Homeಮುಖಪುಟಕನ್ನಡ ರಾಜ್ಯೋತ್ಸವ ವಿ‍ಶೇಷ: ನಮ್ಮ ಕನಸಿನ ಕರ್ನಾಟಕ ಹೇಗಿರಬೇಕು?

ಕನ್ನಡ ರಾಜ್ಯೋತ್ಸವ ವಿ‍ಶೇಷ: ನಮ್ಮ ಕನಸಿನ ಕರ್ನಾಟಕ ಹೇಗಿರಬೇಕು?

ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯ, ಭಾಷಾ ವೈವಿಧ್ಯ ಉಳಿದು ಬೆಳೆಯುತ್ತಿರಬೇಕು. ಒಟ್ಟಿನಲ್ಲಿ, ಕರ್ನಾಟಕದ ಪ್ರಜೆಗೆ ಘನತೆಯಿಂದ ತನ್ನ ಬದುಕನ್ನು ಕಟ್ಟಿಕೊಳ್ಳುವ ಅವಕಾಶವಿರಬೇಕು.

- Advertisement -
- Advertisement -

ನವೆಂಬರ್ 1, 2020 ಅರವತ್ತೈದನೇ ಕನ್ನಡ ರಾಜ್ಯೋತ್ಸವ ದಿನ. ಆದರೆ, ನಾವು ಅಂದರೆ ಕನ್ನಡಿಗರು ಅಥವಾ ಕರ್ನಾಟಕದ ಪ್ರಜೆಗಳು ಈ ಕನ್ನಡ ರಾಜ್ಯೋತ್ಸವವನ್ನು ಹೆಚ್ಚು ಸಂಭ್ರಮದಿಂದ ಆಚರಿಸಿ ಖುಷಿ ಪಡುವಂಥ ಸ್ಥಿತಿಯಲ್ಲಿದ್ದೇವೆಯೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ಒಂದು ಮಟ್ಟದ ನಿರಾಸೆಯಾಗುವುದಂತೂ ನಿಜ. ಹಾಗಿದ್ರೆ ನಾವೆಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ನಮ್ಮ ಕನಸಿನ ಕರ್ನಾಟಕ ಹೇಗಿರಬೇಕು?

1) ಕರ್ನಾಟಕದ ಎಲ್ಲ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಉಚಿತವಾಗಿ ದೊರೆಯುವಂತಿರಬೇಕು. 2) ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಉಚಿತವಾಗಿ (ಅಥವಾ ಕೈಗೆಟಕುವ ದರದಲ್ಲಿಯಾದರೂ) ದೊರೆಯುವಂತಿರಬೇಕು. 3) ನಮ್ಮ ಯುವಕರಿಗೆ ಅವರ ಅರ್ಹತೆಗೆ ತಕ್ಕ ಉದ್ಯೋಗ ದೊರೆಯುವಂತಿರಬೇಕು. 4) ನಮ್ಮ ರೈತರ ಬೆಳೆಗೆ ಸೂಕ್ತ ಬೆಲೆ ದೊರೆಯುವಂತಿರಬೇಕು. 5) ಗುಣಮಟ್ಟದ ರಸ್ತೆ, ವಿದ್ಯುತ್, ನೀರು ಮುಂತಾದ ಮೂಲ ಸೌಕರ್ಯಗಳು ರಾಜ್ಯದೆಲ್ಲೆಡೆ ಇರಬೇಕು. 6) ಇಡೀ ರಾಜ್ಯದ ಪರಿಸರ ವೈವಿಧ್ಯ ಅಂದರೆ ಪಶ್ಚಿಮ ಘಟ್ಟ, ಬಯಲುಸೀಮೆ, ಕರಾವಳಿ ಇತ್ಯಾದಿ ಸಮೃದ್ಧಿಯಿಂದಿರಬೇಕು. 7) ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯ, ಭಾಷಾ ವೈವಿಧ್ಯ ಉಳಿದು ಬೆಳೆಯುತ್ತಿರಬೇಕು. ಒಟ್ಟಿನಲ್ಲಿ, ಕರ್ನಾಟಕದ ಪ್ರಜೆಗೆ ಘನತೆಯಿಂದ ತನ್ನ ಬದುಕನ್ನು ಕಟ್ಟಿಕೊಳ್ಳುವ ಅವಕಾಶವಿರಬೇಕು.

ಈ ಮೇಲ್ಕಾಣಿಸಿದ ಆಶಯಗಳ ರೀತಿಯಲ್ಲಿ ನಮ್ಮ ಕರ್ನಾಟಕ ರಾಜ್ಯವಿದ್ದರೆ ಆಗ ಪ್ರತಿ ಕನ್ನಡಿಗಳಿ/ನಿಗೂ ಘನತೆ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಈ ರೀತಿ ಭಾರತದ ಯಾವುದೇ ರಾಜ್ಯವನ್ನು ನಾವು ಒಂದು ಮಾದರಿ ರಾಜ್ಯವೆಂದು ಕರೆಯಬಹುದು. ಈ ನಿಟ್ಟಿನಲ್ಲಿ ಕರ್ನಾಟಕ ಒಂದು ನಿಜವಾದ ಮಾದರಿ ರಾಜ್ಯವೆ ಎಂದು ಕೇಳಿಕೊಂಡರೆ ಉತ್ತರ ಇಲ್ಲ ಎಂದೇ ಬರುತ್ತದೆ.

ಹಾಗಾದರೆ ಇಲ್ಲಿ ಮತ್ತೊಂದು ಪ್ರಶ್ನೆ ಮೂಡುತ್ತದೆ. ಕರ್ನಾಟಕ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿರುವಾಗ, ಮುಂದಿನ ವರ್ಷಗಳಲ್ಲಿ ಮೇಲ್ಕಾಣಿಸಿದ ರೀತಿಯ ಮಾದರಿ ರಾಜ್ಯವಾಗುವ ಸಾಧ್ಯತೆಯಿದೆಯಲ್ಲವೇ? ಹೌದು, ಕರ್ನಾಟಕ ಜಿಡಿಪಿಯಲ್ಲಿ 4ನೇ ಸ್ಥಾನದಲ್ಲಿದೆ, ತಲಾವಾರು ಆದಾಯದಲ್ಲಿ ಏಳನೇ ಸ್ಥಾನದಲ್ಲಿದೆ. ಆದರೆ ಮೇಲಿನೆರಡು ಸೂಚ್ಯಂಕಗಳಿಗಿಂತ ಸರ್ವತೋಮುಖ ಅಭಿವೃದ್ಧಿ ಅಳೆಯುವ ಮಾಪನವಾದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ ಹದಿನೈದಕ್ಕಿಂತ ಕೆಳಗಿನ ಸ್ಥಾನದಲ್ಲಿದೆ. ಈ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಒಂದು ಕ್ಷಣ ಕಡೆಗಣಿಸಿ ಮೇಲ್ನೋಟಕ್ಕೆ ಅಭಿವೃದ್ಧಿ ಅಳೆಯುವ ಮಾಪಕವಾದ ಜಿಡಿಪಿಯ ಪ್ರಕಾರವೇ ಕರ್ನಾಟಕ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ ಎಂದುಕೊಂಡರೂ ಕೂಡ, ನಮ್ಮ ಕನಸಿನ ಮಾದರಿ ರಾಜ್ಯವಾಗಲು ಕರ್ನಾಟಕಕ್ಕೆ ಹೆಚ್ಚಿನ ಆರ್ಥಿಕ ಬಲ ಬೇಕಾಗುವುದು ನಿಚ್ಚಳ.

ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆ ಕೊಡಲು, ಮೂಲ ಸೌಲಭ್ಯ ಒದಗಿಸಲು ಮತ್ತು ಒಟ್ಟಾರೆಯಾಗಿ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ಅತಿಮುಖ್ಯವಾಗಿ ಹೆಚ್ಚಿನ ಆರ್ಥಿಕ ಬಲ ಕರ್ನಾಟಕಕ್ಕೆ ಬೇಕಾಗುತ್ತದೆ. ಕಠೋರ ವಾಸ್ತವ ಏನೆಂದರೆ, ಕರ್ನಾಟಕವೂ ಸೇರಿದಂತೆ ಭಾರತದ ಯಾವುದೇ ರಾಜ್ಯಕ್ಕೂ ಕೂಡ ತನ್ನ ಸಾಮರ್ಥ್ಯಕ್ಕನುಗುಣವಾಗಿ ತನ್ನ ಆರ್ಥಿಕತೆಯನ್ನು ವೃದ್ಧಿ ಮಾಡಿಕೊಳ್ಳುವ ಅವಕಾಶ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಇಲ್ಲವಾಗಿದೆ.

ಏಕೆಂದರೆ, ವಿವಿಧ ಕೇಂದ್ರ ಸರ್ಕಾರಗಳು ಸಂವಿಧಾನದಲ್ಲಿನ ಕೆಲ ಅಂಶಗಳನ್ನೇ ಬಳಸಿಕೊಂಡು ರೂಪಿಸಿದಂತಹ ಆರ್ಥಿಕ ನೀತಿಗಳ ಮೂಲಕ ರಾಜ್ಯ ಸರ್ಕಾರಗಳು ಆರ್ಥಿಕವಾಗಿ ಕೇಂದ್ರದ ಮೇಲೆಯೇ ಬಹುತೇಕ ಸಂಪೂರ್ಣವಾಗಿ ಅವಲಂಬಿತವಾಗುವಂತೆ ಮಾಡುತ್ತಾ ಬಂದಿವೆ. ಅದರಲ್ಲೂ ಕಡೆಯ ಐದಾರು ವರ್ಷಗಳಿಂದೀಚೆಗಂತೂ ಕೇಂದ್ರದಿಂದ ರಾಜ್ಯಗಳಿಗೆ ಬರುವ ಆರ್ಥಿಕ ಅನುದಾನ ಗಣನೀಯವಾಗಿ ಕಡಿಮೆಯಾಗಿದೆ.

2017ರ ಜುಲೈನಲ್ಲಿ ಜಿಎಸ್‍ಟಿ ಜಾರಿಯಾದ ಮೇಲೆ ಅಬಕಾರಿ, ಪೆಟ್ರೋಲ್ ಮತ್ತು ಇತರೆ ಒಂದೆರಡು ವಿಷಯ ಹೊರತುಪಡಿಸಿ ಇನ್ಯಾವ ವಸ್ತುವಿನ ಮೇಲೂ ತೆರಿಗೆ ಹಾಕುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಕಳೆದು ಕೊಂಡಿವೆ. ಹಾಗಾಗಿ, ತಮ್ಮ ರಾಜ್ಯದಲ್ಲಿ ಜಿಎಸ್‍ಟಿ ಸಂಗ್ರಹಿಸಿ ಕೇಂದ್ರಕ್ಕೆ ಕೊಟ್ಟು ಅಲ್ಲಿಂದ ಅವರು ಕೊಟ್ಟಷ್ಟು ತೆಗೆದುಕೊಳ್ಳುವ ಅನಿವಾರ್ಯತೆಗೆ ರಾಜ್ಯ ಸರ್ಕಾರಗಳು ಬಿದ್ದಿವೆ.

ಐದಾರು ವರ್ಷಗಳಿಂದೀಚೆಗೆ ರಾಜ್ಯ ಸರ್ಕಾರಗಳಿಗೆ ಕೇಂದ್ರದ ಆರ್ಥಿಕ ಅನುದಾನ ಹೇಗೆ ಕಡಿಮೆಯಾಗುತ್ತಾ ಬಂದಿದೆ ಎಂದು ನೋಡುವುದಾದರೆ,

1) ಜಿಎಸ್‍ಟಿ ಜಾರಿಗೊಳಿಸುವ ಸಮಯದಲ್ಲಿ ರಾಜ್ಯಗಳಿಗೆ ನಷ್ಟವುಂಟಾಗದಿರಬೇಕಾದರೆ ಜಿಎಸ್‍ಟಿಯಲ್ಲಿ ರಾಜ್ಯ ಮತ್ತು ಕೇಂದ್ರ 60:40 ಅನುಪಾತದಲ್ಲಿ ಜಿಎಸ್‍ಟಿ ತೆರಿಗೆ ಹಂಚಿಕೆ ಮಾಡಬೇಕಿತ್ತು. ಆದರೆ, ಅದನ್ನು 50:50 ಅನುಪಾತದಲ್ಲಿ ಹಂಚಿಕೆ ಮಾಡುವ ಒಪ್ಪಂದದ ಮೂಲಕ ಜಿಎಸ್‍ಟಿ ಜಾರಿಯ ವೇಳೆಯೇ ರಾಜ್ಯಗಳಿಗೆ ಆರ್ಥಿಕ ನಷ್ಟ ಉಂಟುಮಾಡಲಾಗಿದೆ.

2) 14ನೇ ಹಣಕಾಸು ಆಯೋಗ ರಾಜ್ಯಗಳ ಅವಶ್ಯಕತೆ ಮನಗಂಡು ಹಂಚಿಕೆಯಾಗುವ ತೆರಿಗೆ ಹಣದಲ್ಲಿ ರಾಜ್ಯಗಳ ಪಾಲನ್ನು 32%ನಿಂದ 42%ಗೆ ಹೆಚ್ಚಿಸಿತು. ಆದರೆ, ಕೇಂದ್ರ ಸರ್ಕಾರವು ಹಲವು ವಸ್ತುಗಳು ಮತ್ತು ಸೇವೆಗಳಿಗೆ ಸೆಸ್ ಮತ್ತು ಸರ್‌ಚಾರ್ಜ್ ವಿಧಿಸುವ ಮೂಲಕ ರಾಜ್ಯಗಳಿಗೆ ಹಂಚಿಕೆಯಾಗುವ ಹಣದ ಮೊತ್ತವನ್ನೇ ಕಡಿಮೆ ಮಾಡುತ್ತಾ ಬಂತು (ಸೆಸ್ ಮೂಲಕ ಸಂಗ್ರಹವಾದ ಹಣವನ್ನು ರಾಜ್ಯಗಳಿಗೆ ಹಂಚುವ ಕಡ್ಡಾಯವಿಲ್ಲ). ಉದಾಹರಣೆಗೆ 2018-19ರಲ್ಲಿ ಸೆಸ್ ಮೂಲಕ ಸಂಗ್ರಹವಾದ ಹಣವೇ ರೂ 2,78,028 ರಷ್ಟು. ಇದು ಒಟ್ಟು ಸಂಗ್ರಹವಾದ ತೆರಿಗೆಯ ಶೇ 12.24 ರಷ್ಟು. (ಪಟ್ಟಿ 1 ನೋಡಿ)

3) ಈ ಸೆಸ್ ಮತ್ತು ಸರ್‌ಚಾರ್ಜ್‍ಗಳಿಂದಾಗಿ ರಾಜ್ಯಗಳಿಗೆ 2015ರಿಂದ 2019ರವರೆಗೆ ಉಂಟಾದ ಒಟ್ಟು ನಷ್ಟ ಸುಮಾರು ಐದು ಲಕ್ಷ ಕೋಟಿಯಷ್ಟು. ಇದು ನಮ್ಮ ದೇಶದ ಜಿಡಿಪಿಯ ಶೇ.3 ರಷ್ಟಾಗುತ್ತದೆ. (ಪಟ್ಟಿ 2 ನೋಡಿ)

4) ಜೊತೆಗೆ ಕೇಂದ್ರವು ಪಾರದರ್ಶಕತೆಯಿಲ್ಲದ ಲೆಕ್ಕಾಚಾರ ಬಳಸಿ ಸೆಸ್ ಮತ್ತು ಸರ್‌ಚಾರ್ಜ್ ಕಳೆದ ಮೇಲೆ ಹಂಚಿಕೊಳ್ಳಬೇಕಾದ ತೆರಿಗೆಯನ್ನು ಕಡಿಮೆ ತೋರಿಸಿ ಪ್ರತಿವರ್ಷ ಕನಿಷ್ಟ ಐವತ್ತರಿಂದ ಅರವತ್ತು ಸಾವಿರ ಕೋಟಿಗಳಷ್ಟು ಕಡಿಮೆ ಹಣವನ್ನು ರಾಜ್ಯಗಳಿಗೆ ಕೊಡುತ್ತಾ ಬಂದಿದೆ. (ಪಟ್ಟಿ 3 ನೋಡಿ)

5) ಇಷ್ಟೆಲ್ಲದರ ಜೊತೆಗೆ ಹದಿನೈದನೇ ಹಣಕಾಸು ಆಯೋಗವು ಪ್ರತಿ ರಾಜ್ಯವು ಆರ್ಥಿಕ ಶಿಸ್ತಿಗೆ ಬದ್ಧವಾಗಿದ್ದರೆ ಮಾತ್ರ ಕೇಂದ್ರದ ಅನುದಾನ ಕೊಡುವ ನಿಬಂಧನೆ ಮುಂದಿಟ್ಟಿದೆ. (ಈ ನಿಬಂಧನೆ ಕೇಂದ್ರ ಸರ್ಕಾರಕ್ಕಿಲ್ಲ). ಅಂದರೆ, ಕೇಂದ್ರ ಸರ್ಕಾರದ ಆರ್ಥಿಕ ಆಶಯಗಳನ್ನು ಜಾರಿಗೊಳಿಸುವ ರಾಜ್ಯಗಳಿಗೆ ಮಾತ್ರ ಅವುಗಳಿಗೆ ಸೇರಬೇಕಾದ ಅನುದಾನ ಕೊಡುವ ಸೂಚನೆ ಇದರಲ್ಲಿದೆ. ಇದು ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಹೆಜ್ಜೆಯಾಗಿದೆ.

6) ಹದಿನೈದನೇ ಹಣಕಾಸು ಆಯೋಗ 2011ರ ಜನಸಂಖ್ಯೆ ಅನುಸರಿಸಿ ಅನುದಾನ ನಿಗದಿಪಡಿಸುವ ನಿಯಮ ಮುಂದಿಟ್ಟಿದ್ದು ಇದರಿಂದ ಕರ್ನಾಟಕದಂಥ ಜನಸಂಖ್ಯೆ ನಿಯಂತ್ರಣ ಮಾಡಿದ ರಾಜ್ಯಗಳಿಗೆ ಅನುದಾನ ಕಡಿತವಾಗಲಿದೆ.

ಒಟ್ಟಾರೆಯಾಗಿ, ಮೇಲ್ಕಾಣಿಸಿದ ಕೆಲವೇ ಅಂಶಗಳನ್ನು ಕರ್ನಾಟಕಕ್ಕೆ ಅನ್ವಯಿಸಿ ಅರ್ಥ ಮಾಡಿಕೊಳ್ಳುವುದಾದರೆ, ಒಂದು ಸುಭಿಕ್ಷ ಮತ್ತು ಮಾದರಿ ರಾಜ್ಯವಾಗಿ ಕರ್ನಾಟಕ ಕಟ್ಟಲು ಅತ್ಯಗತ್ಯವಾಗಿ ಬೇಕಾದ ಆರ್ಥಿಕ ಬಲವನ್ನು ಈಗಿನ ಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯಲ್ಲಿ ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಕಳೆದ ವರ್ಷ ಕರ್ನಾಟಕದ ಭೀಕರ ನೆರೆಗೆ ಕೇಂದ್ರ ಕೊಟ್ಟಂತಹ ಪರಿಹಾರ ಎಷ್ಟಿತ್ತು ಮತ್ತು ರಾಜ್ಯ ಸರ್ಕಾರಕ್ಕೂ ಇನ್ಯಾವುದೇ ಮೂಲದಿಂದ ಹಣ ಹೊಂದಿಸಲಾಗದೆ ಹೇಗೆ ನಮ್ಮದೇ ಬಂಧುಗಳನ್ನು ನಡುನೀರಲ್ಲಿ ಕೈಬಿಡಬೇಕಾಯಿತು ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಹಾಗೆಯೇ, ಕರ್ನಾಟಕಕ್ಕೆ ಬರಬೇಕಾದ ಜಿಎಸ್‍ಟಿ ಹಣವನ್ನು ಕೇಂದ್ರ ಕೊಡದಿದ್ದರೂ ಕೇಂದ್ರದ ಮುಂದೆ ಭಿಕ್ಷೆ ಬೇಡುವುದನ್ನು ಬಿಟ್ಟು ಬೇರೆ ಏನೂ ಮಾಡಲಿಕ್ಕಾಗದೆ ಇರುವುದನ್ನೂ ನೋಡುತ್ತಿದ್ದೇವೆ. ಗಾಯದ ಮೇಲೆ ಬರೆ ಎಳೆದಂತೆ, ಹದಿನೈದನೇ ಹಣಕಾಸು ಆಯೋಗ ಹೇಳಿದ 5345 ಕೋಟಿ ರೂಪಾಯಿಗಳನ್ನು ಕೇಂದ್ರ ಕೊಡದೆ ಕೈಎತ್ತಿದರೂ ಗಟ್ಟಿಯಾಗಿ ಕೇಳದ ಸ್ಥಿತಿಯಲ್ಲಿ ಇದ್ದೇವೆ. ನಮ್ಮದೇ ತೆರಿಗೆ ಹಣ ಬಳಸಿ ಕರ್ನಾಟಕದ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವುದನ್ನೂ ನೋಡುತ್ತಿದ್ದೇವೆ.

ಪರಿಸ್ಥಿತಿ ಹೀಗೇ ಮುಂದುವರಿದರೆ, ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಮತ್ತು ನಿವೃತ್ತಿ ವೇತನ ಬಿಟ್ಟು ಬೇರಾವ ಅಭಿವೃದ್ಧಿ ಕಾರ್ಯ ಮಾಡಲೂ ಹಣವಿಲ್ಲದ ಸ್ಥಿತಿಯನ್ನು ರಾಜ್ಯ ಸರ್ಕಾರಗಳು ತಲುಪುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಆದುದರಿಂದ, ಶೀಘ್ರವಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ (ಬೇರೆ ರಾಜ್ಯಗಳ ಪರಸ್ಪರ ಸಹಕಾರ ಕೂಡ ಪಡೆದು) ಕೇಂದ್ರದ ಮೇಲೆ ನಿರಂತರ ಒತ್ತಡ ಹೇರಿ ಒಂದು ಮಟ್ಟಿಗಿನ ಆರ್ಥಿಕ ಸ್ವಾಯತ್ತತೆಯನ್ನಾದರೂ ಪಡೆದರೆ ಮಾತ್ರ ನಮ್ಮ ಕನಸಿನ ಮಾದರಿ ಕರ್ನಾಟಕ ಕಟ್ಟಲು ಸಾಧ್ಯ.

  • ಬಸವರಾಜು ಬಿ.ಸಿ

ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವಾರಾಜು ಅವರಿಗೆ ಅರ್ಥಶಾಸ್ತ್ರದ ಮೇಲೆ ಆಸಕ್ತಿ. ಅತ್ಯುತ್ತಮ ಹಾಡುಗಾರರೂ ಆಗಿರುವ ಬಸು ಅವರು ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ


ಇದನ್ನೂ ಓದಿ: 3-4ನೇ ತ್ರೈಮಾಸಿಕದಲ್ಲಿಯೂ ಜಿಡಿಪಿ ಋಣಾತ್ಮಕವಾಗಿಯೇ ಇರಲಿದೆ: ನಿರ್ಮಲಾ ಸೀತಾರಾಮನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...