Homeಮುಖಪುಟಯುಪಿ ಪೊಲೀಸರ ಅಟ್ಟಹಾಸ: ಮಹಿಳಾ ಸಂಸದೆಯನ್ನು ದೂಡಿ, ಡೆರೆಕ್ ಒಬ್ರಿಯೆನ್‌ರನ್ನು ನೆಲಕ್ಕೆ ಬೀಳಿಸಿದ ಪುರುಷ ಪೊಲೀಸರು

ಯುಪಿ ಪೊಲೀಸರ ಅಟ್ಟಹಾಸ: ಮಹಿಳಾ ಸಂಸದೆಯನ್ನು ದೂಡಿ, ಡೆರೆಕ್ ಒಬ್ರಿಯೆನ್‌ರನ್ನು ನೆಲಕ್ಕೆ ಬೀಳಿಸಿದ ಪುರುಷ ಪೊಲೀಸರು

ಪೊಲೀಸರು ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಬಿಡದ ಕಾರಣ ಟಿಎಂಸಿ ಸಂಸದರು ಕಳೆದ ಒಂದು ಗಂಟೆಯಿಂದ ಸ್ಥಳದಲ್ಲೇ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

- Advertisement -
- Advertisement -

ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತ ಕುಟುಂಬದ ಭೇಟಿಗೆ ಬಂದಿದ್ದ ಟಿಎಂಸಿ ನಿಯೋಗವನ್ನು ದಾರಿಯಲ್ಲೇ ಉತ್ತರಪ್ರದೇಶ ಪೊಲೀಸರು ಬಲಪ್ರಯೋಗದಿಂದ ತಡೆದಿದ್ದಾರೆ. ಸಂಸದೆ ಪ್ರತಿಮಾ ಮೊಂಡಾಲ್‌ರ ಭುಜ ಹಿಡಿದು ಪುರುಷ ಪೊಲೀಸನೊಬ್ಬ ದೂಡಿರುವ ಮತ್ತು ಪಕ್ಷದ ಹಿರಿಯ ಮುಖಂಡ ಡೆರೆಕ್ ಒಬ್ರಿಯೆನ್ನ ನೆಲಕ್ಕೆ ಬೀಳಿಸಿರುವ ಘಟನೆ ಜರುಗಿದ್ದು ತೀವ್ರ ಟೀಕೆಗೆ ಕಾರಣವಾಗಿದೆ.

ಎಎನ್‌ಐ ಟ್ವೀಟ್ ಮಾಡಿರುವ 29 ಸೆಕೆಂಡುಗಳ ವಿಡಿಯೋ ದೃಶ್ಯದಲ್ಲಿ ಟಿಎಂಸಿ ನಿಯೋಗದ ಜೊತೆ ಪೊಲೀಸರ ಅಟ್ಟಹಾಸ ಕಾಣಿಸುತ್ತದೆ. ಬಿಳಿ ಅಂಗಿ ಮತ್ತು ಹೆಲ್ಮೆಟ್ ಧರಿಸಿರುವ ಪುರುಷ ಪೊಲೀಸನೊಬ್ಬ ಸಂಸದೆ ಪ್ರತಿಮಾ ಮೊಂಡಾಲ್‌ರ ಭುಜ ಹಿಡಿದು ದೂಡುತ್ತಿದ್ದಾಗ ಅದನ್ನು ಪ್ರಶ್ನಿಸಿ ಅವರ ರಕ್ಷಣೆಗೆ ಪಕ್ಷದ ಹಿರಿಯ ಮುಖಂಡ ಒಬ್ರಿಯನ್ ಧಾವಿಸಿದ್ದಾರೆ. ಆಗ ಅವರನ್ನು ನೆಲಕ್ಕೆ ತಳ್ಳಿ ಬೀಳಿಸಲಾಗಿದೆ.

ಸಂತ್ರಸ್ತೆ ಕುಟುಂಬಕ್ಕೆ ಸಂತಾಪ ಸೂಚಿಸಲು ಹೊರಟಿದ್ದ ಸಂಸದರನ್ನು ಆಕೆಯ ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲೇ ಪೊಲೀಸರು ತಡೆದಿದ್ದಾರೆ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ತಿಳಿಸಿದೆ. ನಿಯೋಗದಲ್ಲಿ ಡೆರೆಕ್ ಒಬ್ರಯೆನ್, ಡಾ.ಕಾಕೋಲಿ ಘೋಷ್ ದಸ್ತಿದಾರ್, ಪ್ರತಿಮಾ ಮೊಂಡಾಲ್ ಮತ್ತು ಮಾಜಿ ಸಂಸತ್ ಸದಸ್ಯೆ ಮಮತಾ ಠಾಕೂರ್ ಇದ್ದರು.

ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬ ಭೇಟಿಗೆ ಪಾದಯಾತ್ರೆ: ರಾಹುಲ್, ಪ್ರಿಯಾಂಕಾ ಬಂಧನ

ಟಿಎಂಸಿ ಸಂಸದರು ಪೊಲೀಸರು ತಡೆದ ಸ್ಥಳದಲ್ಲೇ ಧರಣಿ ನಡೆಸುತ್ತಿದ್ದಾರೆ. ಸಂಸದೆ ಡಾ.ಕಾಕೋಲಿ ಘೋಷ್ ದಸ್ತಿದಾರ್ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುವತಿಯ ಮೇಲೆ ಅತ್ಯಾಚಾರವಾದಾಗ ಎಲ್ಲಿ ಹೇಗಿದ್ದಿರಿ..? ಆ ಕ್ರಿಮಿನಲ್‌ಗಳು ಆಕೆಯನ್ನು ಕೊಂದುಹಾಕಿದ್ದಾರೆ ಆಗ ಎಲ್ಲಿ ಇದ್ದಿರಿ..? ಲಾಠಿ, ಬಂದೂಕುಗಳನ್ನು ಹಿಡಿದು ಕೊಂಡಿದ್ದಿರಿ… ನಾಚಿಕೆಯಾಗಬೇಕು ನಿಮಗೆ, ನಿಮ್ಮ ಸರ್ಕಾರಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪೊಲೀಸರು ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಬಿಡದ ಕಾರಣ ಟಿಎಂಸಿ ಸಂಸದರು ಕಳೆದ ಒಂದು ಗಂಟೆಯಿಂದ ಸ್ಥಳದಲ್ಲೇ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹತ್ರಾಸ್: ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ 200 ಕಾರ್ಯಕರ್ತರ ವಿರುದ್ಧ FIR

ನಿನ್ನೆ ಕೂಡ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯುವತಿಯ ಕುಟುಂಬವನ್ನು ಭೇಟಿಯಾಗಲು ಹೋಗುವಾಗ ತಡೆದು ಸ್ವಲ್ಪ ಸಮಯದವರೆಗೆ ಬಂಧಿಸಲಾಗಿತ್ತು. ಉತ್ತರ ಪ್ರದೇಶದ ಗೌತಮ ಬುದ್ಧ ಪೊಲೀಸ್ ಠಾನೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿ 200 ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಿಸಲಾಗಿದೆ.

ಸೆಪ್ಟೆಂಬರ್ 14 ರಂದು ದನದ ಮೇವನ್ನು ಸಂಗ್ರಹಿಸಲು ಕುಟುಂಬದ ಜೊತೆ ತನ್ನ ಹಳ್ಳಿಯ ಹೊಲಕ್ಕೆ ಹೋಗಿದ್ದಾಗ ನಾಲ್ಕು ಮೇಲ್ಜಾತಿಯ ಪುರುಷರು ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿದ್ದರು. ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗಿತ್ತು.

ಆದರೆ ಆಕೆಯ ಸ್ಥಿತಿ ಸುಧಾರಿಸದಿದ್ದಾಗ ನವದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಕೆ ಅಲ್ಲೇ ನಿಧನರಾಗಿದ್ದರು. ಕುಟುಂಬದವರನ್ನು ದೂರವಿರಿಸಿ ಪೊಲೀಸರೇ ಯುವತಿಯ ಮೃತದೇಹವನ್ನು ಸುಟ್ಟುಹಾಕಿದ್ದರು. ಈ ಪ್ರಕರಣ ದೇಶಾದ್ಯಂತ ವ್ಯಾಪಕ ಟೀಕೆ ಮತ್ತು ಪ್ರತಿಭಟನೆಗೆ ಕಾರಣವಾಗಿದೆ. ಪ್ರತಿಪಕ್ಷಗಳು ಸೇರಿ ಹಲವು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಆದರೆ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ಉತ್ತರ ಪ್ರದೇಶ ಸರ್ಕಾರ ಮಾಡುತ್ತಿದ್ದು, ವಿಪಕ್ಷಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡದಂತೆ ತಡೆಯುತ್ತಿದೆ.


ಇದನ್ನೂ ಓದಿ: ಹತ್ರಾಸ್: ತೀವ್ರಗೊಂಡ ಆಕ್ರೋಶ, ಪ್ರತಿಭಟನೆ ಹತ್ತಿಕ್ಕಲು ಇಂಡಿಯಾ ಗೇಟ್ ಬಳಿ ನಿಷೇದಾಜ್ಞೆ ಹೇರಿದ ದೆಹಲಿ ಪೊಲೀಸ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...