ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರ ಈ ಬಾರಿ ಎಲ್ಲರ ಕೇಂದ್ರಬಿಂದುವಾಗಿದೆ. ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿಯ ಪ್ರಾಬಲ್ಯದ ಕ್ಷೇತ್ರ ಅದು. ಹಾಗಾಗಿ ಸ್ವಕ್ಷೇತ್ರ ಭವಾನಿಪೋರ್ ಬಿಟ್ಟು ಸಿಎಂ ಮಮತಾ ಬ್ಯಾನರ್ಜಿಗೆ ನಂದಿಗ್ರಾಮದಿಂದಲೇ ಸ್ಪರ್ಧಿಸುತ್ತಿದ್ದಾರೆ. ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ (ಮಾರ್ಚ್ 12) ಸುವೇಂದು ಅಧಿಕಾರಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎದುರಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕಾರಣಕ್ಕಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿಈ ಕ್ಷೇತ್ರ ಎಲ್ಲರ ಚಿತ್ತವನ್ನು ತನ್ನೆಡೆಗೆ ಸೆಳೆದುಕೊಂಡಿದೆ.
ಕಳೆದ ಶನಿವಾರ ಬಿಜೆಪಿ ಪಶ್ಚಿಮ ಬಂಗಾಳ ಚುನಾವಣೆಗೆ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮದಿಂದ ಸುವೇಂದು ಅವರನ್ನು ಕಣಕ್ಕಿಳಿಸಿದೆ. ಸಿಪಿಐ(ಎಂ) ಪಕ್ಷದಿಂದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ)ದ ರಾಜ್ಯ ಅಧ್ಯಕ್ಷೆ ಮಿನಾಕ್ಷಿ ಮುಖರ್ಜಿ ನಂದಿಗ್ರಾಮದಲ್ಲಿ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: ಭ್ರಷ್ಟ ನಾಯಕರನ್ನು ಖರೀದಿಸಬಹುದು; ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನಲ್ಲ – ಮಮತ ಬ್ಯಾನರ್ಜಿ
ಎರಡು ದಿನಗಳ ಹಿಂದಷ್ಟೇ ನಂದಿಗ್ರಾಮದಲ್ಲಿ ಪಾದಯಾತ್ರೆ, ರ್‍ಯಾಲಿ ಮಾಡಿ ನಾಮಪತ್ರ ಸಲ್ಲಿಕೆ ಮಾಡಿ ವಾಪಾಸ್ ಆಗುತ್ತಿದ್ದ ಮಮತಾ ಬ್ಯಾನರ್ಜಿಯವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿ ಇದನ್ನು ರಾಜಕೀಯಕ್ಕಾಗಿ ನಡೆಸುತ್ತಿರುವ ನಾಟಕ ಎಂದಿದೆ. ಆದರೆ ದೇಶಾದ್ಯಂತ ಪಕ್ಷಾತೀತವಾಗಿ ಹಲವು ಮುಖಂಡರು ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆಯನ್ನು ಖಂಡಿಸಿ, ಬೇಗ ಗುಣಮುಖರಾಗಲಿ ಎಂದು ಹರಸಿದ್ದಾರೆ.
ಶುಕ್ರವಾರ ಬೆಳಗ್ಗೆಯಿಂದಲೇ ಬಿಜೆಪಿ ಅಭ್ಯರ್ಥಿಯಾಗಿರುವ ಸುವೇಂದು ಅಧಿಕಾರಿ, ನಂದಿಗ್ರಾಮದಲ್ಲಿ ಹಲವು ದೇವಾಲಯಗಳಲ್ಲಿ ಪೂಜೆ, ಹವನ ಮಾಡಿಸುತ್ತಿದ್ದಾರೆ. ದೊಡ್ಡ ರ್‍ಯಾಲಿಯನ್ನು ನಡೆಸಲಾಗುತ್ತಿದೆ. ನಂತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗುತ್ತದೆ ಎನ್ನಲಾಗಿದೆ.
’ನಂದಿಗ್ರಾಮದ ಜನರಿಗೂ ನನಗೂ ತುಂಬಾ ಹಳೆಯ ಸಂಬಂಧವಿದೆ. ಮಮತಾ ಬ್ಯಾನರ್ಜಿ 5 ವರ್ಷಕ್ಕೆ ಒಮ್ಮೆ ಚುನಾವಣೆ ಬಂದಾಗ ಅವರನ್ನು ನೆನಪಿಸಿಕೊಳ್ಳುತ್ತಾರೆ. ಈ ಬಾರಿ ಜನ ಅವರನ್ನು ಸೋಲಿಸುತ್ತಾರೆ. ನಾನು ನಂದಿಗ್ರಾಮದ ಮತದಾರ. ಇಂದು ನಾನು ನಾಮಪತ್ರ ಸಲ್ಲಿಸುತ್ತೇನೆ’ ಎಂದು ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬೆಂಬಲಿಗರಿಗೆ ಆಸ್ಪತ್ರೆಯಿಂದಲೇ ವಿಡಿಯೊ ಸಂದೇಶ: ಮಮತಾ ಬ್ಯಾನರ್ಜಿ ಹೇಳಿದ್ದೇನು?


