ಕೊರೊನಾ ವೈರಸ್ ಸಾಂಕ್ರಾಮಿಕವು ಅರ್ಧದಷ್ಟು ದೇಶಗಳನ್ನು ತೀವ್ರವಾದ ಸಂಕಷ್ಟಕ್ಕೆ ಸಿಲುಕಿಸಿದೆ. ಕೋವಿಡ್ ವೈದ್ಯಕೀಯ ವಿಪತ್ತಿನಿಂದ ಜಗತ್ತಿನ ಅರ್ಧದಷ್ಟು ಜನ ತಮ್ಮ ಜೀವ ಕೈಯಲ್ಲಿ ಹಿಡಿದು ಜೀವಿಸುತ್ತಿದ್ದಾರೆ. ಅಮೆರಿಕಾ, ಯುರೋಪ್, ಚೀನಾ, ಭಾರತ ಸೇರಿ ಜಗತ್ತಿನ ಎಲ್ಲ ಆರ್ಥಿಕ ಕ್ಷೇತ್ರಗಳು ಮತ್ತೆ ಚೇತರಿಸಿಕೊಳ್ಳಲಾದ ಸ್ಥಿತಿಗೆ ತಲುಪಿವೆ. ಉತ್ಪಾದನಾ ವಲಯ ಕಳೆದ ನೂರು ವರ್ಷಗಳಲ್ಲೆ ಅತ್ಯಂತ ಕನಿಷ್ಠಮಟ್ಟಕ್ಕೆ ಇಳಿದಿದೆ. ನಿರುದ್ಯೋಗ ಮತ್ತು ಹಸಿವೆ ಕೊರೊನಾ ನೀಡಿದ ಬಳುವಳಿಯಾಗಿ ಜನರ ಬಳಿ ಉಳಿದಿದೆ. ಜಗತ್ತಿನ ಜನರ ಜೀವದ ಜೊತೆ ಚೆಲ್ಲಾಟವಾಡುತ್ತ ಅಲೆಯ ಮೇಲೆ ಮತ್ತೊಂದು ಅಲೆಯಾಗಿ ಇನ್ನಷ್ಟು ತೀವ್ರ ಸ್ವರೂಪ ಪಡೆದು ಮುನ್ನುಗ್ಗುತ್ತಿರುವ ವೈರಾಣುವಿನ ಮೂಲ ಯಾವುದು..? ವೈದ್ಯ ವಿಜ್ಞಾನದ ಅತ್ಯಂತ ಕಠಿಣ ಸವಾಲಾಗಿರುವ ಈ ಪ್ರಶ್ನೆಯ ಉತ್ತರ ಮಾತ್ರ ಇದುವರೆಗೆ ದೊರೆತಿಲ್ಲ. ನಾನಾ ಸಿದ್ಧಾಂತಗಳು, ಸಂಶೋಧನೆಗಳು ಒಂದಕ್ಕಿಂತ ಒಂದು ನಿಗೂಢ ಮತ್ತು ಸ್ವಾರಸ್ಯಕರ ಊಹೆ ಮತ್ತು ಆಧಾರಗಳನ್ನು ಹೊರತು ಪಡಿಸಿದರೆ ಸೋಂಕಿನ ಮೂಲದ ಕುರಿತಾಗಿ ಅಧಿಕೃತ ಉತ್ತರವನ್ನು ನೀಡಲು ವೈದ್ಯ ಜಗತ್ತು ಇಂದಿಗೂ ತಡಕಾಡುತ್ತಿದೆ.
ಕಳೆದ ವರ್ಷ 2020 ರ ಹೊತ್ತಿನಲ್ಲಿ ಟ್ರಂಪ ನೇತೃತ್ವದ ಅಮೆರಿಕ ಸರ್ಕಾರ ಕೊರೊನಾ ವೈರಸ್ ಅನ್ನು ಚೈನೀಸ್ ವೈರಸ್ ಎಂದು ಕರೆಯುವ ಮೂಲಕ ವೈರಸ್ಸಿನ ಮೂಲವನ್ನು ತನ್ನ ಪ್ರತಿಸ್ಪರ್ಧಿ ಚೀನಾದ ಕಡೆ ತಿರುಗಿಸಿತ್ತು. ಚೀನಾ ಉತ್ತರವಾಗಿ ಅಮೆರಿಕಾದಲ್ಲೆ ವೈರಸ್ ಸೃಷ್ಟಿಯಾಗಿದೆ ಎಂಬ ಪ್ರತಿ ತಂತ್ರವನ್ನು ವ್ಯಾಪಕ ಪ್ರಚಾರ ಮಾಡಿತು. ಇವೆರಡು ದೇಶಗಳ ವ್ಯಾಪಕ ಪ್ರಚಾರ ಅಪಪ್ರಚಾರಗಳ ಅಂತ್ಯದಲ್ಲಿ ಜಗತ್ತನ್ನು ಕಾಡುತ್ತಿರುವ ಪ್ರಶ್ನೆಗೆ ಸಿಕ್ಕ ಉತ್ತರಗಳು ಊಹೆ ಮತ್ತು ಊಹೆ ಅಷ್ಟೆ.
ವಿಶ್ವ ಆರೋಗ್ಯ ಸಂಸ್ಥೆಯು ಚೀನಾವನ್ನಾಗಲಿ, ಅಮೆರಿಕಾವನ್ನಾಗಲಿ ಅಥವಾ ಜಗತ್ತಿನ ಇನ್ನಾವುದೇ ದೇಶವನ್ನು ಕೊರೊನಾ ಸೋಂಕಿನ ಮೂಲವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕೃತ ಪಡಿಸಿತ್ತು. WHO ಸ್ಪಷ್ಟನೆಯ ನಂತರ ಯಾವ ದೇಶಗಳೂ ಕೊರೋನಾ ವೈರಸ್ ನ ಮೂಲವನ್ನು ಹುಡುಕುವ ಸಾಹಸಕ್ಕೆ ಮುಂದಾಗಿರಲಿಲ್ಲ. ಎಲ್ಲರ ಗಮನ ಸೋಂಕಿನ ನಿಯಂತ್ರಣ ಮತ್ತು ಲಸಿಕೆಯನ್ನು ಕಂಡು ಹಿಡಿಯುವುದರ ಕಡೆ ತಿರುಗಿತು. ಅಮೆರಿಕಾ ಮಾತ್ರ ಸದ್ದಿಲ್ಲದೇ ತನ್ನದೇ ರೀತಿಯಲ್ಲಿ ಗೌಪ್ಯವಾಗಿ ಸೋಂಕಿನ ಮೂಲವನ್ನು ಪತ್ತೆ ಹಚ್ಚುವ ತನಿಖೆಯನ್ನು ಮುಂದುವರೆಸಿತ್ತು. ಕುಂಟುತ್ತ ಸಾಗುತ್ತಿದ್ದ ಕೊರೋನಾ ಮೂಲದ ರಹಸ್ಯ ತನಿಖೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಚುರುಕು ನೀಡುವ ಮೂಲಕ ಈಗ ಮತ್ತೊಮ್ಮೆ ಸೋಂಕಿನ ಮೂಲದ ಚರ್ಚೆಗೆ ನಾಂದಿ ಹಾಡಿದ್ದಾರೆ.
ಇದನ್ನೂ ಓದಿ: ವಿಶ್ವದಲ್ಲೆ ಅತಿಹೆಚ್ಚು ಲಸಿಕೆ ತಯಾರಿಸುವ ಭಾರತ ಯಾಕೆ ಕೊರತೆ ಎದುರಿಸುತ್ತಿದೆ: ಪ್ರಿಯಾಂಕ ಗಾಂಧಿ
ಕೊರೊನಾ ತನಿಖೆ ತೀವ್ರಗೊಳಿಸಲು ಆದೇಶಿದ ಪ್ರೆಸಿಡೆಂಟ್ ಬೈಡನ್ ಹೇಳಿದ್ದೇನು ?
ನೋವಲ್ ಕೊರೊನಾ ವೈರಸ್ SARS-CoV2 ನಿಂದ ಸಂಭವಿಸುವ ಕೋವಿಡ್ ಎಂದು ಕರೆಯಲ್ಪಡುವ ಕೊರೊನಾ ವೈರಸ್ ಡಿಸೀಸ್ ಮೂಲ ಪತ್ತೆ ಹಚ್ಚಲು ಅಮೆರಿಕಾ ಯಾವಾಗಲೂ ಬದ್ದವಾಗಿದೆ. ಜಗತ್ತಿನ ಆರೋಗ್ಯ ವ್ಯವಸ್ಥೆಗೆ ದೊಡ್ಡ ಪಿಡುಗಾಗಿ ಪರಿಣಮಿಸಿರುವ ಸಾಂಕ್ರಾಮಿಕದ ಮೂಲವನ್ನು ಪತ್ತೆ ಹಚ್ಚಿ ವೈರಸ್ ಮಾನವ ನಿರ್ಮಿತವೇ ಅಥವಾ ಪ್ರಕೃತಿಯ ಜೀವ ರಾಸಾಯನಿಕ ಕ್ರಿಯೆಗಳ ಮೂಲಕ ಹುಟ್ಟಿಕೊಂಡಿದ್ದೆ ಎಂದು ಕಂಡುಕೊಳ್ಳುವುದು 21 ನೇ ಶತಮಾನದ ಮಹತ್ವದ ಸಂಶೋಧನೆಗಳಲ್ಲಿ ಒಂದಾಗಿದೆ. ಅಮೆರಿಕಾದ ತನಿಖೆ ಈ ನಿಟ್ಟಿನಲ್ಲಿಯೇ ಮುಂದುವರೆಯಲಿದ್ದು ಚೀನಾ ಕೂಡ ಅಮೆರಿಕಾದ ತನಿಖೆಯಲ್ಲಿ ಭಾಗವಹಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಬೈಡನ್ ಬುಧವಾರ (ಮೇ 26) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚೀನಾದ ವುಹಾನ್ ನಗರದ ಜೀವ ರಾಸಾಯನಿಕ ಪ್ರಯೋಗವೊಂದರಲ್ಲಿ ಕೊರೊನಾ ವೈರಸ್ ಸೃಷ್ಟಿಯಾಗಿದೆ ಎಂಬ ಬಲವಾದ ಆಯಾಮವೂ ನಮ್ಮ ಮುಂದಿದೆ. ವೂಹಾನ್ ಲ್ಯಾಬ್ ಆಯಾಮದಲ್ಲೂ ಅಮೆರಿಕನ್ ತನಿಖಾ ಏಜೆನ್ಸಿಗಳು ಸಂಶೋಧನೆಯನ್ನು ಮುಂದುವರೆಸಲಿವೆ ಎಂದು ಅಧ್ಯಕ್ಷ ಬೈಡನ್ ತಿಳಿಸಿದ್ದಾರೆ.
ಮುಂದಿನ 90 ದಿನಗಳಲ್ಲಿ ತನಿಖೆಗೆ ಪೂರಕವಾದ ಮಾಹಿತಿ ಸಾಕ್ಷಿಗಳನ್ನು ಕಲೆಹಾಕಿ ಒಂದು ಅಂತಿಮವಾದ ಅಧಿಕೃತ ತೀರ್ಮಾನಕ್ಕೆ ಬರುವಂತೆ ಬೈಡನ್ ತಮ್ಮ ತನಿಖಾ ಸಂಸ್ಥೆಗಳಿಗೆ ಆದೇಶಿಸಿದ್ದಾರೆ.
ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಕೊರೊನಾ ಸಾಂಕ್ರಾಮಿಕ ವೈರಸ್ 2019 ಅಂತ್ಯದ ವೇಳೆಗೆ ಮೊಟ್ಟ ಮೊದಲ ಬಾರಿಗೆ ಚೀನಾ ದೇಶದ ವುಹಾನ್ ನಗರದಲ್ಲಿ ಪತ್ತೆಯಾಯಿತು. 2019 ರಿಂದ ಸರಿ ಸುಮಾರು 10 ಕೋಟಿ ಜನರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಆಧುನಿಕ ವಿಜ್ಞಾನಕ್ಕೆ ವಿರುದ್ಧವಾಗಿರುವ ಅನೇಕ ವೈರಸ್ ಸಿದ್ಧಾಂತಗಳ ಪ್ರತಿಪಾದನೆಯ ನಂತರವೂ ಇಂದಿಗೂ ಅಮೆರಿಕ ಮತ್ತು ಅದನ್ನು ಬೆಂಬಲಿಸುವ ರಾಷ್ಟ್ರಗಳು ವೈರಸ್ ಕುರಿತಾಗಿ ಪಾರದರ್ಶಕವಾಗಿ ಚೀನಾ ವರ್ತಿಸಿದ್ದರೆ ಇಂದಿನ ಮಹಾ ದುರಂತವನ್ನು ತಪ್ಪಿಸಬಹುದಿತ್ತೆಂಬ ಅಭಿಪ್ರಾಯವನ್ನೇ ಹೊಂದಿದ್ದಾರೆ.
ಚೀನಾದ ಮೇಲೆ ನಾನಾ ರೀತಿಯ ಒತ್ತಡದ ಮೂಲಕ ಮಾಹಿತಿಯನ್ನು ಕಲೆಹಾಕಲು ಯತ್ನಿಸುತ್ತಿದ್ದಾರೆ. ಚೀನಾ ವೈರಸ್ ಮಹಾ ಪಿಡುಗು ಪ್ರಕೃತಿ ಜನ್ಯ ಎಂದು ಹೇಳುವ ತನ್ನ ವಾದವನ್ನು ಮುಂದುವರೆಸಿದೆ. ಅಮೆರಿಕ ಹೊರತಪಡಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ(WHO) ಮತ್ತು ಬೇರೆ ಬೇರೆ ದೇಶಗಳ ವಿಜ್ಞಾನಿಗಳು ಬಹು ಆಯಾಮದಲ್ಲಿ ಸೋಂಕಿನ ಮೂಲವನ್ನು ಪತ್ತೆಹಚ್ಚುವ ಸಂಶೋಧನೆಯನಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ’ಯಾರಿಂದಲೂ ನನ್ನ ಅರೆಸ್ಟ್ ಮಾಡಲು ಸಾಧ್ಯವಿಲ್ಲ’- ಬಾಬಾ ರಾಮ್‌ದೇವ್ ಹೇಳಿಕೆ
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷ ಕೊರೊನಾ ವೈರಸ್ಸಿನ ಮೂಲ ವುಹಾನ್ ನಗರದ ಪ್ರಯೋಗಾಲಯವೇ ಎಂಬ ತೀರ್ಮಾನಕ್ಕೆ ಬಂದಿತ್ತು. ಜೋ ಬೈಡನ್, ಟ್ರಂಪ್ ಮಾದರಿಯಲ್ಲಿ ಯಾವುದೇ ಅವಸರದ ತೀರ್ಮಾನಕ್ಕೆ ಬಾರದೇ ತಮ್ಮ ತನಿಖಾ ಸಂಸ್ಥೆಗಳ ವರದಿಗಾಗಿ ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಜಗತ್ತಿನಲ್ಲಿ ಹೊಸ ಚರ್ಚೆಗಳನ್ನು ಹುಟ್ಟು ಹಾಕುವಂತೆ ಅಮೆರಿಕ ಮೂಲದ ಜಗತ್ತಿನ ಪ್ರಸಿದ್ಧ ಸುದ್ಧಿ ಸಂಸ್ಥೆ ‘ವಾಲ್ ಸ್ಟ್ರೀಟ್ ಜರ್ನಲ್’ ಕೆಲವು ದಿನಗಳ ಹಿಂದೆ ವರದಿಯೊಂದನ್ನು ಪ್ರಕಟಿಸಿತು. ‘ವಾಲ್ ಸ್ಟ್ರೀಟ್ ಜರ್ನಲ್’ ತನ್ನ ವರದಿಯಲ್ಲಿ ಅಮೆರಿಕಾ ತನಿಖಾ ಸಂಸ್ಥೆಯು ಕೆಲ ಅಂಶಗಳನ್ನು ಹೊರಹಾಕಿದೆ.
2019, ನವೆಂಬರ್ ಅಂದರೆ ಕೊರೊನಾ ವೈರಸ್ ವುಹಾನ್ ನಗರದಲ್ಲಿ ಕಾಣಿಸಿಕೊಳ್ಳುವ ಸರಿ ಸುಮಾರು ಒಂದು ತಿಂಗಳ ಮೊದಲು ವುಹಾನ್ ನಗರದ ಪ್ರಯೋಗಾಲಯದಲ್ಲಿ ಮೂವರು ಸಂಶೋಧಕರಲ್ಲಿ ಕೊರೊನಾ ವೈರಸ್ ಸೋಂಕಿನಂತಹದೇ ರೋಗ ಲಕ್ಷಣಗಳು ಕಂಡು ಬಂದಿತ್ತು. ಸಂಶೋಧಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಸ್ಫೋಟಕ ವಿಷಯಗಳನ್ನು ಪ್ರಕಟಿಸಿದೆ. ವಾಲ್ ಸ್ಟ್ರೀಟ್ ವರದಿ ಪ್ರಕಟವಾದ ಬೆನ್ನಲ್ಲೇ ಜಗತ್ತಿನಾದ್ಯಂತ ಜನರು ವೈರಸ್ ನ ಮೂಲದ ಕುರಿತಾಗಿ ಚೀನಾದ ವುಹಾನ್ ಲ್ಯಾಬ್ ಕಡೆಗೆ ಬೆರಳು ತೋರಿಸ ತೊಡಗಿದ್ದಾರೆ. ವಾಲ್ ಸ್ಟ್ರೀಟ್ ವರದಿಯ ಬೆನ್ನಲ್ಲೇ ಅಧ್ಯಕ್ಷ ಬೈಡನ್ ಕೊರೊನಾ ವೈರಸ್ ತನಿಖೆಯನ್ನು ಶೀರ್ಘವಾಗಿ ಪೂರ್ಣಗೊಳಿಸಲು ಆದೇಶಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಅಮೆರಿಕಾದ ಬಹುಪಾಲು ತನಿಖಾ ಸಂಸ್ಥೆಗಳು ಚೀನಾದ ವುಹಾನ್ ನಗರದಲ್ಲಿ ನಡೆದ ಎರಡು ಘಟನೆಗಳ ಕಡೆ ವೈರಸ್ ನ ಮೂಲವನ್ನು ಶಂಕಿಸಿದ್ದಾರೆ. ವೈರಸ್ ಮೂಲ ಪತ್ತೆ ಕಾರ್ಯದಲ್ಲಿ ತೊಡಗಿರುವ ಅಮೆರಿಕಾದ 18 ತನಿಖಾ ಸಂಸ್ಥೆಗಳಲ್ಲಿ 2 ತನಿಖಾ ಸಂಸ್ಥೆಗಳು ವುಹಾನ್ ನಗರದ ಪ್ರಾಣಿ ಮಾರುಕಟ್ಟೆಯ ಮೂಲಕ ಮನುಷ್ಯನಿಗೆ ಕೊರೊನಾ ತಗುಲಿದೆ ಎಂದು ಅಭಿಪ್ರಾಯಪಡುತ್ತಿವೆ. ಇನ್ನುಳಿದ ತನಿಖಾ ಸಂಸ್ಥೆಗಳ ಅಭಿಪ್ರಾಯ ವುಹಾನ್ ಲ್ಯಾಬೊರೇಟರಿಯ ಕಡೆ ವಾಲುತ್ತದೆ. ಬಲವಾಗಿ ನಂಬಬಹುದಾದ 2019 ರ ಅಂತ್ಯದ ವೇಳೆಗೆ ವುಹಾನ್ ನಗರದಲ್ಲಿ ನಡೆದ ಎರಡು ಘಟನೆಗಳಲ್ಲಿ ಯಾವುದು ಅಂತಿಮ ಎಂದು ಸಮರ್ಥವಾಗಿ ಸಾಬೀತು ಪಡಿಸುವ ನಿರ್ಣಾಯಕ ಪುರಾವೆಗಳು ಇದುವರೆಗೆ ದೊರೆತಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ತಮ್ಮ ತನಿಖಾ ಸಂಸ್ಥೆಗಳ ಇದುವರೆಗಿನ ಸಂಶೋಧನೆಯ ಬೆಳವಣಿಗೆ ಕುರಿತು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸೋಂಕು ಹೆಚ್ಚಾದಂತೆ ವ್ಯವಸ್ಥೆಯ ಅಮಾನವೀಯತೆಗೆ ಗುರಿಯಾಗುತ್ತಿರುವ ಬೆಂಗಳೂರಿನ ಸ್ಮಶಾನ ಕಾರ್ಮಿಕರು
ದೇಶದ ರಾಷ್ಟ್ರೀಯ ಪ್ರಯೋಗಾಲಯಗಳು ತನಿಖಾ ಸಂಸ್ಥೆಗಳೊಂದಿಗೆ ಒಗ್ಗೂಡಿ ಕೊರೊನಾ ಸಾಂಕ್ರಾಮಿಕದ ಮೂಲವನ್ನು ಪತ್ತೆಹಚ್ಚಲು ನೆರವಾಗುವಂತೆ ಬೈಡನ್ ಮನವಿಯನ್ನು ಮಾಡಿದ್ದಾರೆ. ಇದೇ ವೇಳೆ ಅವರು ಅಂತರಾಷ್ಟ್ರೀಯ ಪಿಡುಗಿನ ಸೃಷ್ಟಿ ಎಲ್ಲಿ ಹೇಗೆ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಅಮೆರಿಕಾದ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದು ಚೀನಾವನ್ನು ಆಗ್ರಹಿಸಿದ್ದಾರೆ. ತನಿಖಾ ಸಂಸ್ಥೆಗಳು ಕಾಲ ಕಾಲಕ್ಕೆ ಅಮೆರಿಕಾ ಸಂಸತ್ತಿನ ಮುಂದೆ ತನಿಖೆಯ ಬೆಳವಣಿಗೆಗಳ ವರದಿ ನೀಡಬೇಕೆಂದು ಇದೇ ವೇಳೆ ಅಧ್ಯಕ್ಷ ಬೈಡನ್ ಆದೇಶಿಸಿದರು.
ಇದೇ ವೇಳೆ ಅಧ್ಯಕ್ಷ ಬೈಡನ್, ಅಮೆರಿಕಾ, ನೋವಲ್ ಕೊರೊನಾ ವೈರಸ್ ಮೂಲವನ್ನು ಪತ್ತೆಹಚ್ಚಲು ಜಗತ್ತಿನ ಎಲ್ಲಾ ಸಮಾನ ಮನಸ್ಕ ಶಕ್ತಿಗಳೊಂದಿಗೆ ಕಾರ್ಯ ನಿರ್ವಹಿಸಲು ಬಯಸುತ್ತದೆ. ಜಗತ್ತಿನ ಇತರ ಶಕ್ತಿಗಳು ಪಾರದರ್ಶಕ, ಸಾಕ್ಷಿ ಆಧಾರಿತ, ಪೂರ್ಣ ಪ್ರಮಾಣದ ತನಿಖೆಯಲ್ಲಿ ಭಾಗವಹಿಸುವಂತೆ ಚೀನಾದ ಮೇಲೆ ಒತ್ತಡ ಹೇರಬೇಕೆಂದು ಅಂತರಾಷ್ಟ್ರೀಯ ಸಮುದಾಯದಲ್ಲಿ ಮನವಿ ಮಾಡಿದ್ಧಾರೆ.
ಅಮೆರಿಕ ಅಧ್ಯಕ್ಷ ಬೈಡನ್ ಹೇಳಿಕೆಗೆ ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಮೆರಿಕಾದಲ್ಲಿರುವ ಚೀನಾ ರಾಯಭಾರ ಕಚೇರಿಯು ಜಗತ್ತಿನ ರಾಜಕೀಯ ಶಕ್ತಿಗಳು ಮತ್ತೊಮ್ಮೆ ಪರಸ್ಪರ ಕೆಸರೆರಚಾಟಕ್ಕೆ, ಆರೋಪ ಪ್ರತ್ಯಾರೋಪಕ್ಕೆ ಮುಂದಾಗಿರುವುದು ದುರದೃಷ್ಟಕರ. ಸದ್ಯದ ತುರ್ತು ಪರಿಸ್ಥಿತಿಯ ನಿರ್ವಹಣೆಯ ಕಡೆ ಗಮನ ಹರಿಸಬೇಕಾದ ಸಂದರ್ಭದಲ್ಲಿ ಅದೇ ಹಳಸಲು ಪ್ರಯೋಗಾಲಯದ ಕಥೆಗಳಿಗೆ ಜೀವಕೊಡುವುದರಲ್ಲಿ ಯಾವುದೇ ಸದುದ್ಧೇಶ ಕಂಡುಬರುವುದಿಲ್ಲ ಎಂದು ಎಂಬಸಿಯ ಅಧಿಕೃತ ವೆಬ್ ಸೈಟ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
2021 ರ ಆರಂಭದ ವೇಳೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ನೇತೃತ್ವದ ಕೊರೊನಾ ವೈರಸ್ ಮೂಲದ ಕುರಿತು ಸತ್ಯ ಶೋಧನಾ ಸಮಿತಿಯೊಂದು ಚೀನಾದಲ್ಲಿ ಅಗತ್ಯ ಮಾಹಿತಿಗಳನ್ನು ಕಲೆಹಾಕಲು ಮುಂದಾಯಿತು. WHO ನೇತೃತ್ವದ ಸಮಿತಿಯ ತನಿಖೆಗೆ ತನ್ನ ನೆಲದಲ್ಲಿ ಅವಕಾಶ ನೀಡಲು ಚೀನಾ ನಿರಾಕರಿಸಿತ್ತಲೇ ಬಂದಿದೆ. ಜಗತ್ತಿನ ಇತರ ವಿಜ್ಞಾನಿಗಳು, ವೈದ್ಯರು ಮತ್ತು ಸಂಶೋಧಕರನ್ನು ಕೊರೊನಾ ವೈರಸ್ ಕುರಿತಾದ ಸಂಶೋಧಕರಿಗೆ ಚೀನಾ ಗಡಿಯೊಳಗೆ ಪ್ರವೇಶಿಸದಂತೆ ತಡೆಯುತ್ತಲೇ ಬಂದಿದೆ. ಚೀನಾದ ಈ ಪ್ರತಿರೋಧ ಮತ್ತು ವೈರಸ್ ಮೂಲದ ಕುರಿತು ಗೌಪ್ಯತೆಯನ್ನು ಕಾಯ್ದುಕೊಳ್ಳುವ ತಂತ್ರದ ಫಲವಾಗಿ ವೈರಸ್‌ನ ಮೂಲ ಪತ್ತೆ ಮಾಡುವ ಜಗತ್ತಿನ ಮಹತ್ವದ ಸಂಶೋಧನೆಗೆ ಹಿನ್ನಡೆಯಾಗಿದೆ.
ಜೋ ಬೈಡನ್ ಮಾಧ್ಯಮಗೋಷ್ಢಿಯನ್ನುದ್ಧೇಶಿಸಿ ಕೊರೊನಾ ಸಾಂಕ್ರಾಮಿಕವು ಹರಡುವ ಆರಂಭದ ದಿನಗಳಲ್ಲಿ ಸಂಶೋಧಕರು ಮತ್ತು ತನಿಖಾ ಸಂಸ್ಥೆಗಳು ಕಾರ್ಯಗತರಾಗದೇ ಇದ್ದುದರಿಂದ ಇಂದು ನಮ್ಮ ಬಳಿ
ವೈರಸ್‌ನ ಮೂಲವನ್ನು ಕರಾರುವಾಕ್ಕಾಗಿ ನಿರ್ಣಾಯಿಸುವ ಸಾಕ್ಷ್ಯಾಧಾರಗಳು ಇಲ್ಲ. ಇರುವ ಸಾಕ್ಷ್ಯಾಧಾರಗಳ ವಿಶ್ಲೇಷಣೆ ಮತ್ತು ಹೆಚ್ಚಿನ ಅಧ್ಯಯನಗಳ ಮೂಲಕ ಒಂದು ನಿರ್ಣಯಕ್ಕೆ ಬರುವ ಹಂತದಲ್ಲಿದ್ದೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ನ ವುಹಾನ್ ಲ್ಯಾಬ್ ವರದಿ ಮತ್ತು ಅಧ್ಯಕ್ಷ ಬೈಡನ್ ಸುದ್ದಿಗೋಷ್ಠಿಯ ಬೆನ್ನಲ್ಲೇ ಜಾಗತಿಕ ಸಾಮಾಜಿಕ ಜಾಲತಾಣ ಸಂಸ್ಥೆ ಕೊರೊನಾ ವೈರಸ್ ಮನುಷ್ಯ ನಿರ್ಮಿತ ಎಂದು ಹೇಳುವ ಯಾವ ಪೋಸ್ಟ್ ಗಳನ್ನು ಇನ್ನುಮುಂದೆ ನಿಷೇಧಿಸುವುದಿಲ್ಲ. ಕೊರೊನಾ ವೈರಸ್ ಮುನಷ್ಯ ನಿರ್ಮಿತವೆಂಬ ವಾದಕ್ಕೆ ಇದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಫೇಸ್‌ಬುಕ್ ಸಂಸ್ಥೆ ಹೇಳಿದೆ. ಇತ್ತೀಚಿನ ಬೆಳವಣಿಗಳು, ತನಿಖೆಗಳು ಮತ್ತು ವಿಜ್ಞಾನಿಗಳ-ತಜ್ಞರ ಜೊತೆಗಿನ ಸಮಾಲೋಚನೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಫೇಸ್‌ಬುಕ್ ಪ್ರಕಟಿಸಿದೆ.
ಜಗತ್ತಿನಾದ್ಯಂತ ಹಾಹಾಕರವೆಬ್ಬಿಸಿರುವ ಕೊರೊನಾ ಸಾಂಕ್ರಾಮಿಕ ಪ್ರಕೃತಿಕವೋ ಅಥವಾ ಮಾನವ ನಿರ್ಮಿತವೋ ತಿಳಿಯದು. ಒಂದು ವೇಳೆ ವೈರಸ್ ಮನುಷ್ಯ ನಿರ್ಮಿತವಾಗಿದ್ದರೆ ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಾವು ನೋವುಗಳ ಸಾವಿಗೆ ಕಾರಣವಾದ ಮೂಲವನ್ನು , ಶಕ್ತಿಗಳನ್ನು ಮನುಕುಲ ಕ್ಷಮಿಸುವುದಿಲ್ಲ. ವೈರಸ್ ಪ್ರಾಕೃತಿ ಜನ್ಯವಾಗಿದ್ದರೆ ಅದರ ಹೊಣೆಗಾರಿಕೆಯನ್ನು ಯಾವುದೇ ಒಂದು ದೇಶದ ಮೇಲೆ ಹೊರಿಸುವುದು ಅಪರಾಧ. ಅಮೆರಿಕಾ ನಡೆಸುತ್ತಿರುವ ತನಿಖೆ ಎಷ್ಟು ಪಾರದರ್ಶಕ ಮತ್ತು ವೈಜ್ಞಾನಿಕವಾಗಿರಲಿದೆ ಎಂಬುದು ಕೆಲವು ದಿನಗಳಲ್ಲಿ ಜಗತ್ತಿಗೆ ತಿಳಿಯುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ವಿಜ್ಞಾನಿಗಳ ಸಮೂಹ ಅಮೆರಿಕಾದ ತನಿಖಾ ವರದಿಯನ್ನು ಒಪ್ಪಿ ಅನುಮೋದಿಸಿದಲ್ಲಿ ಮಾತ್ರ ಅಮೆರಿಕಾ ಬಲವಾಗಿ ಪ್ರಚಾರಪಡಿಸುತ್ತಿರುವ ‘ವುಹಾನ್ ಲ್ಯಾಬ್’ ಸಿದ್ಧಾಂತವನ್ನು ಒಪ್ಪಬಹುದು. 2019ರ ಡಿಸೆಂಬರ್ ವೇಳೆಗೆ ಆರಂಭವಾದ ಕೊರೊನಾ ಸಾಂಕ್ರಾಮಿಕದ ಪಿಡುಗು ಇಂದು ಎರಡನೇ ಅಲೆಯಾಗಿ ಜಗತ್ತಿನಾದ್ಯಂತ ದುರಂತವನ್ನು ಸೃಷ್ಟಿಸುತ್ತಿರುವ ವೇಳೆ ವೈರಸ್‌ನ ಮೂಲದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಜಾಗತಿಕ ಶಕ್ತಿಗಳು ವೈರಸ್ ನಿಯಂತ್ರಣಕ್ಕೆ ಒತ್ತು ನೀಡುತ್ತಾರೆ ವೈರಸ್ ಮೂಲ ಪತ್ತೆ ಹಚ್ಚಲು ಮುಂದಾಗುತ್ತಾರೋ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಬಹುದು.
ಮೂಲ : ದಿ ಗಾರ್ಡಿಯನ್
ಅನುವಾದ : ರಾಜೇಶ್ ಹೆಬ್ಬಾರ್
ಇದನ್ನೂ ಓದಿ: ಕೇಂದ್ರ ಜನರಿಗಿಂತ ಸಾಮಾಜಿಕ ಜಾಲತಾಣಗಳನ್ನು ಆದ್ಯತೆಯಾಗಿ ಪರಿಗಣಿಸಿದೆ: ರಾಹುಲ್ ಗಾಂಧಿ


