ಬೆಳಗಿ ಮರೆಯಾಗಿದ್ದ ಏಷಿಯಾದ ಬೆಳಕಿನ ಒಂದು ಕಿಡಿಯನ್ನು ಹಿಡಿದು, ಕತ್ತಲು ತುಂಬಿದ ಸಮಾಜವನ್ನು ಮತ್ತೆ ಬೆಳಕಿನೆಡಗೆ ಕರೆತಂದು, ಒಂದು ಮನ್ವಂತರಕ್ಕೆ ನಾಂದಿ ಹಾಡಿದ ಮಹಾನ್ ಚೇತನ ಡಾ. ಬಿ . ಆರ್. ಅಂಬೇಡ್ಕರ್. ಮುಂದೊಂದು ದಿನ ಇಡೀ ಮನುಕುಲಕ್ಕೆ ಮಾದರಿಯಾಗಬಲ್ಲ, ಧಮನಿತ ವರ್ಗದ ಜ್ಯೋತಿಯಾಗಬಲ್ಲ ಒಂದು ಅಧ್ಬುತ ಧೀಮಂತರ ಬಾಲ್ಯದ ಬದುಕನ್ನು ಅಸ್ಪ್ರಶ್ಯತೆಯೆಂಬ ಸಾಮಾಜಿಕ ಪೆಡಂಭೂತವು ತನ್ನ ಕಬಂಧ ಬಾಹುಗಳಿಂದ ಬಳಸಿತ್ತು. ಈ ಸಾಮಾಜಿಕ ಅಸ್ವಸ್ಥತೆಗಳಿಂದ ವಿಮೋಚನೆಗೊಳ್ಳುವಲ್ಲಿ ಶಿಕ್ಷಣದ ಪಾತ್ರವನ್ನು ಅರಿತುಕೊಳ್ಳುವ ಮೂಲಕ, ಅವರು ಶೈಕ್ಷಣಿಕ ಶ್ರೇಷ್ಠತೆಯ ಉತ್ತುಂಗವನ್ನು ತಲುಪಿದರು.
ಅಂತಿಮವಾಗಿ ಅವರ ಮೇಧಾಶಕ್ತಿ ಸಮಾಜದಲ್ಲಿರುವ ಅಸಮಾನತೆ ಮತ್ತು ದಬ್ಬಾಳಿಕೆಗಳ ನಿರ್ಮೂಲನ ಮಾರ್ಗದತ್ತ ವಿಸ್ತರಿಸಿತು. ಜನಸಾಮಾನ್ಯರನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳನ್ನು ಅಳವಡಿಸಿಕೊಂಡರು. ಅವರ ಮಾನವೀಯತೆ ಮತ್ತು ಮಾನವ ಹಕ್ಕುಗಳ ಮೇಲಿನ ಪ್ರೀತಿಯು ದೇಶದ ಧ್ವನಿಯಿಲ್ಲದ ಜನರಿಗೆ ಮಾರ್ಗದರ್ಶನ ನೀಡುವ ಹೋರಾಟದ ಶಕ್ತಿಯಾಗಿ ಮಾರ್ಪಟ್ಟಿತು. ಪ್ರಸ್ತುತ ಸಮಾಜವು ಅವರನ್ನು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವೆಂದು ನೆನಪಿಸಿಕೋಳ್ಳುತದೆ.
ಇದನ್ನೂ ಓದಿ: ಪಿಕೆ ಟಾಕೀಸ್: ಕ್ರಾಂತಿಕಾರಿ ಕೊಸ್ತಾರ ದಿಟ್ಟ ಪೊಲಿಟಿಕಲ್ ಸಿನಿಮಾಗಳು
ಅಂಬೆಡ್ಕರ್ ಅವರ ಜೀವನವನ್ನು ಅವರ ಹೆಗಲಮೇಲೆ ಕೂತು ನೋಡಿದರೆ, ನಮ್ಮ ಅರಿವಿನ ಪಟಲದಲ್ಲಿ ಕಾಣಬರುವುದು ಅವರ ಜೀವನದ ಪ್ರತಿ ಘಟ್ಟದಲ್ಲೂ ಹಿಂದೂ ಸಮಾಜದಲ್ಲಿನ ಜಾತಿ ಎಂಬ ಪೆಡಂಭೂತ ಅವರನ್ನು ಪರಿ ಪರಿಯಾಗಿ ಕಾಡಿರುವುದು. ಬಾಲ್ಯದ ಶಾಲಾ ದಿನಗಲ್ಲಿ ಜೊತೆಗಾರರಿಗಿಂತಲೂ ಅತ್ಯುತ್ತಮ ಅಭ್ಯಾಸ ಪ್ರೇಮಿಯಾಗಿದ್ದರು. ಜಾತಿ ಎನ್ನುವ ಕಿಚ್ಚು ಅವರಿಗೆ ತಮ್ಮ ಅನ್ಯ ಜಾತಿಯ ಸಹಪಾಠಿಗಳು ಅನುಭವಿಸುತಿದ್ದ, ಕುಡಿಯುವ ನೀರಿನಿಂದ ಹಿಡಿದು ಕುಳಿತುಕೊಳ್ಳುವ ಜಾಗದವರೆಗೂ ಕನಿಷ್ಠ ಸವಲತ್ತುಗಳನ್ನೂ ಕೂಡ ಮರೀಚಿಕೆ ಮಾಡಿತ್ತು. ಒಂದೊಮ್ಮೆ ಅವರ ತಂದೆ ಕಾರ್ಯನಿರ್ವಹಿಸುತ್ತಿದ್ದ ಸ್ಥಳವಾದ ಕೋರೆಗಾವ್ಗೆ ತನ್ನ ಸಹೋದರರೊಂದಿಗೆ ಪ್ರಯಾಣಿಸಲು ಮಾಸೂರು ರೈಲ್ವೆ ನಿಲ್ದಾಣದಿಂದ ಸಾರ್ವಜನಿಕ ಟಾಂಗಾ ಪಡೆಯಲು ಎದುರಿಸಿದ ಹೋರಾಟವನ್ನು ತಮ್ಮ ಆತ್ಮ ಕಥನವಾದ “ವೈಟಿಂಗ್ ಫಾರ್ ವೀಸಾ” ದಲ್ಲಿ ನೋವಿನಿಂದ ಸ್ಮರಿಸಿದ್ದಾರೆ.
ನಂತರ ಅವರು ಬರೋಡ ರಾಜರ ಪ್ರಾಯೋಜಿತ ನಿಬಂಧನೆಗಳನ್ನು ಪಾಲಿಸಲೋಸುಗ ಉನ್ನತ ಶಿಕ್ಷಣದ ಮಧ್ಯಂತರದಲ್ಲಿ ಹಿಂದಿರುಗಿದಾಗ, ಆ ದಿನಗಲ್ಲಿ ಅತ್ಯಂತ ಉನ್ನತ ಶಿಕ್ಷಣ ಪಡೆದಿದ್ದರು ಕೂಡ, ಅವರ ವಿಧ್ಯೆಗೆ ಬೆಲೆ ಕೊಡದೆ, ಕೇವಲ ಅಸ್ಪೃಶ್ಯತೆಯಿಂದಾಗಿ ಅವರಿಗೆ ಬರೋಡಾದಲ್ಲಿ ಉಳಿದುಕೊಳ್ಳಲು ಒಂದು ಕೊಠಡಿಯು ಲಭಿಸದ ದುಸ್ಥಿತಿಗೆ ತಳ್ಳುತ್ತದೆ ಈ ಜಾತಿಯುತ ಸಮಾಜ. ಈ ಸಂಗತಿಯ ಹಿನ್ನಲೆಯಲ್ಲಿ ಅವರು ವಿದೇಶಗಳಲ್ಲಿದ್ದ ಐದು ವರ್ಷಗಳನ್ನು ನೆನಪಿಸಿಕೊಳ್ಳುತ್ತಾ ಜಾತಿರಹಿತ ಸ್ವಚಂದ ಸಮಾಜದಲ್ಲಿ ಅವರಿಗೆ ಅಸ್ಪೃಶ್ಯತೆಯ ದುರ್ವಾಸನೆ ಮನಃಪಟಲದಿಂದ ಹಾರಿಹೋಗಿತ್ತು.
ಆದರೆ, ಅವರು ಹಿಂದಿರುಗಿ ಜ್ಞಾನಜ್ಞಾತೃವಾಗಿ ಬಂದ ನಂತರವೂ, ಅದೇ ಅಸ್ಪೃಶ್ಯತೆಯ ದುರ್ವಾಸನೆ ಅವರನ್ನು ಸುತ್ತಿಕೊಂಡಿತ್ತು. ಮುಂದುವರೆದು, ಅವರು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದಾಗಲೂ ಅವರ ಕಚೇರಿಯ ಗುಮಾಸ್ತಾಧಿಗಳಿಂದ ಹಿಡಿದು ಎಲ್ಲರಲ್ಲಿಯೂ ಅಸ್ಪೃಶ್ಯತೆಯೆಂಬ ಕಣ್ಣಿನ ಪೊರೆ ಸುತ್ತಿಕೊಂಡ ಕಣ್ಣುಗಳಿಗೆ ಜ್ಞಾನವು ಅಸ್ಪೃಶ್ಯತೆಯಾಗಿ ಕಂಡಿತು. ಅವರ ಅಪಾರ ಜ್ಞಾನ ಸಂಪತ್ತನ್ನು ಜಾತಿ ಎಂಬ ಪೂರ್ವಗ್ರಹದಿಂದ ಗ್ರಹಣ ಬಡಿದಿದ್ದ ಹಿಂದೂ ಸಮಾಜ ಕಾಣದೆ ಹೋಯಿತು. ಈ ರೀತಿ ಎಲ್ಲ ಹಂತಗಳಲ್ಲೂ ಅವರನ್ನು ಮಾನಸಿಕವಾಗಿ ಜರ್ಜರಿತಗೊಳಿಸಿದ ಈ ಜಾತಿ ವ್ಯವಸ್ಥೆಯ ಅಸ್ಪೃಶ್ಯತೆಯಿಂದ ಅವರು ಕುಗ್ಗದೆ ಎದೆಯುಬ್ಬಿಸಿ ಅದನ್ನು ಬುಡಮೇಲು ಗೊಳಿಸುವ ಅಧಮ್ಯ ಪ್ರೇರಣಾ ಶಕ್ತಿಯಿಂದ ಸಂಪ್ರೇರಿತರಾದರು.
ಇದನ್ನೂ ಓದಿ: ಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?
ಭೀಮ ರಾವ್‌ರವರ ಅಧಮ್ಯ ಜ್ಞಾನ ದಾಹವು ಎಷ್ಟಿತೆಂದರೆ ಪ್ರಪಂಚದಲ್ಲಿ ಅತಿ ಹೆಚ್ಚು ಪದವಿಗಳನ್ನು ಪಡೆದ ಕೆಲವೇ ಮಹಾ ಜ್ಞಾನಿಗಳ ಸಾಲಿನಲ್ಲಿ ಮೊದಲ ಪಂಕ್ತಿಯಲ್ಲಿದ್ದರು. ಇದರ ಪ್ರತಿಫಲವಾಗಿ ಮುಖ್ಯ ವಿಷಯಗಳಾದ ತತ್ವಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ರಾಜನೀತಿ, ಸಮಾಜಶಾಸ್ತ್ರ, ಕಾನೂನು ಹೀಗೆ ಹಲವಾರು ವಿಷಯಗಳಲ್ಲಿ ಮಹಾನ್ ಪಾಂಡಿತ್ಯವನ್ನು ಹೊಂದಿ, ಪ್ರಪಂಚದ ಶ್ರೇಷ್ಠ ವಿಶ್ವ ವಿದ್ಯಾಲಯಗಳಲ್ಲಿ ಪದವಿಗಳನ್ನು ಪಡೆದಿದ್ದರು. ಅವರು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿದ್ದಾಗ, ಅವರ ಕಲಿಕಾ ಆಸಕ್ತಿ ಮತ್ತು ವಿಚಾರ ಪಾಂಡಿತ್ಯದ ತುಡಿತವು ಅವರನ್ನು ಅಂದಿನ ಇತಿಹಾಸ, ಅರ್ಥಶಾಸ್ತ್ರ, ತತ್ವಶಾಸ್ತ್ರ ಮತ್ತು ಮಾನವಶಾಸ್ತ್ರಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದ ಶಾಸ್ತ್ರಜ್ಞರುಗಳಾದ ಪ್ರೊ. ಜೇಮ್ಸ್ ಶಾಟ್‌ವೆಲ್, ಪ್ರೊ. ಎಡ್ವಿನ್ ಸೆಲಿಗ್‌ಮನ್, ಪ್ರೊ. ಜಾನ್ ಡೀವಿ ಮತ್ತು ಪ್ರೊ. ಅಲೆಕ್ಸಾಂಡರ್ ಗೋಲ್ಡನ್‌ವೈಸರ್‌ಗಳತ್ತ ಆಕರ್ಷಿಸಿತು. ಈ ಶಾಸ್ತ್ರಜ್ಞರುಗಳು, ಅಂಬೇಡ್ಕರ್‌ರವರ ಮೂಲ ಆಲೋಚನಾ ಪ್ರಕ್ರಿಯೆ ಮತ್ತು ಬೌದ್ಧಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿರುವರೆಂದು ತಿಳಿಯಬಹುದಾಗಿದೆ.
ಭೀಮ್ ರಾವ್‌ರವರ ಮೂಲ ಆಲೋಚನೆ ವಿಸ್ತರಿಸಿದಂತೆಲ್ಲಾ, ಸಾಮಾಜಿಕ ಪೆಡಂಭೂತವಾದ ಅಸ್ಪೃಶ್ಯತೆಯ ಸಂಕೋಲೆಯಿಂದ ಸಮಾಜವನ್ನು ಬಿಡಿಸಬೇಕೆಂಬ ಅವರ ಸಂಕಲ್ಪವು ಧೃಡವಾಗುತ್ತಾ ಬಂದಿತು. ಕ್ರಮೇಣ ಅವರ ವಿಚಾರಧಾರೆಗಳು ಐತಿಹಾಸಿಕ ಕೃತಿಗಳಾದ ‘Castes in India: Their Mechanism, Genesis and Development; ‘Ancient Indian Commerce’; ‘National Dividend of India – A Historic and Analytical Study’ ರೂಪದಲ್ಲಿ ಪ್ರಚಾರಗೊಳ್ಳಲು ಪ್ರಾರಂಭಿಸಿದವು. ಕಡೆಗೆ, ನ್ಯೂಯಾರ್ಕ್‌ನಂತಹ ಅಂತರ ರಾಷ್ಟ್ರೀಯ ವೇದಿಕೆಯಲ್ಲಿ, ಭಾರತೀಯ ಜಾತಿ ವ್ಯವಸ್ಥೆಯ ಅಪ್ರಾಕೃತಿಕ ಗುಣಲಕ್ಷಣಗಳನ್ನು ಆಧಾರಸಮೇತವಾಗಿ ಬಿಚ್ಚಿಡುವುದರಲ್ಲಿ ಸಫಲಾವಾಗುತಾರೆ.
ಅವರ ಇಂಗದ ಜ್ಞಾನ ದಾಹ, ಅವರನ್ನು ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ ಕಾಲೇಜಿಗೆ ಸೇರಲು ಪ್ರೇರೇಪಿಸಿತು. ಅಲ್ಲಿ ಅವರು “The Indian Rupee” ವಿಷಯದಲ್ಲಿ ಡಾಕ್ಟರೇಟ್ ಗಳಿಸುತ್ತಾರೆ. ನಂತರ ಅವರ ಈ ಗ್ರಂಥವು ‘The Problem of the Rupee: Its Origin and It’s Solution’ ಎನ್ನುವ ಮುಖ್ಯ ಪುಸ್ತಕವಾಗಿ ಮುದ್ರಿಸಲ್ಪಟ್ಟಿತು. ಅಂಬೇಡ್ಕರ್ರವರಿಗೆ ಭಾರತದ ಆರ್ಥಿಕತೆಯ ಮೇಲಿದ್ದ ಅಗಾಧ ಜ್ಞಾನ ಮತ್ತು ತಿಳುವಳಿಕೆ ಹಾಗೂ ಸಂಶೋಧನಾ ಪಾಂಡಿತ್ಯವು ಕಲ್ಪನಾತೀತವಾಗಿತ್ತು. ಅದಕ್ಕೆ ಉದಾಹರಣೆಯಂತೆ, ಅಂಬೆಡ್ಕರ್‌ರವರ ವರದಿಯ ಆಧಾರದ ಮೇರೆಗೆ, ಭಾರತದ ರೂಪಾಯಿ ಸಮಸ್ಯೆಯನ್ನು ಬಗೆಹರಿಸಲು ‘ಹಿಲ್ಟನ್ ಯಂಗ್ ಕಮಿಷನ್’ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಸ್ಥಾಪಿಸಲು ಶಿಫಾರಸು ಮಾಡಿತು. ಅರ್ಥಶಾಸ್ತ್ರದಲ್ಲಿ ಅವರ ಪಾಂಡಿತ್ಯದ ಗೌರವವಾಗಿ, ಸಮಕಾಲೀನ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಅಮರ್ತ್ಯ ಸೇನ್ ಅವರು ಅಂಬೇಡ್ಕರ್ ಅವರನ್ನು ಅರ್ಥಶಾಸ್ತ್ರದಲ್ಲಿ ತಮ್ಮ ಪಿತಾಮಹನೆಂದು ಪರಿಗಣಿಸಿದ್ದಾರೆ.
ಇದನ್ನೂ ಓದಿ: ನೂರರ ನೋಟ: ರೈತ ಹೋರಾಟ ತೀವ್ರಗೊಳ್ಳುವುದರ ಜೊತೆಗೆ ಜೈಲ್ ಭರೋ ಪ್ರಾರಂಭಿಸಬೇಕು
ಅಂಬೆಡ್ಕರ್ ಸಮಾಜದ ಧಮನಿತ ವರ್ಗದಲ್ಲಿ ಸಮಾನತೆ ತರಲು ರಾಜಕೀಯ ಮತು ಆರ್ಥಿಕ ಸಬಲತೆಯೇ ಬಹುಮುಖ್ಯ ಕೀಲಿಕೈ ಎಂದು ನಂಬಿದ್ದರು. ಅವರ ಪ್ರಕಾರ ಧಮನಿತ ಮತ್ತು ಶೋಷಿತ ವರ್ಗಗಳಲ್ಲಿ ಅಸ್ಪೃಶ್ಯರಷ್ಟೇ ಇರಲಿಲ್ಲ ಅವರ ಜೊತೆ ಹಿಂದೂ ಸಮಾಜದ ಧಾರ್ಮಿಕ ಆಚರಣೆ ಮತು ಕಟ್ಟುಪಾಡುಗಳಿಗೆ ಒಳಗಾಗಿದ್ದ ಮಹಿಳೆಯರು, ಅಲ್ಪಸಂಖ್ಯಾತರು ಮತು ಬುಡಕಟ್ಟು ಜನರು ಕೂಡ ತುಳಿತಕ್ಕೆ ಒಳಗಾಗಿದ್ದವರಾಗಿದ್ದರು. ಅವರಿಗಾಗಿ ಅಂಬೆಡ್ಕರ್ ಅವರ ಪ್ರತಿಪಾದನೆಗಳಾದ, ಕಾರ್ಮಿಕರ ಹಕ್ಕು, ನಿಯಮಿತ ಕೆಲಸದ ಅವಧಿ, ಕಾರ್ಮಿಕ ಮಹಳೆಯರಿಗೆ ಮಾತೃತ್ವ ರಜೆ, ಮಹಿಳಾ ಸುರಕ್ಷತೆ ಇವೆಲ್ಲ ಧಮನಿತ ವರ್ಗಕ್ಕೆ ಸಂಬಂಧಿಸಿದಂತೆ ಅವರಿಗಿದ್ದ ಸಮಗ್ರ ಚಿಂತನೆಗಳಿಗೆ ಉದಾಹರಣೆಗಳಾಗಿವೆ. ಜಾತಿವ್ಯವಸ್ಥೆಯೇ ಎಲ್ಲ ಅಸಮಾನತೆಗಳಿಗೆ ಮೂಲ ಕಾರಣ ಮತ್ತು ಭ್ರಾತೃತ್ವ ಭಾವನೆಗಳಿಗೆ ಕೊನೆಯ ಮೊಳೆ ಎಂದು ತಿಳಿದು, ಇದರ ನಿವಾರಣೆಗಾಗಿ, ಅತುಲಿತ ಹೋರಾಟಗೈದು ಸ್ವತಂತ್ರಪೂರ್ವ ಭಾರತದಲ್ಲಿ ನಡೆದ ಪೂನಾ ಒಪ್ಪಂದದಲ್ಲಿ ಧಮನಿತವರ್ಗಗಳ ಪರವಾಗಿ ಅವಿರತ ಹೋರಾಟ ಮಾಡುತ್ತಾರೆ.
ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಪ್ರಾಧ್ಯಾಪಕರಾಗಿದ್ದ ಪ್ರೊಫೆಸರ್ ಜಾನ್ ಡೀವಿ ಅವರ ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಅಂತರ್ಗತಗೊಳಿಸಿಕೊಂಡಿದ್ದರು. ಅವರು ಪ್ರಜಾಪ್ರಭುತ್ವವನ್ನು ಕೇವಲ ರಾಜಕೀಯ ವ್ಯವಸ್ಥೆ ಮಾತ್ರವಲ್ಲದೆ, ಜೀವನ ವಿಧಾನವೆಂದು ನಂಬಿದ್ದರು. ಡೀವಿ ಅವರ ಪ್ರಜಾಪ್ರಭುತ್ವ ತತ್ವಗಳನ್ನು ಭಾರತದ ಸನ್ನಿವೇಶಕ್ಕೆ ಅಳವಡಿಸಿಕೊಳ್ಳುವುದರೊಂದಿಗೆ, ಭ್ರಾತೃತ್ವ ಮತ್ತು ಸಮಾನತೆಯ ಮೌಲ್ಯಗಳಿಂದ ಅಸ್ಪೃಶ್ಯತೆ ಹೋಗಲಾಡಿಸಲು ಮತ್ತು ಅವರ ವಿರೋಧಿಗಳನ್ನು ಮನವೊಲಿಸುವಲ್ಲಿ ವಿಜಯ ಸಾಧಿಸಿದ್ದರು.
ಅನೇಕ ಸಮಾಲೋಚನೆಗಳಲ್ಲಿ ದೇಶೀಯ ನಾಯಕರು ಮತ್ತು ಬ್ರಿಟಿಷ್ ಆಡಳಿತಹಗಾರರೊಂದಿಗೆ, ಸಮಾಜದ ಮೇಲೆ ಅಸ್ಪೃಶ್ಯತೆಯ ದುಷ್ಪರಿಣಾಮಗಳು ಮತ್ತು ಅದರ ಪರಿಹಾರಗಳ ಬಗ್ಗೆ ಚರ್ಚಿಸುತ್ತಿದ್ದರು. ಅಸ್ಪೃಶ್ಯ ಸಮಾಜದ ದನಿಯಾಗಿ ಹೊರ ಹೊಮ್ಮಿ, ತನ್ನ ಬೆಂಬಲಿಗರ ಬದುಕಿಗೆ ಭರವಸೆ ನೀಡುವ ದಿಕ್ಕಿನಲ್ಲಿ ಅನೇಕ ದಿನ ಪತ್ರಿಕೆಗಳಾದ ‘ಮೂಖ ನಾಯಕ’, ‘ಬಹಿಷ್ಕೃತ ಭಾರತ’, ‘ಸಮಾನತೆಯ ಜನತೆ’ ಗಳನ್ನೂ ಹೊರಡಿಸಿದರು. ಧರ್ಮದ ಹೆಸರಿನಲ್ಲಿ ಅಮಾನವೀಯ ಅವಹೇಳನಕಾರಿ ಪುರಾತನ ಆಚರಣೆಗಳ ವಿರುದ್ಧ ಅವರು ನಡೆಸಿದ ಅಭಿಯಾನಗಳಲ್ಲಿ, ‘ಮಹಾಡ್ ಸತ್ಯಾಗ್ರಹವೂ’ ಒಂದು. ಮಹಡ್‌ನಲ್ಲಿ ಅಸ್ಪೃಶ್ಯರು ಕುಡಿಯುವ ನೀರಿನ ಕೊಳವನ್ನು ಉಪಯೋಗಿಸುವಂತಿರಲಿಲ್ಲ. ಇದರ ವಿರುದ್ಧ ಸಿಡಿದೆದ್ದು ಸತ್ಯಾಗ್ರಹ ಮಾಡಿ, ಅಸ್ಪೃಶ್ಯರಿಗೆ ನೀರಿನ ಹಕ್ಕನ್ನು ಕಲ್ಪಿಸುತಾರೆ.
ಇದನ್ನೂ ಓದಿ: ಬಹುಜನ ಭಾರತ: ಚಹಾ ತೋಟಗಳ ನವಗುಲಾಮಗಿರಿಯಲ್ಲಿ ನರಳಿರುವ ಆದಿವಾಸಿಗಳು
ಪ್ರಜಾಪ್ರಭುತ್ವದ ನೀತಿಗಳು ಮತು ಸಾಮಾಜಿಕ ನ್ಯಾಯದ ಬಗೆಗಿನ ಅವರ ಒಲವು ದೇಶದ ಸಂವಿಧಾನದ ರೂಪದಲ್ಲಿ ಆವಿರ್ಭವಿಸಿ ಭಾರತವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿಸಲು ಯಶಸ್ವಿಯಾಯಿತು. ಸಂವಿಧಾನ ರಚನಾ ಸಮಿತಿಯ ಸದಸ್ಯರುಗಳಿಂದ ‘ಸಂವಿಧಾನದ ಆಭರಣ’ ಎಂದೇ ಮೆಚ್ಚುಗೆ ಪಡೆದ ಪ್ರಸ್ತಾವನೆಯು ದೇಶವು ಸಾಧಿಸಲು ಪ್ರಯತ್ನಿಸುವ ಆದರ್ಶಗಳ (ಸಾರ್ವಭೌಮ, ಪ್ರಜಾಪ್ರಭುತ್ವ, ಗಣರಾಜ್ಯ) ಮತ್ತು ಆಕಾಂಕ್ಷೆಗಳ (ನ್ಯಾಯ, ಸ್ವತಂತ್ರ, ಸಮಾನತೆ) ಅಂಶಗಳನ್ನು ಎತ್ತಿತೋರುತ್ತದೆ. ನಮ್ಮ ಸಂವಿಧಾನದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸಲು ದೇಶದ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸುವ ಸಲುವಾಗಿ ವಿಶ್ವದ ಅತ್ಯುತ್ತಮ ಕಾನೂನುಗಳ ಅಗತ್ಯ ಅಂಶಗಳನ್ನು ನ್ಯಾಯಯುತವಾಗಿ ಅಳವಡಿಸಲಾಯಿತು.
ಅಂಬೇಡ್ಕರ್ ಅವರನ್ನು ಟೀಕಿಸುವವರು ಸಂವಿಧಾನವನ್ನು ಪ್ರಪಂಚದ ವಿವಿಧ ಸಂವಿಧಾನಗಳ ಒಂದು ಸಂಯೋಜನೆಯಷ್ಟೇ ಎಂದು ಮೂದಲಿಸಿದ್ದಾರೆ. ಆದರೆ, ಈ ಸಂವಿಧಾನದ ಅಧಮ್ಯಶಕ್ತಿ – ಬೃಹತ್ ಆದ ಮತ್ತು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವೈವಿಧ್ಯಮಯ ದೇಶವನ್ನು ಏಳು ದಶಕಗಳು ಕಳೆದರೂ ಸದೃಢವಾಗಿ ಮುನ್ನಡೆಸುತ್ತಿರುವುದು – ಸ್ಪಷ್ಟವಾಗಿ ಎದ್ದು ಕಾಣುತದೆ. ಇವರ ಸಾಧನೆಗಳು, ನಾಯಕತ್ವ ಮತ್ತು ಭಾರತ ಸಂವಿಧಾನದ ರಚನೆಗೆ ಅವರ ಕೊಡುಗೆಯನ್ನು ಗುರುತಿಸಿ, ಕೊಲಂಬಿಯಾ ವಿಶ್ವ ವಿದ್ಯಾಲಯವು ಜೂನ್ 5 , 1952 ರಂದು ‘ಒಬ್ಬ ಸಮಾಜ ಸುಧಾರಕ ಮತ್ತು ಮಹಾನ್ ಮಾನವತಾವಾದಿ’ ಎಂದು ಗೌರವ ಡಾಕ್ಟರೇಟ್ ನೀಡಿದೆ.
ಭಾರತ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿಯಾಗಿ, ಅಂಬೇಡ್ಕರ್, ಸಂವಿಧಾನವು ನಾಗರಿಕರಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ವಿಚಾರಣೆಯ ಮನೋಭಾವವನ್ನು ವೃದ್ಧಿಸಲು ಸಹಕರಿಸುವುದರೊಂದಿಗೆ ಸಮಾಜದ ಯೋಗಕ್ಷೇಮವನ್ನು ಸಾದಿಸುವ ಸಾಧನವಾಗಬೇಕೆಂದು ನಂಬಿದ್ದರು. ಅಂಬೇಡ್ಕರ್ ಅವರ ಬರಹಗಳು ಮತು ಭಾಷಣಗಳನ್ನು ಅವಲೋಕಿಸಿದಾಗ, ನಮಗೆ ತಿಳಿಯ ಬರುವುದೇನೆಂದರೆ, ಧರ್ಮವು ಸ್ಥಿರವಾದ ಅರ್ಥವನ್ನು ಹೊಂದಿರದೆ, ಅದು ಕಾಲಾಂತರಗಲ್ಲಿ ಒಂದು ಘಟ್ಟದಿಂದ ಮಾತ್ತೊಂದು ಘಟ್ಟಕ್ಕೆ ಬದಲಾವಣೆಗೊಳ್ಳುತ್ತ ಬರುವ ಆಲೋಚನಾ ಪ್ರಕ್ರಿಯೆಯಾಗಿದೆ. ಪ್ರತಿಯೊಂದು ಘಟ್ಟವನ್ನು ‘ಧಾರ್ಮಿಕ ಚಿಂತನೆ’ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ
ಆದ್ದರಿಂದ ವ್ಯಕ್ತಿಯು ತಾನು ಬೆಳೆದು ಬಂದಂಥ ಪರಿಸರ ಪ್ರಭಾವ, ತನ್ನ ಆಲೋಚನೆ ಮತ್ತು ಮನಸಾಕ್ಷಿಗಳಿಗೆ ಅನುಗುಣವಾಗಿ, ಧರ್ಮ ಮತ್ತು ನಂಬಿಕೆಯನ್ನು ಆಯ್ಕೆಮಾಡಿಕೊಳ್ಳುವ ವ್ಯಕ್ತಿ ಸ್ವಾತಂತ್ರವನ್ನು ಹೊಂದಿರುವುದು ಬಹುಮುಖ್ಯವಾಗಿರುತ್ತದೆ ಎನ್ನುವುದು ಕಂಡುಬಂದಿದೆ. ವ್ಯಕ್ತಿಯ ಜೀವನವನ್ನು ರೂಪಿಸುವಲ್ಲಿ ಧರ್ಮದ ಪಾತ್ರವು ಬಹು ಮುಖ್ಯವಾಗಿರುವುದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ ಅವರು, ವಿಶ್ವದ ಅನೇಕ ಧಾರ್ಮಿಕ ಗ್ರಂಥಗಳನ್ನು ಆಳವಾಗಿ ಅಧ್ಯಯನ ನಡೆಸಿ, ಸರ್ವರಲ್ಲಿಯೂ ಸಮಾನತೆಯ ತತ್ವವನ್ನು ಪ್ರತಿಪಾದಿಸಬಲ್ಲ, ಮೇಲು ಕೀಳಿಲ್ಲದ ಸಮಾಜವನ್ನು ಸೃಷ್ಟಿಸಬಲ್ಲ, ತಾರ್ಕಿಕತೆಯನ್ನು ಮತ್ತು ನೈತಿಕತೆಯನ್ನು ಬೆಳೆಸಬಲ್ಲ ಬೌದ್ಧಧರ್ಮವನ್ನು ಸ್ವೀಕರಿಸಲು ನಿರ್ಧರಿಸುತ್ತಾರೆ. ಬುದ್ಧನ ಬೋಧನೆಗಳನ್ನು ಸ್ವೀಕರಿಸುವ ಮೂಲಕ, ಅಸ್ಪೃಶ್ಯತೆಯ ಹಿಡಿತದಿಂದ ತಮ್ಮನ್ನು ತಾವು ಮುಕ್ತಗೊಳಿಸಬಹುದು ಮತ್ತು ಸಮಾನತೆಯ ಫಲವನ್ನು ಆಸ್ವಾದಿಸಬಹುದು ಎಂದು ಅವರು ನಂಬಿದ್ದರು. ಅಂತಿಮವಾಗಿ ಅಕ್ಟೋಬರ್ 14, 1956 ರಂದು ಅವರು ತಮ್ಮ 3,80,000 ಅನುಯಾಯಿಗಳೊಂದಿಗೆ ದೀಕ್ಷಾಭೂಮಿ ನಾಗಪುರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಅಂಬೇಡ್ಕರ್ ಸಾಟಿಯಿಲ್ಲದ ಸಾಧನೆಗಳೊಂದಿಗೆ ಜ್ಞಾನ, ಸಮಾನತೆ ಮತ್ತು ಭ್ರಾತೃತ್ವದ ಬೆಳಕನ್ನು ಬೆಳಗಿಸಿ ಶತಮಾನಗಳಿಂದ ಅಜ್ಞಾನದ ಕತ್ತಲೆಯಲ್ಲಿದ್ದ ಲಕ್ಷಾಂತರ ಭಾರತೀಯರಿಗೆ ದಾರಿದೀಪವಾಗಿದ್ದಾರೆ. ಅವರ ಮಹತ್ವದ ಸಾಧನೆಯನ್ನು ಗುರುತಿಸಿ, ಭಾರತ ಸರ್ಕಾರವು 1990 ರಲ್ಲಿ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ ಅವರಿಗಿದ್ದ ಅರಿವಿನ ಆಳವು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ. ಅವರನ್ನು ಶ್ರೇಷ್ಠ ಸಾಮಾಜಿಕ ಸುಧಾರಕ ಎಂದು ಕರೆಯಲಾಗುತ್ತಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರ ಸಮರ್ಪಣೆಯ ಪರಂಪರೆಯನ್ನು ಗೌರವಿಸಿ, ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವು 2021 ನೇ ಅಂಬೇಂಡ್ಕರ್ ಜಯಂತಿಯನ್ನು ‘ಡಾ. ಬಿ. ಆರ್. ಅಂಬೇಡ್ಕರ್ ಸಮಾನತೆಯ ದಿನವೆಂದು’ ಘೋಷಿಸಿದೆ. ವ್ಯಕ್ತಿ ಆರಾಧನೆ ಮತು ಮೂರ್ತಿ ಪೂಜೆಗಿಂತ ವೈಚಾರಿಕತೆಗೆ ಪ್ರಾಮುಖ್ಯತೆ ನೀಡಬೇಕೆಂದು ಸಾರಿದ ಬಾಬಾಸಾಹೇಬ್‌ರವರು. ಜ್ಞಾನ, ಜ್ಞೇಯ, ಜ್ಞಾತೃವಾಗಿ, ತಾವು ಮುಳ್ಳಿನ ಹಾದಿಯಲ್ಲಿ ನಡೆದು, ತನ್ನ ಮುಂದಿನ ಪೀಳಿಗೆಯನ್ನು ಹೂವಿನ ಹಾದಿಯಲ್ಲಿ ನಡೆಯುವಂತೆ ಮಾಡಿದ ವಿಶ್ವಗುರು.
ಡಾ. ಬಿ. ಆರ್. ಅಂಬೇಡ್ಕರ್ ಜೀವನವು ಆದರ್ಶಮಯವಾದುದು ಮತ್ತು ಅನುಕರಣೀಯವಾದುದು. ಇದನ್ನು ಅರಿತ ಪ್ರಪಂಚದ ಎಷ್ಟೋ ದೇಶಗಳು ಅವರ ಜೀವನದ ಕುರಿತು ಅಧ್ಯಯನಗಳನ್ನು, ಅಧ್ಯಯನ ಕೇಂದ್ರಗಳನ್ನು, ವಿಶ್ವವಿಧ್ಯಾಲಯಗಳನ್ನು ಸ್ಥಾಪಿಸಿ, ಅವರ ಬದುಕನ್ನು ಪ್ರಪಂಚವು ಅರಿಯಲು, ಮತ್ತು ಯುವಜನತೆಯನ್ನು ಹುರಿದುಂಬಿಸಲು ಸಾಕ್ಷಿಯಾಗಿವೆ.
“ನಿನಗೆ ನೀನೆ ಬೆಳಕು, ನೀನಾಗಬೇಕು ಬೆಳಕು” ಎನ್ನುವಂತ್ತಿತ್ತು ಡಾ. ಬಿ. ಆರ್. ಅಂಬೇಡ್ಕರ್ ಬದುಕು.
ಇದನ್ನೂ ಓದಿ: ಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?



Your articles are good to me, to read and understand.and present political gimix.