ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಇಂದಿನಿಂದ ನವೆಂಬರ್ 30ರ ವರೆಗೆ ಎಲ್ಲಾ ಪಟಾಕಿಗಳ ಮಾರಾಟ ಮತ್ತು ಬಳಕೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೋಮವಾರ ಸಂಪೂರ್ಣ ನಿಷೇಧ ಹೇರಿದೆ.
ಆಯಾ ರಾಜ್ಯಗಳು, ಗಾಳಿಯ ಗುಣಮಟ್ಟ ‘ಮಧ್ಯಮ’ ಅಥವಾ ಅದಕ್ಕಿಂತ ಕಡಿಮೆ ಇರುವ ನಗರಗಳಲ್ಲಿ ಅಥವಾ ಪಟ್ಟಣಗಳಲ್ಲಿ, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದು. ದೀಪಾವಳಿ, ಹೊಸ ವರ್ಷಾಚರಣೆ, ಕ್ರಿಸ್‌ಮಸ್ ನಂತಹ ಹಬ್ಬಗಳಲ್ಲಿ ಅವುಗಳನ್ನು ಸಿಡಿಸುವ ಸಮಯವನ್ನು ಎರಡು ಗಂಟೆಗಳವರೆಗೆ ನಿರ್ಬಂಧಿಸಬಹುದು ಎಂದು ಎನ್‌ಜಿಟಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.
ಪ್ರಸ್ತುತ, ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ಅನುಮತಿಸುವ ಅಥವಾ ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರಗಳು ತಮ್ಮದೇ ಆದ ಮಾರ್ಗಸೂಚಿಗಳನ್ನು ಹೊಂದಿವೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಕಳೆದ ಗುರುವಾರ ನಡೆಸಿದ ಕೊರೊನಾ ವೈರಸ್ ಪರಿಶೀಲನಾ ಸಭೆಯಲ್ಲಿ ಪಟಾಕಿಗಳ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನ ಆಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಮೂರನೇ ಅಲೆ ಶುರುವಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.
ಇದನ್ನೂ ಓದಿ: ವಾಯುಮಾಲಿನ್ಯ ತಡೆಗೆ ಸುಗ್ರೀವಾಜ್ಞೆ: 5 ವರ್ಷ ಜೈಲು; 1 ಕೋಟಿ ದಂಡ
ದೆಹಲಿಯಲ್ಲಿ ಏಕಾಏಕಿ ಕೊರೊನಾ ಮೂರನೇ ಅಲೆ ಈಗಾಗಲೇ ಆರಂಭವಾಗಿರುವ ಕಾರಣ, ರಾಜ್ಯ ಸರ್ಕಾರವು ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಮುಖ್ಯಮಂತ್ರಿ ಕೇಜ್ರಿವಾಲ್, ಆತಂಕ ಪಡುವುದು ಬೇಡ, ತಾವು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಭೆಯಲ್ಲಿ ತಿಳಿಸಿದ್ದರು.
ಇತ್ತ ಹರಿಯಾಣ ಸರ್ಕಾರ, ದೀಪಾವಳಿ ಮತ್ತು ಗುರುಪುರಬ್‌ನಲ್ಲಿ ಪಟಾಕಿ ಸಿಡಿಸಲು ಮತ್ತು ಮಾರಾಟ ಮಾಡಲು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ 2 ಗಂಟೆ ಅನುಮತಿ ನೀಡಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮುನ್ನಾ ದಿನದಂದು ರಾತ್ರಿ 11.55 ರಿಂದ ಮುಂಜಾನೆ 12.30 ರ ನಡುವೆ ಪಟಾಕಿ ಸಿಡಿಸಲು ಅನುಮತಿ ನೀಡಿದೆ.
ದೆಹಲಿಯ ವಾಯು ಗುಣಮಟ್ಟದ ಸೂಚ್ಯಂಕ (AQI) ಸತತ ಐದನೇ ದಿನವೂ ತೀವ್ರವಾಗಿ ಮುಂದುವರೆದಿದೆ. ಸೋಮವಾರ ಬೆಳಿಗ್ಗೆ 6 ಗಂಟೆಗೆ AQI 459 ಮತ್ತು ಬೆಳಿಗ್ಗೆ 8.30 ಕ್ಕೆ ದಾಖಲಾದ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ (ಸಿ) ಆಗಿತ್ತು.
ಪಟಾಕಿಗಳ ಹೊರತಾಗಿಯೂ ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ಅತಿಯಾದ ಮಾಲಿನ್ಯಕ್ಕೆ ಕೃಷಿತ್ಯಾಜ್ಯ ಸುಡುವಿಕೆಗೆ ಕಾರಣವಾಗಿದೆ. ವರದಿಗಳ ಪ್ರಕಾರ, ಪಂಜಾಬ್‌ನಲ್ಲಿ ಅತಿ ಹೆಚ್ಚಾಗಿ ಸುಡಲಾಗುವ ಕೃಷಿ ತ್ಯಾಜ್ಯವು ಗಾಳಿಯ ಗುಣಮಟ್ಟ ಕುಸಿಯಲು ಪ್ರಾಥಮಿಕ ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ನವೆಂಬರ್ 30ರ ವರೆಗೆ ಪಟಾಕಿಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.
301, 400, 401 ರಿಂದ 500 ರ ನಡುವಿನ ವಾಯು ಗುಣಮಟ್ಟದ ಸೂಚ್ಯಂಕವನ್ನು ಕ್ರಮವಾಗಿ “ಅತ್ಯಂತ ಕಳಪೆ” ಮತ್ತು “ತೀವ್ರ” ಎಂದು ಪರಿಗಣಿಸಲಾಗುತ್ತದೆ. ಎನ್‌ಸಿಆರ್‌ಯಲ್ಲಿನ AQI, 475 ಇದ್ದು ಇನ್ನಷ್ಟು ತೀವ್ರವಾಗುವ ಸಂಭವವಿದೆ.


