ದೇಶದಲ್ಲಿ ಹಬ್ಬುತ್ತಿರುವ ಕೊರೊನಾ ವೈರಸ್ ಕಾರಣದಿಂದ ಲಾಕ್‌ಡೌನ್ ಹೇರಿ ಪ್ರಯಾಣಿಕರ ರೈಲು ಸೇವೆಗಳನ್ನು ಮೊಟಕುಗೊಳಿಸಲಾಗಿದ್ದರೂ 2020 ರಲ್ಲಿ 8,700 ಕ್ಕೂ ಹೆಚ್ಚು ಜನರು ರೈಲ್ವೆ ಹಳಿಗಳ ಮೇಲೆ ಮೃತಪಟ್ಟಿದ್ದಾರೆ. ಹೀಗೆ ಬಲಿಯಾದವರಲ್ಲಿ ಅನೇಕರು ವಲಸೆ ಕಾರ್ಮಿಕರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರ ಪ್ರಶ್ನೆಗೆ ರೈಲ್ವೆ ಮಂಡಳಿ 2020 ಜನವರಿ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ರೈಲ್ವೆ ಹಳಿಗಳ ಮೇಲೆ ಸಂಭವಿಸಿದ ಸಾವುಗಳ ಡೇಟಾವನ್ನು ಹಂಚಿಕೊಂಡಿದೆ.
“ರಾಜ್ಯ ಪೊಲೀಸರಿಂದ ಪಡೆದ ಮಾಹಿತಿಯ ಆಧಾರದ ಮೇಲೆ, ಜನವರಿ 2020 ಮತ್ತು ಡಿಸೆಂಬರ್ 2020 ರ ನಡುವೆ ರೈಲ್ವೆ ಹಳಿಗಳಲ್ಲಿ 805 ಜನರು ಗಾಯಗೊಂಡಿದ್ದಾರೆ. 8,733 ಮಂದಿ ಸಾವನ್ನಪ್ಪಿದ್ದಾರೆ” ಎಂದು ರೈಲ್ವೆ ಮಂಡಳಿ ತಿಳಿಸಿದೆ.
ರೈಲು ಮಾರ್ಗಗಳು. ರಸ್ತೆಗಳು ಅಥವಾ ಹೆದ್ದಾರಿಗಳಿಗಿಂತ ಚಿಕ್ಕವು, ಈ ಮೂಲಕ ಪ್ರಯಾಣಿಸಿದರೆ ಬೇಗ ಊರುಗಳನ್ನು ಸೇರಿಕೊಳ್ಳಬಹುದು ಎಂದು ಭಾವಿಸಲಾಗಿರುವುದರಿಂದ ಸತ್ತವರಲ್ಲಿ ಅನೇಕರು ವಲಸೆ ಕಾರ್ಮಿಕರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಮ್ಯಾಗಿ ಸೇರಿದಂತೆ ನೆಸ್ಲೆಯ 60% ಉತ್ಪನ್ನಗಳು ಆರೋಗ್ಯಕರವಲ್ಲ: ಸಂಸ್ಥೆಯ ಆಂತರಿಕ ವರದಿ
ಜೊತೆಗೆ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದಕ್ಕಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹ ವಲಸೆ ಕಾರ್ಮಿಕರು ರೈಲ್ವೆ ಟ್ರ್ಯಾಕ್‌ಗಳಲ್ಲಿ ಪ್ರಯಾಣಿಸುತ್ತಾರೆ. ಹಾಗೇಯೆ ದಾರಿಯ ಮಧ್ಯದಲ್ಲಿ ಕಳೆದುಹೋಗುವುದಿಲ್ಲ ಎಂಬ ನಂಬಿಕೆಯನ್ನು ಸಹ ಅವರು ಹೊಂದಿದ್ದಾರೆ. ಲಾಕ್‌ಡೌನ್ ಆಗಿರುವುದರಿಂದ ಯಾವುದೇ ರೈಲುಗಳು ಓಡುವುದಿಲ್ಲ ಎಂದು ಊಹಿಸಿದ್ದಾರೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುಂಚಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2020 ರ ಸಾವುನೋವುಗಳು ಕಡಿಮೆ ಇದೆ. ಆದರೆ, ಮಾರ್ಚ್ 25 ರಂದು ಲಾಕ್‌ಡೌನ್ ಘೋಷಣೆಯಾದ ನಂತರ ಪ್ರಯಾಣಿಕರ ಸೇವೆಗಳನ್ನು ನಿರ್ಬಂಧಿಸಲಾಗಿದೆ ಎಂಬ ಅಂಶದಿಂದಾಗಿ ಈ ಸಾವುಗಳ ಸಂಖ್ಯೆ ಗಮನಾರ್ಹವಾಗಿವೆ.
ರೈಲ್ವೆ ಅಂಕಿಅಂಶಗಳ ಪ್ರಕಾರ, ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಲ್ಪಟ್ಟ, 2016 ಮತ್ತು 2019 ರ ನಡುವೆ ಇಂತಹ ಘಟನೆಗಳಲ್ಲಿ 56,271 ಜನರು ಸಾವನ್ನಪ್ಪಿದ್ದಾರೆ ಮತ್ತು 5,938 ಜನರು ಗಾಯಗೊಂಡಿದ್ದಾರೆ.
2016 ರಲ್ಲಿ 14,032 ಜನರು, 2017 ರಲ್ಲಿ 12,838, 2018 ರಲ್ಲಿ 14,197 ಮತ್ತು 2019 ರಲ್ಲಿ 15,204 ಜನರು ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶಗಳು ತೋರಿಸುತ್ತವೆ. ಆದರೂ, ರೈಲ್ವೆ ಇಲಾಖೆ ಈ ಸಾವುಗಳನ್ನು “ರೈಲ್ವೆ ಅಪಘಾತಗಳು” ಎಂದು ಪರಿಗಣಿಸುವುದಿಲ್ಲ.
ಈ ಸಾವುಗಳು “ಅಹಿತಕರ ಘಟನೆಗಳು” ಅಥವಾ “ಅತಿಕ್ರಮಣ” ದ ವರ್ಗಕ್ಕೆ ಸೇರಿಸಲಾಗುತ್ತದೆ. ಇವುಗಳ ವಿಚಾರಣೆಯನ್ನು ರಾಜ್ಯ ಪೊಲೀಸರು ನಡೆಸಿ, ಸಂತ್ರಸ್ತರಿಗೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಂದ ಪರಿಹಾರವನ್ನು ನೀಡಲಾಗುತ್ತದೆ. ಇಂತಹ ಘಟನೆಗಳನ್ನು ಕಡಿಮೆ ಮಾಡಲು ರೈಲ್ವೆ ಬೃಹತ್ ಅಭಿಯಾನಗಳನ್ನು ನಡೆಸಿದ್ದು, ಕೆಲವು ಸಂದರ್ಭಗಳಲ್ಲಿ ಸಹಾನುಭೂತಿಯ ಆಧಾರದ ಮೇಲೆ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನ ತರೀಕೆರೆಯಲ್ಲಿ ವೈದ್ಯರ ಮೇಲೆ ಹಲ್ಲೆ, ನಾಲ್ವರ ಬಂಧನ


