ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಪ್ರತಿ ಬಾರಿ ದೀಪಾವಳಿ ಸಂದರ್ಭದಲ್ಲಿ ಬಳಸಲಾಗುವ ಪಟಾಕಿಗಳಿಂದ ವಾಯಮಾಲಿನ್ಯ ಹೆಚ್ಚಾಗುವ ಕಾರಣ ಈ ಬಾರಿ ಪಟಾಕಿ ನಿಷೇಧಿಸಲಾಗಿದೆ. ಕರ್ನಾಟಕ ಸರ್ಕಾರ ಸಾಂಪ್ರದಾಯಿಕ ಪಟಾಕಿಗೆ ನಿಷೇಧ ಹೇರಿ, ಹಸಿರು ಪಟಾಕಿಗೆ ಅಸ್ತು ಎಂದಿದೆ. ನವೆಂಬರ್ 16ರ ವರೆಗೆ ಹಸಿರು ಪಟಾಕಿ ಮಾರಾಟ ಮಾಡಲು ಅನುಮತಿ ನೀಡಿದೆ.
ಸುಪ್ರೀಂ ಕೋರ್ಟ್ ಆದೇಶದ ಎರಡು ವರ್ಷಗಳ ನಂತರ, ಹಸಿರು ಪಟಾಕಿಗಳು ಈ ದೀಪಾವಳಿಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಪಡೆಯುತ್ತಿವೆ. ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಹಿನ್ನೆಲೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಂತರ ಈ ನಿರ್ಧಾರ ಬಂದಿತ್ತು. ಈ ಬಾರಿ ಕೊರೊನಾ ಇರುವ ಹಿನ್ನೆಲೆ ಮಕ್ಕಳು ಹಾಗೂ ಕೊರೊನಾ ಸೋಕಿತರ ಆರೋಗ್ಯದ ಹಿತದೃಷ್ಟಿಯಿಂದ ಪಟಾಕಿ ನಿಷೇಧ ನಿರ್ಧಾರ ಕೈಗೊಳ್ಳಲಾಗಿದೆ.
ಹಾಗಾದರೆ ಹಸಿರು ಪಟಾಕಿ ಎಂದರೇನು..?
ಸಾಮಾನ್ಯ ಪಟಾಕಿಯಂತೆಯೇ ಕಾಣುವ ಇದು ಪರಿಸರ ಸ್ನೇಹಿ ಪಟಾಕಿಯಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಮತ್ತು ನ್ಯಾಷನಲ್ ಎನ್ವಿರಾನ್ಮೆಂಟ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ ಟಿಟ್ಯೂಟ್ (ಎನ್‌ಇಇಆರ್‌ಐ)ನ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಪಟಾಕಿಗಳು ಕೇವಲ ಶೇಕಡಾ 30ರಷ್ಟು ಪ್ರಮಾಣದ ಹೊಗೆಯನ್ನು ಹೊರಹಾಕುತ್ತದೆ.
ಸಾಮಾನ್ಯ ಪಟಾಕಿಗಳಂತೆ ಅಧಿಕ ಶಬ್ಧ ಹಾಗೂ ಹೊಗೆ ಸೂಸುವ ಬದಲಾಗಿ ನೀರಿನ ಆವಿಯನ್ನು ಮಾತ್ರ ಬಿಡುಗಡೆ ಮಾಡುತ್ತದೆ. ಈ ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದಿಲ್ಲ. ಕಳೆದ ವರ್ಷ ಈ ಪಟಾಕಿಯನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ವಾಯುಮಾಲಿನ್ಯ: ಪಟಾಕಿ ನಿಷೇಧ ಸಂಬಂಧ 18 ರಾಜ್ಯಗಳಿಗೆ ಎನ್‌ಜಿಟಿ ನೋಟಿಸ್!
ಚೆನ್ನೈನಿಂದ 540 ಕಿ.ಮೀ ದೂರದಲ್ಲಿರುವ ಶಿವಕಾಸಿಯಲ್ಲಿರುವ ಪಟಾಕಿ ತಯಾರಕರು, ಎನ್‌ಇಇಆರ್‌ಐ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. “ನಾವು 2019 ರಲ್ಲಿ ಹಸಿರು ಪಟಾಕಿಗಳನ್ನು ತಯಾರಿಸಲು ಪ್ರಾರಂಭಿಸಿದ್ದೇವೆ. ಇದು ವಾಯುಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಈ ವರ್ಷ ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಮಾರು 80% ಪಟಾಕಿಗಳು ಹಸಿರು ಪಟಾಕಿ ಟ್ಯಾಗ್ ಅನ್ನು ಹೊತ್ತುಕೊಳ್ಳುತ್ತವೆ ”ಎಂದು ತಮಿಳುನಾಡು ಪಟಾಕಿ ಮತ್ತು ಸಿಡಿಮದ್ದು ತಯಾರಕರ ಸಂಘದ ಅಧ್ಯಕ್ಷ ಪಿ.ಗಣೇಶನ್ ತಿಳಿಸಿದ್ದಾರೆ.
ಹಸಿರು ಪಟಾಕಿಗಳಲ್ಲಿ ಎರಡು ವಿಧಗಳಿವೆ
೧.ಬೇರಿಯಂ ಸಾಲ್ಟ್ ಇಲ್ಲದ ಪಟಾಕಿ: ಇದು ಬಹು-ಕೋಟಿ ಪಟಾಕಿ ಉದ್ಯಮಕ್ಕೆ ಅನಿವಾರ್ಯವೆಂದು ಪರಿಗಣಿಸಲಾದ ರಾಸಾಯನಿಕ
೨.ಕಡಿಮೆ ಪ್ರಮಾಣದಲ್ಲಿ ಬೇರಿಯಂ ಇರುವ ಪಟಾಕಿ
ಈ ಎರಡು ವಿಧದ ಪಟಾಕಿಗಳು ಕೂಡ ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ 30% ರಿಂದ 35% ಕಡಿಮೆ ಮಾಲಿನ್ಯಕಾರಕವಾಗಿವೆ. ಸಾಂಪ್ರದಾಯಿಕ ಪಟಾಕಿಗಳು ಹೊರಸೂಸುವ 160 ಡೆಸಿಬಲ್ ಶಬ್ಧಕ್ಕಿಂತ ಕಡಿಮೆ ಅಂದರೆ 125 ಡೆಸಿಬಲ್ ಧ್ವನಿಯನ್ನು ಉಂಟು ಮಾಡುತ್ತವೆ ಎಂದು ತಯಾರಕರು ಮತ್ತು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ, ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಉದ್ಯಮವು ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಬದ್ಧತೆಯನ್ನು ಪೂರೈಸಿದೆ ಎಂದು ಪಟಾಕಿ ತಯಾರಕರು ಹೇಳಿದ್ದಾರೆ. “ಅಗ್ಗದ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭಾರೀ ಮಾಲಿನ್ಯಕ್ಕೆ ಕಾರಣವಾಗಿದ್ದರೂ ಅವು ಕಾನೂನುಬಾಹಿರವಾಗಿವೆ. ಅವುಗಳನ್ನು ನಿಷೇಧಿಸಬೇಕು ಮತ್ತು ಹಸಿರು ಕ್ರ್ಯಾಕರ್‌ಗಳನ್ನು ಮಾತ್ರ ಬಳಸಬೇಕು” ಎಂದು ಪಟಾಕಿ ತಯಾರಕರು ಹೇಳುತ್ತಾರೆ.
ಈ ಪಟಾಕಿಗಳನ್ನು ಅಧಿಕೃತ ಪರವಾನಗಿ ಪಡೆದಿರುವ ಮಳಿಗೆಗಳಿಂದ ಮಾತ್ರ ಕೊಳ್ಳಬಹುದು. ನೀವು ಕೊಳ್ಳುವ ಪಟಾಕಿ ಹಸಿರು ಪಟಾಕಿಯೇ ಎಂಬ ಗೊಂದಲ ನಿವಾರಿಸಿಕೊಳ್ಳಲು ಪಟಾಕಿ ಪ್ಯಾಕ್ ಮೇಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ದೃಢಪಡಿಸಿಕೊಳ್ಳಬಹುದು.


