Photo Courtesy: Scroll.in

ಉತ್ತರ ದೆಹಲಿಯಲ್ಲಿ 14 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ‘ದಿ ಕಾರವಾನ್ ಮ್ಯಾಗಜಿನ್’ನ ಪತ್ರಕರ್ತನನ್ನು ನಾಲ್ಕು ಗಂಟೆಗಳ ಕಾಲ ಬಂಧಿಸಿದ್ದಲ್ಲದೆ, ಆತನ ಮೇಲೆ ದೆಹಲಿಯ ಹಿರಿಯ ಪೊಲೀಸರು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಪತ್ರಿಕೆ ಆರೋಪಿಸಿದೆ.

ಕಾರವಾನ್‌ ಪತ್ರಿಕೆಯ ವರದಿಗಾರ ಅಹಾನ್ ಪೆಂಕಾರ್ ಮೇಲೆ, ಮಾಡೆಲ್ ಟೌನ್ ಪೊಲೀಸ್ ಠಾಣೆ ಆವರಣದಲ್ಲಿ ಎಸಿಪಿ ಅಜಯ್ ಕುಮಾರ್ ಕಾಲಿನಿಂದ ಒದ್ದು, ಕೆನ್ನಗೆ ಬಾರಿಸಿ ಹಲ್ಲೆ ನಡೆಸಿದ್ದಾರೆ. ಅಹಾನ್ ಪೆಂಕಾರ ತಾನು ವರದಿಗಾರನೆಂದು ಪದೇ ಪದೇ ಹೇಳಿ ಗುರುತಿನ ಚೀಟಿ ತೋರಿಸಿದರೂ ಸಹ ಅಮಾನವೀಯವಾಗಿ ಹಲ್ಲೆ ನಡೆಸಿದರು ಎಂದು ಕಾರವಾನ್ ಟ್ವೀಟ್ ಮಾಡಿದೆ.

ಉತ್ತರ ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ವಿರೋಧಿಸಿ, ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಮಾಡೆಲ್ ಟೌನ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ವರದಿ ಮಾಡುತ್ತಿದ್ದಾಗ ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾರವಾನ್ ಪತ್ರಿಕೆಯ “ಬೆನ್ನಿನ ಮೇಲೆ ಬಾಸುಂಡೆಗಳನ್ನು ಹೊಂದಿರುವ” ಅಹಾನ್ ಪೆಂಕರ್‌ರವರ ಚಿತ್ರವನ್ನು ಕಾರವಾನ್ ಪ್ರಕಟಿಸಿದೆ.

ಘಟನೆಯ ನಂತರ ಅಹಾನ್ ಪೆಂಕರ್ ದೆಹಲಿಯ ಪೊಲೀಸ್ ಕಮಿಷನರ್‌ ಎಸ್‌ಎನ್ ಶ್ರೀವತ್ಸರವರಿಗೆ ದೂರು ಸಲ್ಲಿಸಿದ್ದಾರೆ. “ನಾನು ಸಂತ್ರಸ್ತ ಬಾಲಕಿಯ ಚಿಕ್ಕಮ್ಮನೊಂದಿಗೆ ಮಾತನಾಡುತ್ತಿದ್ದೆ. ಆಗ ಪೊಲೀಸರು ಏಕಾಏಕಿ ನನ್ನನ್ನು ಎಳೆದೊಯ್ದರು. ಪತ್ರಿಕೆಯ ವರದಿಗಾರನೆಂದು ಗುರುತಿನ ಪತ್ರ ತೋರಿಸಿದರೂ ನನ್ನ ಮೇಲೆ ಹಲ್ಲೆ ನಡೆಸಿದರು. ಬಲವಂತವಾಗಿ ನನ್ನ ಮೊಬೈಲ್ ಕಿತ್ತುಕೊಂಡು ಪ್ರತಿಭಟನೆಗೆ ಸಂಬಂಧಿಸಿದಂತೆ ರೆಕಾರ್ಡ್ ಮಾಡಿದ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಮೇಲೆ ಕೇಸು ದಾಖಲಿಸುವ ಬೆದರಿಕೆ ಹಾಕಿದರು. ಎಸಿಪಿ ಅಜಯ್ ಕುಮಾರ್ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದರು. ಕಾಲಿನಿಂದ ಒದ್ದರು. ಅದೇ ಸಮಯದಲ್ಲಿ ಒಬ್ಬ ಮುಸ್ಲಿಂ ಮತ್ತು ಒಬ್ಬ ಸಿಖ್ ಯುವಕನ ಮೇಲೆ ಸಹ ಪೊಲೀಸರು ಹಲ್ಲೆ ನಡೆಸುತ್ತಿದ್ದರು. ಆ ಪೊಲೀಸರ ಮೇಲೆ ಎಫ್‌ಐಆರ್ ದಾಖಲಿಸಬೇಕೆಂದು” ಪೆಂಕರ್ ದೂರಿನಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ಕಳೆದೊಂದು ವಾರದಲ್ಲಿ 8 ಪತ್ರಕರ್ತರ ಮೇಲೆ ಹಲ್ಲೆ: ತೀವ್ರ ಆಕ್ರೋಶ


ಎರಡು ತಿಂಗಳ ಹಿಂದೆಯಷ್ಟೇ ಕಾರವಾನ್ ಪತ್ರಿಕೆಯ ಮೂವರು ವರದಿಗಾರರು ಈಶಾನ್ಯ ದೆಹಲಿಯ ಸುಭಾಷ್ ಮೊಹಲ್ಲಾದಲ್ಲಿ ವರದಿ ಮಾಡುತ್ತಿದ್ದಾಗ ಹಲ್ಲೆಗೊಳಗಾಗಿದ್ದರು. ಆಗಸ್ಟ್ 5 ರಂದು ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿಯಲ್ಲಿನ ಗಲಭೆ ಪರಿಸ್ಥಿತಿ ಕುರಿತು ವರದಿ ಮಾಡುತ್ತಿದ್ದಾಗ ಅವರ ಮೇಲೆ ಉದ್ರಿಕ್ತ ಗುಂಪು ಪೊಲೀಸರ ಎದುರೇ ದಾಳಿ ನಡೆಸಿತ್ತು.

ಆ ಸಂದರ್ಭದಲ್ಲಿ ಎಡಿಟರ್ ಗಿಲ್ಡ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಕರ್ತರ ಸಂಘಗಳು ‘ಪತ್ರಕರ್ತರ ಮೇಲಿನ ಹಲ್ಲೆಯನ್ನು’ ತೀವ್ರವಾಗಿ ಖಂಡಿಸಿದ್ದರು. ಎಫ್‌ಐಆರ್ ದಾಖಲಿಸಿ, ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ತಂದಿದ್ದರು.

ಕಾರವಾನ್ ಸ್ವತಂತ್ರ ಮಾಧ್ಯಮವಾಗಿದ್ದು, ಅದು ಶೋಷಿತರ ಪರವಾಗಿ ವರದಿ ಮಾಡುವುದರ ಜೊತೆಗೆ ಆಳುವ ಸರ್ಕಾರಗಳ ನೀತಿಗಳನ್ನು ಕಟುವಾಗಿ ಟೀಕಿಸುತ್ತಿದೆ. ಹಾಗಾಗಿ ಅದರ ಮೇಲೆ ಹಲ್ಲೆ, ಬೆದರಿಕೆಗಳು ಬರುತ್ತಿವೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಕಾರವಾನ್ ಪತ್ರಕರ್ತರ ಮೇಲೆ ಹಲ್ಲೆ: ಪೋಲೀಸರಿಂದ ವರದಿ ಕೇಳಿದ ಪ್ರೆಸ್ ಕೌನ್ಸಿಲ್

 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here