿಸಿಕೊಳ್ಳುವ ಮುಕ್ತ ಅವಕಾಶ ನ್ಯಾಯಾಲಯಗಳ ಮುಂದಿದೆ. ಈ ಮುಕ್ತ ಅವಕಾಶವೇ, ತನಗೆ ಸಂಬಂಧಿಸಿದ ಟೀಕೆಗಳನ್ನೂ ನ್ಯಾಯಾಂಗ ನಿಂದನೆ ಎಂದು ಪರಿಗಣಿಸುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡಿದೆ.

ನ್ಯಾಯ ವ್ಯವಸ್ಥೆಯ ಕುರಿತಂತ ಎಲ್ಲಾ ಪ್ರಮಾಣಿಕ ಅಭಿಪ್ರಾಯಗಳಿಗೆ ಪರಿಚ್ಛೇಧ 19 (1)(ಎ) ಅಡಿಯಲ್ಲಿ `ನ್ಯಾಯೋಚಿತ ಟೀಕೆಗಳು‘ ಎಂದು ಸಂರಕ್ಷಣೆ ಒದಗಿಸಲಾಗಿದೆ. (3) ಅಲ್ಲದೇ, ಎಲ್ಲಿಯವರೆಗೆ ಅಂತಹ ಟೀಕೆಗಳು ನ್ಯಾಯಾಡಳಿತವನ್ನು ಅಪಾಯದ ಅಂಚಿಗೆ ತಳ್ಳುವುದಿಲ್ಲವೋ ಅಥವಾ ನ್ಯಾಯ ವ್ಯವಸ್ಥೆಯ ಘನತೆಗೆ ಅಗೌರವ ತರುವುದಿಲ್ಲವೋ ಅಲ್ಲಿಯವರೆಗೆ ಅವು ನ್ಯಾಯಾಂಗ ನಿಂದನೆ ಎನಿಸಿಕೊಳ್ಳುವುದಿಲ್ಲ.

ಇದನ್ನೂ ಓದಿ: ಅಟಾರ್ನಿ ಜನರಲ್ ಹೆಸರನ್ನೇ ಕೈಬಿಟ್ಟ ಸುಪ್ರೀಂಕೋರ್ಟ್: ಭಿನ್ನ ಅಭಿಪ್ರಾಯಕ್ಕೆ ಕತ್ತರಿಯೇ?

ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳು ಈ ಎರಡರಲ್ಲಿ ಯಾವುದನ್ನೂ ಮಾಡಿಲ್ಲ. ಸುಪ್ರೀಂ ಕೋರ್ಟಿನ ಘನತೆಗೆ ಇಷ್ಟು ಸುಲಭದಲ್ಲಿ ಅಗೌರವ ತರುವುದಾಗಲಿ ಅಥವಾ ಜನ ಅದರಲ್ಲಿಟ್ಟಿರುವ ವಿಶ್ವಾಸವನ್ನು ಇಷ್ಟು ಸಲೀಸಾಗಿ ಛಿದ್ರಗೊಳಿಸುವುದಾಗಲಿ ಸಾಧ್ಯವಾಗುವುದಿದ್ದರೆ, ನ್ಯಾಯಾಲಯ ಎಷ್ಟು ಶಕ್ತಿಶಾಲಿ ಇರಬೇಕಿತ್ತೊ ಅಷ್ಟಿಲ್ಲ ಎನಿಸಿಬಿಡುತ್ತದೆ.

ಸರ್ವೋಚ್ಛ ನ್ಯಾಯಾಲಯ ಎಡವಿತೇ?

ಟ್ವೀಟ್‌ಗಳನ್ನು ಆಧಾರವಾಗಿಟ್ಟುಕೊಂಡು, `ಸ್ವಯಂ ಪ್ರೇರಿತ’ ವಿಚಾರಣೆ ಕೈಗೆತ್ತಿಕೊಂಡ ಗೌರವಾನ್ವಿತ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಜುಲೈ 22 ರಂದು ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಂಗ ನಿಂದನೆಯ ನೋಟೀಸು ನೀಡಿತು. ಒಂದೇ ಉಸಿರಿನಲ್ಲಿ, ಸುಪ್ರೀಂ ಕೋರ್ಟ್ ಈ ಟ್ವೀಟ್‌ಗಳು ಮೇಲ್ನೋಟಕ್ಕೇ ನಿಂದನಾತ್ಮಕವಾಗಿವೆ ಎಂಬ ತೀರ್ಮಾನಕ್ಕೆ ಬಂತು.

ಉಭಯ ಟ್ವೀಟ್‌ಗಳು ನಿಂದನಾತ್ಮಕವಾಗಿವೆಯೇ ಎಂದು ತೀರ್ಮಾನಿಸಲು ನ್ಯಾಯಾಲಯ ಪರಿಗಣಿಸಿದ ಅಂಶಗಳೆಂದರೆ, ಆಜುಬಾಜಿನ ಸಂದರ್ಭಗಳು, ಟ್ವೀಟ್‌ನ ನಿಂದನಾ ಧೋರಣೆ, ನಿಂದಿಸಿದ ವ್ಯಕ್ತಿಯ ವ್ಯಕ್ತಿತ್ವ ಮತ್ತು ಟ್ವೀಟ್‌ಗಳ ಪ್ರಕಟಣೆಯ ವ್ಯಾಪ್ತಿ.

PC: Bar and Bench.

ವಾಸ್ತವದಲ್ಲಿ, ಒಂದು ಕ್ರಿಯೆ ನ್ಯಾಯಾಂಗ ನಿಂದನೆಯೇ ಎಂದು ನಿರ್ಧರಿಸುವಾಗ ಪರಿಗಣಿಸಬೇಕಾದ ಪ್ರಾಥಮಿಕ ಸಂಗತಿಗಳೆಂದರೆ, “ನ್ಯಾಯಾಧೀಶರ ವ್ಯಕ್ತಿತ್ವ ಅಥವಾ ನಡತೆಯ ಮೇಲಿನ ಅಪಚಾರವು ನ್ಯಾಯೋಚಿತ ಮತ್ತು ಸಮಂಜಸ ಟೀಕೆಯ ವ್ಯಾಪ್ತಿಯಲ್ಲಿದೆಯೇ, ಮತ್ತು ಇದು ಕೇವಲ ನ್ಯಾಯಾಧೀಶರ ಮಾನಹಾನಿಯೇ, ಅಥವಾ ನಿಜಕ್ಕೂ ನ್ಯಾಯಾಂಗ ನಿಂದನೆಯೇ ಎಂಬುದನ್ನು.

ಒಂದೊಮ್ಮೆ ಅದು ಕೇವಲ ನ್ಯಾಯಾಧೀಶರ ಮೇಲಿನ ಆವೇಶದ ದಾಳಿಯಷ್ಟೇ ಆಗಿದ್ದರೆ ಮತ್ತು ಸದರಿ ನ್ಯಾಯಾಲಯದ ನ್ಯಾಯ ಪ್ರಕ್ರಿಯೆ ಅಥವಾ ನ್ಯಾಯಾಡಳಿತ ವ್ಯವಸ್ಥೆಗೆ ಯಾವುದೇ ಅಡ್ಡಿ ಉಂಟುಮಾಡುವಂತದ್ದು ಆಗಿಲ್ಲದೇ ಇದ್ದರೆ, ಅಂತದ್ದನ್ನು ನ್ಯಾಯಾಂಗ ನಿಂದನೆಯೆಂದು ಪರಿಗಣಿಸಿ ಮುಂದುವರೆಯಲು ಬರುವುದಿಲ್ಲ” ಎಂಬುದನ್ನು ಬ್ರಹ್ಮಪ್ರಕಾಶ್ ಪ್ರಕರಣದಲ್ಲಿ ಸ್ಪಷ್ಟಪಡಿಸಲಾಗಿದೆ. (4)

ಪ್ರಶಾಂತ್‌ ಭೂಷಣ್ ಅವರ ಎರಡೂ ಟ್ವೀಟ್‌ಗಳು ನ್ಯಾಯಾಧೀಶರುಗಳ ಮೇಲಿನ ಆವೇಶಭರಿತ ವಾಕ್‌ದಾಳಿಯ ಪ್ರಕರಣಗಳೆಂದು ವಾದಿಸಬಹುದೇ ವಿನಾಃ ನ್ಯಾಯಾಂಗ ಪ್ರಕ್ರಿಯೆಗೆ ಯಾವ ಬಗೆಯ ಅಡ್ಡಿಯನ್ನೂ ತಂದೊಡ್ಡುವುದಿಲ್ಲ. ನ್ಯಾಯಾಡಳಿತ ಪ್ರಕ್ರಿಯೆಗೆ ಯಾವುದೇ ಅಡ್ಡಿ ಉಂಟುಮಾಡುವಂತಿಲ್ಲ ಎಂಬ ಈ ಕಾರಣವನ್ನಿಟ್ಟುಕೊಂಡೇ ಕಾನೂನು ಮಂತ್ರಿ ಪಿ.ಎನ್.ದುವಾ ಮೇಲೆ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಆರೋಪವನ್ನು ಕೈಬಿಟ್ಟಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. (5)

ಆ ಪ್ರಕರಣದ ತೀರ್ಪು ನೀಡುವಾಗ, ನ್ಯಾಯಾಲಯದ ಮೆಟ್ಟಿಲೇರುವ ದೂರುಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ, ಸಂಬಂಧಪಟ್ಟವರಿಗೆ ವೇಗವಾಗಿ ನ್ಯಾಯ ದೊರಕಿಸಿಕೊಡಲಾಗದ ತನ್ನ ಅಸರ್ಥತೆಯನ್ನು ನ್ಯಾಯಾಲಯ ಒಪ್ಪಿಕೊಂಡು, ಆತ್ಮವಿಮರ್ಶೆ ಮಾಡಿಕೊಂಡಿತ್ತು. ನ್ಯಾಯಾಲಗಳ ಈ ಉದಾರತೆ ಮತ್ತು ವೈಶಾಲ್ಯತೆಯ ಪರಂಪರೆಯಿಂದ ವಿಮುಖಗೊಂಡ ನ್ಯಾಯಾಲಯವು ಈ ತೀರ್ಪಿನ ಕೇಂದ್ರಬಿಂದುವಾದ ಟೀಕೆಯ ಮೂಲಧಾತುವಿನ ಬಗ್ಗೆಯೆ ದಿವ್ಯ ನಿರ್ಲಕ್ಷ್ಯ ತೋರಿದೆ.

ಇದನ್ನೂ ಓದಿ: ನಮ್ಮ ದೇಶದ ಶೇ.1 ರಷ್ಟು ಜನರಿಗೂ ನ್ಯಾಯ ಸಿಗುತ್ತಿಲ್ಲ : ಪ್ರಶಾಂತ್‌ ಭೂಷಣ್

ಭೂಷಣ್ ಅವರ ಟ್ವೀಟ್‌ಗಳು ನ್ಯಾಯಾಂಗ ಪ್ರಕ್ರಿಯೆಗೆ ಯಾವ ಗಮನಾರ್ಹ ಅಡ್ಡಿಯನ್ನೂ ಉಂಟುಮಾಡುತ್ತಿಲ್ಲವಾದ್ದರಿಂದ, ನಿಂದನೆ ಕಾರಣಕ್ಕೆ ಶಿಕ್ಷೆ ನೀಡಲು ಬರುವುದೇ ಇಲ್ಲ. (6) 2000 ನೇ ಇಸವಿಯಲ್ಲಿ, “ತಾಂತ್ರಿಕವಾಗಿ ನ್ಯಾಯಾಂಗದ ನಿಂದನೆಗಳಿದ್ದರೆ ಮಾತ್ರ ಸಾಲದು, ಬದಲಿಗೆ ನ್ಯಾಯ ಪ್ರಕ್ರಿಯೆಯಲ್ಲಿ ಅಥವಾ ಮುಂದುವರೆದು `ನ್ಯಾಯಾಡಳಿತ’ದಲ್ಲಿ ಅಡ್ಡಿಯುಂಟುಮಾಡುವಂತಿದ್ದರೆ ಮಾತ್ರ ಅಂತಹ ಕ್ರಿಯೆಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬಹುದು” ಎಂದು ಒತ್ತಿ ಹೇಳಲಾಗಿದೆ. (7)

ಮೊದಲನೇ ಟ್ವೀಟ್, ನ್ಯಾಯಾಧೀಶರುಗಳ ಕ್ರಿಯೆಗಳಿಗೆ ಮಾತ್ರ ಸಂಬಂಧಪಟ್ಟದ್ದು. ನ್ಯಾಯಾಂಗ ನಿಂದನೆಯನ್ನು ನಿರ್ಧರಿಸುವಾಗ `ನ್ಯಾಯಾಧೀಶರು’ ಮತ್ತು `ನ್ಯಾಯವ್ಯವಸ್ಥೆ’ ಪದಗಳನ್ನು ಪರ್ಯಾಯವೆಂದು ಪರಿಗಣಿಸಲಾಗದು. ಅವೆರಡೂ ಪ್ರತ್ಯೇಕ. “…… ಪ್ರಧಾನ ಪದವೆಂದರೆ `ನ್ಯಾಯವ್ಯವಸ್ಥೆ’ಯೇ ಹೊರತು, ‘ನ್ಯಾಯಾಧೀಶ’ ಅಲ್ಲ; ಮೂಲ ಆಶಯವೆಂದರೆ, `ಸಾರ್ವಜನಿಕ ನ್ಯಾಯ ವ್ಯವಸ್ಥೆಗೆ ಅಡ್ಡಿಯೇ ವಿನಾಃ `ನ್ಯಾಯಾಧೀಶರ ಸ್ವಯಂ ರಕ್ಷಣೆ’ ಅಲ್ಲ; ನ್ಯಾಯಾಂಗ ನಿಂದನೆ ಕಾನೂನಿನ ಅಡಿಗಲ್ಲುಗಳೆಂದರೆ, ಸಾಂವಿಧಾನಿಕ ಮೌಲ್ಯಗಳಾದ ಮುಕ್ತ ವಾಕ್ ಸ್ವಾತಂತ್ಯ್ರ ಮತ್ತು ಸ್ವತಂತ್ರವಾಗಿ ನ್ಯಾಯ ಪಡೆಯುವ ಹಕ್ಕುಗಳಿಗೂ ಅವಕಾಶ ಕಲ್ಪಿಸುವುದು. ನಿರ್ಭೀತ ನ್ಯಾಯಾಂಗ ಕ್ರಿಯೆಗೆ ದುರುದ್ದೇಶಿತ ಮತ್ತು ಗಮನಾರ್ಹ ಅಡ್ಡಿ ಮಾಡುವ ಪ್ರಯತ್ನಗಳು ನ್ಯಾಯಾಂಗ ನಿಂದನೆ ಎನಿಸಿಕೊಳ್ಳುತ್ತವೆಯೇ ಹೊರತು ನ್ಯಾಯಪ್ರಕ್ರಿಯೆ ಮತ್ತು ನ್ಯಾಯಾಂಗ ಸಿಬ್ಬಂದಿಗಳ ಕುರಿತು ಮಾಡುವ ನ್ಯಾಯೋಚಿತ ಟೀಕೆ ಅಥವಾ ಕ್ಷುಲ್ಲಕ ಅಪಚಾರಗಳಲ್ಲ” ಎಂದು ಸ್ಪಷ್ಟವಾಗಿ ವ್ಯತ್ಯಾಸವನ್ನು ಉಲ್ಲೇಖಿಸಲಾಗಿದೆ. (8)

NEET and JEE Main 2020: Supreme Court rejects plea seeking postponement of exams
Courtesy: India TV News

134 ಪುಟಗಳ ಅಫಿಡವಿಟ್ ಪರಿಗಣಿಸದಿರುವುದು, ಎರಡನೇ ಟ್ವೀಟ್‌ನಲ್ಲಿರುವ ಸತ್ಯಾಸತ್ಯತೆಯನ್ನು ಮೌಲ್ಯಮಾಪನ ಮಾಡುವಲ್ಲಿ ನ್ಯಾಯಾಲಯ ಸೋತಿರುವ ಅಂಶವನ್ನು ಬೊಟ್ಟು ಮಾಡಿ ತೋರುತ್ತದೆ. ಅದೇ ಅಫಿಡವಿಟ್‌ನಲ್ಲಿ, ಎರಡನೇ ಟ್ವೀಟ್‌ನಲ್ಲಿ ವಿವರಿಸಲಾಗಿದ್ದು, ಹಿಂದಿನ ನಾಲ್ವರು ಮುಖ್ಯನ್ಯಾಯಮೂರ್ತಿಗಳ ವಾಸ್ತವಿಕ ಪ್ರಮಾದಗಳನ್ನು ಕೂಡ ನೀಡಿದ್ದಾರೆ. ಟೀಕೆಗಳ ಮಹಾಪೂರವೇ ಹರಿದುಬಂದಿದ್ದ ಆ ತೀರ್ಪುಗಳಿಗೆ ಸಂಬಂಧಿಸಿದಂತೆ, ಭೂಷಣ್ ಅವರ ಆ ವಿಮರ್ಶೆಯು ಅತ್ಯಗತ್ಯವಾದುದೇ ಆಗಿದೆ.

ಈ ಎಲ್ಲಾ ಕಾರಣಗಳಿಗೆ ಗೌರವಾನ್ವಿತ ಸುಪ್ರೀಂ ಕೋರ್ಟ್ ತಪ್ಪೆಸಗಿರುವುದು ಸ್ಪಷ್ಟವಾಗಿದೆ.

ನ್ಯಾಯಾಂಗ ನಿಂದನೆ ಮಾಡಿದವರ ವ್ಯಕ್ತಿತ್ವ (ಅಸ್ಮಿತೆ) ನಗಣ್ಯವಾದುದೇ?

ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳಲ್ಲಿರುವ ನಿಂದನೆ ಆರೋಪ ನಿರಾಧಾರದ ಬಗ್ಗೆ ನಿರ್ಧರಿಸುವಾಗ ನ್ಯಾಯಾಲಯವು ಅವರ 30 ವರ್ಷಗಳ ಅನುಭವ ಮತ್ತು ಕಾನೂನು ಕ್ಷೇತ್ರದಲ್ಲಿನ ಅವರ ಜ್ಞಾನಕ್ಕೆ ಒತ್ತುಕೊಟ್ಟಿದೆ. ಸಮಾಜದ ಒಂದು ವರ್ಗದ ಸಹಜ ಗ್ರಹಿಕೆಯಾಗಿರುವ ವಿಷಯದ ಕುರಿತು ತಾವು ವ್ಯಕ್ತಪಡಿಸಿದ ಅಭಿಪ್ರಾಯದ ವಿಚಾರದಲ್ಲಿ ಅವರ ವ್ಯಕ್ತಿತ್ವಕ್ಕೆ ಅಥವಾ ಅಸ್ಮಿತೆಗೆ ಒತ್ತು ಕೊಟ್ಟಿರುವ ಸಂಗತಿಯು ಒಂದು ಪ್ರಶ್ನೆಯನ್ನು ಮುನ್ನೆಲೆಗೆ ತರುತ್ತಿದೆ, ಏನೆಂದರೆ, ಹಾಗಾದರೆ ಭೂಷಣ್ ಅವರ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಸಮ್ಮತಿಸಿದ, ಶೇರ್ ಮಾಡಿದ ಎಲ್ಲರ ಮೇಲೂ ನ್ಯಾಯಾಲಯ ನ್ಯಾಯಾಂಗ ನಿಂದನೆಯ ಆರೋಪ ಹೊರಿಸುತ್ತದೆಯೇ?

ಇದನ್ನೂ ಓದಿ: ವಾಕ್‌ ಸ್ವಾತಂತ್ರ್ಯದ ಉಲ್ಲಂಘನೆ: ನ್ಯಾಯಾಂಗ ನಿಂದನೆ ಕಾಯ್ದೆ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರ ಪ್ರಕರಣದ ವಿಚಾರಣೆ ನಡೆಸುತ್ತಾ ನಿವೃತ್ತ ಗೌರವಾನ್ವಿತ ನ್ಯಾಯಮೂರ್ತಿ ಖೇಹರ್ ಅವರು ಉಲ್ಲೇಖಿಸಿದ ಒಂದು ಸಂಗತಿ ಇಲ್ಲಿ ನಮ್ಮೆಲ್ಲರ ಗಮನ ಸೆಳೆಯುತ್ತದೆ.

“ನಮ್ಮ ಹೆಗಲೇರಿರುವ ಈ ಹೊಣೆ ಅಷ್ಟೇನೂ ಹಿತವಾದುದಲ್ಲ. ಉಚ್ಚ ನ್ಯಾಯಾಲಯವೊಂದರ ನ್ಯಾಯಮೂರ್ತಿಯೊಬ್ಬರ ನಡಾವಳಿಗೆ ಸಂಬಂಧಿಸಿದುದು. ಯಾವತ್ತೂ ಹೀಗಾಗಬಾರದು. ಆದಾಗ್ಯೂ, ನ್ಯಾಯ ವಿತರಣೆ ಪ್ರಕ್ರಿಯೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವ ಅಥವಾ ಗುರುತು ಸ್ಪಷ್ಟವಾಗಿ ನಗಣ್ಯವಾದುದು. ಈ ಘನ ನ್ಯಾಯಾಲಯವು, ಯಾವುದೇ ಭೀತಿ ಅಥವಾ ಒಲವು, ವಾತ್ಸಲ್ಯ ಅಥವಾ ಕೆಟ್ಟ ಭಾವನೆಗಳಿಗೆ ಒಳಗಾಗದೆ ತನ್ನ ತೀರ್ಪನ್ನು ದಾಖಲಿಸಬೇಕಿದೆ.” (9)

ಸಮರ್ಥ ವಕೀಲರೊಬ್ಬರ ಮೇಲೆ, ಅವರ ಗುರುತು ಅಥವಾ ವ್ಯಕ್ತಿತ್ವವನ್ನು ಆಧರಿಸಿ ನಡೆಸಿರುವ ಈ ದಾಳಿಯು, ನ್ಯಾಯಾಂಗವನ್ನು ವಿಮರ್ಶೆಗೆ ಒಳಪಡಿಸುವ ವಕೀಲರಲ್ಲಿ ಭಯ ಮೂಡಿಸುವ ಸಲುವಾಗಿ, ಮುಕ್ತ ವಾಕ್ ಸ್ವಾತಂತ್ಯ್ರದ ಮೇಲೆ ನಡೆಸಿರುವ ನೇರ ದಾಳಿಯಾಗಿದೆ.

ಮಾನವಿ ಅತ್ರಿ ಮತ್ತು ಆಮ್ನ ಖಾನ್ (ಯುವ ವಕೀಲರುಗಳು)


ಉಲ್ಲೇಖಗಳು:

[1] Ronald Goldfarb, The History of the Contempt Power, 1961 WASH. U. L. Q. 1 (1961), Available at: https://openscholarship.wustl.edu/law_lawreview/vol1961/iss1/6, pg 7-8.

[2] In Re Arundhati Roy, AIR 2002 SC 1375.

[3] P.N. Dua vs. P. Shiv Shanker and Ors., AIR1988SC1208 – “29. Bearing in mind the trend in the law of contempt as noticed before, as well as some of the decisions noticed by Krishna Iyer, J. in S. Mulgaokar’s case (supra) the speech of the Minister read in its proper perspective, did not bring the administration of justice into disrepute or impair administration of justice. In some portions of the speech the language used could have been avoided by the Minister having the background of being a former Judge of the High Court. The Minister perhaps could have achieved his purpose by making his language mild but his facts deadly. With these observations, it must be held that there was no imminent danger of interference with the administration of justice, nor of bringing an institution into disrepute. In that view it must be held that the Minister was not guilty of contempt of this Court.”

[4] Brahama Prakash Sharma v. U.P., 1953 SCR 1169.

[5] P.N. Dua vs. P. Shiv Shanker and Ors., AIR 1988 SC 1208

[6] Sec 13 (a) “No court shall impose a sentence under this Act for a contempt of court unless it is satisfied that the contempt is of such a nature that it substantially interferes, or tends substantially to interfere with the due course of justice.”

[7] Murray & Co. v. Ashok Kr. Newatia, AIR 2000 SC 833.

[8] Shri Baradakanta Mishra v. The Registrar of Orissa High Court &Anr., AIR 1974 SC 710.

[9] In Re: Hon’ble Justice C.S. Karnan, AIR 2017 SC 3191.


ಓದಿ: ಕ್ಷಮೆಯಾಚಿಸುವುದಿಲ್ಲ, ಖುಷಿಯಿಂದ ಶಿಕ್ಷೆ ಸ್ವೀಕರಿಸುತ್ತೇನೆ: ಪ್ರಶಾಂತ್ ಭೂಷಣ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...