Homeಅಂತರಾಷ್ಟ್ರೀಯಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ಉಳಿದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಗೆ ಒಂದು ವರ್ಷ

ಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ಉಳಿದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಗೆ ಒಂದು ವರ್ಷ

- Advertisement -
- Advertisement -

ಅಮೆರಿಕಾದ ಇತಿಹಾಸದಲ್ಲೇ ಮೇ 25, 2020 ಅತ್ಯಂತ ಕರಾಳ ದಿನ. ಪೊಲೀಸ್‌ ವ್ಯವಸ್ಥೆಯ ವರ್ಣದ್ವೇಷಕ್ಕೆ ಅಮಾಯಕ ವ್ಯಕ್ತಿ ಜಾರ್ಜ್‌ ಫ್ಲಾಯ್ಡ್‌ ಮೃತಪಟ್ಟ ದುರಂತದ ದಿನ. ಆ ಘಟನೆಗೆ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ಅಮೆರಿಕಾ ಮತ್ತು ಜಗತ್ತಿನಲ್ಲಿ ಅನೇಕ ಘಟನೆಗಳು ನಡೆದಿವೆ.

ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ನಂತರ ಅಮೆರಿಕಾ ಸಾಕಷ್ಟು ಹೋರಾಟ, ನೋವು ಸಂಕಟಗಳಿಗೆ ಸಾಕ್ಷಿಯಾಗಿದೆ. ಈ ಒಂದು ವರ್ಷದ ಅವಧಿಯಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಜಗತ್ತಿನಾದ್ಯಂತ ಜನರ ಧ್ವನಿಗಳು ಮಾರ್ಧನಿಸಿವೆ. 2020, ಮೇ 26ರ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಈ ಶತಮಾನದ ಅತಿದೊಡ್ಡ ಜನಾಂಗೀಯ ದ್ವೇಷದ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ ನೀಡಿದೆ. ಬ್ಲಾಕ್‌ ಲೈವ್‌ ಮ್ಯಾಟರ್ಸ್‌ ಎಂಬ ಘೋಷಣೆಗಳು ಅಮೆರಿಕಾದ ಜನರನ್ನು ಬಡಿದೆಬ್ಬಿಸಿದೆ.

ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ಕರಾಳದಿನವನ್ನು ನೆನೆಯುತ್ತ ಜಗತ್ತಿನ ಅನೇಕ ಗಣ್ಯರು ತಮ್ಮ  ಸಂತಾಪಗಳನ್ನು ಹಂಚಿಕೊಂಡಿದ್ದಾರೆ.  ಜಾರ್ಜ್‌ ಹತ್ಯೆಯ ನಂತರವೂ ಅನೇಕ ಜನರು ಅಮೆರಿಕಾದಲ್ಲಿ ಪೊಲೀಸ್‌ ಎನ್‌ಕೌಂಟರ್‌ ಗೆ ಬಲಿಯಾಗಿದ್ದಾರೆ. ಆದರೆ ಜಾರ್ಜ್‌ ಹತ್ಯೆಯ ವಿರುದ್ಧ ಸಿಡಿದೆದ್ದ ಅಮೆರಿಕಾದ ಜನರ ಅಂತ:ಪ್ರಜ್ಞೆ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಜಾರ್ಜ್‌ ಫ್ಲಾಯ್ಡ್‌ ಮಾತ್ರ ಅಮೆರಿಕಾದ ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತಾನೆ ಎಂದು ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಟ್ವಿಟ್‌ ಮೂಲಕ ನೆನಪನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವರ್ಣಬೇಧ ನೀತಿಯ ಬಲಿಪಶು ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ 196 ಕೋಟಿ ರೂ. ಪರಿಹಾರ

ಮೇ 25, 2021 ಮಿನಿಪೊಲೀಸ್‌ ನಗರ 46 ವರ್ಷದ ಕಪ್ಪು ವರ್ಣೀಯ ವ್ಯಕ್ತಿಯ ಧಾರುಣ ಸಾವಿಗೆ ಸಾಕ್ಷಿಯಾಯಿತು. ಆ ಘಟನೆಯಲ್ಲಿ ಧಾರುಣವಾಗಿ ಮೃತಪಟ್ಟ ವ್ಯಕ್ತಿ ಬೇರೆಯಾರೂ ಅಲ್ಲ ಜಾರ್ಜ್‌ ಫ್ರಾಯ್ಡ್.  ಶ್ವೇತವರ್ಣಿಯ ಪೊಲೀಸ್‌ ಅಧಿಕಾರಿಯ ಮಂಡಿಯ ನಡುವೆ ಸಿಲುಕಿ ಫ್ಲಾಯ್ಡ್‌ ಉಸಿರು ನಿಂತಿತ್ತು. ಇದು ಜಗತ್ತಿನಲ್ಲಿ ನಿತ್ಯ ನಡೆಯುವ ಸಾವಿರಾರು ಪೊಲೀಸ್‌ ದೌರ್ಜನ್ಯದಂತೆ ದಾಖಲೆಯೇ ಇಲ್ಲದೆ ಹೋಗಿದ್ದರೆ ಇವತ್ತಿನ ಅಮೆರಿಕಾದ ಸ್ಥಿತಿ ಬೇರೆಯದೇ ಇರುತ್ತಿತ್ತು. ಆದರೆ ಪೊಲೀಸ್‌ ಅಧಿಕಾರಿಯ ಮಂಡಿಯ ನಡುವೆ ಸಿಲುಕಿ ಉಸಿರಾಡಲು ಒದ್ದಾಡುತ್ತಿದ್ದ ಫ್ಲಾಯ್ಡ್‌ ತನಗೆ ಅರಿವಿಲ್ಲದಂತೆ ಹೊಸ ಇತಿಹಾಸವೊಂದರ, ಹೋರಾಟವೊಂದರ ಆರಂಭಕ್ಕೆ ಕಾರಣವಾಗಿ ಹೋಗಿದ್ದ.

ಪೊಲೀಸರ ಮಂಡಿಯಲ್ಲಿ ಸಿಲುಕಿ ಐ ಕಾಂಟ್‌ ಬ್ರೀಥ್ ಎಂದು ಇಪ್ಪತ್ತಕ್ಕೂ ಹೆಚ್ಚು ಸಾರಿ ಫ್ಲಾಯ್ಡ್‌ ಕಿರುಚುತ್ತಿರುವ ದೃಶ್ಯದ ತುಣುಕು ಕೆಲವೇ ಗಂಟೆಗಳಲ್ಲಿ ಜಗತ್ತಿನ ಮೂಲ ಮೂಲೆಗೂ ತಲುಪಿತು. ಈ ದೃಶ್ಯ ನೋಡಿ ಬೆಚ್ಚಿಬಿದ್ದ ಅಮೆರಿಕ್ಕನ್ನರು ದೇಶದಲ್ಲಿ ಅಘೋಷಿತವಾಗಿ ನಡೆಯುತ್ತಿರುವ ವರ್ಣಬೇಧ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು. ಆಗ ಫ್ಲಾಯ್ಡ್‌ ಸಾವಿಗೆ ನ್ಯಾಯವೊದಗಿಸಲು ಆರಂಭವಾದ ಹೋರಾಟವೇ ಬ್ಲಾಕ್‌ ಲೈವ್‌ ಮ್ಯಾಟರ್ಸ್. ಅಮೆರಿಕಾದ ನ್ಯೂಯಾರ್ಕ್‌ ನಗರ ಈ ಹೋರಾಟಕ್ಕೆ ವೇದಿಕೆಯಾಯಿತು. ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಇಂತಹದೇ ಘಟನೆಗಳು ವರದಿಯಾದವು. ಶ್ವೇತವರ್ಣೀಯರಲ್ಲದ ಜನ ತಮ್ಮ ವಿರುದ್ಧ ನಡೆಯುತ್ತಿರುವ ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಅಮೆರಿಕಾದ ಬೀದಿ ಬೀದಿಗಳಲ್ಲಿ ಪ್ರತಿಭಟನೆಗೆ ತೊಡಗಿದರು.

ಜಸ್ಟಿಸ್‌ ಫಾರ್‌ ಫ್ಲಾಯ್ಡ್‌, ಬ್ಲಾಕ್‌ ಲೈವ್‌ ಮ್ಯಾಟರ್‌ ಫ್ಲೆಕಾರ್ಡುಗಳನ್ನು ಹಿಡಿದ ಸಾವಿರಾರು ವಿದ್ಯಾರ್ಥಿಗಳು ಹೋರಾಟಕ್ಕೆ ಅಣಿಯಾದರು. ಶ್ವೇತವರ್ಣಿಯರೂ ಸೇರಿದಂತೆ ಜಗತ್ತಿನ ಕ್ರೀಡಾಪಟುಗಳು, ಚಲನಚಿತ್ರ ತಾರೆಯರು, ರಾಜಕಾರಣಿಗಳು, ಉದ್ಯಮಿಗಳು ಹೋರಾಟಕ್ಕೆ ಬೆಂಬಲ ಸೂಚಿಸುತ್ತ ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ಪ್ರತ್ಯಕ್ಷವಾಗಿ ಪ್ರತಿಭಟನೆಯ ಭಾಗವಾದರು. ಅಮೆರಿಕಾಕ್ಕೆ ಅಮೆರಿಕಾ ಮುಂದಿನ ಎರಡು ತಿಂಗಳು ಸ್ಥಬ್ಧವಾಯಿತು. ಹೆಚ್ಚುತ್ತಿರುವ ಪ್ರತಿಭಟನೆಗಳನ್ನು ನಿಗ್ರಹಿಸಲು ಟ್ರಂಪ್‌ ನೇತ್ರತ್ವದ ಸರ್ಕಾರ ಬಲ ಪ್ರಯೋಗಕ್ಕೆ ಮುಂದಾಯಿತು. ಪೊಲೀಸ್‌ ಮತ್ತು ಸೈನ್ಯದ ಮೂಲಕ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌, ಅಶ್ರುವಾಯು, ಗುಂಡಿನ ದಾಳಿಗಳನ್ನು ನಡೆಸಿತು. ಸರ್ಕಾರ ಪ್ರತಿಭಟನೆಯನ್ನು ದಮನಿಸಲು ಮುಂದಾದಂತೆಲ್ಲ ಹೋರಾಟ ಉಗ್ರ ಸ್ವರೂಪವನ್ನು ಪಡೆಯಿತು. ಅಂತಿಮವಾಗಿ ನ್ಯೂಯಾರ್ಕ್‌, ಮುಂತಾದ ರಾಜ್ಯಗಳು ಜನರನ್ನು ಕ್ರೂರವಾಗಿ ನಡೆಸಿಕೊಳ್ಳುವ ಪೊಲೀಸ್‌ ಕಾಯ್ದೆಯ ತಿದ್ದುಪಡಿಗೆ ಅಲ್ಲಿನ ರಾಜ್ಯಗಳು ಮುಂದಾದವು. ಸಂಪೂರ್ಣ ಅಮೆರಿಕಾಕ್ಕೆ ಅನ್ವಯವಾಗುವ ಫೆಡರಲ್‌ ಕಾನೂನುಗಳಲ್ಲೂ ಬದಲಾವಣೆಗೆ ಸರ್ಕಾರ ಮುಂದಾಯಿತು.

ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್‌‌ನನ್ನು ಉಳಿಸಲುಲಾಗದೆ ಇದ್ದಿದ್ದಕ್ಕೆ ಹಲವಾರು ರಾತ್ರಿ ಕಣ್ಣೀಟ್ಟಿದ್ದೆ: ಘಟನೆಯ ವಿಡಿಯೋ ಚಿತ್ರಿಸಿದ ಪ್ರತ್ಯಕ್ಷದರ್ಶಿ ಯುವತಿ

ಶ್ವೇತವರ್ಣೀಯರಲ್ಲದವರು  ಅಮೆರಿಕಾದ ನಾಗರಿಕರಾಗುವ ಅರ್ಹತೆಯನ್ನು ಹೊಂದಿಲ್ಲ. ಶ್ವೇತ ವರ್ಣೀಯರಿಗೆ ಸಮನಾದ ಹಕ್ಕನ್ನು ಇತರ ವರ್ಣೀಯರಿಗೆ ಅದರಲ್ಲೂ ಕಪ್ಪು ವರ್ಣೀಯರಿಗೆ ನೀಡಿರುವುದು ಅಮೆರಿಕಾದ ದುರಂತವೆಂದು ಬಹಿರಂಗವಾಗಿ ಹೇಳುತ್ತಿದ್ದ ಅಂದಿನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ನಂತರದ ಘಟನೆಗಳು ಹೊಸ ಪಾಠವನ್ನು ಕಲಿಸಿವೆ. 2020 ನವೆಂಬರ್‌ ಅಂದರೆ ಈ ಘಟನೆಯ ಆರು ತಿಂಗಳ ನಂತರ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಹೀನಾಯವಾಗಿ ಸೋತರು. ಟ್ರಂಪ್‌ ಸೋಲಿಗೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ನಂತರದ ಘಟನೆಗಳೂ ಕಾರಣವಾಗಿದ್ದವು. ಪ್ರತಿಭಟನಾಕಾರರ ಮೇಲೆ ನಡೆಸಿದ ದೌರ್ಜನ್ಯವೂ ಕಾರಣವಾಗಿದ್ದವು. ಮುಖ್ಯವಾಗಿ ಬರಾಕ್‌ ಒಬಾಮಾ ನಂತರ ಅಮೆರಿಕದ ಅಧ್ಯಕ್ಷಗಿರಿಗೆ ಏರಿದ್ಧ ಟ್ರಂಪ್‌ ಸ್ವತ: ಜನಾಂಗೀಯ ದ್ವೇಷದ ಪ್ರತೀಕವಾಗಿದ್ದರು. ಟ್ರಂಪ್‌ ಆಢಳಿತದ ಅವಧಿಯಲ್ಲಿ ಅಮೆರಿಕಾ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಜನಾಂಗೀಯ ಹತ್ಯೆ, ದೌರ್ಜನ್ಯ, ಕಪ್ಪು ವರ್ಣೀಯರ ಹಕ್ಕನ್ನು ನಿರಾಕರಿಸುವ ಘಟನೆಗಳು ನಡೆದಿದ್ದವು. ಈ ಎಲ್ಲ ಹತ್ಯೆ ದೌರ್ಜನ್ಯದ ವಿರುದ್ಧದ ಅಮೆರಿಕ್ಕನರ ಸಿಟ್ಟು ಅಂತಿಮವಾಗಿ ಕಟ್ಟೆ ಒಡೆದಂತೆ ನಡೆದಿದ್ದು ಜಾರ್ಜ್‌ ಫ್ಲಾಯ್ಡ್‌ ಹತ್ಯೆ. ಇದೆಲ್ಲದ ಪರಿಣಾಮವಾಗಿ 2020 ಡಿಸೆಂಬರ್‌ ನಲ್ಲಿ ಅಮೆರಿಕಾ ನೆಲ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು. ಮೊತ್ತ ಮೊದಲ ಬಾರಿಗೆ ಶ್ವೇತವರ್ಣೀಯರಲ್ಲದ ಮಹಿಳೆ ಅಮೆರಿಕಾ ಉಪಾಧಯಕ್ಷೆಯಾಗಿ ಜನರಿಂದ ಆಯ್ಕೆಯಾಗಿದ್ದರು.

ಅಮೆರಿಕಾದಲ್ಲಿ ನಡೆದ ಈ ಐತಿಹಾಸಿಕ ಘಟನೆಗಳಲ್ಲಿ ಪೊಲೀಸ್‌ ದೌರ್ಜನ್ಯದಿಂದ ಮೃತನಾದ ಜಾರ್ಜ್‌ ಫ್ಲಾಯ್ಡ್‌ ಕೂಡ ಪಾಲುದಾರ. ತನಗರಿವಿಲ್ಲದಂತೆ ಎಲ್ಲ ಘಟನೆಗಳಿಗೆ ಕಾರಣವಾದ ಜಾರ್ಜ್‌ ಫ್ಲಾಯ್ಡ್‌ರನ್ನು ಜಗತ್ತು ಸ್ಮರಿಸುತ್ತಿದೆ.

ಅಮೆರಿಕಾ ಸ್ಟೇಟ್‌ ಸೆಕ್ರೆಟ್ರಿ ಅಂಟೋನಿ ಬ್ಲಿಂಕನ್‌,  ಫ್ರಾಯ್ಡ್‌ ನೆನೆಯುತ್ತ ಜಗತ್ತಿನೆಲ್ಲೆಡೆ ಮಾನವ ಹಕ್ಕುಗಳ ರಕ್ಷಣೆಗೆ ನಿಲ್ಲುವ ಅಮೆರಿಕಾ ತನ್ನ ನೆಲದಲ್ಲಿ ನಡೆಯುವ ತಾರತಮ್ಯಗಳನ್ನು ಒಪ್ಪಿಕೊಳ್ಳಬೇಕಿದೆ. ವಾಸ್ತವವನ್ನು ಒಪ್ಪಿಕೊಂಡು ಅಮೆರಿಕಾದ ಮೂಲ ಸಿದ್ಧಾಂತವಾದ ಸಮಾನತೆಯನ್ನು ತನ್ನೆಲ್ಲಾ ಪ್ರಜೆಗಳಿಗೆ ಶಾಶ್ವತಗೊಳಿಸಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ಫಾರ್ಮುಲಾ ಒನ್‌ ರೇಸ್‌ನ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಟ್ವೀಟ್ ಮಾಡಿ, ಆ ದಿನ ಫ್ರಾಯ್ಡ್‌ ಸಾಯಬಾರದಿತ್ತು. ತಂದೆಯನ್ನು ಕಳೆದುಕೊಂಡ ಮಗಳಿಗೆ ಯಾರು ಈಗ ನ್ಯಾಯ ಒದಗಿಸುತ್ತಾರೆ..? ಪತಿಯನ್ನು ಕಳೆದುಕೊಂಡ ಪತ್ನಿಗೆ ಯಾರು ನ್ಯಾಯ ಒದಗಿಸುತ್ತಾರೆ. ಕೇವಲ ತೊಗಲಿನ ಬಣ್ಣ ವ್ಯತ್ಯಾಸವಿರುವುದಕ್ಕೆ ಒಬ್ಬ ವ್ಯಕ್ತಿಯ ಜೀವವನ್ನು ತೆಗೆಯ ಬಹುದಾದರೆ ಎಲ್ಲಿದೆ  ಮಾನವೀಯತೆ ? ಫ್ಲಾಯ್ಡ್‌ ನೀನು ಸದಾ ಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ನಮ್ಮೊಡನೆ ನೆಲಸಿರುವೆ ಎಂದು  ಹ್ಯಾಮಿಲ್ಟನ್‌ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ  ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟ್ರರ್‌ ತುಂಬ ಜಗತ್ತಿನ ನಾನಾ ದೇಶದ ಜನರು ಜಾರ್ಜ್‌ ಫ್ಲಾಯ್ಡ್‌ ನೆನಪಿನಲ್ಲಿ ಕಂಬನಿ ಮಿಡಿದಿದ್ದಾರೆ. ಈ ಸಾವಿಗೆ ಕಾರಣವಾದ ಪೊಲೀಸ್‌ ಅಧಿಕಾರಿ ಡೆರೆಕ್‌ ಚುವಿನ್‌ಗೆ ಅಮೆರಿಕಾ ನ್ಯಾಯಾಲಯ ಏಪ್ರಿಲ್‌ 2021 ರಲ್ಲಿ ಶಿಕ್ಷೆ ವಿಧಿಸಿದೆ.

21 ನೇ ಶತಮಾನದ ಅಲ್ಟ್ರಾ ಮಾಡರ್ನ್‌, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ರೊಬೊಟಿಕ್‌ ತಂತ್ರಜ್ಞಾನ, ಜೀವ ಮರು ಸೃಷ್ಟಿಸುವ ಜೈವಿಕ ತಂತ್ರಜ್ಞಾನ, ಅಂತರಿಕ್ಷದ ಮಹಾ ಪ್ರಯಾಣದ ಮೈಲಿಗಲ್ಲು ಎಲ್ಲವನ್ನೂ ಸಾಧಿಸಿರುವ ವೇಳೆ ನಾಗರಿಕತೆಯ ಮೂಲಮಂತ್ರವನ್ನೇ ಮನುಕುಲ ಮರೆತಿರುವುದು ದುರದೃಷ್ಟಕರ. ಮಾನವೀಯತೆಯ ಸಾಕ್ಷಿ ಪ್ರಜ್ಞೆಯಾಗಿ ಜಾರ್ಜ್‌ ಫ್ಲಾಯ್ಡ್‌ ಸಾಕಷ್ಟುಕಾಲ ಜಗತ್ತಿನ ನೆನಪಿನಲ್ಲುಳಿಯಲಿ. ಸಾಂಕ್ರಾಮಿಕದ ಮಹಾ ವಿಪತ್ತಿನ ನಡುವೆ ಜಾರ್ಜ್‌ ಫ್ಲಾಯ್ಡ್‌ ಹೆಸರಿನೊಂದಿಗೆ ನಾಗರಿಕತೆಯ ಒಂದಷ್ಟು ಮೂಲ ಪಾಠಗಳನ್ನು ಮರಳಿ ಓದೋಣ.


ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಜನಾಂಗೀಯ ಹತ್ಯೆಯ ಅಪರಾಧಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ಗೆ ಶಿಕ್ಷೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...