ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯಸೇವನೆ ಮಾಡಲು ಇದ್ದ ಕಾನೂನುಬದ್ಧ ವಯೋಮಿತಿಯನ್ನು 25 ರಿಂದ 21 ಕ್ಕೆ ಇಳಿಸುವುದಾಗಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸೋಮವಾರ ಘೋಷಿಸಿದ್ದಾರೆ. ಜೊತೆಗೆ ದೆಹಲಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯುವುದಿಲ್ಲ ಎಂದೂ ಹೇಳಿದ್ದಾರೆ.
“ದೆಹಲಿಯಲ್ಲಿ ಮದ್ಯಪಾನ ಮಾಡಲು ಇರುವ ಕಾನೂನುಬದ್ಧ ವಯಸ್ಸು ಇನ್ನು ಮುಂದೆ 21 ಆಗಿರುತ್ತದೆ. ದೆಹಲಿಯಲ್ಲಿ ಇನ್ನು ಯಾವುದೇ ಸರ್ಕಾರಿ ಮದ್ಯದಂಗಡಿಗಳು ಇರುವುದಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನು ಸರ್ಕಾರದಿಂದ ತೆರೆಯಲಾಗುವುದಿಲ್ಲ” ಎಂದು ಸಿಸೋಡಿಯಾ ಹೇಳಿದ್ದಾರೆ.
ದೆಹಲಿಯಲ್ಲಿ ಹೊಸ ಅಬಕಾರಿ ನೀತಿಯಲ್ಲಿ ಮಾಡಿರುವ ಬದಲಾವಣೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಅವರು “ಹೊಸ ಅಬಕಾರಿ ನೀತಿಯನ್ನು ಸಚಿವರ ಶಿಫಾರಸುಗಳ ಆಧಾರದ ಮೇಲೆ ಕ್ಯಾಬಿನೆಟ್ ಅಂಗೀಕರಿಸಿದೆ. ಪ್ರಸ್ತುತ ದೆಹಲಿಯಲ್ಲಿ ಶೇಕಡಾ 60 ರಷ್ಟು ಮದ್ಯದಂಗಡಿಗಳನ್ನು ಸರ್ಕಾರ ನಡೆಸುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಪೋಸ್ಟರ್: ಹಿಂದೂ ಯುವ ವಾಹಿನಿ ಸದಸ್ಯರ ಮೇಲೆ FIR
“ಮದ್ಯದ ಅಂಗಡಿಗಳ ಸಮನಾದ ವಿತರಣೆಯನ್ನು ಸರ್ಕಾರ ಖಚಿತಪಡಿಸುತ್ತದೆ. ಇದರಿಂದ ಮದ್ಯ ಮಾಫಿಯಾವನ್ನು ವ್ಯಾಪಾರದಿಂದ ಹೊರಹಾಕಲಾಗುತ್ತದೆ. ಅಬಕಾರಿ ನೀತಿಯ ಸುಧಾರಣೆಗಳ ಬಳಿಕ ಇಲಾಖೆಯಲ್ಲಿ ಶೇಕಡಾ 20 ರಷ್ಟು ಆದಾಯದ ಬೆಳವಣಿಗೆಯನ್ನು ಅಂದಾಜಿಸಲಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರ ರಚಿಸಿದ ತಜ್ಞರ ಸಮಿತಿಯು ಡಿಸೆಂಬರ್‌ನಲ್ಲಿ ಕಾನೂನುಬದ್ಧ ಮದ್ಯಸೇವನೆ ವಯಸ್ಸನ್ನು 21 ಕ್ಕೆ ಬದಲಾಯಿಸುವಂತೆ ಶಿಫಾರಸು ಮಾಡಿತ್ತು.
ಮುಂಬೈನಂತಹ ಇತರ ನಗರಗಳಲ್ಲಿ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಆಲ್ಕೋಹಾಲ್ ಪ್ರಮಾಣ ಜಾಸ್ತಿಯಿರುವ ಮದ್ಯವನ್ನು ಮಾತ್ರ ನಿಷೇಧಿಸಲಾಗಿದೆ, ಆದರೆ ವೈನ್ ಮತ್ತು ಬಿಯರ್ ಸೇವನೆಗೆ 21 ವಯೋಮಿತಿಯವರಿಗೂ ಅನುಮತಿಸಲಾಗಿದೆ. ಪ್ರಮುಖ ಜಾಗತಿಕ ನಗರಗಳಾದ ನ್ಯೂಯಾರ್ಕ್ ಮತ್ತು ಲಂಡನ್ನಲ್ಲಿ, ಮದ್ಯಸೇವನೆ ವಯೋಮೀತಿ ಕ್ರಮವಾಗಿ 21 ಮತ್ತು 18 ಆಗಿದೆ.
ಇದನ್ನೂ ಓದಿ: ಕಾಯ್ದೆ ವಾಪಸಾತಿ ಮಾತನಾಡುತ್ತಿರುವ ಯುವಜನರು ಸರ್ಕಾರ ವಾಪಸಾತಿ ಮಾಡುತ್ತಾರೆ ಎಚ್ಚರ: ರಾಕೇಶ್ ಟಿಕಾಯತ್


