- Advertisement -
| ಯಾಹೂ |
ಇಡೀ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದು ಮೂರು ಜಿಲ್ಲೆಗಳಲ್ಲಿ ಎಂಬಂತೆ ಮಾಧ್ಯಮಗಳು ಬೊಬ್ಬೆ ಇಡುತ್ತಿರುವಾಗ ಮಂಡ್ಯದ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂಬ ಬಗ್ಗೆ ವಾಟಿಸ್ಸೆ ಕೇಳಬೇಕೆಂದು ಫೋನ್ ಮಾಡಲಾಗಿ ರಿಂಗಾಯ್ತು.
“ಹೇಳಿ ಸಾ.”
“ನನ್ನೆಸರು ನಿನ್ನ ಮೊಬೈಲಲ್ಲಿ ಫೀಡಾಗಿದೆಯಾ ವಾಟಿಸ್ಸೆ.”
“ಇಲ್ಲ ಸಾ.”
“ಮತ್ತೆ ಹೇಳಿ ಸಾರ್ ಅಂದ್ಯಲ್ಲ.”
“ನಾನು ಅಂಬರೀಶ್ ಅಭಿಮಾನಿ ಸಾ.”
“ಅದಕ್ಕೂ ಇದಕ್ಕೂ ಏನು ಸಂಬಂಧ.”
“ನಮ್ಮ ಅಂಬರೀಶ್‍ಗೆ ಪ್ರೊಡ್ಯೂಸರೊ, ಡೈರೆಕ್ಟರೊ ಶೂಟಿಂಗ್ ಡೇಟ್ ಹೇಳಿದ್ರೆ ಬರಕತಿರಲಿಲ್ಲವಂತೆ. ಅಂಗೆ ಗೆಪ್ತಿಲಿ ಮಡಿಕ್ಯಂಡು ಹೋಯ್ತಿದ್ನಂತೆ. ಅಂಗೆ ನಾನೊಂದು ನಂಬರ್ ನೋಡಿಕೊಂಡರೆ ಸಾಕು, ಬರಕಳೋದಿಲ್ಲ. ಅದೇ ಮೈಂಡ್ ಫೀಡಾಗಿರುತ್ತೆ ಸಾ.”
“ಎಂಥಾ ಪ್ರತಿಭೆನ್ರಿ ನಿಮ್ದು.”
“ಏನು ಮಾಡದು ಸಾ, ಬ್ಯಾಡ್‍ಲಕ್ಕು.”
“ಲಕ್ಕನ್ಯಲ್ಲ ನಂಬುತಿಯಾ.”
“ಸುಮ್ಮನೆ ಮಾತಿಗೇಳಿದೆ, ಇದ್ಯಲ್ಲ ಮೂಡನಂಬಿಕೆ ಕಾಲ್ದಲ್ಲಿ ಬಂದ ಪದ ರೂಢಿಯಾಗಿಬಿಟ್ಟಿವೆ.”
“ಇರ್ಲಿ ಮಂಡ್ಯದ ರಾಜಕಾರಣ ಹೆಂಗೆ ನಡೀತಿದೆ.”
“ಈ ಜೆಡಿಎಸ್‍ನವುಕೆ ಏನೋ ಕೇಡುಗಾಲ ಸಾ.”
“ಯಾಕೆ.”
“ಸುಮಲತಾ ಕ್ಯಾಂಡಿಡೇಟಾದೇಟಿಗೆ, ಸುಮಲತಾ ಅನ್ನೋ ಹೆಸರಿನ ಮೂರು ಹೆಂಗಸರನ್ನ ಹುಡುಕಿ ನಿಲ್ಸದ ಸಾ.”
“ಅವುರಾಗಿ ನಿಂತಿಲ್ಲವೇ?”
“ಥೂ ಇಲ್ಲ ಸಾ. ಗೊರವಿ ಸುಮಲತಾ ನಮ್ಮ ಫ್ರೆಂಡ್ ದೇವರಾಜನ ಸಮಂದಿ, ಅವನ್ನ ವಿಚಾರಿಸ್ದೆ. ಅವಳ ಗಂಡನಿಗೂ ಹೇಳದಂಗೆ ಅವಳ ಹಾರಿಸಿಗಂಡೋಗಿ ನಾಮಪತ್ರ ಸಲ್ಸದ ಸಾ.”
“ಕ್ಯೆಟ್ಟ ರಾಜಕಾರಣ ಇದು.”
“ಕ್ಯೆಟ್ಟ ರಾಜಕಾರಣ ಅಲ್ಲ, ಕುಲಗೆಟ್ಟ ರಾಜಕಾರಣ.”
“ಇದನ್ನೆಲ್ಲ ಹ್ಯಂಗೆ ಫೇಸ್ ಮಾಡ್ತಾಯಿದೀರಿ.”
“ಆ ಕುಮಾರಸ್ವಾಮಿ ಟೀಮು ಮಾಡಿದ್ದೆಲ್ಲಾ ಅವುರಿಗೇ ಅಟಕಾಯ್ಸಿಗತ್ತಾ ಅದೇ ಸಾ.”
“ಹೆಂಗೇ.”
“ಸುಮಲತನೆಸರಿನ ಮೂರು ಜನ ಹೆಂಗಸರ ಹುಡುಕಿ ನಿಲ್ಸಿದರಂತೆ ಅನ್ನದೆ ಸುಮಲತನಿಗೆ ಪ್ಲಸ್ ಪಾಯಿಂಟ್ ಆಗದೆ ಸರ್.”
“ಓಟರ್ಸ್‍ಗೆ ಕನ್‍ಪೀಜಾಗಲ್ವಾ.”
“ಕನಪೀಜ್ ಮಾಡಿಕಳೊ ಓಟರ್ಸ್ ತಿರೋದ್ರು, ಈಗ ಬದುಕಿರೋರ್ಯಲ್ಲ ನನ್ನಂಥೋರು. ಅವುರಿಗೆಲ್ಲ ತಿಳಿತದೆ ಸಾ.”
“ಕ್ಯಾನುವಾಸ್ಯೆಂಗೆ ಮಾಡ್ತಾಯಿದೀರಿ.”
“ಇಬ್ಬರು ತರಕಲೆಂಗಸರ ಮಧ್ಯೆ ಒಂದು ಒಳ್ಳೆ ಹೆಂಗಸದೆ ನೋಡಿ, ಕ್ಯಂಪಗೆ ತುಂಬಿದ ಮುಖ, ಅವಳೇ ನಮ್ಮ ಸುಮಲತಾ ಅಂತ ಪ್ರಚಾರ ಮಾಡ್ತಾ ಇದೀವಿ.”
“ಸುಮಲತಾ ಯಂಗೇ.”
“ಭಾಳಾ ವರುಸದ ನಂತ್ರ ನಮಿಗೆ ಒಳ್ಳೆ ರಾಜಕಾರಣಿ ಸಿಕ್ಕಿದ್ರು ಸಾ. ಸಂಸ್ಕೃತೀನೆ ಇಲ್ಲದ ದಳದವುಕೆ ರಾಜಕಾರಣ ಅಂದ್ರೇನು, ಚುನಾವಣಾ ಭಾಷಣ ಅಂದ್ರೇನು, ಅಂತ ಹೇಳಿ ಕೊಡ್ತಾ ಅವುಳೆ. ಅದರಲ್ಲೂ ಕುಮಾರಸ್ವಾಮಿ ಹರಾಜಾಗೋಗಿಬಿಟ್ಟ.”
“ಅಂಗಂತೀಯ.”
“ಊ ಸಾ, ಅವುನಿಗೊಂತರಾ ತಲಿ ಕೆಟ್ಟೋಗಿಬುಟ್ಟದೆ. ರಾತ್ರಿ ವೊತ್ತು ತಾಲೂಕಿಗೆ ಬತ್ತನೆ, ಕಾಂಗ್ರೆಸ್ಸಿನೋರನ್ನೆಲ್ಲಾ ಕೊಳ್ಕತಾ ಅವುನೆ, ನನಿಗೂ ಆಫರ್ ಬಂದಿತ್ತು ಸಾ. ಹೋಗಲಿಲ್ಲ.”
“ಯಾಕೆ.”
“ವಾಟಿಸ್ಸೆಗೆ ಇವತ್ತಿನವರೆಗೂ ಯಾಕೆ ವಳ್ಳೆ ಹೆಸುರದೆ ಅಂದ್ರೆ, ಅವುನ್ನ ಯಾರು ಕೊಳ್ಳಕ್ಕಾಗಿಲ್ಲ ಸಾ.”
“ಅವರು ಓಟಿಗೆ ದುಡ್ಡು ಕೊಟ್ರೆ ಈಸಗತ್ತಿನಿ ಅಂದಿದ್ರಿ.”
“ಅದು ನಮ್ಮನೆ ದುಡ್ಡನ್ನ ರಿಟರ್ನ್ ಈಸಗಂಡಂಗೆ ಸಾ, ಅದಕ್ಕೆ”
“ಯಲಕ್ಷನ್ ಖರ್ಚಿಗೆ ಸುಮಲತ ಯಂಗೆ ಮಾಡ್ತಾ ಅವುರೆ”
“ಮೇಜರ್ ಖರ್ಚಾ ರಾಕ್‍ಲೈನ್ ವ್ಯೆಂಕಟೇಶ ನೋಡಿಕತ್ತನೆ, ಇನ್ನುಳದದ್ದ ಕಾರ್ಯಕರ್ತರೆ ಕೈಯಿಂದ ಹಾಯ್ಕಂಡು ಮಾಡ್ತ ಅವುರೆ ಸಾ, ಅಂಬರೀಶ್‍ಗೋಸ್ಕರ.”
“ಸುಮಲತರಿಗೋಸ್ಕರ ಅಲವಾ.”
“ಅಂಬರೀಶ್ ರುಣ ಅದೇ ಸಾ ನಮ್ಮ ಮ್ಯಾಲೆ. ಅದ ತೀರುಸಬೇಕಾದ್ರೆ ಸುಮಲತಾರಿಗೆ ಕ್ಯೆಲಸ ಮಾಡಬೇಕಾಗಿದೆ. ಅದರಲ್ಲೂ ಸುಮಲತಾನೆ ಅಂಬರೀಶ್‍ಗಿಂತ ಗ್ರೇಟು ಸಾ.”
“ಅದ್ಯಂಗೆ.”
“ನೋಡಿ ಸಾ, ಅಂಬರೀಶ್ ಲಾಡ್ಜಲ್ಲಿ ರೂಂ ಮಾಡಿಕೊಂಡಿದ್ದೋನು, ಅಂತೋನಿಗೆ ಮೂಗುದಾರ ಹಾಕಿ, ಕೊಳ್ಳುರಿ ಹಾಕಿ, ಸಂಸಾರಕ್ಕೆ ಒಗ್ಗಿಸಿದೋಳು ಸುಮಲತಾ. ಅಂಥ ಒಂಟಿ ಸಲಗನ್ನ ಬಗ್ಗಿಸಿದೋಳಿಗೆ ಈ ತರಕಲ ಗಂಡುಸ್ರು ಯಾವ ಲೆಕ್ಕ ಸಾ. ಅದ್ಕೆ ಅವುಳೆದ್ರಿಗೆ ಕುಮಾರಸ್ವಾಮಿ, ಡಿಕೆ.ಶಿವಕುಮಾರ್ ಯಲ್ಲ ನೀರು ಕುಡಿತ ಇರದು.”
“ತಮ್ಮಣ್ಣನ ಬಗ್ಗೆ ಏನೇಳ್ತಿ.”
“ಅವನು ಕದ್ದು ಮರಳೊಡೆಯೋ ಲಾರಿ ಡ್ರೈವರ್‍ತರ ಅವುನೆ ಸಾ, ಅವನ ಬಗ್ಗೆ ಮಾತಾಡಿದ್ರೆ ನನಿಗೆ ಅವಮಾನ.”
“ಯಾಕಂಗಂತೀರಿ.”
“ಸುಮಲತ ದಕ್ಷಿಣ ಭಾರತದ ಮಹಾನ್ ನಟಿ, ಅಂಬರೀಶ್ ಪತ್ನಿ, ಈ ತಮ್ಮಣ್ಣ ಅವುರ ಮನಿಗೋದಾಗ ಸುಮಲತಾ ನೀರು ಕೊಡಬೇಕಾಗಿತ್ತಂತೆ. ಅಷ್ಟು ಬಾಯಾರಿದ್ರೆ ಅಲ್ಲೇ ಟೇಬಲ್ ಮ್ಯಾಲೆ ನೀರಿನ ಬಾಟ್ಳಿ ಇದ್ದೋ, ತಗೊಂಡು ಕುಡಿಬೇಕಾಗಿತ್ತು. ಸೋಡನೂ ಇತ್ತು, ನ್ಯೆನ್ನೆ ದಿನ ಕುಡುದು ಬಿಟ್ಟಿರೋ ಡ್ರಿಂಕ್ಸೂ ಇತ್ತು ಸಾ. ಈ ಮರಳಿನ ಲಾರಿ ಡ್ರೈವರ್ರು, ಸುಮಲತಾ ಬಂದು ನೀರುಕೊಡ್ನಿಲ್ಲ ಅಂತಾನಲ್ಲ, ನೀವೇ ಹೇಳಿ ಸಾ.”
“ನಿಖಿಲ್‍ಗೆ ಓಟು ಮಾಡದ್ರಿಂದ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗತದೆ ಅಂತ ಡಿಕೆಶಿ ಹೇಳಿದ್ರು ಕೇಳಿಸಿಗಂಡ್ಯಾ.”
“ಕೇಳಿಸಿಗಂಡು ಸಕತ್ತು ನಗಾಡಿದೆ ಸಾ.”
“ಯಾಕೆ.”
“ಮಂಡ್ಯ ಚುನಾವಣೇಲಿ ಇಲ್ಲಿಗಂಟ ಇಂತ ಮಾತ ಕೇಳಿರಲಿಲ್ಲ. ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗತದೆ ಅಂದ್ರೆ ನಿಖಿಲೇನು ಅಂಬರೀಶ್ ಮಗನ ಸಾ. ಈ ಡಿಕೆಸಿ ಹಣ ಆಸ್ತಿ ಜಾಸ್ತಿಯಾಗಿ, ಆಸ್ತಿ ಕಾರಣಕ್ಕೆ ಕಷ್ಟ ಅನುಬವುಸ್ತಯಿರೋನು. ಅವೊಂತರ ಆತ್ಮವಂಚನೆ ಜನ ಸಾ. ಸಿಂಹ ಇಲ್ಲ ಅಂತ ನಾಯಿ ನರಿಗಳೆಲ್ಲ ಬೊಗಳತ ಅವೇ. ಆದರೆ ಹುಲಿ ಎದ್ದು ನಿಂತಿರದು ಅವುಕ್ಕೆ ಗೊತ್ತೇಯಿಲ್ಲ.”
“ಸಿಂಹ ಯಾರು? ಹುಲಿ ಯಾರು?”
“ಸಿಂಹ ಅಂಬರೀಶಣ್ಣ, ಅಂದ್ರೆ ಲಯನ್ನು, ಸುಮಲತಾ ಹುಲಿ, ಅಂದ್ರೆ ಟೈಗರ್ರು. ಈ ಟೈಗರ್ ಮತ್ತೆ ಸಿಂಹದ ಮರಿ ಅಂದ್ರೆ ಲೈಗರ್ ಅಭಿಷೇಕ್.”
“ಲೈಗರ್ ಅಂದ್ರೇನು.”
“ಅಂದ್ರೆ, ಲಯನ್ನು ಮತ್ತು ಟೈಗರ್ರು ಕ್ರಾಸಲ್ಲಿ ಲೈಗರ್ ಬರುತ್ತೆ ಸಾ. ಅದೇ ನಮ್ಮ ಅಭಿಷೇಕ್. ಗೊತ್ತಾಯ್ತಾ ಸಾ.”
“ಪರವಾಗಿಲ್ಲ ಒಳ್ಳೆ ತಳಿ ತಜ್ಞನಂಗೆ ಮಾತಾಡ್ತಿ. ನಮ್ಮ ದ್ಯಾವೇಗೌಡ್ರ ಬಗ್ಗೆ ಏನೇಳ್ತೀರಿ.”

“ಪಾಪ ದುರಾಶೆ ಮುದುಕ. ಎಂಟು ಮುದ್ದೆ ಕೇಳಿದ್ದ, ಆ ಕಾಂಗ್ರೆಸ್ ಬಡ್ಡೇತವು ಹೋಗತ್ತಾಗೆ ನುಂಗು ಅಂತ ಯೆಂಟು ಮುದ್ದೆ ಇಕ್ಕಿದ್ರು. ಉಣ್ಣಕ್ಕಾಗದೆ ಒಂದು ಮುದ್ದೆಯ ವಾಪಸ್ ಕೊಟ್ಟವುನೆ. ಚಿಕ್ಕಮಂಗ್ಳೂರ್ ಮುದ್ದೆನ ತಿರಗ ಕಾಂಗ್ರೆಸ್ ಕ್ಯಾಂಡಿಡೇಟಿಗೆ ಕೊಟ್ಟವುನೆ. ಆರಂಬುದಲ್ಲಿ ಹನ್ನೆಲ್ಡು ಮುದ್ದೆ ಕೇಳಿದ್ದ. ಇವತ್ತಿನ ಸ್ಥಿತಿ ನೋಡಿದರೆ ಅವುನ್ನ ವಾಪಸ್ ಕೊಡುತಿದ್ದ ಅನ್ನಸ್ತದೆ. ವಯಸ್ಸಾದ ಮ್ಯಾಲೆ ಜೀರ್ಣಶಕ್ತಿ ಕಡಿಮೆ ಆಯ್ತದೆ ಅನ್ನದ್ಕೆ ಇದೇ ಉದಾರಣೆ ಸಾ.”
“ಸಾ, ಒಂದ್ ಟೂ ಹಂಡ್ರೆಡ್ ರುಪೀಸ್ ಕರೆನ್ಸಿ ಹಾಕ್ಸಿ ಸಾ”
“ಥೂತ್ತೇರಿ!!!”


