Homeಮುಖಪುಟನಮ್ಮ ದೇಶದ ಶೇ.1 ರಷ್ಟು ಜನರಿಗೂ ನ್ಯಾಯ ಸಿಗುತ್ತಿಲ್ಲ : ಪ್ರಶಾಂತ್‌ ಭೂಷಣ್

ನಮ್ಮ ದೇಶದ ಶೇ.1 ರಷ್ಟು ಜನರಿಗೂ ನ್ಯಾಯ ಸಿಗುತ್ತಿಲ್ಲ : ಪ್ರಶಾಂತ್‌ ಭೂಷಣ್

ವಲಸೆ ಕಾರ್ಮಿಕರ ವಿಚಾರದಲ್ಲಿ ಸುಮಾರು 19 ಹೈಕೋರ್ಟುಗಳು ಬಡಜನರ ಪರವಾದ ಒಳ್ಳೆಯ ತೀರ್ಪುಗಳನ್ನು ನೀಡಿದವು. ಹಲವು ನ್ಯಾಯಾಧೀಶರು, ವಕೀಲರು, ಸಾರ್ವಜನಿಕರು ತೀವ್ರ ಒತ್ತಡ ಹೇರಿದರು. ಅದಾದ ಮೇಲೆ ಇದೀಗ ಕೊನೆಗೂ ಸುಪ್ರೀಂ ಕೋರ್ಟು ಎಚ್ಚೆತ್ತಿತು.

- Advertisement -
- Advertisement -

ಲಾಕ್‌ಡೌನ್‌ ನಂತರ ಭಾರತದ ಕಾರ್ಮಿಕರ ಕರಾಳ ಪರಿಸ್ಥಿತಿಗಳು ಹೊರಬರುತ್ತಿವೆ. ಸರ್ಕಾರಗಳಿರಲಿ ನ್ಯಾಯಾಲಯಗಳು ಸಹ ಅವರ ಪಾಲಿಗೆ ಶತ್ರುಗಳಾಗಿ ಬದಲಾಗಿವೆ. ಇಂತಹ ಸಂದರ್ಭದಲ್ಲಿ “ಭಾರತದ ನ್ಯಾಯಾಂಗ: ನ್ಯಾಯವೇ ಕಣ್ಮರೆಯಾಗುತ್ತಿದೆಯೇಕೆ?” ಎಂಬ ವಿಷಯದ ಕುರಿತು ಗೌರಿ ಮೀಡಿಯಾ ಟ್ರಸ್ಟ್‌ ಇಂದು ವೆಬಿನಾರ್ ಆಯೋಜಿಸಿತ್ತು. ಅದರಲ್ಲಿ ಸುಪ್ರೀಂಕೋರ್ಟಿನ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಮಾತನಾಡಿದ್ದು ಅವರ ಭಾಷಣದ ಕನ್ನಡಾನುವಾದ ಇಲ್ಲಿದೆ.

ಆತ್ಮೀಯರೇ,

ಇಂದು ನಾವು ನ್ಯಾಯಾಂಗದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿದರೆ, ವಿವಾದಗಳನ್ನು ಶೀಘ್ರವಾಗಿ ವಿಚಾರಣೆ ಮಾಡಲಾಗುತ್ತಿದೆಯೇ, ನ್ಯಾಯೋಚಿತವಾಗಿ ನಿರ್ಧರಿಸಲಾಗುತ್ತಿದೆಯೇ ಎಂದು ಗಮನಿಸಿದರೆ ನಿರಾಶಾದಾಯಕ ಚಿತ್ರಣ ಕಾಣುತ್ತದೆ. ದೇಶದ ಎಷ್ಟು ಶೇಕಡಾ ಜನರು ನ್ಯಾಯಾಂಗದಿಂದ ನ್ಯಾಯ ಪಡೆದುಕೊಳ್ಳುತ್ತಿದ್ದಾರೆ ಎಂದು ನೋಡಿದರೆ ಅದು ಶೇ.1 ಕ್ಕಿಂತ ಕಡಿಮೆ ಎಂದೇ ಹೇಳಬೇಕು. ದೊಡ್ಡ ಸಂಖ್ಯೆಯ ದೇಶವಾಸಿಗಳು ನ್ಯಾಯಾಂಗವನ್ನು ತಲುಪಲೂ ಆಗುತ್ತಿಲ್ಲ. ಅವರು ವಕೀಲರ ಫೀಸ್ ಕಟ್ಟಲಾರರು. ಪೊಲೀಸರು ಈ ದೇಶದ ಬಡ ನಾಗರೀಕರ ಮೇಲೆ ತಪ್ಪು ಆರೋಪ ಹೊರಿಸಿದರೆ ಆ ಬಡಪಾಯಿಗಳು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲಾರರು. ಅವರು ತಮ್ಮ ಹಕ್ಕಿಗಾಗಿ ಹೋರಾಡಲಾರರು. ಹೆಚ್ಚೆಂದರೆ ಪೊಲೀಸರನ್ನು ತಮ್ಮ ಮೇಲೆ ಕರುಣೆ ಇಡುವಂತೆ ಬೇಡಬಲ್ಲರು ಅಷ್ಟೆ. ದೊಡ್ಡ ಸಂಖ್ಯೆಯ ಪ್ರಕರಣಗಳು ಭಾರೀ ಸುದೀರ್ಘ ಪ್ರಕ್ರಿಯೆಯಲ್ಲಿ ನಡೆಯುತ್ತಲೇ ಇರುತ್ತವೆ. ಪದೇ ಪದೇ ಹೊಸ ದಿನಾಂಕ ಕೊಡಲಾಗುತ್ತದೆ. ಕೊನೆಗೊಮ್ಮೆ ಆ ಪ್ರಕರಣ ತೀರ್ಪಿನ ಹಂತಕ್ಕೆ ಬಂದರೂ, ಅದು ನ್ಯಾಯವನ್ನೇ ಕೊಡುತ್ತದೆಂದು ಹೇಳಲಾಗದು. ನ್ಯಾಯಾಂಗವು ಭಾರತದಲ್ಲಿ ಅತ್ಯಂತ ಭ್ರಷ್ಟಗೊಂಡ ಸಂಸ್ಥೆಗಳಲ್ಲಿ ಒಂದಾಗಿದೆ.

ಹೈಕೋರ್ಟುಗಳು ಅಥವಾ ಸುಪ್ರೀಂ ಕೋರ್ಟು ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆಯಾಗದಂತೆ ಕಾಪಾಡಬೇಕಾಗುತ್ತದೆ. ಪ್ರಭುತ್ವ ಸೇರಿದಂತೆ ಬೇರೆ ಯಾರಿಂದಲೂ ಅವುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು.

ಕಪಿಲ್ ಮಿಶ್ರಾನಂತಹ ವ್ಯಕ್ತಿಗಳು ಇತರ ಸಮುದಾಯದವರನ್ನು ಹೋಗಿ ಕೊಲ್ಲುವಂತೆ ಜನರನ್ನು ಪ್ರಚೋದಿಸಿದರೂ ಪೊಲೀಸರು ಕೇಸ್ ಹಾಕುತ್ತಿಲ್ಲ. ಆಗ ದೆಹಲಿಯ ನ್ಯಾಯಾಧೀಶರಾಗಿದ್ದ ಮುರಳೀಧರ್ ಅಂತಹವರು ಪೊಲೀಸರನ್ನು ಯಾಕೆ ನೀವು ಎಫ್‍ಐಆರ್ ಹಾಕುತ್ತಿಲ್ಲ ಎಂದು ಛೀಮಾರಿ ಹಾಕಿದರು, ನಂತರ ಪೊಲೀಸರು ಕೇಸು ಹಾಕಿದರು. ಇದು ನ್ಯಾಯಾಧೀಶರ ಹೊಣೆ. ದುರದೃಷ್ಟವಶಾತ್ ನಂತರ ಅವರು ವರ್ಗಾವಣೆಯಾದರು. ದೆಹಲಿ ಗಲಭೆ ಪ್ರಕರಣದಲ್ಲಿ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಜಾಮೀನು ಸಿಕ್ಕ ತಕ್ಷಣ ಅವರನ್ನು ಮರುಬಂಧಿಸುವಂತಹ ಕೆಲಸ ಮಾಡುತ್ತಿರುವಾಗ, ಅವರನ್ನು ನಿಯಂತ್ರಿಸುವುದು ನ್ಯಾಯಾಂಗದ ಕೆಲಸ.

ಎಷ್ಟರ ಮಟ್ಟಿಗೆ ನ್ಯಾಯಾಂಗ ಈ ಜವಾಬ್ದಾರಿ ನಿರ್ವಹಿಸಿದೆ?

ಕಳೆದ ಕೆಲವು ವರ್ಷಗಳಲ್ಲಿ, ಅದರಲ್ಲೂ ವಿಶೇಷವಾಗಿ ಈ ಕೆಲವು ತಿಂಗಳುಗಳಲ್ಲಿ ಸುಪ್ರೀಂ ಕೋರ್ಟು ವಿಶೇಷವಾಗಿ ತನ್ನ ಪ್ರಜೆಗಳನ್ನು ಕೈಬಿಟ್ಟಿದೆ. ನಾವು ಕಾಶ್ಮೀರದ ಪ್ರಕರಣದಿಂದ ಈ ಚರ್ಚೆ ಆರಂಭಿಸಬಹುದು. ಕಾಶ್ಮೀರದ ವಿಶೇಷಾಧಿಕಾರವನ್ನು ತೆಗೆದುಹಾಕಿ ಅಲ್ಲಿ ಮಾನವ ಹಕ್ಕುಗಳ ಅತ್ಯಂತ ಗಂಭೀರವಾದ ಉಲ್ಲಂಘನೆಯಾಗುತ್ತಿರುವಾಗ, ಅತ್ಯಂತ ದೀರ್ಘವಾದ ಮತ್ತು ಭೀಕರವಾದ ಲಾಕ್ ಡೌನ್ ಅಲ್ಲಿ ಜಾರಿಯಲ್ಲಿರುವಾಗ – ಕಾಶ್ಮೀರಕ್ಕೆ ಇತರ ರಾಜ್ಯಗಳಿಗಿಂತ ಹೆಚ್ಚು ಸ್ವಾಯತ್ತತೆ ಇರಬೇಕೆಂಬುದು ಕಾಶ್ಮೀರ ಭಾರತವನ್ನು ಸೇರುವಾಗಿನ ಆಶಯ ಮತ್ತು ಷರತ್ತು ಆಗಿದ್ದಾಗ – ಇಂದು ಅದನ್ನು ಒಂದು ಕೇಂದ್ರಾಡಳಿತ ಪ್ರದೇಶವಾಗಿಸಿ ಬೇರೆ ರಾಜ್ಯಗಳಿಗಿರುವಷ್ಟೂ ಸ್ವಾತಂತ್ರ್ಯ ಕೊಡದಿದ್ದರೆ ಅದನ್ನು ಸುಪ್ರೀಂ ಕೋರ್ಟ್ ಕೇಳುವುದು ಬೇಡವೇ? ಈ ಕುರಿತು ದಾಖಲಾದ ಪಿಟಿಷನ್ ಅನ್ನು ಸುದೀರ್ಘ 9 ತಿಂಗಳ ಕಾಲ ಸುಪ್ರೀಂ ಕೋರ್ಟು ಕೈಗೆತ್ತಿಕೊಳ್ಳಲಿಲ್ಲ. ಅಲ್ಲಿ ಕನಿಷ್ಟ ಇಂಟರ್‌ನೆಟ್ ಸೇವೆಗಳನ್ನು ಪುನರಾರಂಭಿಸುವಂತೆ ಕೇಂದ್ರಕ್ಕೆ ಆದೇಶಿಸಲು ಕೋರ್ಟಿಗೆ ಇಷ್ಟು ಕಾಲ ಹಿಡಿಯಿತು.

ನಂತರ ಇರುವುದು ಪೌರತ್ವ ತಿದ್ದುಪಡಿ ಕಾಯಿದೆಯ ವಿವಾದ. ಇದರೊಂದಿಗೆ ರಾಷ್ಟ್ರೀಯ ಜನಸಂಖ್ಯ ನೋಂದಣಿ ಮತ್ತು ರಾಷ್ಟ್ರೀಯ ಪೌರತ್ವ ರೆಜಿಸ್ಟರ್ ಜೊತೆಗಿನ ವಿರೋಧ. ಈ ಬಗ್ಗೆ ದೇಶಾದ್ಯಂತ ದೊಡ್ಡ ಹೋರಾಟಗಳಾದವು ಮತ್ತು ಇವುಗಳಲ್ಲಿ ಎಲ್ಲವೂ ಶಾಂತಿಯುತವಾಗಿದ್ದವು. ಬಹಳಷ್ಟು ಕಾಲದ ನಂತರ ಈ ಹೋರಾಟವನ್ನು ದಿಕ್ಕುತಪ್ಪಿಸಲೆಂದೇ ದೆಹಲಿ ಗಲಭೆಯನ್ನು ಹುಟ್ಟುಹಾಕಿ ಕಪಿಲ್ ಮಿಶ್ರಾನಂತಹವರು ‘ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ’ ಎಂದು ನೇರವಾಗಿ ಕರೆ ನೀಡಿದರೂ, ಅದನ್ನು ನ್ಯಾಯಾಂಗ ಪರಿಗಣಿಸಲಿಲ್ಲ. ಅದು ಪ್ರತಿಭಟನಕಾರರು ಮತ್ತು ಮುಸ್ಲಿಮರ ವಿರುದ್ಧ ಚಿತಾವಣೆ ನೀಡುವ ಹೇಳಿಕೆ ಮತ್ತು ಆ ಅಲ್ಪಸಂಖ್ಯಾತರ ಮೇಲೆ ಹಲ್ಲೆಯಾಗಲು ಕಾರಣವಾಗುತ್ತದೆ ಎಂಬ ಅಂಶ ನ್ಯಾಯಾಂಗಕ್ಕೆ ಗಂಭೀರ ಎನಿಸಲಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿ ತಿದ್ದುಪಡಿ ಕಾಯ್ದೆಗೆ ಕುರಿತಾದ ಪಿಟಿಷನ್ ಕೇಳಲು ಸರ್ವೋಚ್ಛ ನ್ಯಾಯಾಲಯಕ್ಕೆ ಸಮಯ ಇರಲಿಲ್ಲ. ಜಾಮಿಯಾದ ಕ್ಯಾಂಪಸ್ಸಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಭೀಕರವಾಗಿ ಥಳಿಸಿ ಸಿಸಿಟಿವಿ ಕ್ಯಾಮರಾಗಳನ್ನು ಒಡೆದು ಹಾಕಿ ಗೂಂಡಾಗಿರಿ ಮಾಡಿದಾಗಲೂ ನ್ಯಾಯಾಲಯ ಅದನ್ನು ಕೇಳಲಿಲ್ಲ. ಹಿಂಸೆ ನಿಂತ ಮೇಲೆ ಇದನ್ನೆಲ್ಲ ಕೇಳಬಹುದು ಎಂದರು. ಹಿಂಸೆ ಮಾಡುತ್ತಿದ್ದವರು ಯಾರು? ಥಳಿತಕ್ಕೊಳಗಾದವರ ಮಾತನ್ನು ಕೋರ್ಟು ಕೇಳಲಿಲ್ಲ.

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ

ಹಾಗೆಯೇ ಜೆಎನ್‌ಯು ಒಳಗೆ ಗೂಂಡಾಗಳು ನುಗ್ಗಿ ಹೊಡೆದಾಗಲೂ ಇದೇ ನಡೆಯಿತು. ಯಾರು ಹೊಡೆತ ತಿಂದಿದ್ದರೋ ಅವರ ಮೇಲೆಯೇ ರಾಜದ್ರೋಹದ ಆರೋಪ ಹೊರೆಸಲಾಯಿತು. ಸುಪ್ರೀಂ ಕೊರ್ಟಿನ 1989ರ ತೀರ್ಪು ಸ್ಪಷ್ಟವಾಗಿ ಹೇಳುತ್ತದೆ, ಯಾರಾದರೂ ಕರೆಕೊಟ್ಟು ಅದು ಭಾರೀ ಗಲಭೆ ಕಾರಣವಾದಾಗ ಮತ್ತು ದೇಶದ ವಿರುದ್ಧ ಅವರು ಕೆಲಸ ಮಾಡಿದ್ದಾಗ ಮಾತ್ರ ರಾಜದ್ರೋಹ ಕೇಸು ಹಾಕಬಹುದು ಎಂದು. ಆದರೂ ಕೇವಲ ಪ್ರಧಾನ ಮಂತ್ರಿಯ ವಿರುದ್ಧ ಮಾತಾಡಿದರು ಎಂಬ ಕಾರಣಕ್ಕೆ ಹೋರಾಟಗಾರರನ್ನು, ವಿದ್ಯಾರ್ಥಿಗಳನ್ನು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸುವುದು ಮತ್ತು ಗಲಭೆಗೆ ಕಾರಣರಾದವರು ವಿಡಿಯೋಗಳಲ್ಲಿ ಕಂಡರೂ ಅವರನ್ನು ಬಂಧಿಸದಿರುವುದು – ಇಂತಹ ಸಂದರ್ಭಗಳಲ್ಲಿ ಸಂಪೂರ್ಣ ನಿಷ್ಕ್ರಿಯತೆ ಕೋರ್ಟುಗಳ ಕಡೆಯುಂದ ಅದರಲ್ಲೂ ಅತ್ಯುನ್ನತ ಕೋರ್ಟಿನಿಂದ ಕಂಡುಬರುತ್ತದೆ – ಇದರಿಂದಾಗಿ ಜನರು ಇಂದು ನ್ಯಾಯಕ್ಕಾಗಿ ಕೋರ್ಟಿನ ಬಾಗಿಲು ತಟ್ಟುವುದನ್ನೂ ನಿಲ್ಲಿಸುತ್ತಿದ್ದಾರೆ.

ಭಾರತ ಲಾಕ್‌ಡೌನ್‌

ನಂತರ ಲಾಕ್‍ಡೌನ್ ಬಂತು. ಕೇವಲ 4 ಗಂಟೆಗಳ ಸಿದ್ಧತೆಯೊಂದಿಗೆ ಲಾಕ್‍ಡೌನ್ ಘೋಷಣೆ ಮಾಡಿದ್ದು ಹೇಗಿದೆ? ಮಾರ್ಚ್ ಮೊದಲ ವಾರದಲ್ಲೇ ಕೋವಿಡ್ ಪ್ರಕರಣಗಳು ಕಂಡರೂ ಅದರ ಬಗ್ಗೆ ಏನೂ ಮಾಡದೆ, 24ರ ರಾತ್ರಿ 8ಕ್ಕೆ ದೇಶದ ಮುಂದೆ ಬಂದು 12ಕ್ಕೆ ಸಂಪೂರ್ಣ ಲಾಕ್ ಡೌನ್ ಆರಂಭಿಸುವುದೆಂದರೆ ದೇಶದ ಅಸಂಖ್ಯಾತ ಬಡಜನರು ಏನು ಮಾಡುತ್ತಾರೇ? ಅಷ್ಟು ದಿನಗಳಿಗಾಗುವಷ್ಟು ಆಹಾರ ಹಣ ಯಾರಲ್ಲಿರುತ್ತದೆ? ಸಾಮಾಜಿಕ ಅಂತರದ ಹೆಸರಿನಲ್ಲಿ ಅಸಹ್ಯಕರವಾದ ಕೆಲಸಗಳನ್ನು ಸರ್ಕಾರ ಮಾಡಿತು. ಅತಿ ಸಣ್ಣ ಪ್ರದೇಶವುಳ್ಳ ಅನಾರೋಗ್ಯಕರ ತಾತ್ಕಾಲಿಕ ಕೇಂದ್ರಗಳಲ್ಲಿ ದೊಡ್ಡ ಸಂಖ್ಯೆಯ ಜನರನ್ನು ತುಂಬಲಾಯಿತು.

ಈ ಬಗ್ಗೆ ನಾವು ಸುಪ್ರೀಂ ಕೋರ್ಟಿಗೆ ಹೋದೆವು. ದೇಶದ ಅತ್ಯಂತ ಜವಾಬ್ದಾರಿಯುತ ಜನರಲ್ಲಿ ಕೆಲವರಾದ ಹರ್ಷ ಮಂದರ್, ಅರುಣಾ ರಾಯ್ ಮೊದಲಾದವರು ಕೋರ್ಟಿನ ಮುಂದೆ ಹೋಗಿ ಜನರ ಕೈಗೆ ಕನಿಷ್ಟ ಹಣ, ತಿನ್ನಲು ಆಹಾರ ನೀಡಿ ಎಂದು ಕೇಳಿದರೆ ಸುಪ್ರಿಂ ಕೋರ್ಟ್ ಏನೂ ಮಾಡಲು ಸಿದ್ಧವಿರಲಿಲ್ಲ. ಅದು ಕೇವಲ ಸರ್ಕಾರ ಹೇಳಿದ್ದನ್ನು ನಂಬುವ ಆಯ್ಕೆ ಮಾಡಿಕೊಂಡಿತು. ಸರ್ಕಾರದ ಸಾಲಿಸಿಟರ್ ಜನರಲ್, ನಾವು ಕಾರ್ಮಿಕರಿಗೆ ಮತ್ತು ಬಡವರಿಗೆ ಎಲ್ಲ ಕೊಟ್ಟಿದ್ದೇವೆ ಎಂದರೆ ಸರ್ಕಾರವನ್ನು ಒಪ್ಪುವುದಷ್ಟನ್ನೇ ಕೋರ್ಟ್ ಮಾಡಿದ್ದು. ಆದರೆ ದೇಶದ ಅನೇಕ ಹೈಕೋರ್ಟುಗಳು ಇದಕ್ಕಿಂತ ಉತ್ತಮ ಕಾರ್ಯ ನಿರ್ವಹಿಸಿದರು. ಇಂದಿನ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಹೇಳಿರುವಂತೆ ಸುಮಾರು 19 ಹೈಕೋರ್ಟುಗಳು ಬಡಜನರ ಪರವಾದ ಒಳ್ಳೆಯ ತೀರ್ಪುಗಳನ್ನು ನೀಡಿದವು. ಅದಾದ ಮೇಲೆ ಇದೀಗ ಕೊನೆಗೂ ಸುಪ್ರೀಂ ಕೋರ್ಟು ಎಚ್ಚೆತ್ತಿತು. ಈಗ ಕೆಲವು ಆದೇಶಗಳನ್ನು ಸರ್ಕಾರಕ್ಕೆ ನೀಡಿತು. ಅದು ಸುಮ್ಮನೆ ಆಗಲಿಲ್ಲ. ಅನೇಕ ಉನ್ನತ ಹುದ್ದೆಗಳಲ್ಲಿದ್ದ ನಾಗರೀಕರು, ನಿವೃತ್ತ ನ್ಯಾಯಾಧೀಶರುಗಳು, ಹಿರಿಯ ವಕೀಲರು ಬರಹಗಳನ್ನು ಬರೆದರು. ಸಂದರ್ಶನಗಳನ್ನು ನೀಡಿ ಸುಪ್ರಿಂ ಕೋರ್ಟ್ ಅನ್ನು ಟೀಕಿಸಿದರು. ಅದು ತನ್ನ ಹೊಣೆಗಾರಿಕೆಯನ್ನು ಮರೆತು ಬಡವರನ್ನು ದೇವರ ಕೈಯ್ಯಲ್ಲಿ ಹಾಕಿ ಕಣ್ಣು ಮುಚ್ಚಿ ಕೂತಿದೆ ಎಂದು ವಿಮರ್ಶೆಗಳು ಎಲ್ಲೆಡೆಯಿಂದ ಬರಲಾರಂಭಿಸಿದವು. ಆ ನಂತರ ಹಾಗೂ ಬಡಜನರ ಮತ್ತು ವಲಸೆ ಕಾರ್ಮಿಕರ ದಯನೀಯ ಪರಿಸ್ಥಿತಿಯ ಬಗ್ಗೆ, ರೈಲುಗಳಲ್ಲಿ ರಸ್ತೆಗಳಲ್ಲಿ ಅವರ ದುರಂತ ಸಾವುಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ವ್ಯಾಪಕವಾಗಿ ಬಂದ ನಂತರ ಇದು ಸಾಧ್ಯವಾಯಿತು.

ಇದು ಒಂದು ಸರ್ವಾಧಿಕಾರಿ ಅಥವಾ ಈಗಿನ ಸಂದರ್ಭದಲ್ಲಿ ಕಾಣುವಂತೆ ಪ್ಯಾಸಿಸ್ಟ್ ಸರ್ಕಾರಗಳ ಮುಂದೆ ನ್ಯಾಯಾಲಯಗಳು ತೋರುವ ವರ್ತನೆಯಾಗಿದೆ. ಕೆಲವು ಹೈಕೋರ್ಟುಗಳೂ ಹೀಗೇ ನಡೆದುಕೊಳ್ಳುತ್ತಿದೆ. ಸ್ವತಂತ್ರ ನ್ಯಾಯಸಂಸ್ಥೆಗಳ ನೇಮಕದ ವಿಚಾರದಲ್ಲೂ ಕೊಲಿಜಿಯಂಗಳ ಸಂದರ್ಭದಲ್ಲೂ ನ್ಯಾಯಾಲಯಗಳು ತೀರ್ಪುಗಳನ್ನು ಕುರ್ಚಿಯ ಕೆಳಗೆ ಹಾಕಿಕೊಂಡು, ಸ್ವತಂತ್ರವಾಗಿ ಯಾವ ನೇಮಕಗಳನ್ನೂ ಮಾಡದಿರುವುದನ್ನು ನೋಡುತ್ತಿದ್ದೇವೆ.

2018ರಲ್ಲಿ ನಾಲ್ವರು ಹಿರಿಯ ನ್ಯಾಯಾಧೀಶರು ಪತ್ರಿಕಾಗೋಷ್ಠಿ ಮಾಡಿದರು. ಆಗಿನ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರು ಸರ್ವಾಧಿಕಾರಿಯಂತೆ ಬಹಳ ಮುಖ್ಯವಾದ ಪ್ರಕರಣಗಳನ್ನು ತಮಗೆ ಬೇಕಾದ ಬೆಂಚ್‍ಗಳಿಗೆ ಬರುವಂತೆ ಮಾಡುತ್ತಾ ಪ್ರಜಾತಂತ್ರವನ್ನು ಸಂಪೂರ್ಣ ಗಾಳಿಗೆ ತೂರುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು. ಆ ಸಂದರ್ಭದಲ್ಲಿ ಅರುಣಾಚಲದ ಮುಖ್ಯಮಂತ್ರಿಯ ಆತ್ಮಹತ್ಯೆ ಪ್ರಕರಣ ನಡೆಯಿತು. ಅವರ ಕೊನೆಯ ಪತ್ರದಲ್ಲಿ ಇಬ್ಬರು ನ್ಯಾಯಾಧೀಶರು ಮತ್ತು ಲೆಫ್ಟಿನೆಂಟ್ ಜನರಲ್ ನಡೆಸಿದ ಅಕ್ರಮದ ವಿರುದ್ಧ ಬರೆಯಲಾಗಿತ್ತು. ಆ ವಿಚಾರದಲ್ಲಿ ತಾನೇ ತಾನಾಗಿ ಮುಂದುವರೆದು ಕ್ರಮ ತಗೊಳ್ಳಬೇಕಿದ್ದ ಸುಪ್ರೀಂ ಕೋರ್ಟ್ ಸುಮ್ಮನಿತ್ತು. ಇಂತಹ ಗಂಭೀರವಾದ ಪರಿಸ್ಥಿತಿ ಇದ್ದಾಗಲೂ ಸುಪ್ರೀಂ ಕೋರ್ಟ್ ಕಣ್ಣುಮುಚ್ಚಿ ಕೂತಿದೆ ಎಂದು ಈ ನಾಲ್ವರು ಆರೋಪಿಸಿದರು.

ಇವೆಲ್ಲಾ ಸಮಸ್ಯೆಗಳು ಅಂದರೆ ಇದಕ್ಕೆ ಪರಿಹಾರವೇನು ಎಂಬದೂ ಮುಖ್ಯವಾಗುತ್ತದೆ. ಹಳ್ಳಿಗಳ ಮಟ್ಟದಲ್ಲಿ ನ್ಯಾಯದಾನ ವ್ಯವಸ್ಥೆಯನ್ನು ಜಾರಿಮಾಡುವ ಕಾಯ್ದೆ ಕೂಡ ಇನ್ನೂ ನೆನೆಗುದಿಗೆ ಬಿದ್ದಿದೆ. ಕೋರ್ಟುಗಳನ್ನು ವಿಕೇಂದ್ರೀಕರಿಸುವ ಈ ಕಾಯ್ದೆಯಿಂದ ಒಂದಷ್ಟು ಸುಧಾರಣೆಗಳಾಗಬಹುದಿತ್ತು. ನ್ಯಾಯಾಧೀಶರ ನೇಮಕದಲ್ಲಿ ಮತ್ತು ನಂತರ ಅವರ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು. ಈ ವಿಚಾರದಲ್ಲಿ ಸರ್ಕಾರಕ್ಕೆ ಕೈಯಾಡಿಸುವ ಅವಕಾಶ ಇರಬಾರದು. ಇದಕ್ಕಾಗಿ ಒಂದು ಸ್ವತಂತ್ರ ಸಂಸ್ಥೆಯನ್ನು ರೂಪಿಸಬೇಕು

ತಪ್ಪು ಮಾಡಿದ ನ್ಯಾಯಾಧೀಶರಿಗೆ ಛೀಮಾರಿ ಹಾಕುವ ವ್ಯವಸ್ಥೆ ಇಲ್ಲವಾದರೆ ಅವರು ಎಲ್ಲರಿಗಿಂತ ಸರ್ವಾಧಿಕಾರಿಗಳಾಗಬಹದು. ಕೋರ್ಟ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಮಾಡಿ ಅದನ್ನು ಸಾರ್ವಜನಿಕರಿಗೆ ಮುಕ್ತವಾಗಿಡಬೇಕು. ಈ ಸಲಹೆ ನನಗೆ ಅದ್ಭುತವೆನಿಸಿತು. ಯಾಕೆ ಕೋರ್ಟ್ ಪ್ರಕ್ರಿಯೆ ಪಾರದರ್ಶಕವಾಗಿರಬಾರದು? ಯಾಕೆ ಸಾರ್ವಜನಿಕರು ಅದನ್ನು ನೋಡಬಾರದು?

ಹಾಗೆಯೇ ಲಾಕ್‍ಡೌನ್ ಸಮಯದಲ್ಲಿ ತಂತ್ರಜ್ಞಾನದ ಉಪಯೋಗದೊಂದಿಗೆ ನ್ಯಾಯಾಲಯ ಏಕೆ ಕೆಲಸ ಮಾಡಬಾರದೆಂಬುದು ನನಗೆ ಅರ್ಥವಾಗಲಿಲ್ಲ. ಇಬ್ಬರು ವಕೀಲರನ್ನು ಮಾತ್ರ ಒಳಗೆ ಬಿಟ್ಟು ಯಾಕೆ ನ್ಯಾಯಾಲಯ ಏಕೆ ಕೆಲಸ ಮಾಡಬಾರದು?

ಇದೆಲ್ಲ ಸಾಧ್ಯವಾಗುವುದು ನ್ಯಾಯಾಂಗದ ಮೇಲೆ ಸಾರ್ವಜಿಕರಿಂದ ಒತ್ತಡ ಬಿದ್ದಾಗಲೇ……!

ಕೆಲವು ಪ್ರಶ್ನೋತ್ತರಗಳು

ಪ್ರಶ್ನೆ: ಹೈಕೋರ್ಟುಗಳು ಹೆಚ್ಚು ಜನಪರ ಕೆಲಸ ಮಾಡುತ್ತಾ ಇರುವಾಗ ಸುಪ್ರೀಂ ಕೋರ್ಟು ವಿರುದ್ಧ ದಿಕ್ಕಿನಲ್ಲಿ ಇರುವುದೇಕೆ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ಎಲ್ಲಾ ಹೈಕೋರ್ಟ್‌ಗಳನ್ನು ಒಟ್ಟಿಗೆ ತೆಗೆದುಕೊಂಡರೆ ಹೆಚ್ಚಿನ ಸಂಖ್ಯೆಯ ನ್ಯಾಯಾಧೀಶರಿರುತ್ತಾರೆ. ಒಟ್ಟು 700 ಮಂದಿ ದೇಶಾದ್ಯಂತ ಇದ್ದಾರೆ. ಅವರಲ್ಲಿ ಒಳ್ಳೆಯ ನ್ಯಾಯಾಧೀಶರು ಇರುವ ಸಾಧ್ಯತೆ ಹೆಚ್ಚು, ಅವರು ಒಳ್ಳೆಯ ತೀರ್ಪುಗಳನ್ನು ಕೊಟ್ಟಿರುತ್ತಾರೆ. ಅವರು ಹೆಚ್ಚು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಾರೆ.

ಪ್ರಶ್ನೆ: ಸಿಎಎ, ಕಾಶ್ಮೀರ ಸ್ಥಿತಿ, ಲಾಕ್ ಡೌನ್ ಬಗ್ಗೆ, ಪಿಎಂ ಕೇರ್ಸ್ ಅಪಾರದರ್ಶಕತೆ ಇವೆಲ್ಲಾ ನೋಡಿದ ಮೇಲೆ ಸಾಂವಿಧಾನಿಕ ಸರ್ವಾಧಿಕಾರ ಇದೆ ಎಂದೆನಿಸುವುದಿಲ್ಲವೇ?

ಉತ್ತರ: ಈ ಬಗ್ಗೆ ಸುಭಾಷ್ ಪಲ್ಶೀಕರ್ ಅವರು ಒಂದು ಲೇಖನ ಬರೆದಿದ್ದಾರೆ. ಪಿಎಂ ಕೇರ್ಸ್ ಬಗ್ಗೆ ಅಪಾರ ಪ್ರಶ್ನೆಗಳೆದ್ದಿವೆ. ಅದಕ್ಕೆ ಯಾವುದೇ ಉತ್ತರದಾಯಿತ್ವ ಇಲ್ಲ ಎಂಬುದು.

ಹೋರಾಟಗಾರರ ಬಂಧನಗಳೂ ಕೂಡಾ, ಅವರಿಗೆ ಈ ಸಂದರ್ಭದಲ್ಲಿ ಜಾಮೀನು ಸಿಗುವುದು ಕಷ್ಟವಾಗುತ್ತದೆ. ಆದ್ದರಿಂದ ಇದೇ ಸಮಯವನ್ನು ಆಯ್ದುಕೊಂಡು ಅವರನ್ನು ಬಂಧಿಸಲಾಗುತ್ತಿದೆ. ಆಗಲೇ ಹೇಳಿದಂತೆ, ಇಂತಹ ಕಟುಪ್ರಬಲ ಸರ್ಕಾರಗಳು ಇದ್ದಾಗ ತುರ್ತು ಪರಿಸ್ಥಿತಿಯಂತಹ ವಾತಾವರಣ ಇದ್ದಾಗ ಹೀಗಾಗುತ್ತದೆ.

ಪ್ರಶ್ನೆ: ಜಾಮಿಯಾ ವಿದ್ಯಾರ್ಥಿ ಸಂಘಗಳ ಮಹಿಳಾ ಪದಾಧಿಕಾರಿಗಳನ್ನೂ ಗರ್ಭಿಣಿಯನ್ನೂ ಸೇರಿಸಿ ಕೋವಿಡ್ ನಂತಹ ಸಂದರ್ಭದಲ್ಲಿಯೂ ಜೈಲಿಗೆ ಕಳಿಸಿರುವುದು ಭಾರತದ ನ್ಯಾಯಾಂಗದ ಗಂಭೀರ ಸೋಲಲ್ಲವೇ?

ಉತ್ತರ: ಹೌದು, ಜನರಿಗೆ ನ್ಯಾಯಾಂಗದ ಮೇಲೆ ಎಷ್ಟು ನಂಬಿಕೆ ಹೋಗಿದೆಯೆಂದರೆ ಇಂತಹ ವಿಚಾರಗಳನ್ನು ಈಗ ಯಾರೂ ಸುಪ್ರಿಂ ಕೋರ್ಟ್ ಮುಂದೆ ತರುತ್ತಲೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...