ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕೆಲವೇ ದಿನಗಳಲ್ಲಿ ಎನ್‌ಐಎಯಿಂದ ಬಂಧನಕ್ಕೆ ಒಳಗಾಗಿದ್ದ ಪೀಪಲ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಯುವ ಘಟಕದ ಅಧ್ಯಕ್ಷ ವಹೀದ್ ಪರ್ರಾ ಡಿಡಿಸಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯೊಂದಿಗೆ ಜೊತೆ ಸಂಬಂಧ ಹಾಗೂ ಬಂಧನಕ್ಕೊಳಗಾಗಿರುವ ಹಿಜ್ಬುಲ್ ಕಮಾಂಡರ್ ನವೀನ್ ಬಾಬು ಜೊತೆ ನಂಟಿರುವ ಆರೋಪದಲ್ಲಿ ವಹೀದ್ ಪರ್ರಾ ಅವರನ್ನು ನವೆಂಬರ್ 25ರಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈಗ ವಹೀದ್ ಪರ್ರಾ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮಂಗಳವಾರ (ಡಿ.22) ನಡೆದ ಡಿಡಿಸಿ ಚುನಾವನಾ ಮತ ಏಣಿಕೆಯಲ್ಲಿ ಕ್ಷಿಣ ಕಾಶ್ಮೀರದ ಪುಲ್ವಾಮಾದ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಸದಸ್ಯರಾಗಿ ಮೆಹಬೂಬಾ ಮುಫ್ತಿ ಅವರ ಆಪ್ತ ಸಹಾಯಕ ವಹೀದ್ ಪರ್ರಾ ಚುನಾಯಿತರಾಗಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಗುಪ್ಕರ್ ಒಕ್ಕೂಟಕ್ಕೆ ಸ್ಪಷ್ಟ ಮುನ್ನಡೆ, ಬಿಜೆಪಿಗೆ ಹಿನ್ನಡೆ
ಪಿಡಿಪಿ ಅಧ್ಯಕ್ಷೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಟ್ವಿಟರ್‌ನಲ್ಲಿ ಪಕ್ಷದ ಯುವ ಘಟಕದ ಅಧ್ಯಕ್ಷ ವಹೀದ್ ಅವರನ್ನು ಅಭಿನಂದಿಸಿದ್ದಾರೆ.
Couldn’t be prouder of PDPs @parawahid who won his maiden election by a huge margin of votes. Despite being arrested on baseless charges right after filing his nomination people have shown their love & trust for Waheed. Hope justice prevails. pic.twitter.com/MOU8gNUOic
— Mehbooba Mufti (@MehboobaMufti) December 22, 2020
“ಪಿಡಿಪಿಯ ವಹೀದ್ ಪರ್ರಾ ಮೊದಲ ಚುನಾವಣೆಯಲ್ಲಿ ಭಾರಿ ಅಂತರದ ಮತಗಳಿಂದ ಜಯಗಳಿಸಿದ್ದಾರೆ. ವಹೀದ್ ನಾಮಪತ್ರ ಸಲ್ಲಿಸಿದ ಕೂಡಲೇ ಆಧಾರ ರಹಿತ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರೂ ಸಹ ಜನರು ತಮ್ಮ ಪ್ರೀತಿ ಮತ್ತು ನಂಬಿಕೆಯನ್ನು ತೋರಿಸಿದ್ದಾರೆ. ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ಭಾವಿಸುತ್ತೇನೆ” ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲೆರೇಷನ್ (PAGD) ಅಭ್ಯರ್ಥಿಯಾಗಿ ವಹೀದ್ ಚುನಾವಣಾ ಕಣಕ್ಕಿಳಿದಿದ್ದರು. ಬಿಜೆಪಿಯ ಸಜ್ದಾ ಅಹ್ಮದ್ ರೈನಾ ವಿರುದ್ಧ ದೊಡ್ಡ ಅಂತರದಿಂದ ಗೆದ್ದಿದ್ದಾರೆ. ವಹೀದ್ 1,322 ಮತಗಳನ್ನು ಪಡೆದರೆ, ರೈನಾ ಕೇವಲ 314 ಮತ ಗಳಿಸಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಪಿಡಿಪಿಯ ಸಂಘಟನೆಗೆ, ವಿಶೇಷವಾಗಿ ಉಗ್ರಗಾಮಿ-ಪೀಡಿತ ಪುಲ್ವಾಮಾದಲ್ಲಿ ಪಕ್ಷ ಸಂಘಟನೆಯಲ್ಲಿ ವಹೀದ್ ಪ್ರಮುಖ ಪಾತ್ರ ವಹಿಸಿದ್ದರು. ಇಲ್ಲಿಂದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ನವೆಂಬರ್ 20 ರಂದು ನಾಮಪತ್ರ ಸಲ್ಲಿಸಿದರು. ನವೆಂಬರ್ 25ರಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಮೆಹಬೂಬ ಮುಫ್ತಿ ಆಪ್ತ ಸಹಾಯಕನನ್ನು ಬಂಧಿಸಿದ ಎನ್‌ಐಎ!


