Homeಕರ್ನಾಟಕಮಂಡ್ಯ: ರೈತ ಮಸೂದೆಗಳನ್ನು ವಿರೋಧಿಸಿ ರಾಜ್ಯ ಮಟ್ಟದ ಬೃಹತ್ ಸಮಾವೇಶ

ಮಂಡ್ಯ: ರೈತ ಮಸೂದೆಗಳನ್ನು ವಿರೋಧಿಸಿ ರಾಜ್ಯ ಮಟ್ಟದ ಬೃಹತ್ ಸಮಾವೇಶ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ ಕಾಯಿದೆ ಮೂಲಕ ರೈತರನ್ನು ನಾಶ ಮಾಡುತ್ತಿದೆ.

- Advertisement -
- Advertisement -

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜಾರಿಗೆ ತರುತ್ತಿರುವ ರೈತ ವಿರೋಧ ಮಸೂದೆಗಳ ವಿರುದ್ದ ಮಂಡ್ಯದಲ್ಲಿ ರಾಜ್ಯ ಮಟ್ಟದ ರೈತ ಸಮಾವೇಶ ನಡೆಯಿತು. ಸಮಾವೇಶವನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದು, ಇತರ ರೈತ ಸಂಘಟನೆಗಳು ಮತ್ತು ರೈತ ಹೋರಾಟಗಾರರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಸಮಾವೇಶವನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉದ್ಘಾಟಿಸಿದರು. ನಂತರ ಮಾತನಾಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, 50 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಆಡಳಿತ ನಡೆಸಿದೆ. ನಿರಂತರ ಬದಲಾವಣೆಗಳನ್ನು ಮಾಡಿಕೊಂಡು ಬಂದಿದ್ದೇವೆ. ಸಮಾಜದ – ರೈತರ ಧ್ವನಿ ಆಗಿದ್ದೇವೆ. ರೈತಪರ ಕೆಲಸ ಮಾಡಿದ್ದೇವೆ. ಆದರೆ ಈಗ ಪರಿಸ್ಥಿತಿ ಏನಾಗಿದೆ? ಈಗ ರೈತ ಮಾತನಾಡಬೇಕು, ಅದನ್ನು ನಾವು ಕೇಳಬೇಕು,‌ ನೋವು ಕೇಳಬೇಕು, ಸಲಹೆ ಕೇಳಬೇಕು ಎಂದು ಹೇಳಿದರು.

ಇದನ್ನೂ ಓದಿ: ವಿವಾದಾತ್ಮಕ ಮಸೂದೆ ವಿರುದ್ಧ ನಿಲ್ಲದ ರೈತರ ಪ್ರತಿಭಟನೆ: ಜೈ ಕಿಸಾನ್ ಆಂದೋಲನ

ರಾಜ್ಯ – ಕೇಂದ್ರ ಬಿಜೆಪಿ ಸರ್ಕಾರಗಳ ನೀತಿಗಳಿಂದ ಯಾರಿಗಾದರೂ ಸಮಾಧಾನ ಇದೆಯಾ?
ರೈತರು, ಕಾರ್ಮಿಕರು, ಮಹಿಳೆಯರು, ಯವಕರು, ವಿದ್ಯಾರ್ಥಿಗಳು ಯಾವ ವರ್ಗಕ್ಕೆ ಸಮಾಧಾನವಿದೆ? ಎಂದು ಪ್ರಶ್ನಿಸಿದ ಅವರು, “ಎಲ್ಲರೂ ನೊಂದು ಬೆಂದು ಹೋಗಿದ್ದಾರೆ. ಎಲ್ಲಾ ವರ್ಗ, ಸಮುದಾಯದವರು ಸಂಕಷ್ಟದಲ್ಲಿದ್ದಾರೆ. ಜನರ ಬದುಕನ್ನ ಗಾಣದಲ್ಲಿ ಹಾಕಲಾಗಿದೆ” ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, “ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ರೈತರ ಮೇಲೆ ಆಕ್ರಮಣ‌ ಮಾಡುತ್ತಿವೆ. ನಮ್ಮ ದಿನ ನಿತ್ಯದ ಆಹಾರದ ಮೇಲೆ ಆಕ್ರಮಣ ಮಾಡಿದ್ದಾರೆ. ಜನರ ಜೀವನ, ಜೀವನೋಪಾಯದ ಮೇಲೆ ಪ್ರಹಾರ ಮಾಡಿ, ರೈತರ ಕತ್ತು ಹಿಸುಕುವಂತಹಾ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

“2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ಮೊದಲು ಆಕ್ರಮಣ ಮಾಡಿದ್ದೇ ರೈತರ ಮೇಲೆ. ಈ ತಿದ್ದುಪಡಿ ಕಾಯ್ದೆಗಳು ಅನುಷ್ಠಾನಕ್ಕೆ ಬಂದರೆ ರೈತರಿಗೆ ಮರಣ ಶಾಸನವಾಗಲಿವೆ. ಎಪಿಎಂಸಿ ತೆಗೆದು ಬಿಟ್ಟರೆ ಸಣ್ಣ ಕೃಷಿಕರು ಬೆಳೆಯನ್ನು ಯಾರಿಗೆ ಮಾರಾಟ ಮಾಡಬೇಕು? ಅವರಿಗೆ ಬೆಂಬಲ ಬೆಲೆಯ ಭರವಸೆ ಇದೆಯೇ. ನರೇಂದ್ರ ಮೋದಿ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ರದ್ದು ಮಾಡಿ ಕೆಲವೇ ಕೆಲವು ಕೈಗಾರಿಕೋದ್ಯಮಿಗಳಿಗೆ ಅನುಕೂಲ ಆಗುವಂತೆ ಕೆಲಸ ಮಾಡುತ್ತಿದೆ. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಕಬ್ಬು ಬೆಳೆಗಾರರ ಬೆಂಬಲ ಬೆಲೆ ಹೆಚ್ಚಿಸಿತು. ಆದರೆ ಈಗಿನ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: ರೈತರಿಂದ ನೇರ ಗ್ರಾಹಕರಿಗೆ ವಿಷಮುಕ್ತ ಆಹಾರೋತ್ಪನ್ನ ಮಾರಲು ಪಣ: ‘ನಮ್ದು ಬ್ರ್ಯಾಂಡ್’ ಆರಂಭ

ನಂತರ ಮಾತನಾಡಿದ ನ್ಯಾಯಪಥ ಪತ್ರಿಕೆಯ ಸಂಪಾದಕ, ಹೋರಾಟಗಾರ ಡಾ.ವಾಸು ಹೆಚ್‌.ವಿ, “ಪ್ರಸ್ತುತ ನಡೆಯುತ್ತಿರುವ ಹೋರಾಟ ಕಾಂಗ್ರೇಸ್ ಮತ್ತು ಬಿಜೆಪಿಯದ್ದು ಅಲ್ಲ, ಈ ಹೋರಾಟ ಬಿಜೆಪಿ ಮತ್ತು ಭಾರತೀಯರ ನಡುವಿನ ಹೋರಾಟ. ಇದರಲ್ಲಿ ದೇಶದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಇರಬೇಕಿರುವುದರಿಂದ ನಾವು ಪಕ್ಷಾತೀತವಾಗಿ ಸಮಾವೇಶಕ್ಕೆ ಬಂದಿದ್ದೇವೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ರೈತರ ಭೂಮಿ ವಿಘಟಿತವಾಗುತ್ತಾ ಹೋಗುತ್ತಿರುವ ಈ ಕಾಲದಲ್ಲಿ ಮೋದಿ ಹಾಗೂ ಯಡಿಯೂರಪ್ಪ ಸರ್ಕಾರ ರೈತರ ಪರವಾಗಿ ನಿಲ್ಲುವುದನ್ನು ಬಿಟ್ಟು ಗುಜರಾತಿನ ತಮ್ಮ ಆಪ್ತ ವ್ಯಾಪಾರಿಗಳಿಗೆ ಪರಭಾರೆ ಮಾಡಲು ಹೊರಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಕೃಷಿ ತಜ್ಞ ಡಾ. ಪ್ರಕಾಶ್ ಕಮ್ಮರಡಿ ಮಾತನಾಡಿ, “ಕೇಂದ್ರ ಸರ್ಕಾರ ಸಂಪೂರ್ಣ ರಾಜ್ಯ ಸರ್ಕಾರದ ಅಧಿಕಾರವಿರುವ ಎಪಿಎಂಸಿಯ ಕಾಯ್ದೆಯನ್ನು ಯಾವುದೇ ಚರ್ಚೆಯಿಲ್ಲದೆ ಸುಗ್ರಿವಾಜ್ಞೆ ತಂದಿದೆ” ಎಂದು ಕಿಡಿ ಕಾರಿದರು.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾದ ವೀರಸಂಗಯ್ಯ ಮಾತನಾಡಿ, “ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ ಕಾಯಿದೆ ಮೂಲಕ ರೈತರನ್ನು ನಾಶ ಮಾಡುತ್ತಿದೆ. ಈ ಕಾಯಿದೆಯಿಂದ ಸಣ್ಣ ರೈತರು ನಾಶವಾಗುತ್ತಾರೆ” ಎಂದು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ರೈತರನ್ನು ಅವಮಾನಿಸುತ್ತಿದ್ದಾರೆ; ಪ್ರಧಾನಿ ಹೇಳಿಕೆಗೆ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...