ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. ಬಿಹಾರ ವಿಧಾನಸಭೆಯ ಚುನಾವಣೆಗೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿಯಿರುವಾಗ, ‘ನವ ಭಾರತ ಮತ್ತು ನವ ಬಿಹಾರ’ ನಿರ್ಮಾಣದಲ್ಲಿ ನಿತೀಶ್ ಕುಮಾರ್ ಅವರ ಪಾತ್ರ ಮಹತ್ತರವಾದದ್ದು ಎಂದು ಮೋದಿ ಕರೆದಿದ್ದಾರೆ.
ಸುಮಾರು 900 ಕೋಟಿ ಮೊತ್ತದ ಬೃಹತ್ ಪೆಟ್ರೋಲಿಯಂ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ, “ಆಡಳಿತದಲ್ಲಿ ಸರಿಯಾದ ಸರ್ಕಾರ ಇದ್ದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದನ್ನು ಬಿಹಾರ ರಾಜ್ಯ ತೋರಿಸಿಕೊಟ್ಟಿದೆ. ಇದರಿಂದಲೇ ಪ್ರತಿಯೊಬ್ಬರಿಗೂ ಸೌಲಭ್ಯಗಳು ತಲುಪಿವೆ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ, ನಿತೀಶ್ ಕುಮಾರ್, ಸುಶೀಲ್ ಮೋದಿ ಮತ್ತು ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು.
“ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಬಿಹಾರವು ಹಲವು ವರ್ಷಗಳವರೆಗೆ ಅಭಿವೃದ್ಧಿಯನ್ನು ಕಾಣದೆ ಹಿಂದುಳಿದಿತ್ತು. ರಸ್ತೆ ಸಂಪರ್ಕ ಮತ್ತು ಇಂಟರ್ನೆಟ್ ಸೌಲಭ್ಯದ ಕುರಿತು ಚರ್ಚಿಸದ ಕಾಲವೊಂದಿತ್ತು. ಭೂ ಕುಸಿತದ ರಾಜ್ಯವಾಗಿ ಬಿಹಾರ ಅನೇಕ ಸವಾಲುಗಳನ್ನು ಎದುರಿಸಿದೆ. ಆದರೀಗ ನಮ್ಮ ಮಹತ್ವದ ಯೋಜನೆಯಾದ ‘ನವ ಭಾರತ ಮತ್ತು ನವ ಬಿಹಾರ’ ನಿರ್ಮಾಣದಲ್ಲಿ ನಿತೀಶ್ ಕುಮಾರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.
ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ಆಜಾದ್ ಸಮಾಜ ಪಕ್ಷ ಸ್ಪರ್ಧೆ: ಚಂದ್ರಶೇಖರ್ ಆಜಾದ್
“ಕೊರೊನಾದ ಬಿಕ್ಕಟ್ಟಿನಿಂದ ಸೃಷ್ಟಿಯಾದ ಕೆಲವು ಸವಾಲುಗಳೂ ಸಹ ಬಿಹಾರದ ಜನರನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ. ಜಾಗತಿಕ ಸಾಂಕ್ರಾಮಿಕ ರೊಗವು ದೇಶಕ್ಕೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿತು. ಆದರೂ ದೇಶ ನಿಂತಿಲ್ಲ, ಬಿಹಾರ ನಿಂತಿಲ್ಲ” ಎಂದು ಮೋದಿ ಹೇಳಿದರು.
“ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಬಿಹಾರವು ತುಂಬಾ ಮುಂದೆ ಸಾಗಿದೆ. ಬಿಹಾರದಲ್ಲಿ ವಿದ್ಯುತ್ ಪರಿಸ್ಥಿತಿಯ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಒಂದು ಹಳ್ಳಿಗೆ 2-3 ಗಂಟೆಗಳ ಕಾಲ ವಿದ್ಯುತ್ ಸಿಕ್ಕರೆ ಸಾಕು ಎಂದು ಪರಿಗಣಿಸಲಾಗುತ್ತಿತ್ತು. ನಗರಗಳಿಗೂ ಸಹ 8-10 ಗಂಟೆಗಿಂತ ಹೆಚ್ಚಿನ ವಿದ್ಯುತ್ ಸಿಗುತ್ತಿರಲಿಲ್ಲ. ಆದರೆ ಇಂದು ಬಿಹಾರದಲ್ಲಿ ವಿದ್ಯುತ್ ಪೂರೈಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ” ಎಂದು ಪ್ರಧಾನಿ ಹೇಳಿದರು.
“ರಾಜ್ಯದ ಯುವಜನತೆಗೆ ಉತ್ತಮ ಶಿಕ್ಷಣದ ಅವಕಾಶಗಳಿವೆ. ಇಂದು ಬಿಹಾರದಲ್ಲಿ ಬೃಹತ್ ಶಿಕ್ಷಣ ಕೇಂದ್ರಗಳು ತೆರೆಯಲ್ಪಡುತ್ತಿವೆ. ಕೃಷಿ, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಯುವಜನರ ಯಶಸ್ಸಿಗೆ ಸಹಾಯ ಮಾಡುತ್ತಿವೆ” ಎಂದು ಬಿಹಾರದಲ್ಲಿನ ಶಿಕ್ಷಣಾವಕಾಶಗಳನ್ನು ಮೋದಿ ಉಲ್ಲೇಖಿಸಿದರು.
ಇದನ್ನೂ ಓದಿ: ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಲುಕಿಕೊಂಡಿರುವ ಬಿಹಾರದ ಪ್ರವಾಹ ಪೀಡಿತರು!
“ನಾವು ಬಿಹಾರದ ಪ್ರತಿಯೊಂದು ವಲಯದ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದ್ದೇವೆ ಮತ್ತು ಪ್ರತಿ ವಲಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಬಿಹಾರದಲ್ಲಿ ಶ್ರೀಮಂತ ಜನರು ಮಾತ್ರ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಪಡೆಯುವ ಸಮಯವಿತ್ತು. ಆದರೆ ಈಗ ಕೇಂದ್ರದ ಉಜ್ವಲ ಯೋಜನೆಯು ಜನರಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸಲು ಸಹಕಾರಿಯಾಗಿದೆ” ಎಂದು ಮೋದಿ ಹೇಳಿದರು.
ನಿತೀಶ್ ಕುಮಾರ್ ಅವರ ಜನತಾದಳ (ಸಂಯುಕ್ತ) ಪಕ್ಷವು ಬಿಹಾರದ ಆಡಳಿತ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಒಂದು ಘಟಕವಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ನೇತೃತ್ವದ ಹಿಂದೂಸ್ತಾನಿ ಅವಮ್ ಮೋರ್ಚಾ, ಈ ತಿಂಗಳ ಆರಂಭದಲ್ಲಿ ಮೈತ್ರಿಕೂಟಕ್ಕೆ ಸೇರಿತ್ತು. ಲೋಕ ಜನಶಕ್ತಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ ಎನ್‌ಡಿಎಯ ಇತರ ಎರಡು ಮೈತ್ರಿ ಪಕ್ಷಗಳಾಗಿವೆ.
ಇದನ್ನೂ ಓದಿ: ಸುಶಾಂತ್ ಸಾವನ್ನು ಬಿಹಾರ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ!


