ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರಿಗೆ ಪತ್ರ ಬರೆದಿದ್ದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ಸೇರಿದಂತೆ ಕೆಲವು ನ್ಯಾಯಾಧೀಶರ ಹೆಸರನ್ನು ಉಲ್ಲೇಖಿಸಿ, ಇವರು ರಾಜ್ಯ ಹೈಕೋರ್ಟ್‌ನ ಸಭೆಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
“ಪ್ರತಿಪಕ್ಷ ತೆಲುಗು ದೇಶಂ ಪಕ್ಷದ ಮೇಲಿನ ಪ್ರಮುಖ ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ಕೆಲವು ನ್ಯಾಯಾಧೀಶರಿಗೆ ಹಂಚಲಾಗಿದೆ” ಎಂದು ಅಕ್ಟೋಬರ್ 6 ರಂದು ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.
ಇದನ್ನೂ ಓದಿ: ಮಂಡ್ಯ: ರೈತ ಮಸೂದೆಗಳನ್ನು ವಿರೋಧಿಸಿ ರಾಜ್ಯ ಮಟ್ಟದ ಬೃಹತ್ ಸಮಾವೇಶ
ಆಂಧ್ರಪ್ರದೇಶದ ಹೈಕೋರ್ಟ್‌ನ ಎರಡು ಪ್ರಮುಖ ತೀರ್ಪುಗಳ ಫಲಾನುಭವಿಗಳು ತೆಲುಗು ದೇಶಂ ಪಕ್ಷದ ಮುಖಂಡರು ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದು, ಹಿಂದಿನ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರದಲ್ಲಿ ಎನ್.ವಿ.ರಮಣ ಕಾನೂನು ಸಲಹೆಗಾರ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿದ್ದರು ಎಂದು ಜಗನ್ ಮೋಹನ್ ರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಭ್ರಷ್ಟಾಚಾರ, ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ದಯವಾಗಿ ಬರಿದಾಗಿಸುವ ಮತ್ತು ಹಿಂದಿನ ಸರ್ಕಾರದ ಆಳ್ವಿಕೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಭೂಮಿಯನ್ನು ಕಸಿದುಕೊಂಡ ಆರೋಪಗಳನ್ನು ಪರಿಶೀಲಿಸಲು ಕಳೆದ ವರ್ಷದ ಜೂನ್‌ನಲ್ಲಿ ಆಂಧ್ರಪ್ರದೇಶ ಸರ್ಕಾರವು ಉಪಸಮಿತಿಯನ್ನು ರಚಿಸಿತ್ತು. ಈ ಉಪಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಚಂದ್ರಬಾಬು ನಾಯ್ಡು ಮತ್ತು ಇತರರು ಸುಮಾರು 4,000 ಎಕರೆಗಳನ್ನು ಖರೀದಿಸಿ, ಅಕ್ರಮ ವಹಿವಾಟಿನಿಂದ ಸಾಕಷ್ಟು ಸಂಪತ್ತನ್ನು ಸಂಗ್ರಹಿಸಿದ್ದಾರೆ. ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿತ್ತು” ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಪಾಸ್ವಾನ್ ಮರಣದ ನಂತರ ಮೋದಿ ಕ್ಯಾಬಿನೆಟ್‌ನಲ್ಲಿ ಉಳಿದಿರುವುದು ಕೇವಲ ಒಬ್ಬ NDA ಮಿತ್ರರು!
“ಆಂಧ್ರಪ್ರದೇಶದ ನ್ಯಾಯಾಂಗ ತಟಸ್ಥತೆಯನ್ನು ಕಾಪಾಡಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳುವಂತೆ ಜಗನ್ ಮೋಹನ ರೆಡ್ಡಿ ಬೊಬ್ಡೆಗೆ ಒತ್ತಾಯಿಸಿದ್ದಾರೆ. ಮಾಜಿ ಕಾನೂನು ಅಧಿಕಾರಿ ಮತ್ತು ಇತರರಿಗೆ ಸಂಬಂಧಿಸಿದಂತೆ ಅಮರಾವತಿಯಲ್ಲಿ ಭೂ ವ್ಯವಹಾರ ಪ್ರಕರಣವೊಂದನ್ನು ವರದಿ ಮಾಡದಂತೆ ಹೈ ಕೋರ್ಟ್ ಮಾಧ್ಯಮಗಳಿಗೆ ಬೆದರಿಕೆ ಹಾಕಿದೆ” ಎಂದು ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಸಲಹೆಗಾರ ಅಜಯ ಕಲ್ಲಂ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಆಂಧ್ರಪ್ರದೇಶದ ಹೈಕೋರ್ಟ್ ವ್ಯವಹರಿಸುವ ವಿಷಯಗಳಲ್ಲಿ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ರಾಜ್ಯ ಸರ್ಕಾರ ಭಾರತದ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸಿದೆ” ಎಂದು ದಿ ಹಿಂದೂ ವರದಿ ಮಾಡಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ?; ಕುಮಾರಸ್ವಾಮಿ ಆಕ್ರೋಶ


