ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟಕ್ಕೆ 89 ದಿನಗಳು ತುಂಬಿವೆ. ರೈತರ ಕಿಸಾನ್ ಮಹಾಪಂಚಾಯತ್‌ಗಳು ಕೇಂದ್ರ ಸರ್ಕಾರದ ನಿದ್ದೆಕೆಡಿಸಿವೆ. ಇವುಗಳ ಜೊತೆಗೆ ಕಿಸಾನ್ ರ್‍ಯಾಲಿಗಳು ಆರಂಭವಾಗಿದ್ದು, ಬರ್ನಾಲಾ ಜಿಲ್ಲೆಯಲ್ಲಿ ನಡೆದ ಮಹಾರ್‍ಯಾಲಿಯಲ್ಲಿ ಸುಮಾರು ಎರಡೂವರೆ ಲಕ್ಷ ರೈತರು ಭಾಗಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (ಉಗ್ರಾಹಾನ್) ಮತ್ತು ಪಂಜಾಬ್ ಖೇತ್ ಮಜ್ದೂರ್ ಒಕ್ಕೂಟವು ಬರ್ನಾಲಾ ಜಿಲ್ಲೆಯ ಧಾನ್ಯ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಕಿಸಾನ್ ಮಜ್ದೂರ್ ಮಹಾರ್‍ಯಾಲಿ ದೆಹಲಿಯ ಗಡಿಗಳನ್ನು ಹೊರತುಪಡಿಸಿ ಪಂಜಾಬಿನಲ್ಲಿ ನಡೆದ ಅತಿ ದೊಡ್ಡ ರ್‍ಯಾಲಿಯಾಗಿದೆ.
ಮಹಾರ್‍ಯಾಲಿ ಉದ್ದೇಶಿಸಿ ಮಾತನಾಡಿದ ಬಿಕೆಯು (ಉಗ್ರಾಹಾನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಾಹನ್, “ಫ್ಯಾಸಿಸ್ಟ್ ಮತ್ತು ಕೋಮುವಾದಿ ಸರ್ಕಾರ”ಕ್ಕೆ ಭಾರತದ ಜನರು ಸವಾಲು ಹಾಕಿದ ಮೊದಲ ಪ್ರತಿಭಟನೆ ಈ ರೈತ ಹೋರಾಟ’ ಎಂದಿದ್ದಾರೆ.
ಇದನ್ನೂ ಓದಿ: ಬೆಲೆ ಏರಿಕೆ: ಮದುಮಕ್ಕಳಿಗೆ ಪೆಟ್ರೋಲ್, ಗ್ಯಾಸ್ ಸಿಲಿಂಡರ್, ಈರುಳ್ಳಿ ಉಡುಗೊರೆ!
ಈ ಮಹಾರ್‍ಯಾಲಿಗಾಗಿ ಬರ್ನಾಲಾ ಜಿಲ್ಲೆಯಲ್ಲಿ ಶನಿವಾರ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. “ಒಬ್ಬ ವ್ಯಕ್ತಿಗೆ ಕನಿಷ್ಠ ನಾಲ್ಕು ಚದರ ಅಡಿ ಬೇಕು, ಆದ್ದರಿಂದ ನಾವು ಒಂಬತ್ತು ಲಕ್ಷ ಚದರ ಅಡಿಗಳಲ್ಲಿ ಚಾಪೆಗಳನ್ನು ಹಾಕಿದ್ದೇವೆ” ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿ ಮಾಹಿತಿ ನೀಡಿದ್ದರು.
ವಾಹನಗಳು ಮತ್ತು ಪಾರ್ಕಿಂಗ್‌ನ ಸುಗಮ ಸಂಚಾರಕ್ಕಾಗಿ ಸುಮಾರು 300 ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು. ವೇದಿಕೆಯನ್ನು ಭದ್ರಪಡಿಸಿಕೊಳ್ಳಲು ಮತ್ತು ರ್‍ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ನೀರು ಮತ್ತು ಚಹಾವನ್ನು ಪೂರೈಸಲು 400 ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ರೈತ ಹೋರಾಟಗಾರರನ್ನು ಕಿಡಿಗೇಡಿಗಳು ಎಂದು ಕರೆದು ಪ್ರಶ್ನೆ ಕೇಳಿದ ಚೆನ್ನೈನ CBSE ಶಾಲೆ!


