ಸುಮಾರು 110 ದಿನಗಳಿಂದ, ಐದು ಲಕ್ಷಕ್ಕೂ ಹೆಚ್ಚು ರೈತರು ದೆಹಲಿಯ ಗಡಿಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಕುಳಿತು ಹೋರಾಡುತ್ತಿದ್ದಾರೆ. ಅಲ್ಲೆ ರಸ್ತೆ ಪಕ್ಕ ಶಾಶ್ವತ ಮನೆಗಳನ್ನು ನಿರ್ಮಿಸಿರುವ 5 ಲಕ್ಷಕ್ಕೂ ಹೆಚ್ಚು ಜನರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಬಿಜೆಪಿಗೆ ಚುನಾವಣಾ ಭಾಷೆ ಮಾತ್ರ ಅರ್ಥವಾಗುತ್ತದೆ. ಹಾಗಾಗಿ ಖೇಲಾ ಹೊಬೆ (ಆಟ ಶುರು) ಆರಂಭವಾಗಿದೆ, ಬಂಗಾಳದಲ್ಲಿ ಬಿಜೆಪಿ ತೊಲಗಿಸಿ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.
ಬಂಗಾಳ ಚುನಾವಣೆಯಲ್ಲಿಯೇ ತೀವ್ರ ಪೈಪೋಟಿ ಮತ್ತು ಕುತೂಹಲ ಹುಟ್ಟಿಸಿದರು ನಂದಿಗ್ರಾಮದಲ್ಲಿ ನಡೆದ ರೈತ ಮಹಾ ಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು “ಇನ್ನು ಮುಂದೆ ಆಟ ಶುರುವಾಗಲಿದೆ ಎಂದು ಹೇಳುತ್ತಾ, ಬಂಗಾಳಿ ಭಾಷೆಯಲ್ಲಿ ಖೇಲಾ ಹೋಬ್ (ಗೇಮ್ ಆನ್) ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಮಹಾಪಂಚಾಯತ್‌ನಲ್ಲಿ ನೆರೆದಿದ್ದ ಜನಸಮೂಹ ಖೇಲಾ ಹೋಬ್ ಎಂದು ಘೋಷಣೆಗಳನ್ನು ಕೂಗಿ ಟಿಕಾಯತ್ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ.
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಮನೆ ನಿರ್ಮಾಣ: ರೈತರ ವಿರುದ್ದ ಎರಡು ಪ್ರಕರಣ ದಾಖಲು
ಒಕ್ಕೂಟ ಸರ್ಕಾರದ ವಿರುದ್ಧ ಪ್ರಚಾರ ನಡೆಸಲು ಆರಂಭಿಸಿರುವ ರೈತರು ಇಂದು ಪಶ್ಚಿಮ ಬಂಗಾಳದಲ್ಲಿ ಮಹಾಪಂಚಾಯತ್ ನಡೆಸುತ್ತಿದ್ದಾರೆ. ರೈತ ಮುಖಂಡ ಟಿಕಾಯತ್ ಅವರನ್ನು ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಡೋಲಾ ಸೇನ್ ಅವರು ಸ್ವಾಗತಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ದಾಳಿಯನ್ನು ದುರದೃಷ್ಟಕರ ಎಂದು ಕರೆದಿರುವ ರಾಕೇಶ್ ಟಿಕಾಯತ್, ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಬಂಗಾಳದಾದ್ಯಂತ ಪ್ರಯಾಣಿಸುವುದಾಗಿ ಹೇಳಿದ್ದಾರೆ. ಆದರೆ, ಇಂತಹ ಪಕ್ಷಕ್ಕೆ ಮತ ನೀಡಿ ಎಂದು ಯಾರಿಗೂ ತಿಳಿಸುವುದಿಲ್ಲ ಎಂದು ಈ ಮೊದಲೇ ರೈತ ನಾಯಕರು ತಿಳಿಸಿದ್ದರು.
ಬಿಜೆಪಿ ವಿರುದ್ಧ ಪಂಚರಾಜ್ಯಗಳಲ್ಲೂ ಪ್ರಚಾರ ನಡೆಸುವುದಾಗಿ ಈಗಾಗಲೇ ರೈತರು ಪ್ರಕಟಿಸಿದ್ದಾರೆ. ಆದರೆ ಯಾವುದೇ ಪಕ್ಷದ ಪರವಾಗಿ ಮತ ಯಾಚನೆ ಮಾಡುವುದಿಲ್ಲ, ಪ್ರಚಾರ ನಡೆಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ರೈತ ವಿರೋಧಿ ಸರ್ಕಾರದ ವಿರುದ್ಧ, ಬಿಜೆಪಿಗೆ ಮತ ನೀಡದಂತೆ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರದ ಅವಧಿ ಮುಗಿಯುವವರೆಗೂ ರೈತ ಹೋರಾಟ ಮುಂದುವರಿಯಲಿದೆ: ನರೇಂದ್ರ ಟಿಕಾಯತ್


