2022ರ ವರೆಗೆ ಕೊರೊನಾ ವ್ಯಾಕ್ಸಿನ್ ಸಿಗಲ್ಲ: ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ
PC: ANI

ಕೊರೊನಾ ಸಾಂಕ್ರಾಮಿಕ ರೋಗದ ಲಸಿಕೆಗಾಗಿ ಜನ ಸಾಮಾನ್ಯರು 2022ರ ವರೆಗೆ ಕಾಯಬೇಕಾಗುತ್ತದೆ ಎಂದು ದೇಶದ ಕೊರೊನಾವೈರಸ್ ನಿರ್ವಹಣೆಯ ರಾಷ್ಟ್ರೀಯ ಟಾಸ್ಕ್‌ಫೋರ್ಸ್ ಸದಸ್ಯರೂ ಆಗಿರುವ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಕೊರೊನಾವೈರಸ್ ಲಸಿಕೆ ಭಾರತೀಯ ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಾಗಲು “ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ” ಎಂದು ಏಮ್ಸ್ ನಿರ್ದೇಶಕರು ತಿಳಿಸಿದ್ದಾರೆ.

ಸಿಎನ್‌ಎನ್-ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಂದೀಪ್ ಗುಲೇರಿಯಾ, ಸಾಮಾನ್ಯ ಜನರಿಗೆ ಲಸಿಕೆ ದೊರೆಯಲು “ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು. “ನಮ್ಮ ದೇಶದಲ್ಲಿ ಜನಸಂಖ್ಯೆ ದೊಡ್ಡದಾಗಿದೆ. ಫ್ಲೂ ಲಸಿಕೆಯಂತೆ ಈ ಲಸಿಕೆಯನ್ನು ಮಾರುಕಟ್ಟೆಯಿಂದ ಹೇಗೆ ಖರೀದಿಸಬಹುದು ಮತ್ತು ಅದನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲು ನಮಗೆ ಸಮಯ ಬೇಕು” ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಕೊರೊನಾ ವೈರಸ್ ಲಸಿಕೆ ಲಭ್ಯವಾದ ನಂತರ ಭಾರತಕ್ಕೆ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿರುವ ಏಮ್ಸ್ ನಿರ್ದೇಶಕರು, ಲಸಿಕೆ ವಿತರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಲಸಿಕೆ ದೇಶದ ಪ್ರತಿಯೊಂದು ಭಾಗವನ್ನು ತಲುಪುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೊಡ್ಡ ದೇಶದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದಲ್ಲಿ ರಿಮೋಟ್ ಪ್ರದೇಶಗಳಿಗೆ ತಲುಪಿಸುವುದು ಕೂಡ ಒಂದು ಸವಾಲು’ ಎಂದಿದ್ದಾರೆ.

ಇದನ್ನೂ ಓದಿ: ಉಚಿತ ಕೊರೊನಾ ಲಸಿಕೆ ವಿವಾದ: ಬಿಹಾರೇತರ ರಾಜ್ಯದವರು ಬಾಂಗ್ಲಾದೇಶದವರೇ- ಶಿವಸೇನೆ ಪ್ರಶ್ನೆ

’ಎರಡನೆಯ ಸವಾಲು ಎಂದರೇ, ಈ ಲಸಿಕೆ ನಂತರ ಹೊರಬರುವ ಮತ್ತೊಂದು ಲಸಿಕೆಯ ಸ್ಥಾನೀಕರಣ ಮತ್ತು ಮೊದಲನೆಯದಕ್ಕಿಂತ ಇದು ಹೇಗೆ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸುವುದು’ ಎಂದು ಡಾ. ರಂದೀಪ್ ಗುಲೇರಿಯಾ ಹೇಳಿದರು.

“ನಾವು ಲಸಿಕೆ ವಿಚಾರದಲ್ಲಿ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಎರಡನೇ ಲಸಿಕೆ  ಮೊದಲನೆಯದಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದರೆ, ನಾವು ಅದನ್ನು ಹೇಗೆ ಸ್ಥಾನೀಕರಿಸುತ್ತೇವೆ? ನಾವು ಕೋರ್ಸ್ ತಿದ್ದುಪಡಿಯನ್ನು ಹೇಗೆ ಮಾಡುತ್ತೇವೆ? ಜೊತೆಗೆ ಲಸಿಕೆ ’ಎ’ ಯಾರಿಗೆ ಬೇಕು ಮತ್ತು ಲಸಿಕೆ ’ಬಿ’ ಯಾರಿಗೆ ಬೇಕು ಎಂದು ನಿರ್ಧರಿಸುವುದು ಹೇಗೆ? ಹೀಗೆ ಸಾಕಷ್ಟು ಗೊಂದಲಗಳಿವೆ” ಎಂದು ಏಮ್ಸ್ ನಿರ್ದೇಶಕರು ಹೇಳಿದರು.

ಏಮ್ಸ್ ನಿರ್ದೇಶಕರು ಮತ್ತೊಂದು ವಿಚಾರವನ್ನು ತಿಳಿಸಿದ್ದು, ಕೊರೊನಾ ಸೋಂಕು, ವ್ಯಾಕ್ಸಿನೇಷನ್ ಮೂಲಕ “ಕಣ್ಮರೆಯಾಗುವುದಿಲ್ಲ” ಎಂದು ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.

ಏಮ್ಸ್ ನಿರ್ದೇಶಕರೇ ಕೊರೊನಾ ಲಸಿಕೆ ಬರಲು ಇನ್ನು ವರ್ಷಗಳು ಬೇಕು ಎನ್ನುತ್ತಿದ್ದರೇ ಇತ್ತ ರಾಜಕೀಯ ಪಕ್ಷಗಳು ಮಾತ್ರ ಉಚಿತ ಕೊರೊನಾ ಲಸಿಕೆ ಎಂಬ ಅಂಶ ಇಟ್ಟುಕೊಂಡು ರಾಜಕೀಯ ಮಾಡುತ್ತಿವೆ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿವೆ.


ಇದನ್ನೂ ಓದಿ: ಬಿಹಾರ ಚುನಾವಣೆ: ಉಚಿತ ಕೊರೊನಾ ಲಸಿಕೆ ಪ್ರಸ್ತಾಪ; ಟ್ರೋಲ್‌ ಆದ ಬಿಜೆಪಿ ಪ್ರಣಾಳಿಕೆ!

1 COMMENT

  1. ಹಾಗಾದರೆ ಬಿಹಾರಕ್ಕೆ ಫ್ರೀ ತಲುಪಲು ಎಷ್ಟು ವರ್ಷ ಹಿಡಿಯಬಹುದು?

LEAVE A REPLY

Please enter your comment!
Please enter your name here