ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಉದ್ಯೋಗ ಕಳೆದುಕೊಂಡವರು ಅದೆಷ್ಟೋ ಮಂದಿ. ದುಡಿಯುವ ಮಾರ್ಗ ಗೊತ್ತಿದ್ದು ಏನೂ ಮಾಡಲಾಗದೆ ತಲೆ ಮೇಲೆ ಕೈಹೊತ್ತಿ ಕುಳಿತವರಿಗೇನು ಕಡಿಮೆಯಿಲ್ಲ. ಆಟೋ, ಟ್ಯಾಕ್ಸಿ ಚಾಲಕರು ಕೆಲಸವಿದ್ದರೂ ಮಾಡಲಾಗದ ಸ್ಥಿತಿಯಲ್ಲಿದ್ದರು. ಲಾಕ್‌ಡೌನ್ ಬಹುಸಂಖ್ಯಾತರ ಬದುಕನ್ನೆ ಬುಡಮೇಲು ಮಾಡಿತ್ತು.
ಇಂತಹ ಸಮಯದಲ್ಲಿ ಸಾವಿರಾರು ರೂಪಾಯಿ ಕೈ ಸೇರಿದರೇ ಸದ್ಯ ಎಂದು ತೆಗೆದುಕೊಂಡು ಮನೆಗೆ ಹೋಗುವ ಜನರೇ ಹೆಚ್ಚು. ಇಂತಹವರ ಮಧ್ಯೆ ಇಲ್ಲೊಬ್ಬ ಆಟೋ ಚಾಲಕ ತಾವು ಕಷ್ಟದಲ್ಲಿದ್ದರೂ ಇನ್ನೊಬ್ಬರ ಹಣವನ್ನು ಮುಟ್ಟದೇ ವಾಪಾಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಹೌದು, ಕೆ.ಆರ್. ಪುರಂ, ಹೂಡಿ ಆಸುಪಾಸಿನಲ್ಲಿ ಸುಮಾರು 20 ವರ್ಷದಿಂದ ಆಟೋ ಓಡಿಸಿ ಜೀವನದ ಬಂಡಿ ದೂಡುತ್ತಿರುವ ಇವರ ಹೆಸರು ಹರೀಶ್. ಮೂಲತಃ ಕೊಲಾರ ಜಿಲ್ಲೆಯ ಮುಳಬಾಗಿಲಿನವರಾದ ಹರೀಶ್ ಸಧ್ಯಕ್ಕೆ ಬೆಂಗಳೂರಿನ ಐಯ್ಯಪ್ಪ ನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ.
ಮಂಗಳೂರು ಮೂಲದ ಅಬ್ದುಲ್ ಸತ್ತಾರ್ ಪರಪ್ಪು ಎಂಬ ಯುವಕ ಯಾರಿಗೋ ಕಳುಹಿಸಬೇಕೆಂದಿದ್ದ 35,000 ಸಾವಿರ ರೂಪಾಯಿಗಳಷ್ಟು ದುಡ್ಡನ್ನು ಕಣ್ತಪ್ಪಿನಿಂದ ಹರೀಶ್ ಅಕೌಂಟ್‌ಗೆ ಕಳುಹಿಸಿಬಿಟ್ಟಿದ್ದಾರೆ. ನಂತರ ಗೂಗಲ್ ಪೇ ಮೂಲಕ ಅವರ ನಂಬರ್ ಪಡೆದು ಕರೆ ಮಾಡಿ ಆದ ಘಟನೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ರಿಯಾ ಜೊತೆ ಮಾಧ್ಯಮಗಳ ದುರ್ವತನೆ: ಕೊನೆಗೂ ಎಚ್ಚೆತ್ತ ಮುಂಬೈ ಪೊಲೀಸರು
ತೀರಾ ಆತಂಕದಲ್ಲಿದ್ದ ಸತ್ತಾರ್ ಪರಪ್ಪುಗೆ ಧೈರ್ಯ ನೀಡಿದ ಆಟೋ ಚಾಲಕ ಹರೀಶ್ ಹಣ ವಾಪಾಸ್ ಕಳುಹಿಸುವ ಭರವಸೆ ನೀಡಿ, ಕೆಲವೆ ಹೊತ್ತಿನಲ್ಲಿ ಹಣವನ್ನು ವಾಪಾಸು ನೀಡಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಈ ಬಗ್ಗೆ ನಾನುಗೌರಿ ಜೊತೆ ಮಾತನಾಡಿದ ರಿಕ್ಷಾ ಚಾಲಕ ಹರೀಶ್, ’ಕೊರೊನಾ ಸಮಯದಲ್ಲಿನ ಕಷ್ಟ ನಮಗೂ ಗೊತ್ತು. ನಮ್ಮ ದುಡ್ಡೇ ನಮ್ಮೊಂದಿಗೆ ಇರುವುದಿಲ್ಲ, ಒಂದು ರುಪಾಯಿ ದುಡಿಯಲು ಕಷ್ಟ ಇರುವ ಈ ಕಾಲದಲ್ಲಿ ಅಷ್ಟು ದುಡ್ಡಿನ ಹಿಂದಿರುವ ಶ್ರಮದ ಬಗ್ಗೆ ನನಗೆ ಗೊತ್ತಿದೆ’ ಎಂದು ಹೇಳಿದರು.
ಘಟನೆ ಬಗ್ಗೆ ನಾನುಗೌರಿ ಜೊತೆ ಮಾತನಾಡಿದ ಸತ್ತಾರ್ ವಿವರಿಸಿದ್ದು ಹೀಗೆ, ’ಮೂವತ್ತೈದು ರುಪಾಯಿ ಕೂಡ ಮುಖ್ಯವಾಗುವ ಈ ಸಮಯದಲ್ಲಿ,ಕಣ್ತಪ್ಪಿನಿಂದ ಕ್ಷಣ ಮಾತ್ರದಲ್ಲಿ ಮೂವತ್ತೈದು ಸಾವಿರ ರುಪಾಯಿ ಹರೀಶ್ ಅಕೌಂಟಿಗೆ ಹೋಗಿಯಾಗಿತ್ತು. ಒಂದು ಕ್ಷಣ ಆಕಾಶ ತಲೆ ಮೇಲೆ ಬಿದ್ದಂತೆ ಭಾಸವಾಗಿತ್ತು. ಆದರೆ ಕರೆ ಮಾಡಿದಾಗ ಹರೀಶ್ ಆಡಿದ ಮಾತುಗಳು ಮತ್ತೆ ಹಣ ಸಿಗುವ ಭರವಸೆ ಮೂಡಿಸಿದ್ದವು. ಒಮ್ಮೆಮ್ಮೆ ನಗರದಲ್ಲಿ ಗುರುತು ಪರಿಚಯ ಇಲ್ಲದ ವ್ಯಕ್ತಿಯ ಕೈಯಲ್ಲಿ ಹಣವಿದೆ ಅನ್ನುವಾಗ ಗೊಂದಲಗಳು ಮೂಡಿದ್ದರೂ ಸಹ ಅವೆಲ್ಲವನ್ನೂ ಸುಳ್ಳಾಗಿಸಿ ಹರೀಶ್ ಹಣವನ್ನು ಹಿಂತಿರುಗಿಸಿದ್ದಾರೆ’ ಎಂದು ಹರೀಶ್‌ಗೆ ಧನ್ಯವಾದ ತಿಳಿಸಿದ್ದಾರೆ.


