ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿ ನವೀನ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ನವೀನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಆರೋಪಿಯ ಜೀವಕ್ಕೆ ಅಪಾಯವಿದೆ ಎನ್ನುವ ಕಾರಣಕ್ಕೆ ಜಾಮೀನು ನೀಡದೆ ಇದ್ದರೆ ತಪ್ಪಾಗುತ್ತದೆ. ಆತನ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟ ಬಿ.ಎ.ಪಾಟೀಲ್ ನ್ಯಾಯಪೀಠವು ಆರೋಪಿ ನವೀನ್‌ಗೆ ಜಾಮೀನು ಮಂಜೂರು ಮಾಡಿತು.
ಅವಹೇಳನಕಾರಿ ಪೋಸ್ಟ್ ಫಾರ್ವರ್ಡ್ ಮಾಡಿ ಡಿಲೀಟ್ ಮಾಡಿದ್ದಾಗಿ ಆರೋಪಿ ನವೀನ್ ಒಪ್ಪಿಕೊಂಡಿದ್ದ ಎನ್ನಲಾಗಿದೆ. ನವೀನ್ ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಳಿಯ. ರಾಜಕೀಯವಾಗಿ ನವೀನ್‌ನ ಟಾರ್ಗೇಟ್ ಮಾಡಲಾಗಿದೆ ಎಂದು ನವೀನ್ ಪರ ವಕೀಲರು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ಕೆಜೆ ಹಳ್ಳಿ-ಡಿಜೆ ಹಳ್ಳಿ ಅಶಾಂತಿಗೆ ಕಾಂಗ್ರೆಸ್ ನಾಯಕರೇ ಕಾರಣ: ಕುಮಾರಸ್ವಾಮಿ ಆರೋಪ
ಆರೋಪಿ ನವೀನ್ ವಿರುದ್ಧ ಸೆಕ್ಷನ್ 153ಎ ಹಾಗೂ 295ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲೂ ಪ್ರಕರಣ ದಾಖಲಾಗಿತ್ತು. ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಕಾರಣಕ್ಕೆ ಈ ಕಾಯ್ದೆಗಳ ಅಡಿ ಪ್ರಕರಣ ದಾಖಲಾಗಿತ್ತು.
ಈ ಗಲಭೆ ಸಂದರ್ಭದಲ್ಲಿ ನಡೆಸಲಾದ ಗೋಲಿಬಾರ್‌ನಲ್ಲಿ 4 ಜನ ಯುವಕರು ಬಲಿಯಾಗಿದ್ದರು. ಇನ್ನೂ ಹಲವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕಷ್ಟು ಆಸ್ತಿಪಾಸ್ತಿಗಳು ನಷ್ಟವಾಗಿದೆ. ನೂರಾರು ಜನರನ್ನು ಬಂಧಿಸಲಾಗಿದೆ.
ಆಗಸ್ಟ್ 11ರಂದು ನಡೆದಿದ್ದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಹಿಸಿಕೊಂಡಿದೆ. ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಹಾಗೂ ಕರ್ನಾಟಕ ಆಸ್ತಿಪಾಸ್ತಿ ನಾಶ ಮತ್ತು ನಷ್ಟ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣವನ್ನು ರಾಜಕೀಯ ನಾಯಕರ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಆಡಳಿತ ಮತ್ತು ವಿರೋಧ ಪಕ್ಷಗಳು ಇಂದಿಗೂ ಆರೋಪ-ಪ್ರತ್ಯಾರೋಪಗಳಲ್ಲೇ ಮುಳುಗಿವೆ.
ಕೆಜೆ ಹಳ್ಳಿ-ಡಿಜೆ ಹಳ್ಳಿ ಅಶಾಂತಿಗೆ ಕಾಂಗ್ರೆಸ್ ನಾಯಕರೆ ಕಾರಣ. ಅವರ ಪಕ್ಷದ ಶಾಸಕರ ಮನೆಗೆ ಬೆಂಕಿ ಇಟ್ಟು, ಜೀವಹಾನಿ ಮಾಡಲು ಹೊರಟ ಕಾಂಗ್ರೆಸ್ ನಾಯಕರು, ಬೆಂಗಳೂರನ್ನು ರಕ್ಷಣೆ ಮಾಡುತ್ತೇವೆ ಎಂದು ಯಾವ ಮುಖವಿಟ್ಟುಕೊಂಡು ಮತ ಕೇಳಲು ಹೋಗುತ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರು.


