Homeಕರೋನಾ ತಲ್ಲಣಉತ್ತರ ಪ್ರದೇಶದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ನಿಜವಾದ ಪ್ರಮಾಣವೆಷ್ಟು? ಭಾರತವನ್ನೇ ಬೆಚ್ಚಿ ಬೀಳಿಸುವಂತಿದೆ ಈ ವರದಿ

ಉತ್ತರ ಪ್ರದೇಶದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ನಿಜವಾದ ಪ್ರಮಾಣವೆಷ್ಟು? ಭಾರತವನ್ನೇ ಬೆಚ್ಚಿ ಬೀಳಿಸುವಂತಿದೆ ಈ ವರದಿ

ಕೋವಿಡ್‌ನಿಂದ ಮೃತ ಪಟ್ಟ ಶಿಕ್ಷಕರನ್ನು ಸರ್ಕಾರದ ಕೊರೊನಾ ಸಾವಿನ ಪಟ್ಟಿಗೆ ಸೇರಿಸಲು‌ ಹರಸಾಹಸ ಪಡುತ್ತಿದೆ ಉತ್ತರ ಪ್ರದೇಶ ಶಿಕ್ಷಕರ ಸಂಘ.

- Advertisement -
- Advertisement -

ದೇಶದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮೂರು ಲಕ್ಷವನ್ನೂ ದಾಟಿದೆ. ಈ ಪ್ರಮಾಣದ ಸಾವು ನೋವನ್ನು ದೇಶ ಇತ್ತೀಚಿನ ಶತಮಾನಗಳಲ್ಲಿ ಎಂದೂ ಕಂಡಿರಲಿಲ್ಲ‌ ಮತ್ತು ಕೇಳಿರಲಿಲ್ಲ. ಹಾಗಾದರೆ ಸರ್ಕಾರ ನಿಜವಾದ ಅಂಕಿ ಅಂಶಗಳನ್ನು ನೀಡುತ್ತಿದೆಯೇ.. ? ವಾಸ್ತವದಲ್ಲಿ ಕೋವಿಡ್‌ನಿಂದ ಮೃತಪಡುತ್ತಿರುವವರ ಪ್ರಮಾಣ ಇನ್ನೂ ಹೆಚ್ಚಿದೆಯೆ‌..? ಸರ್ಕಾರಿ ಅಂಶಗಳು ಮತ್ತು ವಾಸ್ತವದ ವರದಿಗಳನ್ನು ತಾಳೆ ಹಾಕಿದಾಗ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತದೆ.

ಸರ್ಕಾರದ ಅಂಕಿ ಅಂಶದ ವಿಶ್ವಾಸಾರ್ಹತೆಯ ಕುರಿತಾಗಿಯೂ ಸಂಶಯಗಳು ಮೂಡಿವೆ. ಸತ್ಯಾಸತ್ಯತೆಗಳನ್ನು ಕೊರೊನಾ ಸಾಂಕ್ರಾಮಿಕದಿಂದ ದೇಶ ಎದುರಿಸುತ್ತಿರುವ ಭೀಕರತೆಯನ್ನು ಮತ್ತು ಸರ್ಕಾರದ ಅಂಕಿ ಅಂಶಗಳ ಆಟವನ್ನು ಉತ್ತರ ಪ್ರದೇಶದ ಎರಡು ನಗರಗಳು ನಮ್ಮ ಮುಂದೆ ತೆರೆದಿಡುತ್ತಿವೆ. ಕ್ವಿಂಟ್ ಕೊರೊನಾ ಸಾವಿನ ಸಂಖ್ಯೆಯನ್ನು ನೈಜ ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿರು ಕುರಿತು ವಿಸ್ತ್ರತ ವರದಿ ಮಾಡಿದೆ.

ಕಾನ್ಪುರ ನಗರ

ಉತ್ತರ ಪ್ರದೇಶದ ಕಾನ್ಪುರ ನಗರ ಪಾಲಿಕೆಯ ಪ್ರಕಾರ ನಗರದಲ್ಲಿ  2019 ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ‌ ಒಟ್ಟು 3,026 ಜನರು ಮೃತಪಟ್ಟಿದ್ದಾರೆಂದು ಅಲ್ಲಿನ ಇಲಾಖೆ ಮರಣ ಪ್ರಮಾಣ ಪತ್ರವನ್ನು ನೀಡಿದೆ. ಅದೇ 2020 ಏಪ್ರಿಲ್-ಮೇ ಅವಧಿಯಲ್ಲಿ 1,901 ಜನರು ಮೃತಪಟ್ಟಿದ್ದಾರೆಂದು ನಗರ ಪಾಲಿಕೆಯು ಪ್ರಮಾಣ ಪತ್ರ ನೀಡಿದ್ದರೆ 2021 ಏಪ್ರಿಲ್ 1 ರಿಂದ ಮೇ 17 ರ ಅವಧಿಯಲ್ಲಿ 3,551 ಜನರು ಮೃತ ಪಟ್ಟಿದ್ದಾರೆಂದು ಅವರಿಗೆ ಮರಣ ಪ್ರಮಾಣ ಪತ್ರ ನೀಡಲಾಗಿದೆ.

ಮೂರು ವರ್ಷಗಳ ಈ ಸರ್ಕಾರಿ ಅಂಕಿ-ಸಂಖ್ಯೆಗಳನ್ನು ತಾಳೆ ಹಾಕಿದಾಗ ಹಲವಾರು ಪ್ರಶ್ನೆಗಳು ಏಳುತ್ತವೆ. 2019 ಯಾವುದೇ ಕೋವಿಡ್ ಸಾಂಕ್ರಾಮಿಕವಲ್ಲದ ವರ್ಷ. ಆದರೆ 2019 ಕ್ಕಿಂತ 2020 ಏಪ್ರಿಲ್-ಮೇ ಅವಧಿಯಲ್ಲಿ  1,125 ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಅಂದರೆ ಮರಣ ಹೊಂದಿರುವವರ ಪ್ರಮಾಣದಲ್ಲಿ ಶೇ. 37 ರಷ್ಟು ಕಡಿಮೆಯಾಗಿದೆ.  2020 ದೇಶಕ್ಕೆ ಕೊರೋನಾ ಸಾಂಕ್ರಾಮಿಕ ರೋಗ ಕಾಲಿಟ್ಟ ವರ್ಷ. 2019 ಕ್ಕಿಂತ 2020 ರಲ್ಲಿ ಕಡಿಮೆ ಸಾವು ಸಂಭವಿಸಿರುವುದು ಆಶ್ಚರ್ಯವನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ: ತೇಜಸ್ವಿ ಸೂರ್ಯರಿಗೆ ಒಂದು ಪತ್ರ

2021 ಏಪ್ರಿಲ್ 1 ರಿಂದ ಮೇ 17 ರ ವರೆಗೆ ನಗರದಲ್ಲಿ ಸಂಭವಿಸಿದ ಸಾವಿನ ಕುರಿತು ಕಾನ್ಪುರ ನಗರಪಾಲಿಕೆ  ಅಂಕೆಗಳನ್ನು ಗಮನಿಸಿದರೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ. 2021 ರ ಏಪ್ರಿಲ್ 1 ರಿಂದ ಮೇ 17 ರ ವರೆಗೆ  ನಗರ ಪಾಲಿಕೆ 3,551 ಮರಣ ಪ್ರಮಾಣ ಪತ್ರವನ್ನು ನೀಡಿದೆ. 2019 ರ ಇದೇ ಅವಧಿಯಲ್ಲಿ ಪಾಲಿಕೆ ನೀಡಿದ ಮರಣ ಪ್ರಮಾಣಪತ್ರದ ಸಂಖ್ಯೆ ಅಂದಾಜು ಸರಿ ಸುಮಾರು 2,349.  2019 ಕ್ಕಿಂತ 2021 ರ ಅವಧಿಯಲ್ಲಿ 1,202 ಅಧಿಕ ಮರಣ ಪ್ರಮಾಣ ಪತ್ರಗಳನ್ನು ಇಲಾಖೆ ನೀಡಿದೆ.

ಕೋವಿಡ್ ಎರಡನೇ ಅಲೆಯ ಕಾರಣದಿಂದ ಈ ಅಧಿಕ ಸಾವು ಸಂಭವಿಸಿದೆ ಎಂದು ಯಾರಾದರೂ ಊಹಿಸಬಹುದು. ಉತ್ತರ ಪ್ರದೇಶ ಸರ್ಕಾರ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ತನ್ನ ಅಂಕಿ ಅಂಶಗಳನ್ನು ನೀಡುತ್ತದೆ. ಯುಪಿ ಸರ್ಕಾರ ಕಾನ್ಪುರ ನಗರದಲ್ಲಿ ಏಪ್ರಿಲ್ 1 ರಿಂದ ಮೇ 17 ರ ವರೆಗೆ ಕೋವಿಡ್ ಕಾರಣಗಳಿಂದ 783 ಜನರು ಮೃತಪಟ್ಟಿದ್ದಾರೆಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಹಾಗಾದರೆ ಉಳಿದ 413 (1202- 783) ಸಾವುಗಳು ಹೇಗೆ ಸಂಭವಿಸಿತು ಎನ್ನುವುದು ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ. ಸರ್ಕಾರ ನೀಡುವ ಕೋವಿಡ್ ಮೃತರ ಸಂಖ್ಯೆಗಿಂತಲು ಅಧಿಕ ಜನರು ಸೋಂಕಿನಿಂದ ಮೃತಪಡುತ್ತಿದ್ದಾರೆ. ಇಲ್ಲವಾದಲ್ಲಿ ಸಾವಿನ ಸಂಖ್ಯೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯತ್ಯಾಸ ಸಾಧ್ಯವಿಲ್ಲ. ನೂರಾರು ಸಂಖ್ಯೆಯ ಕೋವಿಡ್ ಸಾವಿನ ಪ್ರಮಾಣಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳದಿರುವುದು ಈ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ.

ವಾರಣಾಸಿ

ವಾರಣಾಸಿ ನಗರ ಪಾಲಿಕೆಯು ಏಪ್ರಿಲ್ 2021 ರಲ್ಲಿ 887 ಮರಣ ಪ್ರಮಾಣವನ್ನು ಜಾರಿಗೊಳಿಸಿದ್ದು 2021, ಮೇ 1 ರಿಂದ ಮೇ 16 ರ ವರೆಗೆ ಸುಮಾರು 1,265 ಮರಣ ಪ್ರಮಾಣ ಪತ್ರವನ್ನು ಜಾರಿಗೊಳಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿರುವ ಕೋವಿಡ್ ಮೃತರ ಸಂಖ್ಯೆ 2021, ಏಪ್ರಿಲ್‌ನಲ್ಲಿ 176 ಮತ್ತು ಮೇ 1 ರಿಂದ ಮೇ 20 ರ ಅವಧಿಯಲ್ಲಿ 145.  ನಗರ ಪಾಲಿಕೆ ಜಾರಿ ಮಾಡಿರುವ ಮರಣ ಪ್ರಮಾಣ ಪತ್ರಗಳ ಸಂಖ್ಯೆಯಲ್ಲಿ ಈ ವರ್ಷ ಏಪ್ರಿಲ್‌ಗಿಂತ ಮೇ ಗೆ  176 % ದಷ್ಟು ಹೆಚ್ಚಳವಾಗಿದೆ. ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಮಾತ್ರ ಏಪ್ರಿಲ್ ನಿಂದ ಮೇ ಗೆ ಹೆಚ್ಚಳವಾಗಿರುವುದು ಕೇವಲ 27.7 % ದಷ್ಟು ಮಾತ್ರ.

ಇದನ್ನೂ ಓದಿ: ಕೇಂದ್ರ ಜನರಿಗಿಂತ ಸಾಮಾಜಿಕ ಜಾಲತಾಣಗಳನ್ನು ಆದ್ಯತೆಯಾಗಿ ಪರಿಗಣಿಸಿದೆ: ರಾಹುಲ್ ಗಾಂಧಿ

ಸ್ಮಶಾಣ ಮತ್ತು ಚಿತಾರಗಳ ಭೀಕರ ಪರಿಸ್ಥಿತಿ ಮತ್ತು ಸರ್ಕಾರದ ಕೋವಿಡ್ ಅಂಕಿ‌-ಸಂಖ್ಯೆಗಳು

ಕಾನ್ಪುರ ಅವತರಣಿಕೆಯ ದೈನಿಕ್ ಜಾಗರಣ ಪತ್ರಿಕೆಯು ಚಿತಾಗಾರ ಮತ್ತು ಸ್ಮಶಾಣಗಳ ಕುರಿತು ಇನ್ನಷ್ಟು ಭೀಕರವಾದ ಅಂಕಿ ಸಂಖ್ಯೆಗಳನ್ನು ತೆರೆದಿಟ್ಟಿದೆ.  ಏಪ್ರಿಲ್ 30 ರ ದೈನಿಕ್ ಜಾಗರಣ್ ಪತ್ರಿಕೆಯ ವರದಿ ಪ್ರಕಾರ   ಏಪ್ರಿಲ್ 17 ರಿಂದ  ಏಪ್ರಿಲ್ 29 ರ ವರೆಗಿನ ಎರಡು ವಾರದ ಅವಧಿಯಲ್ಲಿ  ಕಾನ್ಪುರದ ಚಿತಾಗಾರಗಳಲ್ಲಿ ಸರಿ ಸುಮಾರು 1,044 ಮೃತ ದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ.  ಕಾನ್ಪುರದ ನಗರ ಪಾಲಿಕೆಯ ವಿದ್ಯುತ್ ಚಿತಾಗಾರದ ಅಂಕಿ ಸಂಖ್ಯೆಗಳೂ ಇದೆ ಆಗಿವೆ. ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಮಾತ್ರ  ಏಪ್ರಿಲ್ 17 ರಿಂದ ಏಪ್ರಿಲ್ 29 ರ ಅವಧಿಯಲ್ಲಿ 196 ಜನರು ಮಾತ್ರ ಕಾನ್ಪುರದಲ್ಲಿ ಕೋವಿಡ್ ಕಾರಣಗಳಿಂದ ಮೃತಪಟ್ಟಿದ್ದಾರೆಂದು ಹೇಳುತ್ತದೆ.

ಹಾಗಾದರೆ ಸರ್ಕಾರದ ಕೋವಿಡ್ ಸಾವಿನ ಸಂಖ್ಯೆಗಿಂತ 5 ಪಟ್ಟು ಹೆಚ್ಚು ಸಾವುಗಳು ಸಂಭವಿಸಿದ್ದು ಎಲ್ಲಿಂದ..? ಕಾನ್ಪುರದ  ಚಿತಾಗಾರಗಳಲ್ಲಿ ಏ.17 ರಿಂದ ಮೇ 29 ರ ವರೆಗೆ  ಭಾರಿ ಪ್ರಮಾಣದಲ್ಲಿ ದಹಿಸಲಾದ ಮೃತ ದೇಹಗಳೆಲ್ಲ ಸ್ವಾಭಾವಿಕ ಅಥವಾ ಕೋವಿಡೇತರ ಕಾರಣಗಳ ಸಾವಿನಿಂದ ಮಾತ್ರ  ಸಂಭವಿಸಿದವೇ..?

ಕಾನ್ಪುರದ 2 ವಿದ್ಯುತ್ ಚಿತಾಗಾರಗಳ ಮುಂದೆ ಹಗಲು ರಾತ್ರಿ ಉದ್ದದ ಸರತಿ ಸಾಲುಗಳು ಕಂಡು ಬರುತ್ತಿವೆ. ವಿದ್ಯುತ್ ಚಿತಾಗಾರಗಳಲ್ಲಿ ಮೃತ ದೇಹಗಳನ್ನು ಸುಡಲಿಕ್ಕೆ ಏಪ್ರಿಲ್ 17 ರ ನಂತರ ಹೆಚ್ಚುವರಿಯಾಗಿ ಕಟ್ಟಿಗೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶ ಸರ್ಕಾರ ಹೇಳುತ್ತಿರುವ ಸಂಖ್ಯೆಗಳೇ ಸತ್ಯವಾದರೆ ಚಿತಾಗಾರಗಳು ಹೇಳುತ್ತಿರುವ ಕತೆ ಯಾವುದಕ್ಕೆ  ಸಂಬಂಧಿಸಿದ್ದು..?

ಉತ್ತರ ಪ್ರದೇಶದ ಹಿಂದಿ ಭಾಷಿಕ ಪತ್ರಿಕೆ ಅಮರ್ ಉಜಾಲಾ ತನ್ನ ಕಾನ್ಪುರ ಅವತರಣಿಕೆಯಲ್ಲಿ ಇನ್ನೊಂದಿಷ್ಟು ಘಟನೆಗಳನ್ನು ತೆರೆದಿಡುತ್ತದೆ.

ಒಂದೇ ದಿನ ಕಾನ್ಪುರದ ಚಿತಾಗಾರದಲ್ಲಿ 476 ಮೃತದೇಹಗಳನ್ನು ದಹಿಸಲಾಗಿದೆ. ಸತತ ಐದು ದಿನಗಳ ಕಾಲ ಚಿತಾಗಾರಗಳು ಹೊಸ ಮೃತದೇಹಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಸೂರ್ಯ ಮುಳುಗಿದ ಮೇಲೂ ಮೃತದೇಹಗಳ ಅಂತ್ಯಕ್ರಿಯೆ ನಡೆಯುತ್ತಲಿತ್ತು. ಅದಾದ ಮೇಲೆ ಟೋಕನ್ ವ್ಯವಸ್ಥೆಯಲ್ಲಿ ಮೃತದೇಹಗಳ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಲಾಯಿತು. ವಿದ್ಯುತ್ ಚಿತಾಗಾರಗಳು ಖಾಲಿ ಇರದ ಪರಿಣಾಮ ಕಟ್ಟಿಗೆಯನ್ನು ಬಳಸಿಕೊಂಡು ಮೃತದೇಹಗಳನ್ನು ನಡೆಸುವ ಕ್ರಿಯೆ ಚಿತಾಗಾರಗಳಲ್ಲಿ ನಡೆಯುತ್ತಿತ್ತು. ಸತತ ಐದು ದಿನಗಳ ನಂತರವೂ ಚಿತಾಗಾರಕ್ಕೆ ಹೊಸದಾಗಿ ಬರುತ್ತಿರುವ ಮೃತ ದೇಹಗಳ ಸಂಖ್ಯೆ ಇಳಿಮುಖವಾಗದ ಕಾರಣ ಸ್ಮಶಾಣಗಳು ಭರ್ತಿಯಾದವು. ಆಗ  ನದಿ ತಟದ ಮರಳು ದಂಡೆಯಲ್ಲಿ ಮತ್ತು ನದಿ ತಟದ ಉದ್ಯಾನದಲ್ಲಿ ಮೃತ ದೇಹಗಳ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಲಾಯಿತು ಎಂದು ಅಮರ್ ಉಜಾಲಾ ವರದಿ ಮಾಡಿದೆ.

ಉತ್ತರ ಪ್ರದೇಶ ಆರೋಗ್ಯ ಇಲಾಖೆ ಮಾಹಿತಿ ನೀಡುವ ಪ್ರಕಾರ ಆ ಒಂದು ನಿರ್ದಿಷ್ಟ ದಿನ ಕಾನ್ಪುರ ನಗರದಲ್ಲಿ ಕೋವಿಡ್‌ನಿಂದ ಮೃತ ಪಟ್ಟವರ ಸಂಖ್ಯೆ ಕೇವಲ ಮೂರು. ಪ್ರತಿ ನಿತ್ಯ 90-100 ರಷ್ಟು ಮೃತ ದೇಹಗಳನ್ನು ಚಿತಾಗಾರಗಳಲ್ಲಿ ಸುಡುತ್ತಿದ್ದ ಸಾಮಾನ್ಯ ದಿನಗಳಲ್ಲಿ ಇದಕ್ಕಿಂತ ಹೆಚ್ಚು ಕೊರೊನಾ ಸಾವು ದಾಖಾಲಾಗುತ್ತಿರುವಾಗ 476 ಮೃತದೇಹಗಳ ಅಂತ್ಯಕ್ರಿಯೆ ನಡೆದ ದಿನ ಇಡೀ ನಗರದಲ್ಲಿ ಕೋವಿಡ್‌ಗೆ ಮೃತ ಪಟ್ಟವರ ಸಂಖ್ಯೆ ಕೇವಲ 3 ಎಂದು ಹೇಳುವ ಸರ್ಕಾರದ ಅಂಕಿ ಅಂಶವನ್ನು ನಂಬಬಹುದೇ.. ?

ಕೋವಿಡ್‌ನಿಂದ ಮೃತ ಪಟ್ಟ ಶಿಕ್ಷಕರನ್ನು ಸರ್ಕಾರದ ಕೋವಿಡ್ ಸಾವಿನ ಪಟ್ಟಿಗೆ ಸೇರಿಸಲು‌ ಹರಸಾಹಸ ಪಡುತ್ತಿರುವ ಉತ್ತರ ಪ್ರದೇಶ ಶಿಕ್ಷಕರ ಸಂಘ

ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ವೇಳೆಯಲ್ಲಿಯೂ ಉತ್ತರ ಪ್ರದೇಶ ಸರ್ಕಾರ ಮತ್ತು ಚುನಾವಣಾ ಆಯೋಗ ಪಂಚಾಯತ ಚುನಾವಣೆಗಳನ್ನು ನಡೆಸಲು‌ ಮುಂದಾಯಿತು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಘದ ಎಲ್ಲಾ ನಿಯಮಾವಳಿಗಳು ಯುಪಿ ಪಂಚಾಯತ ಚುನಾವಣೆ ವೇಳೆ ಉಲ್ಲಂಘನೆಯಾಗಿರುವ ಘಟನೆಗಳು ಎಲ್ಲೆಡೆ ವರದಿಯಾಗಿವೆ. ಪಂಚಾಯತ ಚುನಾವಣೆಯ ಪರಿಣಾಮ ಕರ್ತವ್ಯ ನಿರತ ಸಾವಿರಾರು ಶಿಕ್ಷಕರು ಮತ್ತು ಸರ್ಕಾರಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ನೂರಾರು ಶಿಕ್ಷಕರು ಚುನಾವಣಾ ಕರ್ತವ್ಯದದಿಂದ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಚುನಾವಣಾ ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿ ಮತ್ತು ಶಿಕ್ಷಕರ ಸಂಖ್ಯೆಯನ್ನು ಮರೆಮಾಚಿರುವುದು ಉತ್ತರ ಪ್ರದೇಶ ಶಿಕ್ಷಕರ ಸಂಘ ಸರ್ಕಾರಕ್ಕೆ ನೀಡಿರುವ ವರದಿಯಿಂದ ಬರಹಿರಂಗಗೊಂಡಿದೆ.

ಉತ್ತರ ಪ್ರದೇಶ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಏಪ್ರಿಲ್ 12 ರಂದು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಯುಪಿ ಪಂಚಾಯತ್ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಕೋವಿಡ್ ಸೋಂಕಿನಿಂದ ಸೂಕ್ತ ಸುರಕ್ಷತೆಯನ್ನು ಒದಗಿಸುವಂತೆ ಮನವಿ ಮಾಡಿತು. ಚುನಾವಣಾ ಆಯೋಗ ಶಿಕ್ಷಕರ ಮನವಿಗೆ ಸ್ಪಂದಿಸದಿದ್ದಾಗ ಏಪ್ರಿಲ್ 28 ರಂದು ಸಂಘವು ಚುನಾವಣೆ ಆಯೋಗಕ್ಕೆ ಇನ್ನೊಂದು ಮನವಿ ಪತ್ರವನ್ನು ನೀಡಿತು. 2021, ಏಪ್ರಿಲ್ 29 ರಂದು ಶಿಕ್ಷಕರು ಮತ್ತೊಮ್ಮೆ ಉತ್ತರ ಪ್ರದೇಶದ ಪಂಚಾಯತ ಚುನಾವಣೆಯನ್ನು ಮುಂದೂಡುವಂತೆ ಮುಖ್ಯಮಂತ್ರಿ ಮತ್ತು ಚುನಾವಣೆ ಆಯೋಗಕ್ಕೆ ಮನವಿ ನೀಡಿದರು. ಉತ್ತರಪ್ರದೇಶ ಸರ್ಕಾರ ಚುನಾವಣೆಗಳನ್ನು ನಡೆಸಿಯೇ ತೀರಿತು.

ಪಂಚಾಯತ ಚುನಾವಣೆಯ ಕರ್ತವ್ಯ ನಿರ್ವಹಣೆ ವೇಳೆಯಲ್ಲಿ ಸುಮಾರು 706 ಶಿಕ್ಷಕರು ಮೃತಪಟ್ಟಿದ್ದಾರೆಂದು ಶಿಕ್ಷಕರ ಸಂಘವು ಉತ್ತರ ಪ್ರದೇಶ ಸರ್ಕಾರಕ್ಕೆ ವರದಿ ನೀಡಿದೆ. ಮೃತ ಪಟ್ಟ ಶಿಕ್ಷಕರ ಹೆಸರು, ವಿಳಾಸ, ಕರ್ತವ್ಯ ನಿರ್ವಹಿಸುವ ಸ್ಥಳ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಸ್ಥಳ ಮತ್ತು ಕೋವಿಡ್ ಸಾವಿ‌ನ ಪ್ರಮಾಣ ಪತ್ರ ಸೇರಿದಂತೆ ಮೃತಪಟ್ಟವರ ವಿವರವಾದ ಮಾಹಿತಿಯನ್ನು ಉತ್ತರ ಪ್ರದೇಶ ಶಿಕ್ಷಕರ ಸಂಘ ತನ್ನ ವರದಿಯಲ್ಲಿ ಸರ್ಕಾರಕ್ಕೆ ನೀಡಿದೆ.

ಇದನ್ನೂ ಓದಿ: ‘ದೊರೆಸ್ವಾಮಿ ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ’- ಸಿದ್ದರಾಮಯ್ಯ ಅವರಿಂದ ಶ್ರದ್ದಾಂಜಲಿ ಬರಹ

ಕೋವಿಡ್ ಎರಡನೆಯ ಅಲೆಯು ಬಿಗಡಾಯಿಸಿದ ಸಂದರ್ಭದಲ್ಲೂ ಉತ್ತರ ಪ್ರದೇಶ ಸರ್ಕಾರ ಮತ ಎಣಿಕೆಯನ್ನು ಮುಂದೂಡಲಿಲ್ಲ. ಶಿಕ್ಷಕರ ಸಂಘ ಹೇಳುವ ಪ್ರಕಾರ ಚುನಾವಣೆ ಮತ್ತು ಮತ ಎಣಿಕೆಯ ಕರ್ತವ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರಲ್ಲಿ 1,621 ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ದಾಖಲೆಯ ಪ್ರಕಾರ ಪಂಚಾಯತ ಚುನಾವಣೆ ಮತ್ತು ಮತ ಎಣಿಕೆ ವೇಳೆ ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರ ಸಂಖ್ಯೆ ಕೇವಲ 3. ಸರ್ಕಾರಗಳು ಸಾಮಾನ್ಯ ಜನರಿಗೆ ಮಾತ್ರವಲ್ಲ ತನ್ನದೇ ಉದ್ಯೋಗಿಗಳು ಕೊರೊನಾದಿಂದ ಮೃತಪಟ್ಟಿರುವುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿರುವುದು ದುರಂತ.

ನಕಲಿ‌ ಮತ್ತು ತಪ್ಪು ಅಂಕಿ‌ ಅಂಶಗಳ ಮೂಲಕ

ಕೋವಿಡ್ ಸಾಂಕ್ರಾಮಿಕದ ನಿರ್ವಹಣೆಯ ವೈಫಲ್ಯವನ್ನು ಮುಚ್ಚಿಡುವ ಪ್ರಯತ್ನದಲ್ಲಿ ತೊಡಗಿರುವ ಉತ್ತರ ಪ್ರದೇಶ ಸರ್ಕಾರ

ಉತ್ತರ ಪ್ರದೇಶದ ಸರ್ಕಾರ ಪ್ರಕಟಿಸುತ್ತಿರುವ ಕೋವಿಡ್ ಸೋಂಕಿತರ ಮತ್ತು ಸೋಂಕಿನಿಂದ ಮೃತ ಪಡುತ್ತಿರುವ ಸಂಖ್ಯೆ ಅನುಮಾನಾಸ್ಪದವಾಗಿ ತೋರುತ್ತಿದೆ. ಸರ್ಕಾರ ಸೋಂಕಿತರ ಮತ್ತು ಸೋಂಕಿನಿಂದ ಉಂಟಾದ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸುವ ಮೂಲಕ ತನ್ನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವುದು ರಾಜ್ಯದಲ್ಲಿ ಪ್ರತಿ ನಿತ್ಯ ವರದಿಯಾಗುತ್ತಿರುವ ಭೀಕರ ಘಟನೆಗಳಿಂದ ಬಹಿರಂಗವಾಗುತ್ತಿದೆ. ನದಿ ದಡದಲ್ಲಿ  ಉರಿಯುತ್ತಿರುವ ನೂರಾರು ಶವಗಳು, ಚಿತಾಗಾರದ ಮುಂದಿನ ಕೊನೆಯಿರದ ಸರತಿ ಸಾಲು, ನದಿಗಳಲ್ಲಿ ಅನಾಥವಾಗಿ ತೇಲಿ ಬರುತ್ತಿರುವ ಮನುಷ್ಯರ ಮೃತ ದೇಹಗಳ ಚಿತ್ರಗಳು ಸರ್ಕಾರ ಪರಿಸ್ಥಿತಿ ತನ್ನ ನಿಯಂತ್ರಣದಲ್ಲಿ ಇದೆ ಎಂದು ಪ್ರಕಟಿಸುತ್ತಿರುವ ದಾಖಲೆಗಳು ಹಸಿ‌ಹಸಿ ಸುಳ್ಳು ಎಂದು ಸಾಕ್ಷಿ ಸಹಿತ ಸಾಬೀತುಪಡಿಸುತ್ತಿವೆ.

ಇದನ್ನೂ ಓದಿ: ಸೋಂಕು ಹೆಚ್ಚಾದಂತೆ ವ್ಯವಸ್ಥೆಯ ಅಮಾನವೀಯತೆಗೆ ಗುರಿಯಾಗುತ್ತಿರುವ ಬೆಂಗಳೂರಿನ ಸ್ಮಶಾನ ಕಾರ್ಮಿಕರು

ಕೋವಿಡ್‌ನಿಂದ ಅತಿಹೆಚ್ಚು ತೊಂದರೆಗೊಳಗಾದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. 2021, ಮೇ 20 ರ ಸರ್ಕಾರಿ ದಾಖಲೆಗಳ ಪ್ರಕಾರ ಉತ್ತರ ಪ್ರದೇಶಲ್ಲಿ ಇದುವರೆಗೆ 19,209 ಕೋವಿಡ್ ಸೋಂಕಿನಿಂದ ಮೃತ ಪಟ್ಟಿದ್ದಾರೆ. ತಮಿಳುನಾಡು, ಮಹರಾಷ್ಟ್ರ, ಕರ್ನಾಟಕ ಮತ್ತು ದೆಹಲಿಗಳಲ್ಲಿ ಉತ್ತರ ಪ್ರದೇಶಕ್ಕಿಂತ ಹೆಚ್ಚಿನ ಸಾವು ನೋವುಗಳು ಸಂಭವಿಸಿವೆ.

ಉತ್ತರ ಪ್ರದೇಶ ಮತ್ತು ಕೋವಿಡ್ ಸೋಂಕಿನ ಪ್ರಮಾಣ ಅಧಿಕವಿರುವ ಉಳಿದ ನಾಲ್ಕು ರಾಜ್ಯಗಳ ಜನ ಸಾಂದ್ರತೆ, ಲಭ್ಯವಿರುವ ವೈದ್ಯಕೀಯ ವ್ಯವಸ್ಥೆಗಳನ್ನು ಹೋಲಿಕೆ ಮಾಡಿದರೆ ಉತ್ತರ ಪ್ರದೇಶ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸರ್ಕಾರಿ ಅಂಕಿ ಸಂಖ್ಯೆಗಳಲ್ಲಿ ಮಾತ್ರ ಯೋಗಿ ಸರ್ಕಾರದ ಈ ಯಶಸ್ಸು ಕಾಣುತ್ತಿದ್ದು ವಾಸ್ತವದ ಸ್ಥಿತಿಗತಿ ಭಯಾನಕ ಮತ್ತು ಶೋಚನೀಯವಾಗಿರುವುದು ವಿಪರ್ಯಾಸ.

ಆಶ್ಚರ್ಯ ಎಂಬುವಂತೆ CERG ಅಧ್ಯಕ್ಷ ಓಂಕಾರ್ ಗೋಸ್ವಾಮಿಯವರು ಹೇಳುವ ಪ್ರಕಾರ ಕೊರೋನಾ ಎರಡನೆ ಅಲೆಯು ತುತ್ತ ತುದಿಯನ್ನು ತಲುಪಿದ ವೇಳೆ ಅಂದರೆ ಏಪ್ರಿಲ್ 26, 2021ರ ಹೊತ್ತಿಗೆ ಉತ್ತರ ಪ್ರದೇಶದಲ್ಲಿ‌ ಕೋವಿಡ್ ಪಾಸಿಟಿವಿಟಿ ಪ್ರಮಾಣ ಕೇವಲ 19.3%. ಉತ್ತರ ಪ್ರದೇಶದ ಕೋವಿಡ್ ಪಾಸಿಟಿವಿಟಿಯ ಪ್ರಮಾಣ ಮಹರಾಷ್ಟ್ರಕ್ಕಿಂತ 9.7, ಕರ್ನಾಟಕ್ಕಿಂತ 20.4% , ಕೇರಳಕ್ಕಿಂತ 10.4% ತಮಿಳುನಾಡಿಗಿಂತ 1.9% ಕಡಿಮೆ ಇದೆ. ಸಂಪೂರ್ಣ ಭಾರತದ ಕೋವಿಡ್ ಪಾಸಿವಿಟಿ ಪ್ರಮಾಣಕ್ಕಿಂತ ಉತ್ತರ ಪ್ರದೇಶದಲ್ಲಿ ಪಾಸಿವಿಟಿ ರೇಟ್ 6% ಕಡಿಮೆ ಇದೆ ಎಂದು ಅಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರ ಹೇಳಿಕೊಳ್ಳುತ್ತದೆ.

ಪ್ರಯಾಗ್ ರಾಜ್ ನಗರದ ಪಾಪಮ ಸೇತುವೆಯನ್ನೇರಿ ಒಮ್ಮೆ ಪವಿತ್ರ ಗಂಗಾನದಿಯ ತಟದತ್ತ ಕಣ್ಣು ಹಾಯಿಸಿದರೆ ಯೋಗಿ ಸರ್ಕಾರದ ಹೇಳುವ  ಉತ್ತರ ಪ್ರದೇಶಕ್ಕೂ ಭಿನ್ನವಾದ ಸ್ಥಳವೊಂದು ತೆರೆದು ಕೊಳ್ಳುತ್ತದೆ. ನಿತ್ಯ ಪ್ರಯಾಗ್ ರಾಜ್ ಸೇತುವೆಯ ಕೆಳಗೆ ಗಂಗೆಯಲ್ಲಿ ತೇಲಿ ಹೋಗುವ ನೂರಾರು ಮೃತದೇಹಗಳು ಮಾತ್ರ ನಿಜವಾದ ಅಂಕಿ ಅಂಶಗಳನ್ನು ಹೇಳಲು ಸಾಧ್ಯ.  ಗಂಗಾ ನದಿಯೇ ಇದ್ದಕ್ಕಿದ್ದಂತೆ ನೂರಾರು ಮೃತದೇಹಗಳನ್ನು ತನ್ನ ಒಡಲಿಂದ ಹೊರ ಹಾಕಿತೆ..? ಅಥವಾ ಸತ್ಯ ತಿಳಿಯಲಿಕ್ಕೆ ಆ ಮೃತ ದೇಹಗಳೇ ಎದ್ದು ಗಂಗಾ ನದಿಯನ್ನು ಕೇಳಬೇಕೆ ನಾವು ಹೇಗೆ ಸತ್ತವೆಂದು…?

ಉತ್ತರ ಪ್ರದೇಶವೊಂದರ ಲೆಕ್ಕಾಚಾರ ಮತ್ತು ಘಟನೆಗಳು ಇವು. ಉತ್ತರ ಪ್ರದೇಶ ಹೊರತಾಗಿ ಮಹರಾಷ್ಟ್ರ, ಕರ್ನಾಟಕ, ದೆಹಲಿಗಳಲ್ಲಿ ದಿಢೀರನೇ ಸೋಂಕಿನ ಪ್ರಮಾಣದಲ್ಲಿ ದೊಡ್ಡ ಪ್ರಮಾಣದ ಇಳಿಕೆಯಾಗುತ್ತಿರುವುದು  ಆತಂಕಕ್ಕೆ ಎಡೆ ಮಾಡಿಕೊಡುತ್ತದೆ. ನಕಲಿ ಅಂಕಿ ಸಂಖ್ಯೆಗಳನ್ನು ನೀಡುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸಬಹುದೆಂದು ಸರ್ಕಾರಗಳು ತಿಳಿದಿದ್ದರೆ ವೈಫಲ್ಯದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಅದೊಂದು ತಾತ್ಕಾಲಿಕ ಉಪಾಯವಾದೀತು ಅಷ್ಟೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎಲ್ಲವೂ ಸರಿ ಇದೆ ಎಂದು ಸರ್ಕಾರಗಳು ಹೇಳುವ  ಸುಳ್ಳುಗಳು ಜನರನ್ನು ಬೀದಿಗೆ ಬರುವಂತೆ ಮಾಡಿ ಮುಂದೆ ಇದಕ್ಕಿಂತಲೂ ದೊಡ್ಡ ಅಪಾಯಕ್ಕೆ ನಾಂದಿಯಾಗಬಹುದು.

ಮೂಲ : ಕ್ವಿಂಟ್


ಇದನ್ನೂ ಓದಿ: ಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ಉಳಿದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಗೆ ಒಂದು ವರ್ಷ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...