ಶಾಸಕರು ತಮ್ಮ ಅಸಮಾಧಾನವನ್ನು ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಬೇಕೇ ವಿನಃ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ.ಶಿವಕುಮಾರ ಶ್ರೀಗಳ ಗದ್ದುಗೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೇರವಾಗಿ ಮಾಧ್ಯಮಗಳ ಮುಂದೆ ಮಾತನಾಡುವ ಬದಲು ಮುಖ್ಯಮಂತ್ರಿಗಳ ಜೊತೆ ಕುಳಿತು ಮಾತನಾಡಿದರೆ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಶಾಸಕರು ಉಮೇಶ್ ಕತ್ತಿ ಅವರ ನಿವಾಸದಲ್ಲಿ ಭೋಜನಕೂಟದಲ್ಲಿ ಭಾಗವಹಿಸಿದ್ದಾರೆ. ಎಲ್ಲರೂ ಕೂಡಿ ಭೋಜನ ಮಾಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂಬುದನ್ನು ಉಮೇಶ್ ಕತ್ತಿ ಸೇರಿದಂತೆ ಎಲ್ಲ ಶಾಸಕರೂ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಶಾಸಕರ ಯಾವುದೇ ಸಮಸ್ಯೆಗಳಿದ್ದರೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಇಲ್ಲವೇ ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಲು ಅವಕಾಶವಿದೆ. ಅವು ಬಗೆಹರಿಯದ ಸಮಸ್ಯೆಗಳೇನಲ್ಲ ಎಂದರು.
ನಾಯಕತ್ವ ಬದಲಾವಣೆ ಬಗ್ಗೆ ಯಾರೂ ಹೇಳಿಕೆ ನೀಡಿಲ್ಲ. ಹಾಗಾಗಿ ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷದ ಮುಖಂಡರು ಮತ್ತು ಶಾಸಕರು ಈ ಬಗ್ಗೆ ಮಾತನಾಡಿಲ್ಲ ಆದರೂ ಸಮಸ್ಯೆಗಳನ್ನು ಪಕ್ಷದ ಆಂತರಿಕ ವೇದಿಕೆಯಲ್ಲೇ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು.
ಕೊರೊನಾ ವಿಷಯದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಾವಿನ ಪ್ರಮಾಣವೂ ಕಡಿಮೆ ಇದೆ. ಸೋಂಕಿತರ ಪ್ರಮಾಣವೂ ಕಡಿಮೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದು ಹೇಳಿಕೊಂಡರು.
ಮಠಕ್ಕೆ ಭೇಟಿ ನೀಡಿರುವುದರಲ್ಲಿ ಯಾವುದೇ ವಿಶೇಷ ಇಲ್ಲ. ತುಮಕೂರಿಗೆ ಭೇಟಿ ನೀಡಿದಾಗಲೆಲ್ಲ ಮಠಕ್ಕೂ ಬರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಓದಿ: ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ; ಬಿಎಸ್‌ವೈ ಸ್ಥಾನಕ್ಕೆ ’ಕತ್ತಿ’ಯಿಂದ ಕುತ್ತು?