HomeUncategorizedನಟಿ ಸಂಯುಕ್ತ ಹೆಗ್ಡೆ- ಕವಿತಾ ರೆಡ್ಡಿ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ನಟಿ ಸಂಯುಕ್ತ ಹೆಗ್ಡೆ- ಕವಿತಾ ರೆಡ್ಡಿ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ತಮ್ಮ ಮೇಲಿನ ನೈತಿಕ ಪೊಲೀಸ್‌ಗಿರಿ ಆರೋಪಕ್ಕೆ ಉತ್ತರಿಸಿದ ಕವಿತಾ ರೆಡ್ಡಿ, "ಇಂತಾ ಹೇಳಿಕೆ ಸಂಪೂರ್ಣವಾಗಿ ಮೂರ್ಖತನವಾಗಿದ್ದು, ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಪ್ರಶ್ನಿಸಿದ್ದೇನೆ ಹಾಗೂ ಪೋಲಿಸರಿಗೆ ದೂರು ನೀಡಿದ್ದೇನೆ" ಎಂದು ಹೇಳಿದ್ದಾರೆ.

- Advertisement -
- Advertisement -

ಶುಕ್ರವಾರ ಸಂಜೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಆಗರ ಕೆರೆಯ ಪಕ್ಕದ ಉದ್ಯಾನವನದಲ್ಲಿ ಇಬ್ಬರು ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಮಾಡಿದ್ದಾಗಿ ಆರೋಪಿಸಿ ಎಐಸಿಸಿ ಸದಸ್ಯೆ ಕವಿತಾ ರೆಡ್ಡಿ ನೇತೃತ್ವದ ಜನರ ಗುಂಪು ತಮ್ಮ ಹಲ್ಲೆ ಮಾಡಿದ್ದಾರೆ ಎಂದು ನಟಿ ಸಂಯುಕ್ತ ಹೆಗ್ಡೆ ಆರೋಪಿಸಿದ್ದಾರೆ.

ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಸಂಯುಕ್ತ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಲೈವ್‌ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ನೆರೆದಿದ್ದ ಜನರು ಅವರು ಡ್ರಗ್ಸ್ ಸೇವಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲದೆ ವ್ಯಕ್ತಿಯೊಬ್ಬ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸುವುದಾಗಿ ಅವರನ್ನು ಬೆದರಿಸಿರುವುದು ಅವರ ಮತ್ತೊಂದು ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಡ್ರಗ್ಸ್ ಮಾಫಿಯಾ ಪ್ರಕರಣ: ನಟಿ ರಾಗಿಣಿ ದ್ವಿವೇದಿ ಬಂಧನ

ಕವಿತಾ ರೆಡ್ಡಿ ಕೂಡ ಪೊಲೀಸರನ್ನು ಸ್ಥಳಕ್ಕೆ ಕರೆದು ನಟಿ ಮತ್ತು ಅವರ ಸ್ನೇಹಿತರನ್ನು ಸಾರ್ವಜನಿಕವಾಗಿ  ಅಸಭ್ಯತೆಯಿಂದ ವರ್ತಿಸಿದ್ದಕ್ಕೆ ಕೇಸು ದಾಖಲಿಸಬೇಕು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇನ್ಸ್ಟ್ರಾಗ್ರಾಮ್ ಲೈವ್ ವಿಡಿಯೋದಲ್ಲಿ ಇದು ತುಂಬಾ ತಪ್ಪು ಎಂದು ಹೇಳಿರುವ ಸಂಯುಕ್ತ ಹೆಗ್ಡೆ, “ನಾವು ನಮ್ಮಷ್ಟಕ್ಕೆ ವ್ಯಾಯಾಮ ಮಾಡುತ್ತಿದ್ದೆವು, ಇಲ್ಲಿಗೆ ಬಂದ ಈ ಮಹಿಳೆ (ಕವಿತಾ ರೆಡ್ಡಿ) ಕ್ರೀಡಾ ಉಡುಪಿನ ಬಗ್ಗೆ ತಕರಾರು ತೆಗೆದು ನಾವು ಅಸಭ್ಯವಾಗಿ ವರ್ತಿಸುತ್ತಿದ್ದೇವೆ ಎಂದು ಹೇಳಲು ಪ್ರಾರಂಭಿಸಿದರು. ಪ್ರಸ್ತುತ ಚಿತ್ರರಂಗದಲ್ಲಿ ಡ್ರಗ್ಸ್‌ ಬಗ್ಗೆ ಚರ್ಚೆಯಾಗುತ್ತಿರುವ ಕಾರಣ ಈಗ ಇಲ್ಲಿನ ಜನರು ನಾವು ಡ್ರಗ್ಸ್‌ಗಳನ್ನು ಸೇವಿಸಿದ್ದೇವೆ ಎಂದು ಆರೋಪಿಸುತ್ತಿದ್ದಾರೆ” ಎಂದು ತಾವು ತೊಟ್ಟಿದ್ದು ಕೇವಲ ಕ್ರೀಡಾ ಉಡುಪು ಎಂದು ಸ್ಪಷ್ಟಪಡಿಸಿದರು.

ಘಟನೆ ನಡೆದಾಗ ಪಾರ್ಕ್‌ನಿಂದ ಹೊರ ಹೋಗಲು ಯತ್ನಿಸಿದಾಗಲು ಪಾರ್ಕ್ ಗೇಟ್‌ಗೆ ಬೀಗ ಹಾಕಿ ಅವರನ್ನು ಹೊರಹೋಗದಂತೆ ಅವರನ್ನು ತಡೆದಿದ್ದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.

ಅಷ್ಟೇ ಅಲ್ಲದೆ ಪೊಲೀಸರೊಂದಿಗೆ, ನೀವ್ಯಾಕೆ ಸತ್ಯದ ಪರ ನಿಲ್ಲುತ್ತಿಲ್ಲ ಎಂದು ನಟಿ ಕೇಳಿರುವ ಪ್ರಶ್ನೆಗೆ, ಪೊಲೀಸ್‌ ಅಧಿಕಾರಿಯೊಬ್ಬರು ”ಇದು ತಪ್ಪು ಒಪ್ಪಿನ ಪ್ರಶ್ನೆಯಲ್ಲ, ಇಲ್ಲಿ ಜನ ಸೇರುತ್ತಿದ್ದಾರೆ. ದಯವಿಟ್ಟು ಹೊರಡಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾನುಗೌರಿ ಬಯಲಿಗೆಳೆದ ಗೃಹಸಚಿವರ ವಿವಾದಾತ್ಮಕ ವೀಡಿಯೊ ಟ್ವೀಟ್‌ ಡಿಲಿಟ್‌ ಮಾಡಿದ ವಿಎಚ್‌ಪಿ ಮುಖಂಡ

ಅಷ್ಟೇ ಅಲ್ಲದೆ ತನ್ನ ಗೆಳತಿ ಮೇಲೆ ಕವಿತಾ ಹಲ್ಲೆ ನಡೆಸಲು ಹೋಗಿದ್ದಾರೆ ಎಂದು ನಟಿ ಆರೋಪಿಸಿದ್ದು, ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ವಿಡಿಯೋದಲ್ಲಿ ಕವಿತಾ ರೆಡ್ಡಿ ಯುವತಿಯನ್ನು ದೂಡುತ್ತಿರುವುದು ದಾಖಲಾಗಿದೆ.

ನಟಿ ಘಟನೆಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ನೋವು ತೋಡಿಕೊಂಡಿದ್ದಾರೆ.

ಇಡೀ ಘಟನೆಯಲ್ಲಿ ಕೆಲವು ಜನರು ನಟಿ ಸಂಯುಕ್ತ ಹೆಗ್ಡೆ ಪರವಾಗಿ ಮಾತನಾಡಿದ್ದು ಇನ್ಸ್ಟ್ರಾಗ್ರಾಮ್ ಲೈವ್‌ನಲ್ಲಿ ದಾಖಲಾಗಿದೆ. ತನ್ನನ್ನು ತಾನು ಡಾಕ್ಟರ್‌ ಎಂದು ಪರಿಚಯ ಮಾಡಿಕೊಂಡಿರುವ ಒಬ್ಬರು “ನಟಿ ಸಂಯುಕ್ತ ಹೆಗ್ಡೆ ಬಹಳ ದಿನದಿಂದ ಇಲ್ಲಿ ವ್ಯಾಯಾಮ ಮಾಡಲು ಬರುತ್ತಾರೆ. ಅವರು ಅಸಭ್ಯವಾಗಿ ನಡೆದುಕೊಂಡಿಲ್ಲ” ಎಂದು ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ‌ ಜೊತೆ ಮಾತನಾಡಿದ ಕವಿತಾ ರೆಡ್ಡಿ, “ಸಾರ್ವಜನಿಕ ಪಾರ್ಕ್‌ನಲ್ಲಿ ಯುವತಿಯರು ಸಂಗೀತ ಹಾಕಿ ನೃತ್ಯ ಮಾಡಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಜನರು ಕರೆ ಮಾಡಿ ಹೇಳಿದ್ದಕ್ಕೆ ನಾನು ಅಲ್ಲಿ ತಲುಪಿದ್ದೆ. ಅಲ್ಲಿ ತಲುಪಿ ಯುವತಿಯರೊಂದಿಗೆ ಸಂಗೀತ ಹಾಕಿ ನೃತ್ಯ ಮಾಡಲು ಯಾವ ಪಾರ್ಕಿನಲ್ಲೂ ಅವಕಾಶವಿಲ್ಲ. ನೀವು ಇಲ್ಲಿಂದ ಹೊರಡಿ ಎಂದು ವಿನಂತಿಸಿದ್ದೆ. ಆದರೆ ಯುವತಿಯರು ಅದಕ್ಕೂ ಒಪ್ಪದಿದ್ದಕ್ಕೆ  ಪೊಲೀಸರಿಗೆ ಸಂಪರ್ಕಿಸಿ ಅವರ ಪೋಟೋವನ್ನು ಕ್ಲಿಕ್ಕಿಸುವಾಗ ಅದರಲ್ಲಿರುವ ಯುವತಿಯೊಬ್ಬಳು ನನಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅದಕ್ಕಾಗಿ ನಾವು ಅವರನ್ನು ಪ್ರಶ್ನಿಸಲು ಮುಂದೆ ಹೋಗಿದ್ದೆ. ಯುವತಿಯು ಅದೇ ವಿಡಿಯೋವನ್ನು ಟ್ವಿಟ್ಟರ್‌ಗೆ ಹಾಕಿದ್ದಾರೆ” ಎಂದು ಹೇಳಿದ್ದಾರೆ.

ತಮ್ಮ ಮೇಲಿನ ನೈತಿಕ ಪೊಲೀಸ್‌ಗಿರಿ ಆರೋಪಕ್ಕೆ ಉತ್ತರಿಸಿದ ಕವಿತಾ ರೆಡ್ಡಿ, “ಇಂತಾ ಹೇಳಿಕೆ ಸಂಪೂರ್ಣವಾಗಿ ಮೂರ್ಖತನವಾಗಿದ್ದು, ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಪ್ರಶ್ನಿಸಿದ್ದೇನೆ ಹಾಗೂ ಪೋಲಿಸರಿಗೆ ದೂರು ನೀಡಿದ್ದೇನೆ” ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ನಟಿ ಸಂಯುಕ್ತ ಜೊತೆ ಕವಿತಾ ರೆಡ್ಡಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಹಲವರು ಕಿಡಿಕಾರಿದ್ದಾರೆ.

ನಟಿ ಸಂಯುಕ್ತ ಹೆಗಡೆ ಮೇಲೆ ಹಲ್ಲೆ ನಡೆಸಿದ, ವಸ್ತ್ರದ ಕಾರಣಕ್ಕೆ ಅವರ ಮೇಲೆ ದಾಳಿ ನಡೆಸಿದ ಅಷ್ಟೂ ಜನರ ಮೇಲೆ ಎಫ್ ಐಆರ್ ದಾಖಲಿಸಬೇಕು. ಕಾಂಗ್ರೆಸ್…

Posted by Naveen Soorinje on Saturday, September 5, 2020

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಗಾಯತ್ರಿ ಎಚ್.ಎನ್. ” ಪೋಸ್ಟ್ ಕಾರ್ಡ್ ವಿಕ್ರಮ್ ಹೆಗಡೆ ಕವಿತಾ ರೆಡ್ಡಿನ ಟ್ರೋಲ್ ಮಾಡ್ತಿದಾರೆ ಅನ್ನೋ ಕಾರಣಕ್ಕೆ, ಬಿಜೆಪಿಗಳು ಕಾಂಗ್ರೆಸ್ಸಿಗರನ್ನ ಕಿಚಾಯಿಸ್ತಿದಾರೆ ಅನ್ನೋ ಕಾರಣಕ್ಕೆ ಕವಿತಾ ರೆಡ್ಡಿ ಬಗ್ಗೆ ಸಾಫ್ಟ್ ಆಗಬೇಕಾದ, ಸಂಯುಕ್ತಾ ಬಗ್ಗೆ ರಾಂಗ್ ಆಗಬೇಕಾದ ಅಗತ್ಯ ಇಲ್ಲ.
ಇಂಥ ವಿಷಯಗಳಲ್ಲಿ ತಪ್ಪಾಗಿ ನಡೆದುಕೊಂಡ್ರೆ ನಮಗೆ ಮಾಳವಿಕಾನೂ ಒಂದೇ ಕವಿತಾನೂ ಒಂದೇ ಅನ್ನುವಷ್ಟು ಕ್ಲಾರಿಟಿ ನಮಗಿರಬೇಕು. ಕವಿತಾ ಬಟ್ಟೆ ಬಗ್ಗೆ ಡ್ರಗ್ ಬಗ್ಗೆ ಮಾತಾಡಿರೋದು ಯಾವ ರೀತಿಯಲ್ಲೂ ಸಮರ್ಥನೀಯ ಅಲ್ಲ. ಅವರ ಮುಖ ಉಳಿಸಲಿಕ್ಕೆ ಆಕೆಯ ಒಳ್ಳೆ ಕೆಲಸಗಳ ಪಟ್ಟಿ ಇಟ್ಟು ಸಂಯುಕ್ತಾರನ್ನು ಅಪರಾಧಿ ಮಾಡೋದು ತಪ್ಪು. ಕವಿತಾ ಅವರ ಸಾಮಾಜಿಕ ಚಟುವಟಿಕೆಗಳು ನಿಜ ಕಾಳಜಿಯಿಂದ ಮಾಡಿದ್ದಾಗಿದ್ದರೆ ಖಂಡಿತಾ ಗೌರವ ಇದೆ. ಅದು ಬೇರೆ. ಮತ್ತು ಇದು ಬೇರೆಯೇ. ಹಾಗೇ ನಾಳೆ ಸಂಯುಕ್ತ ಬಿಜೆಪಿ ಜಾಯಿನ್ ಆಗಿ ವೋಟ್ ಫಾರ್ ಮೋದಿ ಅನ್ನಬಹುದು. ಅದು ಆಕೆಯ ಹಣೆಬರಹ. ಅದು ಬೇರೆ ಮತ್ತು ಈಗಿನ ಘಟನೆ ಬೇರೆಯೇ. ಪ್ರತಿಯೊಂದನ್ನೂ ರಾಜಕೀಯವಾಗಿ ನೋಡುವ ಗೀಳು ನಾವು ಬಿಡದೆಹೋದರೆ ಉದ್ಧಾರ ಸಾಧ್ಯವಿಲ್ಲ. ಬಿಜೆಪಿಯವರು ಈ ಹೊತ್ತು ಸಂಯುಕ್ತಾನ ಸಪೋರ್ಟ್ ಮಾಡಿದರೆ, ನಗೆಪಾಟಲಿಗೆ ಈಡಾಗುತ್ತಾರೆ ಹೊರತು ಮತ್ತೇನಲ್ಲ. ಆ ತಲೆಬಿಸಿ ಬಿಟ್ಟು, ನಾಜೂಕು ಸೋಗಲಾಡಿತನ ತೋರದೆ, ವಿಷಯದ ಕುರಿತು ಸ್ಪಷ್ಟವಾಗಿರೋಣ” ಎಂದಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಮಾಧ್ಯಮಗಳ ವರ್ತನೆಯನ್ನು ಖಂಡಿಸಿ, “ಸುಡುಗಾಡು ನ್ಯೂಸ್ ಚಾನಲ್`ಗಳ ಹೆಡ್ಲೈನ್ ಗಮನಿಸಿ: “ಮತ್ತೆ ಸಂಯುಕ್ತಾ ಹೆಗಡೆ ಕಿರಿಕ್”, “ವಿವಾದ ಸೃಷ್ಟಿಸಿದ ಸಂಯುಕ್ತಾ ಹೆಗಡೆ”, “ಸಂಯುಕ್ತಾ ಹೆಗಡೆ ರಗಳೆ”.ಯಾಕ್ ಹೇಳಿ? ಹುಡ್ಗಿಯ ಚೆಂದ ಚೆಂದ ಫೋಟೋ ಹಾಕಿ ಜೊಲ್ ಪಾರ್ಟಿಗಳನ್ನ ಸ್ಕ್ರೀನ್ ಮುಂದೆ ಕೂರಿಸೋದು ಒಂದಾದ್ರೆ, ಮೂರೊತ್ತೂ ಚಾನಲ್`ಗಳ ಪ್ಯಾನಲ್ಲಲ್ಲಿ ಕೂತು ಸೆಲ್ಫ್ ಪ್ರಮೋಶನ್`ಗೆ ಒದ್ದಾಡೋ ಕವಿತಾ ರೆಡ್ಡಿಗೆ ಅಲ್ಪ ಕಾಣಿಕೆ ಕೊಡೋ ಐಡಿಯಾ ಮತ್ತೊಂದು. ಮತ್ಲಬೀ ದುನಿಯಾ, ಮಾನಗೆಟ್ಟ ಮಿಡಿಯಾ” ಎಂದು ಬರೆದಿದ್ದಾರೆ.

almeida gladson ಎಂಬುವವರು ಕವಿತಾ ರೆಡ್ಡಿಯವರ ವರ್ತನೆಯನ್ನು ಖಂಡಿಸಿ, “ಯಾಕೋ ಇವತ್ತು ಕವಿತಾ ರೆಡ್ಡಿಯವರಲ್ಲಿ ಪ್ರಮೋದ್ ಮುತಾಲಿಕರನ್ನು ಕಂಡೆ. ಯಾವ ವ್ಯತ್ಯಾಸವೂ ಇಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.

ಆದರ್ಶ್ ಅಯ್ಯರ್ ಎಂಬುವವರು, “ನಾನು ನಿಮ್ಮೊಂದಿಗೆ ಸಿಎಎ ವಿರುದ್ಧದ ಹೊರಾಟದಲ್ಲಿ ಭಾಗಿಯಾಗಿದ್ದೆ. ಆದರೆ ನೀವೂ ಒಬ್ಬ ಮಹಿಳೆಯಾಗಿ ಇನ್ನೊಂದು ಮಹಿಳೆಯನ್ನು ಹೀಗೆ ಸಾರ್ವಜನಿಕವಾಗಿ ನಿಂದಿಸಿರುವುದು ಸರಿಯಲ್ಲ” ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: PUBG ನಿಷೇಧದ ಬೆನ್ನಿಗೆ FAU-G ಅನಾವರಣಗೊಳಿಸಿದ ನಟ ಅಕ್ಷಯ್ ಕುಮಾರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...