ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಆಗರ ಕೆರೆಯ ಪಕ್ಕದ ಉದ್ಯಾನವನದಲ್ಲಿ ಇಬ್ಬರು ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದ ನಟಿ ಸಂಯುಕ್ತ ಹೆಗಡೆ ಅವರ ಜೊತೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಆರೋಪದಡಿ ಎಐಸಿಸಿ ಸದಸ್ಯೆ ಕವಿತಾ ರೆಡ್ಡಿ ಅವರನ್ನು ಬಂಧಿಸಿದ ಪೊಲೀಸರು ನಂತರ ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
ಘಟನೆ ಕಳೆದವಾರ ನಡೆದಿದ್ದು ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಸಂಯುಕ್ತ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಲೈವ್ ನಲ್ಲಿ ಹಂಚಿಕೊಂಡಿದ್ದರು. ಕವಿತಾ ರೆಡ್ಡಿ, ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಪ್ರಶ್ನಿಸಿದ್ದೇನೆ ಹಾಗೂ ಪೋಲಿಸರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ನಟಿ ಸಂಯುಕ್ತ ಹೆಗ್ಡೆ- ಕವಿತಾ ರೆಡ್ಡಿ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ
ಆದರೆ ನಂತರ ಸಂಯುಕ್ತಾ ಹೆಗಡೆ ಬಳಿ ನಡೆದಿರುವ ಘಟನೆಗೆ ಕ್ಷಮೆ ಕೇಳಿದ್ದ ಕವಿತಾ ರೆಡ್ಡಿ, “ನಾನು ಮೊದಲಿನಿಂದಲೂ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದರ ಭಾಗವಾಗಿಯೆ ನನ್ನ ಕ್ರಿಯೆಗಳು ರೂಪುಗೊಂಡಿದ್ದವು. ವಾಗ್ವಾದ ನನ್ನ ಉದ್ವೇಗಗೊಂಡ ವರ್ತನೆಯಿಂದ ಕೊನೆಯಾಯಿತು. ಇದು ನನ್ನ ಸಮಸ್ಯೆ. ಒಬ್ಬ ನಾಗರೀಕ ಪ್ರಜೆಯಾಗಿ ಮತ್ತು ಪ್ರಗತಿಪರ ಮಹಿಳೆಯಾಗಿ, ಸಂಯಕ್ತ ಹೆಗ್ಡೆ ಮತ್ತು ಅವರ ಗೆಳತಿಯರಲ್ಲಿ ನಾನು ಪ್ರಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಟ್ವಿಟ್ಟರ್ ವೀಡಿಯೋದಲ್ಲಿ ಹೇಳಿದ್ದರು.
ಇದನ್ನೂ ಓದಿ: ನಟಿ ಸಂಯುಕ್ತ ಹೆಗ್ಡೆ ಬಳಿ ಕ್ಷಮೆಯಾಚಿಸಿದ ಕವಿತಾ ರೆಡ್ಡಿ
‘ಗಲಾಟೆ ಸಂಬಂಧ ಸಂಯುಕ್ತ ಅವರು ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಾಗಿತ್ತು. ಇದೀಗ ಕವಿತಾ ರೆಡ್ಡಿ ಅವರನ್ನು ಬಂಧಿಸಲಾಗಿದೆ.’ ಎಂದು ಪೊಲೀಸರು ಹೇಳಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.
“ಶುಕ್ರವಾರ ಸಂಜೆ 5 ಗಂಟೆಯಲ್ಲಿ ಸ್ನೇಹಿತರ ಜತೆ ವ್ಯಾಯಾಮ ಮಾಡುತ್ತಿದ್ದರು. ಅಗರ ಕೆರೆ ಸಮಿತಿ ಸದಸ್ಯೆ ಕವಿತಾ ರೆಡ್ಡಿ, ಅನಿಲ್ ರೆಡ್ಡಿ ಹಾಗೂ ಇತರರು, ’ಸಾರ್ವಜನಿಕವಾಗಿ ತುಂಡು ಬಟ್ಟೆ ಧರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದೀರಿ’ ಎಂದು ಅವಾಚ್ಯವಾಗಿ ನಿಂದಿಸಿ, ಸಂಯುಕ್ತ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಸಂಗತಿ ಸಂಯುಕ್ತ ಅವರ ದೂರಿನಲ್ಲಿದೆ. ತಲೆಮರೆಸಿಕೊಂಡಿರುವ ಅನಿಲ್ ರೆಡ್ಡಿ ಮತ್ತು ಇತರರಿಗಾಗಿ ಹುಡುಕಾಟ ನಡೆದಿದೆ” ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿರೋಧವೊಡ್ಡದೆ ನನ್ನೊಳಗಿನ ಕವಿತೆ ಪೂರ್ಣವಾಗುವುದೇ ಇಲ್ಲ


