ರಾಜಸ್ತಾನದ ಶ್ರೀ ಗಂಗಾನಗರ ಜಿಲ್ಲೆಯ ಕಿಸಾನ್ ಕಾರ್ಡ್ ಹೊಂದಿರುವ ರೈತರು 2019 ರ ’ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ಯ ವಿಮಾ ಹಣ ಪಡೆಯಲು ಪರದಾಡುತ್ತಿದ್ದಾರೆ. ವಿಮಾ ಪಾಲಿಸಿಯಲ್ಲಿ ಬ್ಯಾಂಕ್ ಆಫ್ ಬರೋಡ ರೈತರ ಭೂ ವಿವರಗಳನ್ನು ತಪ್ಪಾಗಿ ದಾಖಲಿಸಿರುವುದೇ ಇದಕ್ಕೆ ಕಾರಣ.
ಶ್ರೀ ಗಂಗಾನಗರ ಜಿಲ್ಲೆಯ ಸುರತ್‌ಘರ್ ಹೋಬಳಿಯ ರಾಕೇಶ್ ಕುಮಾರ್ ಎಂಬ ರೈತರು ಕೌನ್‌ಪಲ್ಸಾರ್ ಎಂಬ ಗ್ರಾಮದಲ್ಲಿ ಜಮೀನು ಹೊಂದಿದ್ದಾರೆ. ತಹಸೀಲ್ದಾರ್ ನೀಡಿರುವ ಭೂ ದಾಖಲೆ ಇದನ್ನು ಪುಷ್ಟಿಕರಿಸುತ್ತದೆ.
ಆದರೆ ರಾಕೇಶ್ ಅವರ ಫಸಲ್ ಭೀಮಾ ಪಾಲಿಸಿ (2019 ರ ಮುಂಗಾರು ಮತ್ತು ಹಿಂಗಾರು)ಗಳಲ್ಲಿ ಜಮೀನು ಎರಡು ಗ್ರಾಮಗಳಲ್ಲಿ ಇದೆಯೆಂದು ದಾಖಲಾಗಿದೆ. ಮುಂಗಾರು ಅವಧಿಯ ಪಾಲಿಸಿಯಲ್ಲಿ ಜಮೀನು 16 ಎಸ್‌ಎಲ್‌ಡಿ ಎಂಬ ಗ್ರಾಮದಲ್ಲಿ ಇರುವುದಾಗಿ, ಹಿಂಗಾರು ಅವಧಿಯ ಪಾಲಿಸಿಯಲ್ಲಿ ಜಮೀನು ತಿಲಾವಳಿ ಗ್ರಾಮದಲ್ಲಿ ಇರುವುದಾಗಿ ನಮೂದಿತವಾಗಿದೆ.
ಈ ಬದಲಾವಣೆಯ ಕಾರಣಕ್ಕೆ ರಾಕೇಶ್ ಅವರಿಗೆ ವಿಮಾ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ’ಪರಿಹಾರ ಒದಗಿಲಸಲು ವಿಮಾ ಕಂಪನಿಗಳು ಇನ್ನು ಮುಂದೆ ಜವಾಬ್ದಾರರಾಗಿರುವುದಿಲ್ಲ. ಅವು ತಮ್ಮ ಲಾಭವನ್ನು ಗರಿಷ್ಠಗೊಳಿಸುವುದಕ್ಕೆ ಯತ್ನಿಸಲಿವೆ. ಇದಕ್ಕೆ ಪೂರಕವಾಗಿ ಬ್ಯಾಂಕ್ ಉದ್ದೇಶಪೂರ್ವಕವಾಗಿಯೇ ತಪ್ಪಾದ ವಿವರಗಳನ್ನು ನಮೂದಿಸಿದೆ’ ಎಂದು ರಾಕೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ: ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

’ರೈತರ ಜಮೀನುಗಳು ಬಾವಿ ಆಶ್ರಯಿತ ನೀರಾವರಿ ಪ್ರದೇಶದಲ್ಲಿವೆ ಎಂದು ಬ್ಯಾಂಕ್ ತೋರಿಸುತ್ತಿದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಒಳ್ಳೆ ಫಸಲು ಬರುವುದರಿಂದ, ಬೆಳೆ ನಷ್ಟಕ್ಕೆ ನೀಡಲ್ಪಡುವ ಪರಿಹಾರ/ವಿಮಾಹಣ ತುಂಬ ನಗಣ್ಯವಾಗಿರುತ್ತದೆ’ ಎಂದು ರಾಕೇಶ್ ಹೇಳುತ್ತಾರೆ. ’ನನ್ನ ಜಮೀನಿನ ವಿಷಯಕ್ಕೆ ಬಂದರೆ ಅದು ಇರುವುದು ಟ್ಯೂಬ್‌ವೆಲ್ ನೀರಾವರಿ ಪ್ರದೇಶದಲ್ಲಿ. ಆದರೆ ಬ್ಯಾಂಕ್ ಅದನ್ನು ಕಾಲುವೆ-ನೀರಾವರಿ ಪ್ರದೇಶದ ಹಳ್ಳಿಯಲ್ಲಿದೆ ಎಂದು ತಪ್ಪಾದ ಗ್ರಾಮವನ್ನು ನಮೂದು ಮಾಡಿದೆ’ ಎಂದು ಅವರು ಆಕ್ರೋಶ ವ್ಯಕಶಪಡಿಸಿದ್ದಾರೆ.
ಟ್ಯೂಬ್‌ವೆಲ್ ನೀರಾವರಿ ಪ್ರದೇಶದಲ್ಲಿ ಅನುಕೂಲಕರವಲ್ಲದ ಹೊತ್ತಿನಲ್ಲಿ ನೀರು ಬಿಡುವುದು ಮತ್ತು ವಿದ್ಯುತ್‌ನ ಅಸಮರ್ಪಕ ಸರಬರಾಜು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಅವರ ಫಸಲನ್ನು ಬಾಧಿಸಿ, ಅವರಿಗೆ ನಷ್ಟವುಂಟು ಮಾಡುತ್ತದೆ. ಈ ನಷ್ಟವನ್ನು ವಿಮಾ ಪರಿಹಾರದಲ್ಲಿ ಪಡೆಯಲು ರೈತರು ಬಯಸುತ್ತಿದ್ದಾರೆ.
’ಚಲಿಗಾಲ ಆರಂಭವಾದ ಕೂಡಲೇ ರಾತ್ರಿ 9 ರಿಂದ ಬೆಳಗಿನ 3 ರವರೆಗೆ ವಿದ್ಯುತ್ ಸರಬರಾಜು ಮಾಡುವುದರಿಂದ ನೀರು ಹಾಯಿಸಲು ರೈತರಿಗೆ ಕಷ್ಟವಾಗುತ್ತಿದೆ ಎಂದು ರಾಕೇಶ್ ಹೇಳುತ್ತಾರೆ. ಸುರತ್‌ಘರ್ ಹೋಬಳಿಯಲ್ಲಿ ಬಹುಪಾಲು ರೈತರು ಟ್ಯೂಬ್‌ವೆಲ್‌ಗಳಿಂದ ಪಡೆಯುವ ನೀರನ್ನು ಹನಿ ನೀರಾವರಿ ಪದ್ಧತಿ ಬಳಸಿ ನೀರಾವರಿ ಮಾಡುತ್ತಾರೆ. ರಾತ್ರಿ ಸಂದರ್ಭದಲ್ಲಿ ವಿದ್ಯುತ್ ಸರಬರಾಜು ಮಾಡುವುದರಿಂದ ಆ ಚಳಿಯಲ್ಲಿ ಡ್ರಿಪ್ ಪೈಪ್‌ಗಳನ್ನು ಆ ಕಡೆಯಿಂದ ಈ ಕಡೆಗೆ ಶಿಫ್ಟ್ ಮಾಡುವುದು ಕಷ್ಟ. ಈ ನಡುವೆ ನೀರು ಸೋರಿಕೆಯಾಗಿದೆಯಾ ಎಂದು ಪರೀಕ್ಷಿಸುತ್ತಿರಬೇಕು. ಹೆಚ್ಚು ಪ್ರಮಾಣದ ಅಥವಾ ಕಡಿಮೆ ಪ್ರಮಾಣದ ನೀರನ್ನು ಬೆಳೆಗಳಿಗೆ ಹಾಯಿಸಿದರೆ ಅದು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ
ಸುರತ್‌ಘರ್ ರೈತರು ವಿದ್ಯುತ್ ಮಂಡಳಿ ಕಚೇರಿ ವಿರುದ್ಧ ಆಗಾಗ ಪ್ರತಿಭಟನೆ ನಡೆಸಿ ವಿದ್ಯುತ್ ಸರಬರಾಜು ಸಮಯವನ್ನು ಹಗಲಿನಲ್ಲಿ ನಿಗದಿಪಡಿಸಿ ಎಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಟ್ಯೂಬ್-ವೆಲ್ ನೀರಾವರಿಯ ಕಷ್ಟಗಳು ಕಾಲುವೆ-ನೀರಾವರಿಯಲ್ಲಿ ಅಷ್ಟಾಗಿ ಇಲ್ಲ. ಕಾಲುವೆ ನೀರು ನೇರವಾಗಿ ಜಮೀನು ತಲುಪತ್ತದೆ. ವಿದ್ಯುತ್‌ನ ಹಂಗೂ ಇರುವುದಿಲ್ಲ.ಇಂತಹ ಸಂದರ್ಭದಲ್ಲೇ ಟ್ಯೂಬ್‌ವೆಲ್ ನೀರಾವರಿ ಪ್ರದೇಶವನ್ನು ಕಾಲುವೆ-ನೀರಾವರಿ ಪ್ರದೇಶ ಎಂದು ತೋರಿಸಿದ ಬ್ಯಾಂಕ್ ರೈತರಿಗೆ ವಿಮಾ ಪರಿಹಾರ ನಿರಾಕರಿಸುತ್ತಿದೆ.
ದಿ ವೈರ್ ಜೊತೆ ಮಾತನಾಡಿರುವ ಸುರತ್‌ಘರ್ ಬರೋಡಾ ಬ್ಯಾಂಕ್ ಫೀಲ್ಡ್ ಆಫೀಸರ್ ಕಾಲ್ರಾಮ್, “2019 ಕ್ಕೆ ಸಂಬಂಧಿಸಿದಂತೆ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿದೆ. ನಾವು ಆಧಾರ್ ವಿವರಗಳನ್ನು ಎಂಟ್ರಿ ಮಾಡಿದಾಗ, ಅದು ಹಿಂದಿನ ವರ್ಷದ ವಿವರಗಳನ್ನೇ ತೆಗೆದುಕೊಂಡ ಪರಿಣಾಮ ಮಿಸ್‌ಮ್ಯಾಚ್ ಸಂಭವಿಸಿದೆ. ಈಗ ಮ್ಯಾನುವಲ್ ಆಗಿ ವಿವರ ಸೇರಿಸುತ್ತಿದ್ದು, ಅಂತಹ ಸಮಸ್ಯೆ ಮತ್ತೆ ಸಂಭವಿಸದು’ ಎನ್ನುತ್ತಾರೆ.

ಇದನ್ನೂ ಓದಿ: ರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು
ಫಸಲ್ ಬೀಮಾ ಯೋಜನೆಯ ಪೋರ್ಟಲ್‌ನಲ್ಲೇ ಹಲವಾರು ಸಮಸ್ಯೆಗಳಿದ್ದು, ಅದರ ಪರಿಣಾಮಗಳನ್ನು ರೈತರು ಅನುಭವಿಸುತ್ತಿದ್ದಾರೆ. ಹಿರಿಯ ಕೃಷಿ ವಿಜ್ಞಾನಿಯೊಬ್ಬರ ಪ್ರಕಾರ, ಈ ಪೋರ್ಟಲ್‌ನ ಡ್ರಾಪ್ ಬಾಕ್ಸ್‌ನಲ್ಲಿ ನೂರಾರು ಗ್ರಾಮಗಳ ಹೆಸರು ಗೋಚರಿಸುವುದೇ ಇಲ್ಲ. ಹೀಗಾಗಿ ಸಮೀಪದ ಯಾವುದೋ ಗ್ರಾಮದ ಹೆಸರು ನಮೂದಿತಗೊಂಡು ರೈತರು ಪರಿತಪಿಸಬೇಕಾಗಿದೆ’ ಎಂದಿದ್ದಾರೆ.
2018 ರ ಸೆಪ್ಟೆಂಬರ್‌ನಲ್ಲಿ ಹನುಮಾನಘರ್ ಜಿಲ್ಲೆಯ ಹಲವು ಗ್ರಾಮಗಳ ರೈತರಿಗೆ ವಿಮಾ ಪರಿಹಾರ ನಿರಾಕರಿಸಲ್ಪಟ್ಟಿತ್ತು. ಅಲ್ಲಿನ ಎಸ್‌ಬಿಐ ಶಾಖೆಯು ರೈತರ ಪ್ರಿಮಿಯಂ ಹಣವನ್ನು ಬಜಾಜ್ ಅಲಾಯನ್ಸ್ ವಿಮಾ ಕಂಪನಿಗೆ ಕಟ್ಟದಿದುದೇ ಇದಕ್ಕೆ ಕಾರಣವಾಗಿತ್ತು. ಈ ವಿಮಾ ಕಂಪನಿಗೆ ಪ್ರಿಮಿಯಂ ಕಟ್ಟುವ ಬದಲು ಅಗ್ರಿಕಲ್ಚರಲ್ ಇನ್ಸುರನ್ಸ್ ಕಂಪನಿಗೆ ಪ್ರಿಮಿಯಂ ಹಣವನ್ನು ಎಸ್‌ಬಿಐ ಶಾಖೆ ವರ್ಗಾಯಿಸಿತ್ತು! ಈ ವಿಮಾ ಕಂಪನಿ ಹಣ ವಾಪಸ್ ಮಾಡಿತಾದರೂ ಅಷ್ಟು ಹೊತ್ತಿಗೆ ಪಾವತಿಸುವ ಅವಧಿ ಮುಗಿದಿತ್ತು.
2019 ರ ಏಪ್ರಿಲ್‌ನಲ್ಲಿ ಹನುಮಾನ್‌ಘರ್ ಹೋಬಳಿಯ ನೊಹಾರ್ ಹೋಬಳಿಯ 135 ಕಿಸಾನ್ ಕಾರ್ಡುದಾರ ರೈತರಿಗೆ ವಿಮಾ ಹಣ ನಿರಾಕರಿಸಲಾಗಿತು. ಅವರ 2017ರ ಪ್ರಿಮಿಯಂ ಹಣವನ್ನು ಆಕ್ಸಿಸ್ ಬ್ಯಾಂಕ್ ಆ ರೈತರು ಬೆಳೆಯದೇ ಇದ್ದ ಹತ್ತಿ ಬೆಳೆಗೆ ವರ್ಗಾಯಿಸಿತ್ತು!
ಇದನ್ನೂ ಓದಿ: ಬಹುತ್ವದ ದೇಶದಲ್ಲಿ ಸಂಧಾನ-ಚೌಕಾಶಿಗೆ ಕದ ಮುಚ್ಚುತ್ತಿರುವ ಪ್ರಭುತ್ವಗಳು


