ಐತಿಹಾಸಿಕ ರೈತ ಹೋರಾಟಕ್ಕೆ 100 ದಿನಗಳು ತುಂಬಲು ಇನ್ನೆರಡು ದಿನ ಬಾಕಿ ಇದೆ. ಇಡೀ ಚಳಿಗಾಲವನ್ನು ಕಳೆದಿರುವ ರೈತರು ಈಗ ಬಿರು ಬೇಸಿಗೆಗೆ ಸಜ್ಜಾಗುತ್ತಿದ್ದಾರೆ. ತೀವ್ರ ಚಳಿ ಅನುಭವಿಸಿದ್ದ ಪ್ರತಿಭಟನಾಕಾರರು ಈಗ ತೀವ್ರ ಬಿಸಿಲಿನ ತಾಪಕ್ಕೆ ಸಿಲುಕುತ್ತಿದ್ದು, ತಮ್ಮ ಸುರಕ್ಷತೆಗಾಗಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಿಡ್ಜ್, ಎಸಿ, ಫ್ಯಾನ್, ಕೂಲರ್‌ಗಳ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ವಿವಾದಿತ ಕೃಷಿ ಕಾನೂನುಗಳನ್ನು ರದ್ದು ಮಾಡುವವರೆಗೂ ದೆಹಲಿಯ ಗಡಿಗಳಿಂದ ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಈಗಾಗಲೇ ಹಲವಾರು ಬಾರಿ ರೈತ ಮುಖಂಡರು, ರೈತರು, ಪ್ರತಿಭಟನಾ ಬೆಂಬಲಿಗರು ಹೇಳಿದ್ದಾರೆ.
ಇದಕ್ಕೆ ಪೂರಕವಾಗಿ ಎಲ್ಲಾ ಗಡಿಗಳಲ್ಲಿ ಬೇಸಿಗೆಯ ಸಿದ್ಧತೆಯೂ ಸಾಗಿದೆ. ಕೂಲರ್‌ಗಳು, ಟ್ಯ್ರಾಲಿಯಲ್ಲಿ ಅಳವಡಿಸಲಾಗುವ ಫ್ಯಾನ್‌ಗಳು, ಟೇಬಲ್ ಫ್ಯಾನ್‌ಗಳು, ಎಸಿಗಳನ್ನು ಹಾಕಿಕೊಳ್ಳಲಾಗಿದೆ. ಕುಡಿಯುವ ನೀರು, ದಿನನಿತ್ಯದ ಬಳಕೆಯ ನೀರಿನ ಬವಣೆ ತಪ್ಪಿಸಲು ಪ್ರತಿಭಟನಾ ಸ್ಥಳದಲ್ಲಿ ಬೋರ್‌ವೇಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ರೈತರು ದೇಶದ್ರೋಹಿಗಳಲ್ಲ, ಕೆಂಪು ಕೋಟೆ ಘರ್ಷಣೆಗೆ ಕೇಂದ್ರದ ಪಿತೂರಿಯೇ ಕಾರಣ: ಕೇಜ್ರಿವಾಲ್
“ನಾವು ಎರಡು ಎಸಿಗಳನ್ನು ಈಗಾಗಲೇ ಅಳವಡಿಸಿದ್ದೇವೆ. ನಾವು ದೀರ್ಘಕಾಲದ ಪ್ರತಿಭಟನೆಗೆ ಸಿದ್ಧರಿದ್ದೇವೆ. ಮೊದಲು ನಮ್ಮ ದೇಹದ ಮೂಳೆಗಳು ತಣ್ಣಗಾಗುವ ಚಳಿಯನ್ನು ಧೈರ್ಯದಿಂದ ಗೆದ್ದಿದ್ದೇವೆ. ಈಗಲು ಅದೇ ಉತ್ಸಾಹದಿಂದ ತೀವ್ರ ಬಿಸಿಲನ್ನು ಎದುರಿಸಲು ಸಿದ್ಧರಿದ್ದೇವೆ” ಎಂದು ಪಂಜಾಬಿನ ಮೊಗಾ ಜಿಲ್ಲೆಯ ರೈತ ಕೆವಾಲ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಬಿಸಿಲಿಗೂ ಬಗ್ಗುವುದಿಲ್ಲ: ಹೋರಾಟನಿರತ ರೈತರ ಟ್ಯ್ರಾಲಿ, ಟೆಂಟ್‌ಗಳಿಗೆ ಬಂದ ಎಸಿ, ಕೂಲರ್‌ಗಳು!
ಇತ್ತ ಸಿಂಘು ಗಡಿ ಭಾಗದಲ್ಲೂ ರೈತರು ಬೇಸಿಗೆಯಲ್ಲಿ ಕುಳಿತುಕೊಳ್ಳಲು, ಮಲಗಲು ತಾತ್ಕಾಲಿಕ ವಸತಿಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ. ಟೆಂಟ್‌ಗಳು ಮತ್ತು ಶೆಡ್‌ಗಳಲ್ಲಿ 5 ನಿಮಿಷವೂ ಕೂರಲು ಸಾಧ್ಯವಿಲ್ಲದಂತಹ ಬಿಸಿಲು ಪ್ರತಿಭಟನಾಕಾರರನ್ನು ಕಾಡುತ್ತಿದ್ದು, ತಾತ್ಕಾಲಿಕ ವ್ಯವಸ್ಥೆಗೆ ಮೊರೆಹೋಗುತ್ತಿದ್ದಾರೆ.
ರೈತರು ತಂಗಿರುವ ಟ್ಯ್ರಾಲಿಗಳಿಗೆ ಹೋಲಿಸಿದರೇ, ಈ ಚಪ್ಪರದ ವ್ಯವಸ್ಥೆ ಹೆಚ್ಚು ತಂಪಾಗಿರುತ್ತವೆ. ಅಲ್ಲದೆ, ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಗೋಧಿ ಕೊಯ್ಲು ಆರಂಭವಾಗಲಿದ್ದು, ರೈತರು ಟ್ರಾಲಿಗಳನ್ನು ತಮ್ಮ ಊರುಗಳಿಗೆ ವಾಪಸ್ ಕಳುಹಿಸಬೇಕಾಗಬಹುದು ಎನ್ನಲಾಗಿದೆ.
ಇದರ ಜೊತೆಗೆ ಪ್ರತಿಭಟನಾ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಸಂಘ ಸಂಸ್ಥೆಗಳು ಕೂಡ ಪ್ರತಿಭಟನಾ ನಿರತ ರೈತರಿಗೆ ಬೇಸಿಗೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವತ್ತ ಗಮನ ಹರಿಸಿವೆ. ಹಳ್ಳಿಗಳಲ್ಲಿ ತಮ್ಮ ಊರಿನ ಪ್ರತಿಭಟನಾ ನಿರತರಿಗೆ ಬೇಕಾಗುವ ವ್ಯವಸ್ಥೆ ಮಾಡಿಕೊಡಲು ಹಣವನ್ನು ಸಂಗ್ರಹಿಸಿ ನೀಡಲಾಗುತ್ತಿದೆ. ದೆಹಲಿಯಲ್ಲಿರುವ ರೈತರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಮಹಾಪಂಚಾಯತ್‌ಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಉದ್ಯೋಗ ಕೊಡದಿದ್ದರೆ ಮೋದಿಜಿಯನ್ನು ಮನೆಗೆ ಕಳಿಸುತ್ತೇವೆ: ನೋ ಜಾಬ್, ನೋ ವೋಟ್ ಟ್ವಿಟರ್ ಟ್ರೆಂಡಿಂಗ್


