ಬಿಜೆಪಿಗೆ ತನ್ನ ಹೇಳಿಕೆ ಬಗ್ಗೆ ಪ್ರಾಮಾಣಿಕತೆ ಇದ್ದರೆ ಚುನಾವಣಾ ಮತದಾರರ ಪಟ್ಟಿಯಲ್ಲಿ 1,000 ರೋಹಿಂಗ್ಯಾಗಳ ಹೆಸರುಗಳನ್ನು ತೋರಿಸಲಿ ಎಂದು ಆಲ್ ಇಂಡಿಯ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ.
“ಮತದಾರರ ಪಟ್ಟಿಯಲ್ಲಿ 30,000 ರಿಂದ 40,000 ರೋಹಿಂಗ್ಯಾಗಳಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಪಟ್ಟಿಯಲ್ಲಿ 30,000 ರೋಹಿಂಗ್ಯಾಗಳಿದ್ದರೆ, ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ನಿದ್ದೆ ಮಾಡುತ್ತಿದ್ದಾರೆಯೆ? ಇಷ್ಟು ರೋಹಿಂಗ್ಯಾಗಳನ್ನು ಹೇಗೆ ಪಟ್ಟಿ ಮಾಡಲಾಗಿದೆ? ಎಂದು ನೋಡುವುದು ಅವರ ಕೆಲಸವಲ್ಲವೇ ” ಎಂದು ಓವೈಸಿ ಪ್ರಶ್ನಿಸಿದ್ದಾರೆ.
“ಪ್ರತಿದಿನ ಒಬ್ಬರಲ್ಲ, ಒಬ್ಬರು ದೆಹಲಿಯಿಂದ ಹೈದರಾಬಾದ್‌ಗೆ ಬಂದಿಳಿಯುತ್ತಿದ್ದಾರೆ. 2019 ರಿಂದ ಅಭಿವೃದ್ಧಿ ಕೆಲಸಗಳಿಗಾಗಿ ಹೈದರಾಬಾದ್‌ಗೆ ಕೇಂದ್ರದ ಬಿಜೆಪಿ ಎಷ್ಟು ಹಣ ಬಿಡುಗಡೆ ಮಾಡಿದೆ ಎಂದು ಕೇಳಿದರೆ ಒಬ್ಬರ ಬಳಿಯೂ ಉತ್ತರವಿಲ್ಲ” ಎಂದು ಅವರು ವ್ಯಂಗ್ಯವಾಡಿದ್ದಾರೆ.
’ಹೈದರಾಬಾದ್‌ನಲ್ಲಿ ಪ್ರವಾಹ ಬಂದು, ಕೊಟ್ಯಾಂತರ ಮೌಲ್ಯದ ಹಾನಿಯಾಗಿದೆ. ಪ್ರವಾಹದ ನಂತರ ನಗರಕ್ಕೆ ಬಿಜೆಪಿಯ ಕೇಂದ್ರ ಸರ್ಕಾರ ಏನು ಪರಿಹಾರ ನೀಡಿದೆ..?” ಎಂದು ಒವೈಸಿ ಹೈದರಾಬಾದ್‌ನ ಮಲಕ್ಪೇಟೆ ಕ್ಷೇತ್ರದ ಅಜಂಪುರಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
“ಬಿಜೆಪಿ ಈಗ ನಿರಾಶೆಗೊಂಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವರು ಇಲ್ಲಿಗೆ ಬಂದು ಜನರು ಎಐಎಂಐಎಂಗೆ ಮತ ಹಾಕಿದರೆ ಅದು ಟಿಆರ್‌ಎಸ್‌ಗೆ ಲಾಭವಾಗಲಿದೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ನನ್ನನ್ನು ಮುಹಮ್ಮದ್ ಅಲಿ ಜಿನ್ನಾರಿಗೆ ಹೋಲಿಸಿ ಮಾತನಾಡುತ್ತಾರೆ, ಎಐಐಎಂಐಎಂ ಮೂಲಭೂತವನ್ನು ಉತ್ತೇಜಿಸುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಸುಳ್ಳು ಆರೋಪಗಳನ್ನು ಮಾಡದೇ ಅವರ ಬಳಿ ಹೇಳಲು ಬೇರೆ ಏನೂ ಇಲ್ಲ” ಎಂದು ಒವೈಸಿ ಹೇಳಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಚುನಾವಣೆಯ ಪ್ರಚಾರದಲ್ಲಿ ಸಂಸದ ಓವೈಸಿ ಅವರನ್ನು ಪಾಕಿಸ್ತಾನದ ರಾಷ್ಟ್ರಪಿತ ಮುಹಮ್ಮದ್ ಅಲಿ ಜಿನ್ನಾರಿಗೆ ಹೋಲಿಸಿ ಮಾತಾಡಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದ್ವೇಷ ಸೃಷ್ಟಿಸುವುದು ಬಿಜೆಪಿ ಉದ್ದೇಶವಾಗಿದೆ. ಈ ಹೋರಾಟ ಹೈದರಾಬಾದ್ ಮತ್ತು ಭಾಗ್ಯನಗರದ ನಡುವೆ ನಡೆಯುತ್ತಿದೆ. ಯಾರು ಗೆಲ್ಲಬೇಕೆಂದು ನಿರ್ಧರಿಸುವುದು ನಿಮ್ಮ ಜವಾಬ್ದಾರಿ’ ಎಂದು ಓವೈಸಿ ಹೇಳಿದ್ದಾರೆ. ನಿನ್ನೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಿಸಬೇಕು ಎಂಬ ಹೇಳಿಕೆ ನೀಡಿ ಟ್ರೋಲ್‌ಗೊಳಗಾಗಿದ್ದರು.
ಇದನ್ನೂ ಓದಿ: ಒವೈಸಿಯನ್ನು ’ಜಿನ್ನಾ ಅವತಾರ’ ಎಂದು ವಿವಾದವೆಬ್ಬಿಸಿದ ಸಂಸದ ತೇಜಸ್ವಿ ಸೂರ್ಯ!
ಮುಂದುವರಿದು ಮಾತನಾಡಿದ ತೇಜಸ್ವಿ ಸೂರ್ಯ, “ಜಿನ್ನಾ ಅವರ ಅವತಾರವಾದ ಒವೈಸಿಗೆ ನೀಡುವ ಪ್ರತಿ ಮತವು ಭಾರತದ ವಿರುದ್ಧವಾಗಿದೆ” ಎಂದು ಹೇಳಿದ್ದರು.


