ವಿರೋಧ ಪಕ್ಷಗಳ ಒಪ್ಪಿಗೆ ಪಡೆಯದೆಯೇ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಅಂಗೀಕರಿಸಲಾಗಿದ್ದು, ಬಿಜೆಪಿಯ ಈ ನಡಗೆ ಮುನಿಸಿಕೊಂಡಿರುವ ಕಾಂಗ್ರೆಸ್ ವಿಧಾನಸಭೆಯನ್ನು ಬಾಯ್ಕಾಟ್ ಮಾಡಿದೆ. ಈ ಮಸೂದೆಯ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ವಯಸ್ಸಾದ ದನಗಳನ್ನು ಸರ್ಕಾರವೇ ಖರೀದಿಸಲಿ” ಎಂದು ಸಲಹೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಎಎನ್‌ಐ ಟ್ವೀಟ್ ಮಾಡಿದ್ದು, “ಒಂದು ನಿಗದಿತ ಅವಧಿಯ ನಂತರ ದನಗಳು ನಿಷ್ಪ್ರಯೋಜಕವಾಗಿ ರೈತರ ಮೇಲೆ ಹೊರೆಯಾಗುತ್ತದೆ. ಹಾಗಾಗಿ ವಯಸ್ಸಾದ ದನಗಳನ್ನು ಸರ್ಕಾರವೇ ಖರೀದಿಸಲಿ ಎಂಬ ಸಲಹೆಯನ್ನು ನೀಡುತ್ತೇನೆ” ಎಂದು ವರದಿ ಮಾಡಿದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ: ಆತಂಕ ವ್ಯಕ್ತಪಡಿಸಿದ ಮೃಗಾಲಯದ ಅಧಿಕಾರಿಗಳು!
After a while, cattle become useless & become a burden on farmers. So I would like to make a suggestion that such old cattle must be purchased by the govt instead of burdening the farmers: Siddaramaiah, former Karnataka CM & Congress leader, on new cow slaughter laws in the state pic.twitter.com/mpSfSKAzuT
— ANI (@ANI) December 11, 2020
ರಾಜ್ಯ ಬಿಜೆಪಿಯ ಬಹುದಿನದ ಬಯಕೆಯಾಗಿದ್ದ ‘ಗೋಹತ್ಯೆ ನಿಷೇದ ಮಸೂದೆ’ ಬುಧವಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ಅಂಗೀಕಾರ ಪಡೆದುಕೊಂಡಿದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ, ಲವ್ ಜಿಹಾದ್ ತಡೆ ಕಾಯ್ದೆ ತರುವುದು ನೀತಿಸಂಹಿತೆಯ ಉಲ್ಲಂಘನೆ: ಸಿದ್ದರಾಮಯ್ಯ
ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ 2020ನೆ ಸಾಲಿನ ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕದ ಪ್ರಕಾರ, “13 ವರ್ಷದೊಳಗಿನ ಹಸು, ಹಸುವಿನ ಕರು ಮತ್ತು ಗೂಳಿ, ಎತ್ತು, ಎಮ್ಮೆ ಅಥವಾ ಕೋಣವನ್ನು ಹತ್ಯೆ ಮಾಡುವಂತಿಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿಯಿಂದ ಅಥವಾ ಗುಣಪಡಿಸಲಾಗದಂತಹ ಕಾಯಿಲೆಯಿಂದ ಬಳಲುತ್ತಿರುವ 13 ವರ್ಷ ವಯಸ್ಸಿನ ಮೇಲ್ಪಟ್ಟ ಎಮ್ಮೆಯನ್ನು ಮಾತ್ರ ರಾಜ್ಯ ಸರಕಾರವು ಅಧಿಕೃತಗೊಳಿಸಿದ ಪಶುವೈದ್ಯಾಧಿಕಾರಿಯ ಪ್ರಮಾಣೀಕರಣದೊಂದಿಗೆ ವಧಿಸಲು ಅವಕಾಶ ಕಲ್ಪಿಸಬಹುದು.”
ಯಾರಾದರೂ ಗೋಹತ್ಯೆ ಮಾಡಿದರೆ ಕನಿಷ್ಠ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಒಂದು ಜಾನುವಾರು ಹತ್ಯೆ ಮಾಡಿದರೆ ಕನಿಷ್ಠ 50 ಸಾವಿರ ರೂ.ಗಳಿಂದ ಗರಿಷ್ಠ 5 ಲಕ್ಷ ರೂ.ಗಳವರಗೆ ದಂಡ ವಿಧಿಸಬಹುದು. ಪುನರಾವರ್ತಿತ ಅಪರಾಧಕ್ಕೆ 1 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗೆ ದಂಡದ ಜೊತೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ದುರ್ಬಳಕೆ ಎಂದ ಹೈಕೋರ್ಟ್: ಮತ್ತೊಮ್ಮೆ ಗೋಹತ್ಯೆಗೆ ಜೈಲುಶಿಕ್ಷೆ ಎಂದ ಯೋಗಿ!
ಇದಕ್ಕೆ ಸದನದಲ್ಲಿಯೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಚರ್ಚೆಯಲ್ಲಿ ಪಾಲ್ಗೊಳ್ಳಲು ನಾವು ಸಿದ್ಧವಾಗಿದ್ದೇವೆ. ಆದುದರಿಂದ, ನಾಳೆ ಬೆಳಗ್ಗೆ ಈ ವಿಧೇಯಕದ ಬಗ್ಗೆ ಚರ್ಚೆ ನಡೆಸೋಣ. ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ಬಂದ ತಕ್ಷಣ ದೇಶದಲ್ಲಿ ಏನು ಪ್ರಳಯ ಆಗುವುದಿಲ್ಲ. ವಿಧೇಯಕದ ಬಗ್ಗೆ ಚರ್ಚೆಗೆ ನಾವು ಸಿದ್ಧವಿದ್ದೇವೆ ಎಂದು ಹೇಳಿದರೂ ಅವಕಾಶ ನೀಡದೆ ಹೋದರೆ ಈ ಸದನದ ಪಾವಿತ್ರ್ಯತೆ ಹೋಗುತ್ತದೆ. ಸದನ ಕಲಾಪ ಸಲಹಾ ಸಮಿತಿ ಸಭೆಯನ್ನು ನಿಮ್ಮ ಅಧ್ಯಕ್ಷತೆ(ಸ್ಪೀಕರ್)ಯಲ್ಲಿ ಕರೆಯುವುದು ಏಕೆ? ನಮ್ಮನ್ನು ಆ ಸಭೆಗೆ ಆಹ್ವಾನಿಸುವುದು ಏಕೆ? ನಿನ್ನೆ ನಡೆದ ಸಭೆಯಲ್ಲಿ ಸಂಸದೀಯ ಕಾರ್ಯದರ್ಶಿಗಳ ನೇಮಕದ ವಿಧೇಯಕ ಹಿಂಪಡೆಯುವುದು ಹಾಗೂ ವಿಶ್ವವಿದ್ಯಾಲಯಗಳ ವಿಧೇಯಕ ಮಂಡನೆ ಮತ್ತು ಆಧ್ಯಾದೇಶಗಳಿಗೆ ಸಂಬಂಧಿಸಿದ ವಿಧೇಯಕಗಳನ್ನು ತರುವುದಷ್ಟೇ ಚರ್ಚೆಯಾಗಿದ್ದು” ಎಂದು ಸಿದ್ದರಾಮಯ್ಯ ಹೇಳಿದ್ದರು.
ಇದನ್ನೂ ಓದಿ: ಉತ್ತರಪ್ರದೇಶ ಗೋಹತ್ಯೆ ನಿಷೇಧ ಕಾಯ್ದೆ ಅಮಾಯಕರನ್ನು ಸಿಲುಕಿಸಲು ಬಳಸಲಾಗುತ್ತಿದೆ: ಹೈಕೋರ್ಟ್
“ಅಜೆಂಡಾದಲ್ಲಿ ಇರದಿದ್ದರೂ ತರಾತುರಿಯಲ್ಲಿ ಈ ವಿಧೇಯಕವನ್ನು ತಂದಿದ್ದು ಏಕೆ? ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಈ ವಿಧೇಯಕವನ್ನು ಮಂಡನೆ ಮಾಡುವ ವೇಳೆ ಅವರ ಬಳಿ ವಿಧೇಯಕದ ಪ್ರತಿಯೂ ಇರಲಿಲ್ಲ. ಈ ವಿಧೇಯಕ ತರದಂತೆ ನಾವೇನಾದರೂ ಸರಕಾರದ ಅಡ್ಡ ನಿಂತಿದ್ದೇವಾ? ಚರ್ಚೆ ಮಾಡಲ್ಲ ಎಂದು ಹೇಳಿದ್ದೇವಾ? ಆದರೂ ಕಳ್ಳತನದಿಂದ, ಹಿಂಬಾಗಿಲ ಮೂಲಕ ಈ ವಿಧೇಯಕ ಜಾರಿಗೆ ತರಲು ಮುಂದಾಗಿರುವುದು ಏಕೆ? ಗ್ರಾಮಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ದುರುದ್ದೇಶದಿಂದ ಈ ವಿಧೇಯಕ ತರಲಾಗಿದೆ. ನೀವು ಗೋಮಾತೆಯ ಮೇಲೆ ಪ್ರಮಾಣ ಮಾಡಿ ಹೇಳಿ ಸಚಿವರ ಬಳಿ ಆ ವಿಧೇಯಕದ ಪ್ರತಿ ಇತ್ತೇ” ಎಂದು ಸಿದ್ದರಾಮಯ್ಯ ಗುಡುಗಿದ್ದರು.
ಇದನ್ನೂ ಓದಿ: ದೇಶ ಮುನ್ನಡೆಸುವ ಎಲ್ಲಾ ಅರ್ಹತೆ ಶರದ್ ಪವಾರ್ ಅವರಿಗಿದೆ: ಸಂಜಯ್ ರಾವತ್
ರಾಜ್ಯ ಸರ್ಕಾರದ ಈ ನಡೆಯನ್ನು ಕುಮಾರಸ್ವಾಮಿ ಕೂಡ ಖಂಡಿಸಿದ್ದು, ಸರಣಿ ಟ್ವೀಟ್ ಮಾಡುವ ಮೂಲಕ ಮಸೂದೆಯಲ್ಲಿರುವ ಗೊಂದಲಗಳನ್ನು ಪರಾಮರ್ಶಿಸಿದ್ದಾರೆ.
ಸರ್ಕಾರ ಜಾರಿಗೆ ತರಲು ಹೊರಟಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ರೈತ ದೃಷ್ಟಿಕೋನದಿಂದ ಇಲ್ಲಿ ಪರಾಮರ್ಶೆ ಮಾಡಲಾಗಿದೆ. ಪರಮಾರ್ಶೆ ವೇಳೆ ಮೂಡಿದ ಪ್ರಶ್ನೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. 1/14
— H D Kumaraswamy (@hd_kumaraswamy) December 10, 2020
1. ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕಾಂಗ್ರೆಸ್-ಬಿಜೆಪಿಗೆ ಮತಬ್ಯಾಂಕ್‌ನದ್ದೇ ಆದ್ಯತೆ. ಆದರೆ, ಹಾಲು ಉತ್ಪಾದನೆಯಲ್ಲಿ ತೊಡಗಿರುವ 24 ಲಕ್ಷ ರೈತ ಕುಟುಂಬಗಳಿಗೆ ಕಾಯ್ದೆ ವಿಚಾರವಾಗಿ ಇರುವ ಅನುಮಾನ, ಆತಂಕಗಳನ್ನು ಜೆಡಿಎಸ್ ನಿಷ್ಪಕ್ಷಪಾತವಾಗಿ ವಿಮರ್ಶಿಸಲು ಬಯಸುತ್ತದೆ. ಈ ಹಿಂದೆಯೇ ಹೇಳಿದಂತೆ ಜೆಡಿಎಸ್ ಒಂದು ಪಕ್ಷವಾಗಿ ಮಾತ್ರವಲ್ಲ, ರೈತ ಸಂಘವಾಗಿ, ರೈತ ಪ್ರತಿನಿಧಿಯಾಗಿ ಕೆಲಸ ಮಾಡಲಿಚ್ಚಿಸುತ್ತದೆ.
ಇದನ್ನೂ ಓದಿ: ಗೋಮಾತೆಯ ಮೇಲೆ ಪ್ರಮಾಣ ಮಾಡಿ, ಸಚಿವರ ಬಳಿ ಆ ವಿಧೇಯಕದ ಪ್ರತಿ ಇತ್ತೇ – ಸಿದ್ದರಾಮಯ್ಯ
2. ಸರ್ಕಾರ ಗೋಹತ್ಯೆ ನಿಷೇಧಿಸುವ ಕಾಯ್ದೆಯನ್ನು ರೂಪಿಸಿದೆ. ಆದರೆ, ಗೋಹತ್ಯೆ ನಿಷೇಧದ ಜೊತೆಗೆ ಗೋಮಾತೆಯನ್ನು ರಕ್ಷಿಸುವ, ಗೋಮಾತೆಯನ್ನೇ ನಂಬಿದ ರೈತರನ್ನು ರಕ್ಷಿಸುವ ಕಾನೂನಾಗಿಯೂ ಇವತ್ತಿನ ಈ ಕಾಯ್ದೆ ವರ್ತಿಸಬೇಕು ಎಂಬುದು ರೈತರ ಪ್ರತಿನಿಧಿಯಾದ ಜೆಡಿಎಸ್‌ನ ಒತ್ತಾಯ. ಈ ವಿಚಾರವಾಗಿ ಯಾರದ್ದೂ ತಕರಾರು ಇಲ್ಲ ಎಂದು ನಾವು ಭಾವಿಸುತ್ತೇವೆ.
3. ನಾವೆಲ್ಲರೂ ಹಸುಗಳನ್ನು ಪೂಜಿಸುತ್ತೇವೆ. ಆದರೆ, ರೈತ ಮಾತ್ರ ಅದನ್ನು ಪೋಷಿಸುವ ಹೊಣೆ ಹೊತ್ತಿದ್ದಾನೆ. ಮತ್ತು, ಅದರ ಮೇಲೆಯೇ ಅವನ ಜೀವನ ನಿರ್ವಹಣೆಯೂ ಅವಲಂಬಿತವಾಗಿದೆ. ಗೋವಿನ ಪೋಷಣೆ ಎಂಬುದೇ ಆರ್ಥಿಕ ಹೊರೆಗೆ ಕಾರಣವಾದರೆ, ಆತನ ನೆರವಿಗೆ ನಿಲ್ಲುವವರು ಯಾರು? ಇದು ಸಾಮಾನ್ಯ ರೈತನಿಗೆ ಇರುವ ಪ್ರಶ್ನೆ. ಸರ್ಕಾರ ಇದಕ್ಕೆ ಪರಿಹಾರ ಹುಡುಕಬೇಕು.
ಇದನ್ನೂ ಓದಿ: ಅಲ್ಪಸಂಖ್ಯಾತರ ಅನುದಾನ, ವಿದ್ಯಾರ್ಥಿ ವೇತನದಲ್ಲಿ ಅರ್ಧದಷ್ಟು ಕಡಿತಗೊಳಿಸಿದ ಬಿಎಸ್‌ವೈ ಸರ್ಕಾರ!
4. ರೈತ ತಾನು ಪೂಜಿಸುವ, ಪೋಷಿಸುವ, ಜೀವನಾಧಾರವನ್ನಾಗಿ ನಂಬಿರುವ ಗೋವು ಈ ಕಾಯ್ದೆ ಮೂಲಕ ಆತನಿಗೆ ಹೇಗೆ ಹೊರೆಯಾಗುತ್ತದೆ? ತಾನು ಸಾಕಿದ ಹಸು ಗಂಡು ಕರು ಹಾಕಿದಾಗ, ಹಸುವಿಗೆ ವಯಸ್ಸಾದಾಗ, ಕಾಯಿಲೆ ಬಿದ್ದಾಗ ಅದರ ನಿರ್ವಹಣೆ ಕಷ್ಟ. ಈಗಾಗಲೇ ಸಂಕಷ್ಟದಲ್ಲಿರುವ ರೈತನಿಗೆ ಈ ಹೊರೆ ಜೀವನ್ಮರಣದ ಪ್ರಶ್ನೆಯಾಗಲೂಬಹುದು ಎಂಬುದನ್ನು ಸರ್ಕಾರ ಮರೆತಂತಿದೆ.
5. ರೈತರು ಈಗ ಹಾಲು ಉತ್ಪಾದನೆಗಾಗಿ ಪೋಷಿಸುತ್ತಿರುವ ಹಸುಗಳ ಗಂಡು ಕರುಗಳನ್ನು ಸಾಕುವುದು ಆರ್ಥಿಕವಾಗಿ ಹೊರೆ. ಅದು ಬೆಳೆದರೂ ಕೃಷಿ ಕಾರ್ಯಗಳಿಗೆ ಬಳಕೆಗೆ ಯೋಗ್ಯವಲ್ಲ. ಹೀಗಾದಾಗ ಹೈನುಗಾರಿಕೆಗೆ ಹೊಡೆತ ಬೀಳುತ್ತದೆ. ಕ್ರಮೇಣ ರೈತರು ಹೈನುಗಾರಿಕೆಯಿಂದಲೇ ವಿಮುಖವಾಗಬಹುದು. ಅದು ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು ಎಂಬುದನ್ನು ಗಮನಿಸಲೇಬೇಕು.
ಇದನ್ನೂ ಓದಿ: ಮೋದಿ ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತು ಹೆಚ್ಚಾಗಿದೆ: ಸಿದ್ದರಾಮಯ್ಯ
6. ಸದ್ಯ ಸರ್ಕಾರ ತಂದಿರುವ ಕಾಯ್ದೆಯು ರೈತರು ಗಂಡು ಕರುಗಳನ್ನು, ವಯಸ್ಸಾದ ರಾಸುಗಳನ್ನು, ರೋಗಕ್ಕೀಡಾದ ಹಸುಗಳನ್ನು ಪೋಷಿಸಲೇಬೇಕಾದ ಷರತ್ತಿಗೆ ದೂಡುತ್ತದೆ. ಪ್ರಾಯೋಗಿಕವಲ್ಲದ ಷರತ್ತುಗಳ ಮೂಲಕ ಸರ್ಕಾರ ರೈತರ ಮೇಲೆ ಹೆಚ್ಚಿನ ಒತ್ತಡ ಹೇರಲು ಪ್ರಯತ್ನಿಸಿದರೆ, ರೈತರು ಹೈನುಗಾರಿಕೆಯಿಂದ ದೂರ ಸರಿಯಬಹುದು. ಆಗ ಹಾಲು ಉತ್ಪಾದನೆಗೆ ಹೊಡೆತ ಬೀಳಲಿದೆ.
7. ಜಾನುವಾರುಗಳನ್ನು ಸೂಕ್ತ ಪ್ರಾಧಿಕಾರದ ಪರವಾನಗಿ ಪಡೆದು ವಧೆ ಮಾಡಬಹುದು. ಇದಕ್ಕೆ ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರ ಬೇಕು ಎಂದು ಹೇಳಲಾಗಿದೆ. ಚಿಕಿತ್ಸೆಗೇ ಈಗ ಪಶುವೈದ್ಯರ ಲಭ್ಯತೆ ಇಲ್ಲ. ಇನ್ನು ಪ್ರಮಾಣ ಪತ್ರಕ್ಕೆ ಲಭ್ಯರಾಗುವರೇ? ಪ್ರಮಾಣ ಪತ್ರ, ಅನುಮತಿ ಪಡೆಯುವ ಪ್ರಕ್ರಿಯೆ ದಂಧೆಯ ರೂಪ ತಾಳದೇ? ರೈತರ ಶೋಷಣೆ ನಡೆಯುವುದಿಲ್ಲವೇ?
ಇದನ್ನೂ ಓದಿ: ಹುಲಿಗಳಿಗೆ ಗೋಮಾಂಸ ನೀಡುವುದಕ್ಕೆ ಬಿಜೆಪಿ ಪ್ರತಿಭಟನೆ: ಹಾಗಾದರೆ ಇಡ್ಲಿ-ಸಾಂಬಾರ್ ಕೊಡಿ ಎಂದ ನೆಟ್ಟಿಗರು!
8. ಪೊಲೀಸರು, ಅಧಿಕಾರಿಗಳಿಗೆ ರೈತರ ಡೈರಿ ಪರಿಶೀಲನೆಯ ಅವಕಾಶ ನೀಡಲಾಗಿದೆ. ಇದರಿಂದ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುವ ಸಾಧ್ಯತೆಗಳು ಸೃಷ್ಟಿಯಾಗುವ ಆತಂಕವಿದೆ. ರೈತರಲ್ಲಿ ಭಯದ ವಾತಾವರಣವೂ ಮೂಡುತ್ತದೆ. ಈ ನಿಯಮವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಇದು ಹಳ್ಳಿಗಳ ಸೌಹಾರ್ದ ವಾತಾವರಣವನ್ನೇ ಹಾಳುಮಾಡಬಹುದಲ್ಲವೇ?
9. ಜಾನುವಾರುಗಳನ್ನು ಸಾಗಿಸಲು ಪಶುಸಂಗೋಪನಾ ಇಲಾಖೆಯ ಅನುಮತಿ ಪಡೆಯಬೇಕು ಎಂದು ಹೇಳಲಾಗಿದೆ. ಇದು ಮುಂದೊಂದು ದಿನ ಲೈಸನ್ಸ್ ರಾಜ್ ಪದ್ಧತಿಗೆ ಕಾರಣವಾಗದೇ? ಅಧಿಕಾರಿಗಳು ಇದರಲ್ಲಿ ಭ್ರಷ್ಟಾಚಾರ ನಡೆಸದೇ ಇರಲಾರರು ಎಂದು ಹೇಳಲು ಸಾಧ್ಯವೇ? ಒಂದು ವೇಳೆ ಇಂಥ ಪರವಾನಗಿಗೆ ರೈತರಿಂದ ಲಂಚ ಪಡೆಯುವ ಪರಿಸ್ಥಿತಿ ಸೃಷ್ಟಿಯಾದರೆ ಅದು ರೈತರ ಶೋಷಣೆಯಾಗದೇ?
ಇದನ್ನೂ ಓದಿ: ಡೇರಿ ಫಾರಂ, ಗೋಶಾಲೆಗಳಿಗೆ ಅನುಮತಿ ಕಡ್ಡಾಯ: ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ರೈತರ ಬದುಕಿಗೆ ಕೊಳ್ಳಿ!
10. ಜಾನುವಾರಿನ ವಧೆಯಾದ ಪ್ರಕರಣದಲ್ಲಿ ಮಾರಾಟ ಮಾಡಿದ ರೈತನನ್ನೂ ಹೊಣೆಗಾರನನ್ನಾಗಿಸುವ ನಿಯಮವಿದೆ. ರೈತ ತಾನು ಮಾರಾಟ ಮಾಡಿದ ಜಾನುವಾರು ವಧಾಸ್ಥಳಕ್ಕೆ ಹೋಗುತ್ತದೆ ಎಂಬುದನ್ನು ಅಂದಾಜಿಸಲು ಹೇಗೆ ಸಾಧ್ಯ? ಈ ನಿಯಮಗಳು ರೈತ ಸರ್ಕಾರ ಕಚೇರಿಗಳಿಗೆ ಅಲೆಯುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಕೊನೆಗೆ ಇದು ಹೈನುಗಾರಿಕೆಗೆ ಪೆಟ್ಟು ಕೊಡುತ್ತದೆ.
11. ಗೋಹತ್ಯೆ ನಿಷೇಧ ಕಾಯ್ದೆಯು ಗೋವಿನ ಹತ್ಯೆಯನ್ನು ತಡೆಯುವ ಸ್ವರೂಪದ್ದಾಗಿದೆಯಾದರೂ, ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಸಾಕಷ್ಟು ಸನ್ನಿವೇಶಗಳನ್ನೂ ಬಲವಂತವಾಗಿ ಸೃಷ್ಟಿ ಮಾಡುತ್ತಿದೆ ಎಂಬುದನ್ನು ಎಲ್ಲರೂ ಗಮನಿಸಲೇಬೇಕು. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ, ಮಾರ್ಗೋಪಾಯಗಳನ್ನು ಸೂಚಿಸಬೇಕು. ಇಲ್ಲವಾದರೆ, ಇದು ರೈತ ವಿರೋಧಿಯಾಗಲಿದೆ.
ಇದನ್ನೂ ಓದಿ: ವಿ.ಎಂ ಮಂಜುನಾಥ್ ಹೊಸ ಕಾದಂಬರಿ : ರೈತನೊಬ್ಬನ ಡೈರಿ, ಮೊದಲೆರಡು ಅಧ್ಯಾಯಗಳು
12. ಗೋವುಗಳು ಹೇಗೆ ನಮಗೆ ಪೂಜನೀಯವೋ, ರೈತನೂ ಪೂಜನೀಯವೇ. ಗೋ ಹತ್ಯೆಯನ್ನು ತಡೆಯುವ ನಮ್ಮ ಪ್ರಯತ್ನದಲ್ಲಿ ರೈತನನ್ನು ಶೋಷಿಸುವ ವ್ಯವಸ್ಥೆಗೆ ದೂಡುವುದು ಯಾವ ನ್ಯಾಯ? ಕಾಯ್ದೆಯು ರೈತನ್ನು ಸಂಕಷ್ಟಕ್ಕೆ ದೂಡಬಾರದು ಎಂಬುದಷ್ಟೇ ನನ್ನ ಆಶಯ. ಜೆಡಿಎಸ್‌ಗೆ ಈ ವಿಚಾರದಲ್ಲಿ ಯಾವ ಮತಬ್ಯಾಂಕ್‌ನ ಓಲೈಕೆಯೂ ಬೇಕಿಲ್ಲ. ರೈತನ ಹಿತ ರಕ್ಷಣೆಯಾದರೆ ಸಾಕು.
13. ರೈತ ತಾನು ಪೋಷಿಸಿದ ಗೋವನ್ನು ಅಥವಾ ಯಾವುದೇ ಪ್ರಾಣಿಯನ್ನು ವಧೆಗಾಗಿ ಕೊಡಲು ಮನಃಪೂರ್ವಕವಾಗಿ ಒಪ್ಪಲಾರ. ಆದರೆ, ಅದು ಅವನಿಗೆ ಅನಿವಾರ್ಯ. ಗೋಹತ್ಯೆಯನ್ನು ನಿಷೇಧಿಸಬೇಕಿದ್ದರೆ, ಆತನ ಅನಿವಾರ್ಯತೆಯನ್ನು ನಾವು ಹೋಗಲಾಡಿಸಬೇಕು. ರೈತನಿಗೆ ಹೊರೆ ಸೃಷ್ಟಿಸುವ ಜಾನುವಾರುಗಳ ರಕ್ಷಣೆಯನ್ನು ಸರ್ಕಾರವೇ ಮಾಡಲಿ. ಗೋವಿನ ಜೊತೆಗೆ ರೈತನನ್ನೂ ರಕ್ಷಿಸಲಿ.
ಇದನ್ನೂ ಓದಿ: ಈಶ್ವರಪ್ಪನವರಿಗೆ ನನ್ನ ಮೇಲೆ ಸಿಟ್ಟು ಏಕೆಂದರೆ… : ಎಚ್.ಎಸ್ ದೊರೆಸ್ವಾಮಿ


