ಕೊರೊನಾವೈರಸ್ ಸಾಂಕ್ರಾಮಿಕದ ಕಾರಣದಿಂದಾಗಿ ಅಂತಾರಾಷ್ಟ್ರೀಯ ವಿಮಾನ ನಿಷೇಧವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
‘ಸರಕು ಸಾಗಣೆ ವಿಮಾನಗಳಿಗೆ ಹಾಗೂ ಡಿಜಿಸಿಎಯಿಂದ ನಿರ್ದಿಷ್ಟವಾಗಿ ಒಪ್ಪಿಗೆ ಪಡೆದು ಕಾರ್ಯಾಚರಣೆ ನಡೆಸುವ ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಿರ್ದೇಶನಾಲಯ ಹೊರಡಿಸಿರುವ ಆದೇಶದಲ್ಲಿ, “ಜೂನ್.26, 2020ರ ಸುತ್ತೋಲೆಯ ಅವಧಿಯನ್ನು ವಿಸ್ತರಿಸಲಾಗಿದ್ದು, ಅಂತಾರಾಷ್ಟ್ರೀಯ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಭಾರತದಿಂದ ಹೊರಡುವ ಮತ್ತು ಆಗಮಿಸುವ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ವಿಮಾನಸೇವೆಯನ್ನು ಡಿ.31ರ ರಾತ್ರಿ 11.59ರವರೆಗೆ ನಿಷೇಧಿಸಲಾಗಿದೆ” ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನ.30ರವರೆಗೆ ನಿರ್ಬಂಧ ವಿಸ್ತರಣೆ
ಕಳೆದ ಅಕ್ಟೋಬರ್ 28 ರಂದು ಡಿಜಿಸಿಎ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟದ ನಿಷೇಧವನ್ನು ನವೆಂಬರ್ 30ರ ವರೆಗೆ ವಿಸ್ತರಿಸಿತು. ಅಂದಿನ ಆದೇಶದಲ್ಲೂ MHA ಮತ್ತು DGCA ಅನುಮೋದಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಕಾರ್ಯನಿರ್ವಹಣೆ ಮುಂದುವರಿಯುತ್ತವೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನಗಳಿಗೆ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಡಿಜಿಸಿಎ ತಿಳಿಸಿತ್ತು.
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕಳೆದ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನ ಯಾನವನ್ನು ನಿಷೇಧಿಸಲಾಗಿದೆ. ಆದರೆ ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.


