Homeಮುಖಪುಟತೇಜಸ್ವಿ ಸೂರ್ಯರಿಗೆ ಒಂದು ಪತ್ರ

ತೇಜಸ್ವಿ ಸೂರ್ಯರಿಗೆ ಒಂದು ಪತ್ರ

- Advertisement -
- Advertisement -

ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಒದಗಿಸುವ ವಿಷಯದಲ್ಲಿ ದೊಡ್ಡ ಹಗರಣವೇ ಇದೆ. ಇದರ ಹಿಂದೆ ಮುಸ್ಲಿಮರ ಕೈವಾಡವಿದೆ ಎಂದು ಬಹಿರಂಗಗೊಳಿಸಿದ ಬೆಂಗಳೂರಿನ ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ 16 ಜನ ಮುಸ್ಲಿಂ ಗುತ್ತಿಗೆ ನೌಕರರ ಹೆಸರುಗಳನ್ನು ಓದುತ್ತಿದ್ದಂತೆ ಈ ನಾಡಿನ ಬಹುತೇಕ ಜನ ನಂಬಿದ್ದಲ್ಲದೆ ಕೂಡಲೇ ಈಶ್ವರಪ್ಪ ಪ್ರತಿಕ್ರಿಯಿಸಿ ಹಿಂದೂಗಳಿಗೆ ಸಮಸ್ಯೆ ನೀಡುವ ಈ ಸಂಚಿನಲ್ಲಿ ಯಾವುದೋ ಮುಸ್ಲಿಂ ಸಂಘಟನೆ ಕೈವಾಡವಿದೆ ಎಂದುಬಿಟ್ಟರು. ಇದಕ್ಕಿಂತ ಮುಖ್ಯವಾಗಿ ತೇಜಸ್ವಿಸೂರ್ಯ ಎಂಬುವವರು ಮುಸ್ಲಿಮರ ಹೆಸರು ಓದುತ್ತಿರುವಾಗ, ಅಲ್ಲಿದ್ದ ಒಬ್ಬ ಶಾಸಕ ಇದೇನು ಮದರಸ ನಡೆಸುತ್ತಿದ್ದೀರ? ಹಜ್ ಯಾತ್ರೆಯ ಲಿಸ್ಟಾ ಎಂದು ಉದ್ಗಾರ ತೆಗೆದರು. ಈ ಉದ್ಗಾರ ಸಮಂಜಸವೆಂದು ನಂಬಿದ ಜನರು ಸತ್ಯದರ್ಶನವಾದಂತೆ ಮುಸ್ಲಿಮರ ಮೇಲೆ ಸಿಟ್ಟಾದರು. ಈ ಹಿಂದೆ ಸಾವಿರಾರು ವರ್ಷ ಹರಿಜನರ ಹೆಸರು ಹೇಳಿದರೆ ಕಾರಣವಿಲ್ಲದೆ ಸಿಟ್ಟು ಅಸಹನೆ ತೋರುತ್ತಿದ್ದ ಜನ ಈಗ ಆ ಭಾವನೆಯನ್ನ ಮುಸ್ಲಿಮರ ಕಡೆ ತಿರುಗಿಸಿದ್ದಾರೆ. ಮುಸ್ಲಿಮರ ಬಗ್ಗೆ ಯಾವುದೇ ಅಪಪ್ರಚಾರವನ್ನು ಅಲ್ಲಗಳೆಯದೆ ನಂಬುವಂತಹ ವಾತಾವರಣವನ್ನು ಸಂಘಪರಿವಾರದವರು ಮಾಡುತ್ತ ಬಂದಿದ್ದಾರೆ. ಇದನ್ನು ಖಂಡಿಸುವ ದನಿಗಳು ಬಹಳ ಕ್ಷೀಣವಾಗಿದೆ.

ಮುಸ್ಲಿಮರು ಮತ್ತು ದಲಿತರ ಕಡೆಗೆ ನೀವು ಒಂದು ಮುಗುಳುನಗೆ ಬೀರಿದರೆ ಸಾಕು ಅವರು ಅದಕ್ಕಿಂತ ಹೆಚ್ಚಿನ ಪ್ರೀತಿ ತೋರುತ್ತಾರೆ ಎಂದು ಲಂಕೇಶ್ ದಾಖಲಿಸಿದ್ದರು. ಆ ಕೂಡಲೇ ದಲಿತರು ಮತ್ತು ಮುಸ್ಲಿಮರು ತಮ್ಮ ಪರವಾಗಿ ಲಂಕೇಶ್ ಇದ್ದಾರೆ ಎಂದು ಅತೀವ ಪ್ರೀತಿ ವಿಶ್ವಾಸದಲ್ಲಿ ಅವರನ್ನ ನಡೆಸಿಕೊಂಡರು. ವಿವೇಕಾನಂದರನ್ನು ಮೆರೆಸುವ ಪವಿತ್ರ ಹಿಂದೂಗಳು ಅವರ ಒಂದು ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಿತ್ತು. ಈ ಭಾರತವನ್ನು ಮಸ್ಲಿಂ ದೇಹ ಮತ್ತು ಹಿಂದೂ ತಲೆಯಿಂದ ನಿರ್ಮಿಸಬೇಕು ಎಂಬ ಅವರ ಮಾತನ್ನು ಇಡಿಯಾಗಿ ತೆಗೆದುಕೊಂಡು ನೋಡಿದರೆ ಮುಸ್ಲಿಮರದೇನೂ ಶಕ್ತಿವಂತ ದೇಹ, ಆದರೆ ತೇಜಸ್ವಿ ತಲೆ ದೇಶಕಟ್ಟುವ ಆಲೋಚನೆ ಬಿಟ್ಟು ಶುದ್ಧ ಮನೆಹಾಳತನದಲ್ಲಿ ನಿರತವಾಗಿದೆ ಎನಿಸುತ್ತದೆ. ಆತ ಯಾರೋ ಕೊಟ್ಟ ಮುಸ್ಲಿಂ ಹೆಸರುಗಳನ್ನು ಓದಿದೆ ಎನ್ನುತ್ತಿದ್ದಾರೆ. ಹಾಗೆ ಓದಲು ಕಾರಣ ಆತನಲ್ಲಿರುವ ಮುಸ್ಲಿಂ ದ್ವೇಶ ಮತ್ತು ಪೂರ್ವಗ್ರಹಗಳು. ಹಿಂದೊಮ್ಮೆ ಈತ ಸಿಎಎ ವಿರುದ್ಧದ ಪ್ರತಿಭಟನೆ ವಿಷಯದಲ್ಲಿ ಭಾಷಣ ಮಾಡುತ್ತ ಎದೆಯಲ್ಲಿ ಮೂರಕ್ಷರವಿಲ್ಲದ ಪಂಚರ್ ಹಾಕುವ ಜನರ ಪ್ರತಿಭಟನೆಯಿದು ಎಂದು ಜನರಿಂದ ಶಿಳ್ಳೆ ಚಪ್ಪಾಳೆಗಿಟ್ಟಿಸಿಕೊಂಡುಬಿಟ್ಟಿದ್ದನ್ನ, ಚಪ್ಪಾಳೆ ಶಿಳ್ಳೆ ಹೊಡೆದ ಜನ ಕೂಡ ದೈಹಿಕ ಶ್ರಮವಿಲ್ಲದೆ ಮೆರೆಯುವ ಜನ ಎಂಬುದನ್ನು ಮರೆಯಬಾರದು. ಆಯ್ತು ಪಂಚರ್ ಹಾಕುವ ಜನ ಎಂದು ಮೂದಲಿಸಿದ ತೇಜಸ್ವಿಸೂರ್ಯ ಪಂಚರಾದ ಟೈರ್ ಬಿಚ್ಚಿ ಪಂಚರ್ ಹಾಕಿ ಮತ್ತೆ ಅದನ್ನು ಗಾಡಿಗೆ ಫಿಕ್ಸ್ ಮಾಡಿದ್ದಾರೆಯೇ? ಈ ಕೆಲಸವನ್ನ ಆತನ ಪರಂಪರೆಯವರೇ ಮಾಡಿಲ್ಲ.

ತೇಜಸ್ವಿ ಸೂರ್ಯ

ನಾನು ಇನ್ನೊಂದು ಸವಾಲನ್ನು ಈತನಿಗೆ ಹಾಕುತ್ತೇನೆ. ಹೆಗಲ ಮೇಲೆ ನೇಗಿಲು-ನೊಗ ಹೊತ್ತು, ಅದನ್ನು ಎತ್ತಿ ಹಿಡಿದುಕೊಂಡು, ಹೊತ್ತು ಹುಟ್ಟುವುದಕ್ಕೂ ಮುನ್ನ ಹೋಗಿ ಮೂವ್ವತ್ತು ಕುಂಟೆ ಹೊಲ ಉಳಲಿ ನೋಡೋಣ! ಇದು ಸಾಧ್ಯವಿದ್ದರೆ ದೆಹಲಿಯ ಗಡಿಯಲ್ಲಿ ಕೂತ ರೈತರ ಬದುಕು ಅರಿವಿಗೆ ಬರುತ್ತಿತ್ತು. ನಿಮ್ಮಂತಹ ರಾಜಕಾರಣಿಗಳು, ದೇಶದ ರಾಷ್ಟ್ರಪತಿ, ಪ್ರಧಾನಿ ಎಲ್ಲರೂ ಈ ಭೂಮಿಯಿಂದ ಬಂದ ಧಾನ್ಯವನ್ನೇ ತಿನ್ನುವುದು. ಆ ಕಾರಣಕ್ಕಾದರೂ ದೈಹಿಕ ಶ್ರಮದಿಂದ ಬೆಳೆದ ಅನ್ನದಾತನ ಕೂಗು ನಿಮ್ಮ ಅರಿವಿಗೆ ಬರಬೇಕಿತ್ತು. ಏನು ಮಾಡುವುದು ಮನುಧರ್ಮಶಾಸ್ತ್ರದಲ್ಲೇ ಬೇಸಾಯಕ್ಕೆ ಕಿಂಚಿತ್ ಬೆಲೆಯಿಲ್ಲ!

ಇನ್ನು ಎದೆಯಲ್ಲಿ ಮೂರಕ್ಷರ ಇಲ್ಲದವರು ಎಂದಿದ್ದಿರಿ. ಇದಕ್ಕು ನೀವು ಪ್ರತಿನಿಧಿಸುವ ಪರಂಪರೆಯವರೇ ಕಾರಣ ಅಲ್ಲವೇ? ಶೂದ್ರರನ್ನ ವಿದ್ಯಾವಂಚಿತರನ್ನಾಗಿಸಬೇಕು ಎಂಬುದು ನೀವು ಮೆರಸುವ ಶಾಸ್ತ್ರದಲ್ಲೇ ಇರುವಾಗ, ಮೂರಕ್ಷರದಿಂದ ವಂಚಿತರಾಗರುವುದಕ್ಕೆ ಯಾರು ಹೊಣೆಗಾರರು? ನಿಮ್ಮ ಕೆಟ್ಟ ಗಾಡಿಯನ್ನು ರಿಪೇರಿ ಮಾಡುವ ಗ್ಯಾರೇಜಿನ ಕಾರ್ಯಕ್ಷಮತೆ ಮೂರಕ್ಷರಕ್ಕಿಂತ ಮಿಗಿಲಲ್ಲವೇ!

ಕೊನೆಗೆ ಕ್ಷಮೆ ಕೇಳುವಂತಾಯ್ತು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದ ನಿಮ್ಮ ಮುಖದಲ್ಲಿ ಅಪರಾದದ ಛಾಯೆಯಿತ್ತು. ಇದು ನಿಮ್ಮನ್ನ ಎದುರಿಸಿದವರ ಗೆಲವು. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆಯನ್ನು ಸಹಿಸಲಸಾಧ್ಯವಾಗಿ ಅನ್ಯ ಧರ್ಮಕ್ಕೆ ಹೋದವರು ಅಲ್ಲೂ ಇರಲಾಗದೆ ಅಭದ್ರತೆ ಎದುರಿಸುವಂತಹ ಸ್ಥಿತಿಯನ್ನು ನಿರ್ಮಾಣ ಮಾಡುವುದರಲ್ಲಿ ನಿಮ್ಮಂತವರ ಕೊಡುಗೆ ದೊಡ್ಡದಿದೆ. ಇಂತಹ ಕೆಲಸಗಳಿಂದ ಈ ದೇಶದ ಯಾವ ಪ್ರಜೆಯೂ ನೆಮ್ಮದಿಯಾಗಿಲ್ಲ. ನಮ್ಮ ಕಣ್ಣೆದುರೇ ನೀವು ಟಿಪ್ಪು ಮತಾಂಧ ಕನ್ನಡ ವಿರೋಧಿ ಎಂಬೆರೆಡು ಸುಳ್ಳುಗಳನ್ನು ಹರಿಯಬಿಟ್ಟಿರಿ; ಆತ ಮತಾಂಧನಾಗಿದ್ದರೆ ಆತನ ಸಚಿವ ಸಂಪುಟದಲ್ಲಿ ಐದು ಜನ ಬ್ರಾಹ್ಮಣರು ಮೂವರು ಮುಸ್ಲಿಮರಿರುತ್ತಿರಲಿಲ್ಲ. ದಿವಾನ್ ಪೂರ್ಣಯ್ಯನೇ ಬ್ರಾಹ್ಮಣನಾಗಿದ್ದು ಬಹುಸಂಖ್ಯಾತ ಒಕ್ಕಲಿಗರೇ ಇದ್ದ ಪ್ರದೇಶದಲ್ಲಿ ರಾಜನಾಗಿದ್ದ ಆತ ಪ್ರಜೆಗಳು ಮೆಚ್ಚುವ ಆಡಳಿತ ನೀಡಿದ್ದ. ಗ್ರಾಮದೇವತೆಗಳಿಗೆ ಕೊಡುತ್ತಿದ್ದ ನರಬಲಿ ನಿಲ್ಲಿಸಿದ್ದ. ಜೀತಪದ್ಧತಿ ನಿಲ್ಲಿಸಿದ್ದ. ರೈತರಿಗೆ ಸುಲಭದ ಬೆಲೆಯಲ್ಲಿ ಗಾಡಿಗಳನ್ನು ನಿರ್ಮಿಸಿ ಕೊಡಿಸಿದ್ದ. ಇವತ್ತಿಗೂ ಗಂಜಾಂಗಾಡಿ ಎಂಬ ಹೆಸರಿದೆ ಗೊತ್ತೆ, ಇವೆಲ್ಲ ನಿಮ್ಮ ಮತಾಂಧ ಕಣ್ಣಿಗೆ ಕಾಣುವುದಿಲ್ಲ.

ಇನ್ನ ಶಂಕರಮೂರ್ತಿ ಎಂಬ ರಾಜಕಾರಣಿ ಹೋದಲ್ಲಿ ಬಂದಲ್ಲಿ ಟಿಪ್ಪು ಕನ್ನಡ ವಿರೋಧಿ ಎಂದು ಸಾರುತ್ತ ಬಂದು ಈಗ ಮೂಲೆ ಸೇರಿದ್ದು ಇತಿಹಾಸ. ಆದರೆ ಟಿಪ್ಪು ಶೃಂಗೇರಿಗೆ ಬರೆದ ಪತ್ರಗಳು ಕನ್ನಡದಲ್ಲಿವೆ. ಈ ಬಗ್ಗೆ ಶೃಂಗೇರಿಯವರು ಉತ್ತರ ಕೊಡದೆ ಮೌನವಾಗಿದ್ದು ಆಶ್ಚರ್ಯ ಹುಟ್ಟಿಸಲಿಲ್ಲ. ನಾನು ಮೊದಲ ಬಾರಿ ಶೃಂಗೇರಿಗೆ ಹೋದಾಗ ಅಲ್ಲಿ ಬರೀ ಬ್ರಾಹ್ಮಣರೇ ಇದ್ದಾರೆಂದು ಭಾವಿಸಿದ್ದೆ. ಆದರೆ ಊರ ಹೆಬ್ಬಾಗಿಲಲ್ಲೇ ಮುಸ್ಲಿಮರಿದ್ದರು. ಈಗ ನೆನಪಿಸಿಕೊಂಡರೆ ಅವರಿಲ್ಲದಿದ್ದರೆ ಗತಿಯೇನು ಅನ್ನಿಸುತ್ತಿದೆ. ಏಕೆಂದರೆ ಶೃಂಗೇರಿಯ ಪ್ರಕಾಶ್ ದೀಕ್ಷಿತರು ಕೊರೊನಾದಿಂದ ತೀರಿಕೊಂಡಾಗ ಇಡೀ ಶೃಂಗೇರಿಯ ಜನ ಅತ್ತ ಸುಳಿಯದೆ ಸಂಸ್ಕಾರ ಕಾದಂಬರಿಯನ್ನು ನೆನಪಿಗೆ ತಂದರು. ಆಗ ಮುಸ್ಲಿಂ ಸಂಘಟನೆಯ ಹುಡುಗರು ಬಂದು ಓಡಾಡಿ ಸೌದೆ ಸಂಗ್ರಹಿಸಿ ಪ್ರಕಾಶ್ ದೀಕ್ಷಿತರ ಶವ ಸಂಸ್ಕಾರವನ್ನು ಬ್ರಾಹ್ಮಣ ಪದ್ಧತಿಯ ಪ್ರಕಾರ ನೆರವೇರಿಸಿದ್ದಾರೆ. ಇನ್ನ ಬೆಂಗಳೂರಿನ ಬೆಡ್ ಹಗರಣದಲ್ಲಿ ಮುಸ್ಲಿಂ ಸಂಘಟನೆ ಕೈವಾಡವಿರಬಹುದೆಂದು ಸುಳ್ಳು ಹೇಳಿದ ಈಶ್ವರಪ್ಪನ ಕ್ಷೇತ್ರದಲ್ಲಿ ಈಗಾಗಲೇ ಏಳೆಂಟು ಶವಗಳನ್ನು ಹಿಂದೂ ಸಂಸ್ಕೃತಿಯಂತೆ ಮುಸ್ಲಿಮರು ಅಂತ್ಯಸಂಸ್ಕಾರ ಮಾಡಿದ್ದಾರೆ.

ಇದಿಷ್ಟೆ ಅಲ್ಲ ಶಿಕಾರಿಪುರ, ಸಾಗರ ಪ್ರದೇಶದಲ್ಲಿ ಮುಸ್ಲಿಂ ಸಂಘಟನೆಗಳಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯ ಯುವಕರು ನಿರಂತರವಾಗಿ ಕೊರೊನಾ ಬಲಿಪಡೆದ ಕಾರಣಕ್ಕೆ ಅನಾಥವಾದ ಶವಗಳಿಗೆ ಸಂಸ್ಕಾರ ಮಾಡುತ್ತಿದ್ದಾರೆ. ಈಶ್ವರಪ್ಪ ಮತ್ತು ತೇಜಸ್ವಿ ಈ ಯುವಕರ ಪಟ್ಟಿ ತಯಾರಿಸಿ ಸಭೆ ಸಮಾರಂಭದಲ್ಲಿ ಓದಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಒಳ್ಳೆಯದು. ಇದೆಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲ ಒಂದು ವೇಳೆ ಕೊರೊನಾಕ್ಕೆ ಬಲಿಯಾದರೆ ಹೆದರುವ ಅಗತ್ಯವಿಲ್ಲ! ಮುಸ್ಲಿಂ ಸಂಘಟನೆ ಹುಡುಗರು ಬಂದು ನಮ್ಮ ಪದ್ಧತಿಯಂತೆಯೇ ಸಂಸ್ಕಾರ ಮಾಡಿ ನಮ್ಮನ್ನು ಸ್ವರ್ಗಕ್ಕೊ ನರಕಕ್ಕೊ ಸೇರಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಯಾವುದಕ್ಕೂ ಮೊದಲು ಅವರಿಗೆಲ್ಲಾ ಸನ್ಮಾನ ಮಾಡಿ ನಮ್ಮ ಸಂಸ್ಕಾರದ ಖರ್ಚನ್ನು ಈಗಲೇ ಕೊಟ್ಟುಬಿಟ್ಟರೆ ಋಣಭಾರವಿಲ್ಲದೆ ನಿರ್ಗಮಿಸಬಹುದು!


ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ತೇಜಸ್ವಿ ಸೂರ್ಯ ಪ್ರಚಾರ: ತರಾಟೆ ತೆಗೆದುಕೊಂಡ ಜನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯವರ ಹಲವಾರು ಹೇಳಿಕೆಗಳಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಸೀತಾರಾಂ ಯೆಚೂರಿ

0
'ದೇಶದ ವಿವಿಧ ಭಾಗಗಳಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನೀಡಿದ್ದಾರೆ' ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ...