ಅಸ್ಸಾಂನ ಗುವಾಹಟಿಯಲ್ಲಿ ಸುಮಾರು 30 ಎಲ್‌ಪಿಜಿ ಸಿಲಿಂಡರ್‌ಗಳು ಒಂದರ ನಂತರ ಒಂದರಂತೆ ಸ್ಫೋಟಗೊಂಡ ಕಾರಣ ಸುಮಾರು 66 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ನಗರದ ಜಲುಕ್‌ಬರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಒಂದು ಗುಡಿಸಲಿನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಪಕ್ಕದಲ್ಲಿದ್ದ ಇತರ ಗುಡಿಸಲುಗಳಿಗೆ ಹರಡಿದೆ. ಗುಡಿಸಲುಗಳಲ್ಲಿ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗಳು ಒಂದರ ನಂತರ ಒಂದರಂತೆ ಸ್ಫೋಟಗೊಳ್ಳಲು ಪ್ರಾರಂಭಿಸಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 14 ಅಗ್ನಿಶಾಮಕ ವಾಹನಗಳು ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆಸಿದ ಪ್ರಯತ್ನದ ಬಳಿಕ ಬೆಂಕಿ ನಂದಿಸಿವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಾಸ್ಕ್ ಧರಿಸದಿದ್ದವರು ಕೊರೊನಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲಿ- ಗುಜರಾತ್ ಹೈಕೋರ್ಟ್
“ಅಗ್ನಿಶಾಮಕ ದಳದ 14 ಅಗ್ನಿಶಾಮಕ ವಾಹನಗಳು 3 ಗಂಟೆಗಳ ಕಾಲ ಸ್ಫೋಟದ ಬೆಂಕಿ ಜ್ವಾಲೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದವು. ಸುಮಾರು 66 ಬಿದಿರಿನ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ” ಎಂದು ಅಗ್ನಿಶಾಮಕ ಮತ್ತು ತುರ್ತು ವಿಭಾಗದ ಉಪನಿರ್ದೇಶಕ ಜಯಶ್ರೀ ಖೇರ್ಸಾ ಮಾಹಿತಿ ನೀಡಿದ್ದರು.
ಗುವಾಹಟಿಯಲ್ಲಿ ನಡೆದ ಬೆಂಕಿ ದುರಂತದ ಹಿಂದಿನ ನಿಖರ ಕಾರಣಗಳು ತಿಳಿದು ಬಂದಿಲ್ಲ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಪ್ರಕರಣ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ: ಅಸ್ಸಾಂ: ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಣಾಳಿಕೆ ರಚಿಸಿಕೊಟ್ಟ 4 ಸಾವಿರ ಮಕ್ಕಳು!


