ಪಾಕಿಸ್ತಾನದ ಸಂಸತ್ತಿನ ಹೇಳಿಕೆಗಳ ನಂತರ ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದಿನ ಸತ್ಯ ಬಹಿರಂಗಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಕಳೆದ ವರ್ಷ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 40 ಸೈನಿಕರನ್ನು ಪುಲ್ವಾಮಾದಲ್ಲಿ ಹತ್ಯೆಗೈಯಲಾಗಿತ್ತು.
“ಪುಲ್ವಾಮಾ ದಾಳಿಯ ಸಮಯದಲ್ಲಿ ಭದ್ರತಾ ಸಿಬ್ಬಂದಿಯ ತ್ಯಾಗದ ಬಗ್ಗೆ ಕೆಲವರು ದುಃಖಿತರಾಗಿರಲಿಲ್ಲ ಎಂಬುದನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ವಿರೋಧ ಪಕ್ಷದವರು ಪುಲ್ವಾಮಾ ದಾಳಿಯಲ್ಲೂ ರಾಜಕೀಯ ಲಾಭವನ್ನು ಹುಡುಕುತ್ತಿದ್ದಾರೆಂದು ನನಗೆ ತಿಳಿದಿತ್ತು. ಹಾಗಾಗೀ ನಾನು ಎಲ್ಲಾ ವಿವಾದಗಳಿಂದ ದೂರವಿದ್ದು, ಎಲ್ಲಾ ಆರೋಪಗಳನ್ನು ಮೌನವಾಗಿ ಸಹಿಸಿಕೊಂಡಿದೆ”ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
’ನೆರೆಯ ದೇಶವು ತನ್ನ ಸಂಸತ್ತಿನಲ್ಲಿ ಪುಲ್ವಾಮಾ ದಾಳಿಯ ಜವಾಬ್ದಾರಿಯನ್ನು ಒಪ್ಪಿಕೊಂಡ ನಂತರ, ನಮ್ಮ ಕಷ್ಟದ ಸಮಯದಲ್ಲಿ ಕೊಳಕು ರಾಜಕೀಯವನ್ನು ಮಾಡಿದವರ ನಿಜ ಸ್ವರೂಪ ಬಹಿರಂಗವಾಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಇಂತಹ ರಾಜಕೀಯ ಮಾಡದಂತೆ ನಾನು ವಿರೋಧ ಪಕ್ಷಗಳಿಗೆ ವಿನಂತಿಸುತ್ತೇನೆ, ”ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿ, ಅಂಬಾನಿ, ಅದಾನಿ ಪ್ರತಿಮೆ ಸುಟ್ಟು ಕೃಷಿ ಮಸೂದೆಗಳಿಗೆ ರೈತರ ವಿರೋಧ!
“ಈ ಪಕ್ಷಗಳು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಭಾರತ ವಿರೋಧಿ ಶಕ್ತಿಗಳಿಗೆ ಸಹಾಯ ಮಾಡುತ್ತಿವೆ. ವಿರೋಧ ಪಕ್ಷಗಳು ದೇಶಕ್ಕೆ ಅಥವಾ ಅವರ ಪಕ್ಷಕ್ಕೆ ಯಾವುದೇ ಒಳ್ಳೆಯದನ್ನು ಮಾಡುವುದಿಲ್ಲ” ಎಂದು ಆಕ್ರೊಶ ಹೊರಹಾಕಿದ್ದಾರೆ.
“ನಾವು ಇತರರಿಗೆ ಒಳ್ಳೆಯದನ್ನು ಮಾಡಿದಾಗ ಮಾತ್ರ ನಮಗೆ ಒಳ್ಳೆಯದಾಗುತ್ತದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಸರ್ದಾರ್ ಪಟೇಲ್ ಕಲ್ಪಿಸಿದಂತೆಯೇ ಭಾರತವನ್ನು ಸದೃ , ಸ್ವತಂತ್ರ ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲು ನಾವೆಲ್ಲರೂ ಕೆಲಸ ಮಾಡಬೇಕು ”ಎಂದು ಪ್ರಧಾನಿ ಮೋದಿ ಹೇಳಿದರು.
‘ಇಂದು ವಿಶ್ವದ ಎಲ್ಲಾ ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಡಲು ಒಂದಾಗಬೇಕಿದೆ. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಿಲ್ಲ. ಭಾರತ ನಿರಂತರವಾಗಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ’ ಎಂದರು.
ಇದಕ್ಕೂ ಮುನ್ನ, ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮವಾರ್ಷಿಕೋತ್ಸವದ ಹಿನ್ನೆಲೆ, ಗುಜರಾತ್‌ನ ಕೆವಾಡಿಯಾದಲ್ಲಿನ ಏಕತಾ ಪ್ರತಿಮೆಗೆ ನಮನ ಸಲ್ಲಿಸಿದರು. ಬಳಿಕ ‘ರಾಷ್ಟ್ರೀಯ ಏಕತಾ ದಿವಸ’ ಅಂಗವಾಗಿ ನಡೆದ ಸೇನಾಪಡೆಗಳ ಪಥಸಂಚಲನವನ್ನು ವೀಕ್ಷಿಸಿದರು.


