HomeಮುಖಪುಟÀ la lanterne 2.0? ಚೈನಾದ ಇತ್ತೀಚಿನ ವಿದ್ಯಮಾನದ ಕುರಿತು ರಾಜಾರಾಂ ತಲ್ಲೂರು

À la lanterne 2.0? ಚೈನಾದ ಇತ್ತೀಚಿನ ವಿದ್ಯಮಾನದ ಕುರಿತು ರಾಜಾರಾಂ ತಲ್ಲೂರು

ಚೀನಾದ ಶಾಂಘೈನಲ್ಲಿ ನಡೆದ ಬಂಡ್ ಸಮ್ಮಿಟ್ ಆರ್ಥಿಕ ಸಮಾವೇಶದಲ್ಲಿ ನೆರೆದಿದ್ದ ಚೀನಾದ ಪ್ರಮುಖ ನಾಯಕರು, ಆರ್ಥಿಕ ಚಿಂತಕರನ್ನು ಉದ್ದೇಶಿಸಿ ಮಾತನಾಡಿದ ಜಾಕ್ ಮಾ, ಚೀನಾದ ಬ್ಯಾಂಕುಗಳು ಖಾಸಗಿ ಲೇವಾದೇವಿಯವರಂತೆ ವರ್ತಿಸುತ್ತಿವೆ ಮತ್ತು ದೇಶದ ಆರ್ಥಿಕ ನಿಯಂತ್ರಣಕ್ಕೆ ಕುಳಿತವರು ‘ಮುದುಕಪ್ಪಗಳು’, ಅವರಿಗೆ ಆಧುನಿಕ ವ್ಯವಹಾರ ಗೊತ್ತಿಲ್ಲ ಎಂದು ಬಹಿರಂಗವಾಗಿ ಟೀಕಿಸಿದ್ದರು.

- Advertisement -
- Advertisement -

17 ನೇ ಶತಮಾನದ ಕೊನೆಯ ವೇಳೆಗೆ ಸಂಭವಿಸಿದ ಫ್ರೆಂಚ್ ಕ್ರಾಂತಿಯ ಪ್ರಸಿದ್ಧ ಘೋಷಣೆ “ಲಾ ಲಾಂಟರ್ನ್” ಅಂದರೆ ಸಿರಿವಂತರನ್ನು “ಲೈಟುಕಂಬಕ್ಕೆ ನೇಣುಹಾಕಿ” ಎಂದು!

ಇಂದು ಜಗತ್ತಿನಾದ್ಯಂತ ಇಂಟರ್‌ನೆಟ್ ಮತ್ತು ಅದರ ಪರಿಣಾಮದಿಂದ ಜಾಗತಿಕ ಮಟ್ಟದಲ್ಲಿ ಸಂಭವಿಸಿರುವ ಆರ್ಥಿಕ ಮತ್ತು ರಾಜಕೀಯ ಸ್ಥಿತ್ಯಂತರಗಳು ಎಷ್ಟು ಗಂಭೀರ ಸ್ವರೂಪದವೆಂದರೆ, ಜಗತ್ತಿನಾದ್ಯಂತ ಸರ್ಕಾರಗಳು ಪರಿಸ್ಥಿತಿ ತಮ್ಮ ಕೈಮೀರಿ ಹೋಗುತ್ತಿರುವುದನ್ನು ಮನಗಂಡಿವೆ; ಅದನ್ನು ಮತ್ತೆ ಕೈವಶ ಮಾಡಿಕೊಳ್ಳಲು ಹೆಣಗಾಡುತ್ತಿವೆ.

ಗೂಗಲ್, ಫೇಸ್‌ಬುಕ್, ಅಮೆಜಾನ್, ಆಪಲ್‌ನಂತಹ ಬೃಹತ್ ಕಾರ್ಪೊರೇಷನ್‌ಗಳು ತಮ್ಮ ದೇಶದ ಸರ್ಕಾರಗಳನ್ನೂ ಮೀರಿ ಬೆಳೆಯತೊಡಗಿರುವುದನ್ನೂ, ಅದರೊಂದಿಗೆ AI, ಬಿಗ್‌ಡೇಟಾ, ಬ್ಲಾಕ್ ಚೈನ್ ನಂತಹ ತಂತ್ರಜ್ಞಾನಗಳು ಈ ಕಾರ್ಪೊರೇಷನ್‌ಗಳಿಗೆ ಅಪರಿಮಿತ ತಾಕತ್ತು ತಂದುಕೊಡುತ್ತಿರುವುದನ್ನೂ ಗಮನಿಸಿದ ಅಮೆರಿಕ, ಯುರೋಪಿನ ಸರ್ಕಾರಗಳು, ತಮ್ಮ ಅಸ್ತಿತ್ವದ ಪ್ರಶ್ನೆ ಬಂದಾಗ ಹೇಗೆ ಪ್ರತಿಕ್ರಿಯಿಸಿದವು ಎಂಬುದನ್ನು ಜಗತ್ತು ಕಳೆದ ವರ್ಷವಿಡೀ ಕಂಡಿವೆ. ಈ ಕಾರ್ಪೊರೇಷನ್‌ಗಳ ಮುಖ್ಯಸ್ಥರು ಸರ್ಕಾರಗಳ ಎದುರು ಮಂಡಿಯೂರಿ, ತನಿಖೆಗೆ ಒಳಗಾಗಿ, ಸ್ಪರ್ಧಿಗಳನ್ನು ಹೊಸಕಿಹಾಕಲಾಗುತ್ತಿದೆ ಎಂಬ ತಮ್ಮ ಮೇಲಿನ ದೂರಿಗೆ ಸ್ಪಷ್ಟೀಕರಣ ಕೊಡುತ್ತಿದ್ದಾರೆ.

ಇದು, ಸಾಂಪ್ರದಾಯಿಕ ಸರ್ಕಾರಗಳು ಮತ್ತು ಬೃಹತ್ ಟೆಕ್ ಕಂಪನಿಗಳು ಜನತೆಯ ಮೇಲೆ ನಿಯಂತ್ರಣ ಹೊಂದುವುದಕ್ಕಾಗಿ ನಡೆಸಿರುವ ಮೇಲಾಟವಾಗಿದ್ದು, ಅಂತಿಮವಾಗಿ ಯಾರು ಹೆಚ್ಚು ಬಲಶಾಲಿಗಳು ಎಂಬ ಕುರಿತಾದ ನಿರ್ಣಾಯಕ ಜಗಳ ಇದಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಜಗತ್ತಿನಾದ್ಯಂತ ಬಡವರು ಮತ್ತು ಸಿರಿವಂತರ ನಡುವಿನ ಅಂತರ ಹೆಚ್ಚುತ್ತಿರುವುದು ಮತ್ತು ಪ್ರಜಾಪ್ರಭುತ್ವದ ಮೂಲ ಉದ್ದೇಶಗಳನ್ನು ಈ ಅಂತರ ನಾಶಪಡಿಸುತ್ತಿರುವುದಕ್ಕೆ ವ್ಯಕ್ತವಾಗುತ್ತಿರುವ ಸಾರ್ವಜನಿಕ ಪ್ರತಿರೋಧವನ್ನು ಇವೆರಡೂ ಸಾಂಸ್ಥಿಕ ರೂಪಗಳು ತಮ್ಮ ಲಾಭಕ್ಕಾಗಿ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಿವೆ.

ಊರಿಗೊಂದು ದಾರಿಯಾದರೆ ಪೋರನಿಗೆ ಇನ್ನೊಂದೇ ದಾರಿ ಎಂದು ತನ್ನದೇ ಜಗತ್ತು ಸೃಷ್ಟಿಸಿಕೊಂಡು, ಈಗ ಕೊರೊನಾ ಕಾಲದಲ್ಲಂತೂ ತನ್ನ ಜಗತ್ತೇ ಬೇರೆ ಎಂಬ ಮಟ್ಟಿಗೆ ಪ್ರತ್ಯೇಕವಾಗಿ ಕುಳಿತಿರುವ ಚೀನಾ ಕೂಡ ಇಂತಹದೊಂದು ಆರ್ಥಿಕ ಅಸಮಾನತೆಯ ಚಿಂತೆಗೆ ಹೊರತಲ್ಲ. 80ರ ದಶಕದಲ್ಲಿ ಚೀನಾದ ಆರ್ಥಿಕತೆಯನ್ನು ಉದಾರೀಕರಣಗೊಳಿಸಿದ ತೆಂಗ್ ಸಿಯಾವ್ ಪಿಂಗ್ (Deng Xiaoping) ನೀಡಿದ್ದ “ಬದಲಾವಣೆಗೆ ತೆರೆದುಕೊಳ್ಳಿ”, “ಸಿರಿವಂತಿಕೆಯಿಂದ ಪ್ರಸಿದ್ಧಿಯೆಡೆಗೆ” ಎಂಬ ಎರಡನೇ ಕ್ರಾಂತಿಯ ಮಂತ್ರಗಳೀಗ ಚೀನಾದಲ್ಲಿ ಒಂದು ಸುತ್ತು ಪೂರೈಸಿವೆ. ಆಧುನಿಕ ಟೆಕ್ ಕಂಪನಿಗಳ ನಾಗಾಲೋಟಕ್ಕೆ ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ತನ್ನ ಪ್ರತಿಕ್ರಿಯೆಯ ವಿಧದಲ್ಲಿ ಚೀನಾ ಭಿನ್ನವಾಗಿ ನಿಂತಿದೆ. ಈ ಕಾರಣಕ್ಕಾಗಿಯೂ, ಇಂದು ಅಲ್ಲಿನ ದೊಡ್ಡ ಟೆಕ್ ಕಂಪನಿ “ಆಲಿಬಾಬಾ” ಸಂಸ್ಥೆಯ ಸಂಸ್ಥಾಪಕ ಜಾಕ್ ಮಾ ಅವರು ಸುದ್ದಿಯಲ್ಲಿದ್ದಾರೆ.

PC : Alizila.com

2007ರಲ್ಲಿ, ಐಟಿಗೆ ಸಂಬಂಧಿಸಿದಂತೆ ಬೇರೆ ದೇಶಗಳಿಗಿಂತ ಒಂದು ಹೆಜ್ಜೆ ಮುಂದೆ ಇರುವ ಭಾರತದಲ್ಲೇ ಏನಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು, ಆಗಿನ ಐಟಿ ದೈತ್ಯ ಇನ್ಫೋಸಿಸ್‌ನ ನಾರಾಯಣಮೂರ್ತಿಯವರು ಒಳ್ಳೆಯ ರಾಷ್ಟ್ರಪತಿ ಆಗಬಲ್ಲರು ಎಂದದ್ದು ಎಷ್ಟರಮಟ್ಟಿಗೆ ಅಲೆ ಸೃಷ್ಟಿಸಿತೆಂದರೆ, ಅಲ್ಲಿಯತನಕ ಭಾರತದ ’ಬ್ಯುಸಿನೆಸ್ ಜಗತ್ತಿನ ಗೋಲ್ಡ್ ಹ್ಯಾಂಡ್’ ಅನ್ನಿಸಿದ್ದ ನಾರಾಯಣಮೂರ್ತಿ, ಆ ಬಳಿಕ ಏಳುಗತಿ ಕಾಣಲೇ ಇಲ್ಲ. ಅವರ ಮೈಸೂರು ಕ್ಯಾಂಪಸ್‌ನ ’ರಾಷ್ಟ್ರಗೀತೆ’ ವಿವಾದ ಮತ್ತಿತರ ಹಲವು ವಿವಾದಗಳು ಅವರು ಮತ್ತೆಂದೂ ರಾಷ್ಟ್ರಪತಿ ಕ್ಯಾಂಡಿಡೇಟ್ ಆಗಿ ಪ್ರ್ರೊಜೆಕ್ಟ್ ಆಗದಂತೆ ಮಾಡಿಬಿಟ್ಟವು. ಮೇಲುನೋಟಕ್ಕೆ ಇದು ‘ಆರ್ಥಿಕ ಅಸಮಾನತೆಯ ವಿರುದ್ಧ ಇರುವ ಸಹಜ ಸಿಟ್ಟು’ ಅನ್ನಿಸಿದರೂ, ಇಂದು ಜಾಗತಿಕವಾಗಿ ನಡೆದಿರುವ ಬೆಳವಣಿಗೆಗಳೂ ಇದೇ ಹಾದಿಯಲ್ಲಿರುವುವುದೇ. ಈ ಬೆಳವಣಿಗೆಯ ಹಿಂದಿರಬಹುದಾದ ರಾಜಕೀಯ, ಸಾಮಾಜಿಕ, ಆರ್ಥಿಕ ಮಗ್ಗುಲುಗಳತ್ತ ನಮ್ಮ ಗಮನ ಸೆಳೆಯುತ್ತವೆ.

ಇಂಗ್ಲಿಷ್ ಮೇಸ್ಟ್ರ ಬಾಯಿ ಬಂದ್!

ಜಾಕ್ ಮಾ ಎಂಬ ಇಂಗ್ಲಿಷ್ ಮೇಸ್ಟ್ರು, ಉದಾರೀಕರಣಗೊಂಡ ಚೀನಾದ ಐಕಾನ್ ಆದದ್ದೇ ಒಂದು ಸಾಹಸಗಾಥೆ. ಇಂದು ಆನ್‌ಲೈನ್ ಮಾರಾಟ ಸಂಸ್ಥೆಯ ಅಮೆಜಾನ್‌ಗೆ ಸರಿಮಿಗಿಲೆನ್ನುವಂತೆ ಬೆಳೆದು ನಿಂತಿರುವ ’ಆಲಿಬಾಬಾ’ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜಿನಲ್ಲಿ ನೋಂದಣಿಗೊಂಡಾಗ (2014) ಚೀನಾ ಸಂಭ್ರಮಿಸಿತ್ತು. ಚೀನಾ ಸರ್ಕಾರ ಆಗ ಒಂದು ಹಂತದಲ್ಲಿ ಆಲಿಬಾಬ ಇಂಟರ್ನೆಟ್‌ನಲ್ಲಿ ನಕಲಿ ಮಾಲುಗಳನ್ನು ಮಾರುತ್ತದೆ ಎಂದು ಆಪಾದಿಸಿತ್ತು. ಅದನ್ನು ಬಹಿರಂಗವಾಗಿಯೇ ವಿರೋಧಿಸಿದ ಜಾಕ್ ಮಾ, ಆ ಆಪಾದನೆ ಮಾಡಿದ ಚೀನಾದ ಇಲಾಖೆಯನ್ನು ಕಟುವಾಗಿ ಟೀಕಿಸಿದ್ದರು. ಜನ ಜಾಕ್ ಮಾ ಬೆಂಬಲಕ್ಕೆ ನಿಂತದ್ದರಿಂದ, ಚೀನಾ ಸರ್ಕಾರ ತನ್ನ ದೂರಿನಿಂದ ಹಿಂದೆ ಸರಿಯಬೇಕಾಯಿತು. ಅದು ಚೀನಾದಲ್ಲಿ ಬಿಗ್ ಟೆಕ್ ಕಂಪನಿಗಳ ಆರಂಭ. ಅಲ್ಲಿಂದೀಚೆಗೆ ಜಾಕ್ ಮಾ ಚೀನಾದಲ್ಲಿ ಸೆಲೆಬ್ರಿಟಿ ಮತ್ತು ಜಾಗತಿಕ ಮುಖವಾಗಿ ಬದಲಾಗಿಬಿಟ್ಟರು.

ಅದಾಗಿ ಇಂದು ಐದು ವರ್ಷದ ಬಳಿಕ, ಸರ್ಕಾರದ ವಿರುದ್ಧ ಜಾಕ್ ಮಾ ಮಾಡಿದ ಅಂತಹದೇ ಒಂದು ಬಹಿರಂಗ ಟೀಕೆ ಎಷ್ಟು ಗಂಭೀರ ಸ್ವರೂಪ ತಳೆದಿದೆ ಎಂದರೆ, ಕಳೆದ ಮೂರು ತಿಂಗಳುಗಳಿಂದ, ಜಾಕ್ ಮಾ ಎಲ್ಲಿದ್ದಾರೆ ಎಂಬುದು ಸಾರ್ವಜನಿಕವಾಗಿ ಗೊತ್ತಿಲ್ಲ!

ಆದದ್ದು ಇಷ್ಟು. ಇದೇ ಅಕ್ಟೋಬರ್ 24ರಂದು ಚೀನಾದ ಶಾಂಘೈನಲ್ಲಿ ನಡೆದ ಬಂಡ್ ಸಮ್ಮಿಟ್ ಆರ್ಥಿಕ ಸಮಾವೇಶದಲ್ಲಿ ನೆರೆದಿದ್ದ ಚೀನಾದ ಪ್ರಮುಖ ನಾಯಕರು, ಆರ್ಥಿಕ ಚಿಂತಕರನ್ನು ಉದ್ದೇಶಿಸಿ ಮಾತನಾಡಿದ ಜಾಕ್ ಮಾ, ಚೀನಾದ ಬ್ಯಾಂಕುಗಳು ಖಾಸಗಿ ಲೇವಾದೇವಿಯವರಂತೆ ವರ್ತಿಸುತ್ತಿವೆ ಮತ್ತು ದೇಶದ ಆರ್ಥಿಕ ನಿಯಂತ್ರಣಕ್ಕೆ ಕುಳಿತವರು ‘ಮುದುಕಪ್ಪಗಳು’, ಅವರಿಗೆ ಆಧುನಿಕ ವ್ಯವಹಾರ ಗೊತ್ತಿಲ್ಲ ಎಂದು ಬಹಿರಂಗವಾಗಿ ಟೀಕಿಸಿದ್ದರು. “There’s no systemic financial risks in China because there’s no system in China,’” ಎಂದಿದ್ದರು.

ಇದು ಎಷ್ಟು ದುಬಾರಿ ಭಾಷಣ ಆಯಿತೆಂದರೆ, ಅದಾಗಿ ಒಂದೇ ವಾರದಲ್ಲಿ ಜಾಕ್ ಮಾ ಅವರಿಗೆ ಸೇರಿದ Ant Group Co.ನ ಹೊಸ ಶೇರುಗಳು ಮಾರುಕಟ್ಟೆಗೆ ಬಿಡುಗಡೆಯಾಗಿ 34.5ಬಿಲಿಯ ಡಾಲರ್ ಸಂಗ್ರಹಿಸುವ ಯೋಜನೆಯನ್ನು ಚೀನಾ ಸರ್ಕಾರ ಅಮಾನತಿನಲ್ಲಿರಿಸಿತು. ಆಲಿಬಾಬಾ ಗುಂಪಿನ ವಿರುದ್ಧ ಏಕಸ್ವಾಮ್ಯ-ಸ್ಪರ್ಧಿಗಳ ಹತ್ತಿಕ್ಕುವಿಕೆಯ ದೂರು ಹೊರಿಸಿ, ಆಂಟಿಟ್ರಸ್ಟ್ ತನಿಖೆಗಳನ್ನು ಆರಂಭಿಸಿತು. ಈಗ ಜಾಕ್ ಮಾ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಕೆಲವು ಮಾಧ್ಯಮಗಳು ಅವರು ಸರ್ಕಾರದ ಆದೇಶದ ಮೇರೆಗೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದರೆ, ಇನ್ನು ಕೆಲವರು ಅವರು ಸರಕಾರದ ವಶದಲ್ಲಿರಬಹುದು ಎನ್ನುತ್ತಾರೆ; ಆದರೆ ಯಾವುದೂ ಸ್ಪಷ್ಟವಿಲ್ಲ. ಚೀನಾ ಸರ್ಕಾರವು ಆಲಿಬಾಬಾ ಗುಂಪಿನ ಮೇಲೆ ನಡೆದಿರುವ ತನಿಖೆ ಹಾಗೂ ಜಾಕ್ ಮಾ ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ವರದಿಗಳನ್ನು ಪ್ರಕಟಿಸಬಾರದೆಂದು ವಿಧಿಸಿದೆ. ಸ್ವತಃ ಚೀನಾ ಅಧ್ಯಕ್ಷರು ಈ ತೀರ್ಮಾನದ ಹಿಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿನ ಸರ್ಕಾರಿ ಪತ್ರಿಕೆ ಪೀಪಲ್ಸ್ ಡೈಲಿ, ಈ ರೀತಿಯ ಮಾರುಕಟ್ಟೆ ಸಾಂದ್ರತೆಯ ಬಗ್ಗೆ ಕಣ್ಣಿಡುವುದು ಆರ್ಥಿಕತೆಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿತ್ತು. ಜಾಕ್ ಮಾ ಅವರ ಕಂಪನಿಯಲ್ಲಿ, ಚೀನಾದಲ್ಲಿ ರಾಜಕೀಯವಾಗಿ ಬಲಾಢ್ಯರಾದವರ ಹೂಡಿಕೆಗಳಿದ್ದವು; ಹಾಗಾಗಿ ಇದು ಚೀನಾದ ಆಂತರಿಕ ರಾಜಕೀಯ ಮೇಲಾಟದ ಫಲಿತಾಂಶವೂ ಇರಬಹುದೆಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಇದಾದ ಮೇಲೆ ಆಲಿಬಾಬಾ ಶೇರು ಮೌಲ್ಯ ಮಾರುಕಟ್ಟೆಯಲ್ಲಿ 30% ಕುಸಿದಿದೆ.

PC : MSN.com

ತನಗೆ ಸವಾಲು ಹಾಕಿದವರನ್ನು ಮಟ್ಟಹಾಕುವ ಚೀನಾದ ಈ ಪರಿ ಹೊಸದಲ್ಲ. ಕಲಾವಿದ ಅಯಿ ವೇಯಿ ವೇಯಿಯಿಂದ (2011) ಆರಂಭಿಸಿ, ಇಲ್ಲಿಯ ತನಕ ಹಲವಾರು ಮಂದಿ ಚೀನಾದಲ್ಲಿ ಸರ್ಕಾರವನ್ನು ವಿರೋಧಿಸಿ ಸೆರೆವಾಸ ಅನುಭವಿಸಿದ್ದಿದೆ. 2021 ಮೊದಲ ವಾರದಲ್ಲಿ, ಕೊರೊನಾ ನಿರ್ವಹಣೆಗಾಗಿ ಚೀನಾ ಸರ್ಕಾರವನ್ನು ಟೀಕಿಸಿ, ಅಧ್ಯಕ್ಷರನ್ನು ‘ಜೋಕರ್’ ಎಂದ ರಿಯಲ್ ಎಸ್ಟೇಟ್ ಕುಳ ರೆನ್ ಜಿಖಿಯಾಂಗ್ ಅವರನ್ನು ಬಂಧಿಸಿ, 18ವರ್ಷಗಳ ಸೆರೆವಾಸ ವಿಧಿಸಲಾಗಿದೆ. 2018 ಫೆಬ್ರವರಿಯಲ್ಲಿ, ಉದ್ಯಮಿವು ಸಿಯಾವೊಹುಯ್ ವಂಚನೆ ಮಾಡಿದ್ದಾರೆ ಎಂದು ಬಂಧಿಸಿ, 18 ವರ್ಷಗಳ ಅವಧಿಗೆ ಸೆರೆಗೆ ಹಾಕಲಾಗಿದೆ. 2017ರಿಂದ ಟುಮಾರೊ ಗ್ರೂಪ್‌ನ ಸಿಯಾವೊ ಜಿಯಾನುವಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. 2015ರಲ್ಲಿ ಶಾಂಘೈನ ಫೋಸುನ್ ಇಂಟರ್ನ್ಯಾಷನಲ್ ಸಂಸ್ಥೆಯ ಗುವೊ ಗುವಾನ್ಚಾಂಗ್ ಹಲವಾರು ದಿನಗಳ ಕಾಲ ಕಾಣೆ ಆಗಿದ್ದರು. ಹಿಂದಿರುಗಿದ ಬಳಿಕ, ತಾನು ತೆರಿಗೆ ಅಧಿಕಾರಿಗಳಿಗೆ ಸಹಕರಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ದೇಶೀಯರನ್ನು ಮಾತ್ರವಲ್ಲದೇ ಹಾಂಕಾಂಗ್ ವಿವಾದದ ಸಂಬಂಧ, ಗುಪ್ತಚರ್ಯೆಯ ಆರೋಪದಲ್ಲಿ ಸ್ವೀಡನ್, ಕೆನಡಾದ ನಾಗರಿಕರನ್ನೂ ಚೀನಾ ಬಂಧಿಸಿದ ಸುದ್ದಿಗಳಿವೆ. ಜೊತೆಗೆ, ಅಧ್ಯಕ್ಷ ಕ್ಸಿ, ಚೀನಾದ ಖಾಸಗಿ ಕಂಪನಿಗಳಲ್ಲಿ ಅವರ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣ ಹೆಚ್ಚಿಸಲು, ಖಾಸಗಿ ಸಂಸ್ಥೆಗಳು ಸರ್ಕಾರದ ಸೇವೆಯಲ್ಲಿ ತೊಡಗಲು ಮತ್ತು ಹೊಸ ವಿಧದ ಖಾಸಗಿ ವ್ಯವಹಾರಗಳಿಗೆ ಸರ್ಕಾರಿ ಬ್ಯಾಂಕುಗಳಿಂದ ಸಾಲ ನಿರಾಕರಿಸಲು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷದ ಆರಂಭದಲ್ಲಿ ಕೊರೊನಾ ಕಾರಣಕ್ಕೆ ಜಾಗತಿಕವಾಗಿ ಸುದ್ದಿಯಲ್ಲಿದ್ದ ಚೀನಾ ಈ ಬಾರಿ ಸಾಮಾಜಿಕ- ಆರ್ಥಿಕ ಚೇತರಿಕೆಯ ಹಾದಿಯಲ್ಲಿದೆ ಎನ್ನಲಾಗುತ್ತಿದ್ದರೂ, ಅದರ ಜಾಗತಿಕ ಸಂಬಂಧಗಳು ಸೀದುಹೋಗಿವೆ. ಈ ಹಂತದಲ್ಲಿ, ಆರ್ಥಿಕ ಅಸಮಾನತೆಯ ಕುರಿತು ಏಳುತ್ತಿರುವ ಜಾಗತಿಕ ಕಳವಳಗಳಿಗೆ ಮತ್ತು ಸರ್ಕಾರಗಳು-ಖಾಸಗಿ ಕಾರ್ಪೊರೇಶನ್‌ಗಳ ನಡುವಿನ ಪಾರಮ್ಯದ ಹಗ್ಗಜಗ್ಗಾಟಕ್ಕೆ ಚೀನಾ ಕಂಡುಕೊಂಡಿರುವ ಈ ಕಟುವಾದ, ಅಪಾರದರ್ಶಕ ಮಾರ್ಗವು ಉಳಿದ ದೇಶಗಳಿಗೆ ಮಾರ್ಗದರ್ಶಿಯಾಗದಿದ್ದರೆ ಸಾಕು. ಏಕೆಂದರೆ, ಜಗತ್ತಿನ ಯಾವುದೇ ದೇಶದ ಸರ್ಕಾರ, ಇವತ್ತಿಗೂ ಟೆಕ್ ಕಂಪನಿಗಳ ಬೆಳವಣಿಗೆಯ ಈ ವೇಗಕ್ಕೆ ಹೊಂದಿಕೊಂಡಿಲ್ಲ.

ಆತ್ಮನಿರ್ಭರ ಚೀನಾ

ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶಗಳಾದ ಚೀನಾ ಮತ್ತು ಭಾರತಗಳ ನಡುವೆ ದೊಡ್ಡ ವ್ಯತ್ಯಾಸ ಎಂದರೆ ಚೀನಾದ ಮಾತು ಕಡಿಮೆ-ಹೆಚ್ಚು ದುಡಿಮೆ. ಹಾಗಾಗಿ ಭಾರತದ ಆತ್ಮನಿರ್ಭರತೆ ಬಡಾಯಿಯಾಗಿಯೇ ಕೇಳಿಸುತ್ತದೆ. ಜಗತ್ತಿನ ಎಲ್ಲ ದೇಶಗಳಿಗೆ ಬಹುತೇಕ ಎಲ್ಲವನ್ನೂ ರಫ್ತು ಮಾಡುವ ಚೀನಾ, ಬೇರೆ ದೇಶಗಳ ಜೊತೆ ವಾಣಿಜ್ಯ ಅಸಮತೋಲನ ಹೊಂದಿರುವುದು ತೀರಾಕಡಿಮೆ; ಅದೂ ಕೂಡ ಜಪಾನ್, ಕೊರಿಯಾ, ಥೈಪೆಗಳಿಂದಲೇ ಅದರ ಆಮದಿನ ಬಹುಪಾಲು ಸರಿದೂಗುತ್ತದೆ.

ಅಮೆರಿಕ, ಯುರೋಪಿನ ಜರ್ಮನಿ ಹೀಗೆ ಕಚ್ಛಾ ಪೆಟ್ರೋಲಿಯಂ, ಇಂಟೆಗ್ರೇಟೆಡ್ ಸರ್ಕ್ಯೂಟು, ಕಾರುಗಳನ್ನು ತರಿಸಿಕೊಳ್ಳುವ ಚೀನಾ ಉಳಿದಂತೆ ತನ್ನನ್ನು ಬಹುತೇಕ ಆತ್ಮನಿರ್ಭರಗೊಳಿಸಿಕೊಂಡಿರುವುದರಿಂದ, ಅಂದರೆ ಬಹುತೇಕ ದೇಶಗಳಲ್ಲಿ ಟ್ರೇಡ್ ಸರ್‌ಪ್ಲಸ್ ಹೊಂದಿರುವುದರಿಂದ ಆಗಿರುವ ಲಾಭ ಎಂದರೆ, ಜಗತ್ತು ವುಹಾನ್ ವೈರಸ್ ಎಂದಾಗಲಾಗಲೀ, ಆ ಬಳಿಕ ಈಗ ಜಾಕ್ ಮಾ “ಕಾಣೆ” ಎಂದು ಜಗತ್ತು ಸುದ್ಧಿಸಂಭ್ರಮ ತೋರಿದಾಗಲಾಗಲೀ ಅದಕ್ಕೆ ಸೊಪ್ಪೇ ಹಾಕುತ್ತಿಲ್ಲ.

ಆರ್ಥಿಕವಾಗಿ ಉದಾರೀಕರಣದ ಜೊತೆಜೊತೆಗೇ ಇಂತಹದೊಂದು ಆತ್ಮನಿರ್ಭರತೆಯನ್ನೂ ಸುಯೋಜಿಸ್ಥಿಕಟ್ಟಿಕೊಂಡು ಬಂದ ಕಾರಣದಿಂದಾಗಿ ಯಾವುದೇ ಅಂತಾರಾಷ್ಟ್ರೀಯ ಸಂಬಂಧದ ಏರಿಳಿತಗಳು ತನ್ನ ಆಂತರಿಕ ಸ್ಥಿತಿಯ ಮೇಲೆ ಪ್ರಭಾವ ಬೀರದಂತೆ ಖಚಿತಪಡಿಸಿಕೊಂಡಿರುವುದು ಗಮನಾರ್ಹ. ಕೇವಲ ಜಾಕ್ ಮಾ ಅವರ ಆಲಿಬಾಬಾವನ್ನೇ ತೆಗೆದುಕೊಂಡರೂ, ಅಮೆರಿಕದಲ್ಲಿ ಅಮೆಜಾನ್ ಮಾರುಕಟ್ಟೆ ಪಾಲು 39%ಇದ್ದರೆ ಚೀನಾದಲ್ಲಿ ಆಲಿಬಾಬಾ ಪಾಲು 58.2%. ಅಮೆಜಾನ್ ಜಗತ್ತಿನಾದ್ಯಂತ ಮಾರಾಟ ಜಾಲ ಹೊಂದಿದ್ದು, ಗಾತ್ರದಲ್ಲಿ ಆಲಿಬಾಬಾಕ್ಕಿಂತ 15 ಪಾಲು ದೊಡ್ಡದಾದರೂ, ಆಲಿಬಾಬಾದ ವ್ಯವಹಾರದ ತಾಕತ್ತು ಅವರಿಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗುವಷ್ಟು ಪ್ರಭಾವೀ ಆಗಿದೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ಮಧ್ಯಪ್ರದೇಶ: ಮಹಿಳಾ ವಿರೋಧಿ ಹೇಳಿಕೆ ನೀಡಲು ಬಿಜೆಪಿ -ಕಾಂಗ್ರೆಸ್ ನಡುವೆ ಪೈಪೋಟಿ – ಈ ಸಮಾಜ ಬದಲಾಗುವುದೆಂದು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...