ಐತಿಹಾಸಿಕ ರೈತ ಹೋರಾಟದಲ್ಲಿ ಸಾವಿರಾರು ಸಂಘ ಸಂಸ್ಥೆಗಳು ಅನ್ನದಾತರ ನೆರವಿಗೆ ನಿಂತಿವೆ. ಅವರಿಗೆ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಕಂಕಣ ತೊಟ್ಟು ಈ ಸಂಸ್ಥೆಗಳು ಕಳೆದ 50 ದಿನಗಳಿಂದಲೂ ಇಲ್ಲೇ ಠಿಕಾಣಿ ಹೂಡಿವೆ. ಇವುಗಳ ಮಧ್ಯೆ ಸಣ್ಣ-ಸಣ್ಣ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸಾಮಾನ್ಯ ಜನ ಕೂಡ ರೈತರ ಸೇವೆಗೆ ಆಗಮಿಸಿದ್ದಾರೆ. ಅವರಲ್ಲಿ ಪಂಜಾಬ್‌ನ ದಲವೀರ್ ಸಿಂಗ್ ಕೂಡ ಒಬ್ಬರು.
ಪಂಜಾಬ್‌ನ ಬರ್ನಾಲ್ ಎಂಬಲ್ಲಿ ಬಟ್ಟೆ ಹೊಲಿಗೆ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದ ದಲವೀರ್ ಸಿಂಗ್, ದುಬೈನಲ್ಲಿ ಕೆಲಸ ಮಾಡಲು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬಿನಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಇವರಿಗೆ ವೀಸಾ ದೊರೆತಿತ್ತು. ವೀಸಾ ಪಡೆದು ಇನ್ನೇನು ದುಬೈಗೆ ಹಾರಲು ಹೊರಟಿದ್ದ ಇವರಿಗೆ, ರೈತರು ದೆಹಲಿ ಚಲೋಗೆ ಕರೆ ಕೊಟ್ಟಿದ್ದು, ದೆಹಲಿಗೆ ಬಂದು ಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದ್ದು ತಿಳಿಯಿತು. ನಂತರ ಸಿಂಘು ಗಡಿಯಲ್ಲಿ ರೈತರ ಹೋರಾಟದಲ್ಲಿ ಭಾಗಿಯಾಗಿದ್ದ ಇವರು, ಮತ್ತೆ ತಮ್ಮ ಹಳೆ ಕೆಲಸವನ್ನು ಸೇವೆ ರೀತಿಯಲ್ಲಿ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಈ ಗ್ರಾಮಕ್ಕೆ ರೈತ ಹೋರಾಟ ಬೆಂಬಲಿಸದ ರಾಜಕಾರಣಿಗಳಿಗೆ ಪ್ರವೇಶವಿಲ್ಲ!
“ವೀಸಾ ದೊರೆತಿದೆ. ಯುಎಇಗೆ ಹೊರಡಬೇಕು. ಅಲ್ಲಿ ಒಳ್ಳೆಯ ಕೆಲಸ ಸಿಕ್ಕಿದೆ. ಆದರೆ ನಮ್ಮ ದೇಶ ರೈತರು ಸಂಕಷ್ಟದಲ್ಲಿ ಇರುವಾಗ ನಾನು ವಿದೇಶಕ್ಕೆ ಹೋಗುವುದು ಸರಿ ಕಾಣಲಿಲ್ಲ. ಮೊದಲು ನಮ್ಮವರ ಸಂಕಷ್ಟಕ್ಕೆ ನಾವಾಗಬೇಕು. ಅದಕ್ಕೆ ನಾನು ಇಲ್ಲಿ ಬಂದು ನನ್ನ ಹಳೆ ಕೆಲಸವನ್ನು ಸೇವೆ ರೀತಿಯಾಗಿ ಮಾಡುತ್ತಿದೇನೆ” ಎಂದಿದ್ದಾರೆ.
“ಜನವರಿ 26 ರಂದು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದ್ದೇವೆ. ಅಂದು ರೈತರ ಪರವಾಗಿ ನಿರ್ಣಯ ಆಗಲಿದೆ. ನಾವು ಅಂದು ಈ ಹೋರಾಟದಲ್ಲಿ ವಿಜಯ ಸಾಧಿಸಿ ಪಂಜಾಬ್‌ಗೆ ವಾಪಸ್ ತೆರಳುತ್ತೇವೆ. ಅಲ್ಲಿಂದ ನಾನು ದುಬೈಗೆ ಹೋಗಿ ಹೊಸ ಕೆಲಸಕ್ಕೆ ಸೇರುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇವರಂತೆಯೇ ಮತ್ತೊಂದು ದಂಪತಿ ಕೂಡ ಸಿಂಘು ಗಡಿಯಲ್ಲಿ ಉಚಿತ ಹೊಲಿಗೆ ಸೇವೆ ನೀಡುತ್ತಿದ್ದಾರೆ. ಪ್ರತಿಭಟನೆಯಲ್ಲಿ ರೈತರು ಹರಿದ ಬಟ್ಟೆಗಳು ಹಾಕಿಕೊಂಡು ಓಡಾಡುವುದನ್ನು ನೋಡಲು ನಮಗೆ ಸಾಧ್ಯವಾಗಲಿಲ್ಲ. ನಮ್ಮ ಕೆಲಸ ಸಣ್ಣದಿರಬಹುದು ಆದರೆ ಅದು ನಮ್ಮಿಂದ ಆಗುವ ಸೇವೆ ಹಾಗಾಗಿ ನಾವು ಇಲ್ಲಿ ಇದ್ದೇವೆ ಎಂದು ಈ ದಂಪತಿ ತಿಳಿಸುತ್ತಾರೆ.
ಇದನ್ನೂ ಓದಿ: ರೈತರ ಪ್ರತಿರೋಧದ ಹಿನ್ನೆಲೆ: ಸುಪ್ರೀಂ ಸಮಿತಿಯಿಂದ ಸ್ವಯಂ ಹೊರನಡೆದ ಭೂಪಿಂದರ್ ಮನ್


