ದೆಹಲಿ ವಿಶ್ವವಿದ್ಯಾಲಯದ ಪ್ರೊ.ಜಿ.ಎನ್ ಸಾಯಿಬಾಬಾ ಯುಎಪಿಎಯಂತಹ ಕರಾಳ ಕಾಯ್ದೆಗಳಡಿ ಜೈಲಿನಲ್ಲಿದ್ದಾರೆ. ಆದರೆ ಸಮರ್ಪಕ ಔಷಧಿ, ಪುಸ್ತಕ ಮತ್ತು ಪತ್ರಗಳನ್ನು ನೀಡುವ ಅವರ ಹಕ್ಕುಗಳಿಗೆ ನಿರ್ಬಂಧ ಹೇರಲಾಗಿದೆ. ಇದನ್ನು ಖಂಡಿಸಿ ಅವರು ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಅಕ್ಟೋಬರ್ 21 ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ ಎಂದು ಅವರ ಪತ್ನಿ ವಸಂತ ಕುಮಾರಿ ತಿಳಿಸಿದ್ದಾರೆ.
ಶೇ.90 ರಷ್ಟು ದೈಹಿಕ ನ್ಯೂನತೆ ಹೊಂದಿರುವ ಮತ್ತು ಹಲವು ರೋಗಗಳಿಗೆ ತುತ್ತಾಗಿರುವ 47 ವರ್ಷ ಪ್ರಾಯದ ಡಾ. ಜಿ.ಎನ್. ಸಾಯಿಬಾಬಾ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ ಅಪರಾಧಕ್ಕಾಗಿ 2017ರಲ್ಲಿ ಗಡ್‌ಚಿರೋಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದಾರೆ. ಅವರಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ಕಾಲದಲ್ಲಿಯೂ ಸಹ ಮೆಡಿಕಲ್ ಪೆರೋಲ್ ಸಿಕ್ಕಿಲ್ಲ.
ಈ ಕುರಿತು ಅವರ ಪತ್ನಿ ವಸಂತ ಕುಮಾರಿಯವರು ಪುಣೆಯ ಎಡಿಜಿಯವರಿಗೆ ಪತ್ರ ಬರೆದಿದ್ದು, ಜೈಲಿನಲ್ಲಿ ಅವರ ಹಕ್ಕುಗಳನ್ನು ದಮನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅವರ ಪ್ರಕಾರ
- ಹಲವು ಗಂಭೀರ ರೋಗಗಳಿಗೆ ತುತ್ತಾಗಿರುವ ಸಾಯಿಬಾಬಾ ದಿನನಿತ್ಯ ಔಷಧಿ ಸೇವಿಸಬೇಕಾಗಿದೆ. ಅವುಗಳನ್ನು ವಕೀಲರು ಜೈಲಿನ ಅಧಿಕಾರಿಗಳಿಗೆ ನೀಡಿದ್ದರೂ ಸಹ ಅವುಗಳನ್ನು ಸಾಯಿಬಾಬಾ ಅವರಿಗೆ ನೀಡುತ್ತಿಲ್ಲ.
- ಸಾಯಿಬಾಬರವರಿಗೆ ಕುಟುಂಬ ಸದಸ್ಯರು ಬರೆಯುವ ಪತ್ರಗಳನ್ನು ಜೈಲಿನ ಅಧಿಕಾರಿಗಳು ಕೊಡುತ್ತಿಲ್ಲ. ಅವರಿಗೆ ಪತ್ರಿಕೆಗಳನ್ನು ಸಹ ಒದಗಿಸುತ್ತಿಲ್ಲ.
- ಜೈಲಿನ ಅಧಿಕಾರಿಗಳು ತಿಂಗಳಿಗೆ ಕೇವಲ ಒಂದೆರೆಡು ಫೋನ್ ಕಾಲ್‌ಗಳಿಗೆ ಮಾತ್ರ ಅವಕಾಶ ಕೊಡುತ್ತಿದ್ದಾರೆ. ಕೊರಾನಾ ಸಾಂಕ್ರಾಮಿಕ ಕಾಲದಲ್ಲಿ ಭೇಟಿಗೆ ಅವಕಾಶವಿಲ್ಲದಿರುವಾಗ, ವಕೀಲರು ಮತ್ತು ಕುಟುಂಬ ಸದಸ್ಯರಿಗೆ ಫೋನ್ ನಲ್ಲಿ ಮಾತನಾಡಲು ಸಹ ಅವಕಾಶ ನೀಡುತ್ತಿಲ್ಲ.
- ಬ್ಯಾನ್ ಆಗದ, ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಪುಸ್ತಕಗಳನ್ನು ಕಳಿಸಿದರೂ ಸಹ ಜೈಲಿನ ಅಧಿಕಾರಿಗಳು ಅದನ್ನು ಸಾಯಿಬಾಬಾರವರಿಗೆ ಕೊಡುತ್ತಿಲ್ಲ. ಇದು ಜೈಲಿನ ನಿಯಮಗಳ ಉಲ್ಲಂಘನೆಯಾಗಿದೆ.
ಈ ಕಿರುಕುಳ ಮತ್ತು ಸಂಕಷ್ಟಗಳ ಹಿನ್ನೆಲೆಯಲ್ಲಿ ನಾಗ್ಪುರ ಜೈಲು ಅಧಿಕಾರಗಳ ‘ಅಮಾನವೀಯ ನಡವಳಿಕೆ ಮತ್ತು ಅನ್ಯಾಯದ ನಿರ್ಬಂಧಗಳನ್ನು’ ಖಂಡಿಸಿ ಪ್ರೊ.ಸಾಯಿಬಾಬಾ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧಿಸಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ.
ಕಮಿಟಿ ಫಾರ್ ಡಿಫೆಂಡ್ ಅಂಡ್ ರಿಲೀಸ್ ಜಿ. ಎನ್. ಸಾಯಿಬಾಬಾ ಸಹ ನಾಗ್ಪುರ ಎಡಿಜಿಗೆ ಪತ್ರ ಬರೆದಿದ್ದು, ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಸಾಯಿಬಾಬಾರವರ ಹಕ್ಕುಗಳನ್ನು ರಕ್ಷಿಸುವಂತೆ ಒತ್ತಾಯಿಸಿದೆ. “ಅವರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುತ್ತಿಲ್ಲ. ಕೋವಿಡ್ -19ರ ಸಮಯದಲ್ಲಿಯೂ ಸಹ ಇಕ್ಕಾಟಾದ ಜೈಲುಗಳಲ್ಲಿ ಅವರನ್ನು ಕೂಡಿಹಾಕಿರುವುದು ಅವರ ಜೀವಕ್ಕೆ ಅಪಾಯಕಾರಿ” ಎಂದು ಪತ್ರದಲ್ಲಿ ಉಲ್ಲೇಖಿಲಾಗಿದೆ.
ಇದನ್ನೂ ಓದಿ: ಕ್ರಾಂತಿಕಾರಿ ರಾಜಕೀಯವನ್ನು ಜೀವನದ ಭಾಗವಾಗಿಸಿಕೊಂಡ ಡಾ.ಜಿ.ಎನ್. ಸಾಯಿಬಾಬಾ


