ಕಳೆದ ಡಿಸೆಂಬರ್ 28 ರಂದು ಕನ್ನಡಪರ ಹೋರಾಟಗಾರರು ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದ ನಂತರ ಹಲವು ಅವಘಡಗಳಿಗೆ ಸಾಕ್ಷಿಯಗಿದ್ದ ಬೆಳಗಾವಿ ಈಗ ಮತ್ತೊಂದು ಅಹಿತಕರ ಘಟನೆಗೆ ಸಾಕ್ಷಿಯಾಗಿದೆ. ಕನ್ನಡ ಮತ್ತು ಮರಾಠಿಗರ ಸ್ವಾಭಿಮಾನದ ಪ್ರಶ್ನೆಯಾಗಿ ಕನ್ನಡ ಧ್ವಜ ಪಾಲಿಕೆ ಆವರಣದಲ್ಲಿ ನಿಂತಿದೆ.
ಪಾಲಿಕೆ ಎದುರು ಧ್ಜಜ ಸ್ಥಾಪಿಸಿದ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳಕೂರ ಎಂಬುವವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಡಲು ಯತ್ನಿಸಿರುವ ಘಟನೆ ನಡೆದಿದೆ. ವಡಗಾವಿಯ ಕಲ್ಯಾಣ ನಗರದಲ್ಲಿರುವ ಅಂಗಡಿಗೆ ಗುರುವಾರ ಮಧ್ಯರಾತ್ರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಬೆಂಕಿ ಹಚ್ಚಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀನಿವಾಸ ತಾಳೂಕರ ಮತ್ತು ಅವರ ಕುಟುಂಬದ ಸದಸ್ಯರು ಬೆಂಕಿ ನಂದಿಸಿದ್ದಾರೆ. ಶ್ರೀನಿವಾಸ ಅವರ ಅಂಗಡಿಯಲ್ಲಿ ಕನ್ನಡ ಬಾವುಟಗಳು, ಕನ್ನಡ ಶಾಲು, ತೋರಣಗಳನ್ನು ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ: ಬೆಳಗಾವಿ: ಕನ್ನಡ ಧ್ವಜ ಕೆಳಗಿಳಿಸದಿದ್ದರೆ ಭಗವಾಧ್ವಜ ಹಾರಿಸುತ್ತೇವೆ ಎಂದ ಮಹಾರಾಷ್ಟ್ರ ಏಕೀಕರಣ ಸಮಿತಿ
ಘಟನೆ ಕುರಿತು ಖಂಡನೆ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಮೇಲೆ ನಡೆಯುತ್ತಿರುವ ದಾಳಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಬೆಳಗಾವಿ ಪಾಲಿಕೆ ಎದುರು ಡಿ.28ರಂದು ಕನ್ನಡಪರ ಹೋರಾಟಗಾರರು ನಾಡ ಧ್ವಜ ಹಾರಿಸಿದ ನಂತರದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಮ್ಮ ನೆಲದಲ್ಲಿ ನಮ್ಮ ಧ್ವಜ ಹಾರಿಸಲು ಹರಸಾಹಸಪಡುವುದು, ಅದಕ್ಕೆ ಕಾವಲು ಕಾಯುವುದು, ಧ್ವಜ ತೆರವು ಮಾಡದಂತೆ ಅಧಿಕಾರಿಗಳಲ್ಲಿ ಮನವಿ ಮಾಡುವುದು ಇವೆಲ್ಲವೂ ಕನ್ನಡಿಗರ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆ.
1/4 pic.twitter.com/y8JN2eBPQf— H D Kumaraswamy (@hd_kumaraswamy) January 2, 2021
“ಬೆಳಗಾವಿ ಪಾಲಿಕೆ ಎದುರು ಡಿ.28ರಂದು ಕನ್ನಡಪರ ಹೋರಾಟಗಾರರು ನಾಡ ಧ್ವಜ ಹಾರಿಸಿದ ನಂತರದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಮ್ಮ ನೆಲದಲ್ಲಿ ನಮ್ಮ ಧ್ವಜ ಹಾರಿಸಲು ಹರಸಾಹಸಪಡುವುದು, ಅದಕ್ಕೆ ಕಾವಲು ಕಾಯುವುದು, ಧ್ವಜ ತೆರವು ಮಾಡದಂತೆ ಅಧಿಕಾರಿಗಳಲ್ಲಿ ಮನವಿ ಮಾಡುವುದು ಇವೆಲ್ಲವೂ ಕನ್ನಡಿಗರ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆ” ಎಂದು ತಮ್ಮ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
“ಪಾಲಿಕೆ ಎದುರು ಧ್ಜಜ ಸ್ಥಾಪಿಸಿದ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳಕೂರ ಎಂಬುವವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಡಲು ಯತ್ನಿಸಿರುವ ಘಟನೆಯೂ ನಡೆದು ಹೋಗಿದೆ. ಕರ್ನಾಟಕದಲ್ಲಿ, ಕನ್ನಡ ಧ್ವಜಕ್ಕಾಗಿ ಹೋರಾಡಿದವರ ಮೇಲೆ ಪದೇ ಪದೇ ದಾಳಿ ನಡೆಯುತ್ತದೆ ಎಂದರೆ, ಅವರಿಗೆ ರಕ್ಷಣೆ ನೀಡಲಾಗುತ್ತಿಲ್ಲ ಎಂದರೆ ಆಳುವವರ ಕನ್ನಡಾಭಿಮಾನ, ನಾಡ ಪ್ರೇಮ ಪ್ರಶ್ನಾರ್ಹ” ಎಂದು ರಾಜ್ಯ ಸರ್ಕಾರದ ಮೌನದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಪಕ್ಷಗಳಿಲ್ಲದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ‘ಈ ಪಕ್ಷಗಳ ಬೆಂಬಲಿತರ’ ಸಾಧನೆ ಎಷ್ಟು?
’ಕನ್ನಡಿಗರ ಭಾವೈಕ್ಯದ ಸಂಕೇತವಾಗಿರುವ ಕನ್ನಡ ಧ್ವಜ ಡಿ.31ರ ಒಳಗಾಗಿ ತೆರವು ಗೊಳಿಸಬೇಕು ಎಂದು ಹೇಳಿದಾಗಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಈಗ ಕನ್ನಡ ಹೋರಾಟಗಾರರ ಮೇಲೆ ದಾಳಿಯ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಕನ್ನಡಿಗರಿಗೇ ಎಚ್ಚರಿಕೆ ನೀಡುವ ಧೈರ್ಯ ತೋರುವವರಿಗೆ ಶಾಸ್ತಿಯಾಗಬೇಕು’ ಎಂದು ಆಗ್ರಹಿಸಿದ್ದಾರೆ.
“ಬೆಳಗಾವಿಯಲ್ಲಿ ಕನ್ನಡ ಧ್ವಜ ಸ್ಥಾಪಿಸಿದ ನಂತರದ ಘಟನೆಗಳನ್ನು ಸರ್ಕಾರ ಕೂಡಲೇ ಪರಿಶೀಲಿಸಬೇಕು. ಘಟನೆಯಲ್ಲಿ ಉದ್ಧಟತನ ತೋರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ಕರ್ನಾಟಕದಲ್ಲಿ ‘ಕನ್ನಡಿಗನೇ ಸಾರ್ವಭೌಮ’ ಎಂಬ ಸಂದೇಶ ರವಾನಿಸಬೇಕು. ಇಲ್ಲವಾದರೆ, ಕೈಲಾಗದವರೆಲ್ಲರೂ ಕನ್ನಡಿಗರ ಮೇಲೆ ಸವಾರಿ ಮಾಡಲು ಬಂದಾರು” ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಏನಿದು ವಿವಾದ…?
ಡಿಸೆಂಬರ್ 28 ರಂದು ಕನ್ನಡ ಪರ ಹೋರಾಟಗಾರರು ಬೆಳಗಾವಿ ಮಹಾನಗರ ಪಾಲಿಕೆ ಎದುರು ಕಂಬ ನೆಟ್ಟು, ಕನ್ನಡ ಬಾವುಟ ಹಾರಿಸಿದ್ದರು ಇದಕ್ಕೆ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ರಾಷ್ಟ್ರಧ್ವಜದ ಮುಂದೆ ಮಾನ್ಯತೆ ಸಿಗದ ಹಳದಿ-ಕೆಂಪು ಧ್ವಜವನ್ನು ಹಾರಿಸಿ ರಾಷ್ಟ್ರೀಯ ಭಾವೈಕ್ಯತೆಗೆ ಕನ್ನಡ ಸಂಘಟನೆಗಳು ಧಕ್ಕೆ ತಂದಿವೆ ಎಂದು ಕನ್ನಡ ಹೋರಾಟಗಾರರ ವಿರುದ್ಧ ಕ್ರಮ ಜರುಗಿಸಿ ಎಂದು ಎಂಇಎಸ್ ಆಗ್ರಹಿಸಿತ್ತು.
ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಡಿಸೆಂಬರ್ 31 ರೊಳಗೆ ಧ್ವಜ ತೆರುವು ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ಗಡುವು ನೀಡಿತ್ತು ಜೊತೆಗೆ ತೆರುವು ಮಾಡದೇ ಇದ್ದಲ್ಲಿ ನಾವು ಅಲ್ಲಿ ಭಗವಾಧ್ವಜ ಹಾರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಆದರೆ ಇದನ್ನು ಖಂಡಿಸಿರುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಧ್ವಜಸ್ತಂಭ ಮತ್ತು ಧ್ವಜವನ್ನು ತೆರವುಗೊಳಿಸದಂತೆ ಅಲ್ಲಿಯೇ ಕಾವಲು ಕಾಯುತ್ತಿದ್ದಾರೆ. ಕನ್ನಡ ಪರ ಹೋರಾಟಗಾರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ಅಭಿಯಾನ ಕೂಡ ಮಾಡಲಾಗಿತ್ತು.
ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಘಟನೆಗಳ ಕುರಿತು ರಾಜ್ಯ ಸರ್ಕಾರ ಮಾತಾಡದೇ ಇರುವುದನ್ನು ಪ್ರಶ್ನಿಸಿದ್ದಾರೆ. ಕರ್ನಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಸಂದೇಶ ರವಾನಿಸಿ, ಕನ್ನಡಿಗರ ಮೇಲೆ ನಡೆಯುತ್ತಿರುವ ದಾಳಿಗೆ ಕಠಿಣ ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಇದನ್ನೂ ಓದಿ: ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಗಮನ ಸೆಳೆದ ಹೋರಾಟಗಾರರು


