ಕಳೆದ ಒಂದೂವರೆ ವರ್ಷದ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಧಾನ ಸಲಹೆಗಾರರಾಗಿ ನೇಮಕಗೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಪಿ.ಕೆ. ಸಿನ್ಹಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಿನ್ಹಾ ಅವರ ಕಚೇರಿ ದೃಢಪಡಿಸಿದೆ.
ರಾಜೀನಾಮೆ ನೀಡಲು ಯಾವುದೇ ಕಾರಣಗಳನ್ನು ಕೆ.ಪಿ.ಸಿನ್ಹಾ ಅವರ ಕಚೇರಿ ತಿಳಿಸಿಲ್ಲ. “ಪಿ.ಕೆ. ಸಿನ್ಹಾ ಅವರು ಮಾರ್ಚ್ 15 ರಂದು ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ” ಎಂದು ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನೊಬ್ಬ ಅಧಿಕಾರಿ ಸಿನ್ಹಾ ರಾಜೀನಾಮೆ ನೀಡಲು ಅವರ ಆರೋಗ್ಯ ಸ್ಥಿತಿಯೇ ಕಾರಣ ಎಂದಿದ್ದಾರೆ. “ಅವರು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ಇರುವಂತಹ ಹೆಚ್ಚಿನ ಒತ್ತಡದ ಕೆಲಸದಿಂದ ದೂರವಿರುವುದು ಉತ್ತಮ ಎಂದು ಪರಿಗಣಿಸಿ ರಾಜೀನಾಮೆ ನೀಡಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: ಪಕ್ಷಾಂತರಿಗಳಿಗೆ ಟಿಕೆಟ್: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ; ರಾಜ್ಯದಾದ್ಯಂತ ಭಾರಿ ಪ್ರತಿಭಟನೆ
ದೆಹಲಿಯ ಅಥವಾ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ನಂತಹ ಸಾಂವಿಧಾನಿಕ ಹುದ್ದೆಗೆ ಸಿನ್ಹಾ ಅವರನ್ನು ನರೇಂದ್ರ ಮೋದಿ ಸರ್ಕಾರವು ಪರಿಗಣಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
1977 ರ ಬ್ಯಾಚ್‌ನ ಉತ್ತರ ಪ್ರದೇಶದ ಕೇಡರ್ ಅಧಿಕಾರಿಯಾಗಿದ್ದ ಸಿನ್ಹಾ, ಐಎಎಸ್ ಇತಿಹಾಸದಲ್ಲಿ ಮೂರು ಬಾರಿ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಏಕೈಕ ವ್ಯಕ್ತಿಯಾಗಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ ಅವರು ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅವರು ವಿದ್ಯುತ್ ಮತ್ತು ಸರಬರಾಜು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. 2019 ರಲ್ಲಿ ಸಿನ್ಹಾ ನಿವೃತ್ತರಾದಾಗ, ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಅವರಿಗೆ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ವಿಶೇಷ ಹುದ್ದೆಯನ್ನು ರಚಿಸಲಾಗಿತ್ತು.
ಸೆಪ್ಟೆಂಬರ್ 2019 ರ ಆದೇಶದ ಪ್ರಕಾರ, ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಏಜೆನ್ಸಿಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ನೀತಿ ವಿಚಾರಗಳು ಮತ್ತು ವಿಷಯಗಳನ್ನು ಸಿನ್ಹಾ ನೋಡಿಕೊಂಡಿದ್ದರು. ಸಿನ್ಹಾ ಅವರಿಗೆ ಕ್ಯಾಬಿನೆಟ್ ಸ್ಥಾನ ನೀಡಿಲ್ಲ. ಸಿನ್ಹಾ ಅವರು ಅಧಿಕೃತ ಶ್ರೇಣಿಯಿಲ್ಲದೆ ಕೆಲಸ ಮುಂದುವರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೇರಳ: ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ & ಸ್ಪರ್ಧಿಸುವುದಿಲ್ಲ- ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದ ವ್ಯಕ್ತಿ


