ಕರ್ನಾಟಕದಲ್ಲಿ ಶೇಕಡಾ 49.4% ರಷ್ಟು ಯುವತಿಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5 (NFHS) ವರದಿಯಲ್ಲಿ ತಿಳಿದುಬಂದಿದೆ. 2015-16ರಲ್ಲಿ ಬಿಡುಗಡೆಯಾಗಿದ್ದ ಅಂಕಿ ಅಂಶದಲ್ಲಿಯೂ 45.3% ಯುವತಿಯರು ರಕ್ತಹೀನತೆಯಿಂದ ಬಳಲುತ್ತಿದ್ದರು.
ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯ ಮತ್ತು ಮಕ್ಕಳ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯನ್ನು ಕರ್ನಾಟಕ ಹೊಂದಿರುವುದನ್ನು ವರದಿ ತೋರಿಸಿದೆ. ಆದರೆ, ಗರ್ಭಿಣಿಯಾಗಿದ್ದಾಗ ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಮಾತ್ರೆಗಳನ್ನು ಸೇವಿಸುತ್ತಿರುವ ಮಹಿಳೆಯರ ಸಂಖ್ಯೆ ಈಗ ಕಡಿಮೆಯಾಗಿದೆ. ಐದು ವರ್ಷಗಳ ಹಿಂದಿನ ವರದಿಯಾಲ್ಲಿ 32.6% ಇದದ್ದು, ಈಗ 26.7%ಗೆ ಇಳಿದಿದೆ ಎಂದು NFHS ವರದಿ ತಿಳಿಸಿದೆ.
ರಾಜ್ಯದಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ ಬೊಜ್ಜಿನ ಮಟ್ಟ ಹೆಚ್ಚುತ್ತಿದೆ ಎಂದು ವರದಿಯಲ್ಲಿ ಸೂಚಿಸಲಾಗಿದೆ. ಹುಟ್ಟಿದ ಒಂದು ಗಂಟೆಯೊಳಗೆ ಹಸುಗೂಸಿಗೆ ಹಾಲುಣಿಸುವ ತಾಯಂದಿರ ಸಂಖ್ಯೆಯಲ್ಲೂ ಇಳಿಕೆ ಕಂಡು ಬಂದಿದೆ. ಐದು ವರ್ಷಗಳ ಹಿಂದೆ 56% ಇದ್ದ ಪ್ರಮಾಣ ಈಗ 49% ಕ್ಕೆ ಕುಸಿದಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಉಚಿತವೆಂದ ಕೇರಳ ಸಿಎಂ: ಚುನಾವಣಾ ಆಯೋಗದ ಮೆಟ್ಟಿಲೇರಿದ ವಿಪಕ್ಷಗಳು!
ಕರ್ನಾಟಕದಲ್ಲಿ 15 ರಿಂದ 24 ವರ್ಷ ವಯಸ್ಸಿನ ಮಹಿಳೆಯರಲ್ಲಿ ಮುಟ್ಟಿನ ಆರೋಗ್ಯಕರ ಉತ್ಪನ್ನಗಳ ಬಳಕೆ 84.2% ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಾಜೆಕ್ಟ್ ಸ್ತ್ರೀಧನ್ ಎಂಬ ಪೇಜ್ ಹೆಣ್ಣು ಮಕ್ಕಳ ಆರೋಗ್ಯದ ಕುರಿತು ಹಲವು ವಿಡಿಯೋಗಳನ್ನು ಪೋಸ್ಟ್ ಮಾಡುತ್ತದೆ. ಅದರಲ್ಲಿ ರಕ್ತಹೀನತೆ ಕುರಿತು ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಚಿನ್ನದ ಹಿಂದೆ ಓಡುವ ಬದಲು ಕಬ್ಬಿಣ ಅಂಶದ ಆಹಾರಗಳನ್ನು ಸೇವಿಸಿ. ನೀವೇ ನಿಮ್ಮ ಆಭರಣವಾಗಿ ಎನ್ನುವ ಸಂದೇಶವುಳ್ಳ ಈ ವಿಡಿಯೋದಲ್ಲಿ ಹಲವು ಬಗೆಯ ಕಬ್ಬಿಣ ಅಂಶ ಹೊಂದಿರುವ ಆಹಾರ ಪದಾರ್ಥಗಳನ್ನು ತೋರಿಸಲಾಗಿದೆ. ಜೊತೆಗೆ ರಕದತಹೀನತೆಯಿಮದ ಬಳಲುತ್ತಿರುವ ಭಾರತೀಯ ಮಹಿಳೆಯರ ಅಂಕಿ ಅಂಶಗಳನ್ನು ನೀಡಲಾಗಿದೆ.
ದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನಸಂಖ್ಯೆ, ಆರೋಗ್ಯ ಮತ್ತು ಪೋಷಣೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒಳಗೊಂಡಿರುವ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು (NFHS) ಆರೋಗ್ಯ ಸಚಿವ ಹರ್ಷ್ ವರ್ಧನ್ ಶನಿವಾರ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಮೊದಲ ಹಂತದಲ್ಲಿ ಕರ್ನಾಟಕ ಸೇರಿ 17 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ, ವರದಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 2019ರ ಜು.10 ರಿಂದ ಡಿ.11ರವರೆಗೆ ನೀಲ್ಸನ್ ಇಂಡಿಯಾ ಪ್ರೈ.ಲಿ. ಏಜನ್ಸಿ ಸಹಯೋಗದಲ್ಲಿ ಸಮೀಕ್ಷೆ ನಡೆಸಲಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ತಡೆ ಹಿಡಿಯಲಾಗಿದ್ದ, ಉಳಿದ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಎರಡನೇ ಹಂತದ ಸಮೀಕ್ಷೆಯನ್ನು ನವೆಂಬರ್‌ನಿಂದ ಪುನರಾರಂಭ ಮಾಡಲಾಗಿದೆ. 2021 ರ ಮೇ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.


