ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ರಾಜ್ಯ ಸರ್ಕಾರದ ಸಮರ್ಥ ಮಧ್ಯ ಪ್ರವೇಶವೂ ಅಗತ್ಯ ಎಂದು ಕೃಷಿ ಬೆಲೆ ನಿಗದಿ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟರು.
’ಬೆಳೆಗೆ ಬೆಂಬಲ ಬೆಲೆಯನ್ನು ಕಾನೂನಿನ ಮೂಲಕ ಖಾತ್ರಿಗೊಳಿಸಬೇಕು. ಅವತ್ತಿನ ಕಾಲಕ್ಕೆ ಬೆಳೆ ಬೆಳೆಯುವುದು ಮಾತ್ರ ರೈತನ ಕೆಲಸವಾಗಿತ್ತು. ಮಾರುಕಟ್ಟೆಯ ಜವಾಬ್ದಾರಿಯನ್ನು ಸರ್ಕಾರ ನೋಡಿಕೊಳ್ಳುತ್ತಿತ್ತು. ಆಗ ಕಾಫಿ ಬೋರ್ಡ್, ಟೀ ಬೋರ್ಡ್ ಗಳು ಸಮೃದ್ಧವಾಗಿ, ಸಮರ್ಥವಾಗಿದ್ದವು. ಆದರೆ ಈಗ ಕೃಷಿಯಲ್ಲಿ ಸರ್ಕಾರದ ಮಧ್ಯ ಪ್ರವೇಶವಿಲ್ಲದೆ ಈ ಎಲ್ಲ ನಿಗಮಗಳು ದುರ್ಬಲವಾಗಿವೆ. ರೈತರ ವಿಚಾರದಲ್ಲಿ ತನ್ನ ಜವಾಬ್ದಾರಿಗಳಿಂದ ಜಾರಿಕೊಳ್ಳುವ ಸಲುವಾಗಿ ಸರ್ಕಾರ ಈ ಕಾಯ್ದೆಗಳನ್ನು ತರಲು ಹೊರಟಿದೆ’ ಎಂದರು.
ಪೃಥ್ವಿ ಪ್ರತಿಷ್ಠಾನ, ಮಳೆ ಆಶ್ರಿತ ಕೃಷಿ ಪುನರುಜ್ಜೀವನ ಜಾಲ ಹಾಗೂ ಪರ್ಯಾಯ ಕಾನೂನು ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಕಾರ್ಯಗಾರದಲ್ಲಿ ಮಾತನಾಡಿದ ಅವರು, “ರೈತರ ಹಿತ ರಕ್ಷಣೆಗೆ ಸರ್ಕಾರದ ಮಧ್ಯ ಪ್ರವೇಶ ಅತ್ಯಗತ್ಯ. ಇದನ್ನು ರಾಜ್ಯದ ವಿವಿಧ ಭಾಗಗಳ ರೈತರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ” ಎಂದರು.

ಇನ್ನು ತೋಟಗಾರಿಕಾ ಬೆಳೆಗಳು ಸೇರಿದಂತೆ ಇತರ ಪ್ರಮುಖ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದ ಅವರು, ಕನಿಷ್ಟ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ನೀಡಿ ಲಾಭದಾಯಕ ಧಾರಣೆ ಖಾತರಿಗೊಳಿಸುವುದು ಕೂಡ ಅಗತ್ಯ ಎಂದು ಅಭಿಪ್ರಾಯಪಟ್ಟರು.
ವಕೀಲರಾದ ವಿನಯ್ ಶ್ರೀನಿವಾಸ್, ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಗ್ರೇಸಿ ಸಿ.ಪಿ ಹಾಗೂ ರೈತ ಮುಖಂಡರಾದ ಕುರಬೂರು ಶಾಂತಕುಮಾರ್ ಮುಂತಾದವರು ಕಳೆದ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಾದ ಏರಿಳಿತಗಳು ಹಾಗೂ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು.
ಇದನ್ನೂ ಓದಿ: ಪ.ಬಂಗಾಳ, ಕೇರಳ, ಅಸ್ಸಾಂ, ತ.ನಾಡು, ಪುದುಚೇರಿ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ
ಬೆಂಬಲ ಬೆಲೆಯನ್ನು ಕಾನೂನಿನ ವ್ಯಾಪ್ತಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆ ಏರ್ಪಡಬೇಕು ಎಂಬ ಬಗ್ಗೆಯೂ ಚರ್ಚಿಸಲಾಯಿತು.
ಇದನ್ನೂ ಓದಿ: ಗುಜರಾತ್‌ನಲ್ಲಿ 25 ವರ್ಷದಿಂದ ಬಿಜೆಪಿಯೊಂದೇ ಏಕೆ ಆಡಳಿತ ನಡೆಸುತ್ತಿದೆ..?- ಕೇಜ್ರಿವಾಲ್


